BREAKING : ಕಾಂಗ್ರೆಸ್’ನ ಗಂಗಾಂಬಿಕೆ ಬಿಬಿಎಂಪಿ ನೂತನ ಮೇಯರ್, ಜೆಡಿಎಸ್’ನ ರಮೀಳಾ ಉಪಮೇಯರ್

ಈ ಸುದ್ದಿಯನ್ನು ಶೇರ್ ಮಾಡಿ

Mayor--01

ಬೆಂಗಳೂರು,ಸೆ.28- ಅರಕ್ಷಶಃ ರಣರಂಗವಾಗಿ ಮಾರ್ಪಟ್ಟು ಕೊನೆಯ ಕ್ಷಣದವರೆಗೂ ತೀವ್ರ ಕುತೂಹಲ ಕೆರಳಿಸಿದ್ದ ಬಿಬಿಎಂಪಿ ಮೇಯರ್-ಉಪಮೇಯರ್ ಚುನಾವಣೆಯಲ್ಲಿ ಪ್ರತಿಪಕ್ಷ ಬಿಜೆಪಿ ಸಭಾತ್ಯಾಗದ ನಡುವೆ 52ನೇ ಮೇಯರ್ ಆಗಿ ಗಂಗಾಬಿಕೆ ಮಲ್ಲಿಕಾರ್ಜುನ್, ಉಪಮೇಯರ್ ಆಗಿ ರಮೀಳಾ ಉಮಾಶಂಕರ್ ಅವಿರೋಧವಾಗಿ ಆಯ್ಕೆಯಾದರು.  ಕಾಂಗ್ರೆಸ್‍ನ ರಾಮಲಿಂಗಾರೆಡ್ಡಿ, ಬಿಜೆಪಿಯ ಆರ್.ಅಶೋಕ್ ನಡುವಿನ ಜಿದ್ದಾಜಿದ್ದಿಯ ಕಣವಾಗಿ ಮಾರ್ಪಟ್ಟಿದ್ದ ಮೇಯರ್ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿಗೆ ಗೆಲುವು ಲಭಿಸಿದೆ. ಬಿಜೆಪಿ ಸಭಾತ್ಯಾಗ ಮಾಡಿದ ನಂತರ ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ ಮೈತ್ರಿ ಅಭ್ಯರ್ಥಿ ಗಂಗಾಂಬಿಕೆ ಪರವಾಗಿ 131 ಅಭ್ಯರ್ಥಿಗಳು ಸಹಿ ಮಾಡಿದ್ದನ್ನು ಪ್ರಾದೇಶಿಕ ಆಯುಕ್ತ ಶಿವಯೋಗಿ ಕಳಸದ್ ಅವರು ಘೋಷಿಸಿದರು.

ಇದಕ್ಕೂ ಮುನ್ನ ಬಿಬಿಎಂಪಿಯ ಪೌರಸಭಾಂಗಣದಲ್ಲಿ ಮೇಯರ್ ಗಿರಿಗಾಗಿ ಇಂದು ನಡೆದ ಚುನಾವಣೆ ವೇಳೇ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಜನಪ್ರತಿನಿಧಿಗಳ ನಡುವೆ ಮಾರಾಮಾರಿ ನಡೆಯಿತು. ಅಕ್ಷರಶಃ ರಣರಂಗವಾಗಿ ಮಾರ್ಪಟ್ಟು ಪಾಲಿಕೆ ಇತಿಹಾಸದಲ್ಲಿ ಇಂಥ ಬೆಳವಣಿಗೆ ಇದೇ ಮೊದಲ ಬಾರಿಯಾಗಿದ್ದು, ಏನಾಗಲಿದೆಯೋ ಎಂಬ ಆತಂಕ ಕೊನೆಯ ಕ್ಷಣದವರೆಗೂ ಮೂಡಿತ್ತು.  ಬಿಜೆಪಿ, ಕಾಂಗ್ರೆಸ್ ಶಾಸಕರು ಹಾಗೂ ಬಿಬಿಎಂಪಿ ಸದಸ್ಯರ ನಡುವೆ ಬೃಹತ್ ಫೈಟೇ ನಡೆಯಿತು. ಪರಸ್ಪರ ಕೈ ಕೈ ಮಿಲಾಯಿಸಿ ಆರೋಪ, ಪ್ರತ್ಯಾರೋಪಗಳಿಗೆ ಸಾಕ್ಷಿಯಾಯಿತು.

ನಿಗದಿಯಂತೆ ಮೇಯರ್, ಉಪಮೇಯರ್ ಚುನಾವಣೆಯನ್ನು ಪ್ರಾದೇಶಿಕ ಆಯುಕ್ತ ಶಿವಯೋಗಿ ಕಳಸದ್ ಘೋಷಿಸಿದ ಸಂದರ್ಭದಲ್ಲಿ ಪೌರ ಸಭಾಂಗಣಕ್ಕೆ ಶಾಸಕ ಆರ್.ಅಶೋಕ್ ಅವರು ಪಕ್ಷೇತರ ಸದಸ್ಯರನ್ನು ತಮ್ಮೊಂದಿಗೆ ಕರೆತರುವ ಸಂದರ್ಭದಲ್ಲಿ ಹೈಜಾಕ್ ಮಾಡಲಾಗಿದೆ ಎಂದು ಆರೋಪಿಸಿ ಪಕ್ಷೇತರ ಸದಸ್ಯರನ್ನು ಪರಸ್ಪರ ಎಳೆದಾಡಿದ ಪ್ರಸಂಗ ನಡೆದು ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಸದಸ್ಯರು, ಶಾಸಕರ ನಡುವೆ ಗದ್ದಲ ಗಲಾಟೆ ಉಂಟಾಯಿತು.
ಪಾಲಿಕೆಯ 198 ಸದಸ್ಯರು ಸೇರಿದಂತೆ ರಾಜ್ಯಸಭಾ ಸದಸ್ಯರು, ಲೋಕಸಭಾ ಸದಸ್ಯರು, ನಗರ ಶಾಸಕರು, ವಿಧಾನಪರಿಷತ್ ಸದಸ್ಯರು ಸೇರಿದಂತೆ 259 ಮತದಾರರನ್ನು ಹೊಂದಿದ್ದ ಪಾಲಿಕೆಯ ಚುನಾವಣೆಯಲ್ಲಿ ಕಾಂಗ್ರೆಸ್‍ನ ರೋಷನ್ ಬೇಗ್, ಆಶಾ ಸುರೇಶ್, ಲಲಿತಾ ತಿಮ್ಮನಂಜಯ್ಯ, ನಾಜೀಂ ಖಾನ್ ಗೈರುಹಾಜರಾದರೆ, ಬಿಜೆಪಿಯಿಂದ ನಿರ್ಮಲಾ ಸೀತರಾಮ್, ಅನಂತಕುಮಾರ್ ಗೈರು ಹಾಜರಾಗಿದ್ದರು.

ತಡವಾಗಿ ಆಗಮಿಸಿದ ಲಲಿತಾ ತಿಮ್ಮನಂಜಯ್ಯ ಅವರು ಹಾಜರಾತಿ ಪುಸ್ತಕದಲ್ಲಿ ಸಹಿ ಹಾಕಿರಲಿಲ್ಲ. ಅವರನ್ನು ಮತದಾನದಲ್ಲಿ ತಟಸ್ಥವಾಗಿರುವಂತೆ ಆಯುಕ್ತರು ಸೂಚಿಸಿದರು.  253 ಸದಸ್ಯ ಬಲದಲ್ಲಿ ಗೆಲ್ಲಲು 127 ಮತ ಪಡೆಯಬೇಕು. ಇದಲ್ಲದೆ ವಿಧಾನಪರಿಷತ್ ಸದಸ್ಯ ಉಗ್ರಪ್ಪ, ಸಿ.ಆರ್.ಮನೋಹರ್, ಜಯರಾಮ್ ರಮೇಶ್ ಸೇರಿದಂತೆ ನಾಲ್ವರಿಗೆ ಮತದಾನದ ಅವಕಾಶ ನೀಡಬಾರದೆಂದು ಪದ್ಮನಾಭ ರೆಡ್ಡಿ ಅವರು ಈ ಹಿಂದೆ ನೀಡಿದ ದೂರಿನ ಸಂಬಂಧದ ರೂಲಿಂಗ್‍ನ್ನು ನೀಡಿದ ಚುನವಣಾಧಿಕಾರಿ ಅವರಿಗೆ ಮತದಾನದ ಹಕ್ಕನ್ನು ನೀಡಿದರು.  ಇದನ್ನು ನೀಡುತ್ತಿದ್ದಂತೆ ಬಿಜೆಪಿಯವರು ಸಭಾತ್ಯಾಗ ಮಾಡಿ ಹೊರನಡೆದರು. ಮತದಾನ ಮಾಡುವ ಅವಕಾಶ ನೀಡದೆ ಇದ್ದಿದ್ದರೆ ಬಿಜೆಪಿ ಅಭ್ಯರ್ಥಿ ಗೆಲ್ಲುವ ಅವಕಾಶವಿತ್ತು.

ಬಿಜೆಪಿ ಸಭಾತ್ಯಾಗದ ನಂತರ ಚುನಾವಣೆ ಪ್ರಕ್ರಿಯೆ ಮುಂದುವರೆಸಿ ಹಾಜರಿದ್ದ ಅಭ್ಯರ್ಥಿಗಳ ಸಹಿ ಪಡೆದು ಮೇಯರ್ ಆಗಿ ಗಂಗಾಂಬಿಕೆ ಮಲ್ಲಿಕಾರ್ಜುನ್, ಉಪಮೇಯರ್ ಆಗಿ ರಮೀಳಾ ಉಮಾಶಂಕರ್ ಅವರ ಆಯ್ಕೆಯನ್ನು ಅಧಿಕೃತವಾಗಿ ಘೋಷಿಸಿದರು.  ಇದಕ್ಕೂ ಮುನ್ನ ಹಲವು ನಾಟಕೀಯ ಬೆಳವಣಿಗೆಗಳು ನಡೆದವು. ಜೆಡಿಎಸ್‍ನ ಮಂಜುಳಾ ನಾರಾಯಣಸ್ವಾಮಿ , ದೇವದಾಸ್, ಪಕ್ಷೇತರ ಸದಸ್ಯರಾದ ರಮೇಶ್, ಕಾಂಗ್ರೆಸ್‍ನ ಆನಂದ್, ಅಶೋಕ್ ಅವರ ಜೊತೆ ಆಗಮಿಸಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್‍ನ ಹಲವರು ಅವರತ್ತ ಧಾವಿಸಿ ಅವರ ಮನವೊಲಿಸುವ ಪ್ರಯತ್ನ ಮಾಡಿದರು.

ಈ ಸಂದರ್ಭದಲ್ಲಿ ಮೂರು ಪಕ್ಷಗಳ ಸದಸ್ಯರ ನಡುವೆ ಕೈ ಕೈ ಮಿಲಾಯಿಸುವ ಹಂತ ತಲುಪಿತು. ಜೆಡಿಎಸ್ ಬಂಡಾಯ ಸದಸ್ಯ ದೇವದಾಸ್ ಅವರನ್ನು ಕೊನೆಗೂ ಮನವೊಲಿಸಲಾಯಿತು. ಆನಂದ್ ಅವರನ್ನು ಕರೆತಂದು ಕಾಂಗ್ರೆಸ್ ಸೀಟಿನ ಸಾಲಿನಲ್ಲಿ ಕೂರಿಸಿ ಮೈತ್ರಿಗೆ ಬೆಂಬಲ ನೀಡುವಂತೆ ಮನವೊಲಿಸುವಲ್ಲಿ ಯಶಸ್ವಿಯಾಯಿತು.  ಮೊದಲು ಮುನಿಸಿಕೊಂಡಿದ್ದ ಮಂಜುಳಾ ನಾರಾಯಣಸ್ವಾಮಿ ಕೊನೆಗೆ ಮೈತ್ರಿ ಅಭ್ಯರ್ಥಿಗೆ ಬೆಂಬಲ ಘೋಷಿಸಿದರು.
ಏಳು ಪಕ್ಷೇತರ ಸದಸ್ಯರ ಪೈಕಿ ನಿಷ್ಠೆ ಬದಲಿಸಿದ ಹಿನ್ನೆಲೆಯಲ್ಲಿ ಐವರು ಸದಸ್ಯರನ್ನು ಕಾಂಗ್ರೆಸ್ ಮುಖಂಡರು ನಿನ್ನೆ ರೆಸಾರ್ಟ್‍ಗೆ ಕರೆದೊಯ್ದು ಅಲ್ಲಿಂದ ನೇರ ಬಿಬಿಎಂಪಿಗೆ ಕರೆತಂದು ಮತದಾನಕ್ಕೆ ಅವಕಾಶ ಮಾಡಿಕೊಟ್ಟಿದ್ದರು.

ಆದರೆ ಮೂವರು ಸದಸ್ಯರು ಗೈರು ಹಾಜರಾಗಿದ್ದು, ಹಲವು ಜೆಡಿಎಸ್‍ನ ಸದಸ್ಯರು ಕೊನೆ ಕ್ಷಣದಲ್ಲಿ ಬಿಜೆಪಿ ಕಡೆ ವಾಲಿದ್ದು ಆತಂಕ ಮೂಡಿಸಿತ್ತು. ಕೊನೆ ಕ್ಷಣದವರೆಗೆ ನಡೆದ ಕುತೂಹಲಕಾರಿ ಬೆಳವಣಿಗೆಯಲ್ಲಿ ದೋಸ್ತಿಗೆ ಜಯ ಲಭಿಸಿತು.  ರಾಜ್ಯಸಭಾ ಸದಸ್ಯರಾದ ಜಯರಾಮ್ ರಮೇಶ್, ಬಿ.ಕೆ.ಹರಿಪ್ರಸಾದ್, ಸಚಿವರಾದ ಕೆಜೆ.ಜಾರ್ಜ್, ಜಮೀರ್ ಅಹಮ್ಮದ್ , ಕೃಷ್ಣ ಭೈರೇಗೌಡ,ಶಾಸಕರಾದ ಎಸ್.ಟಿ.ಸೋಮಶೇಖರ್, ಮುನಿರತ್ನ, ಭೈರತಿ ಬಸವರಾಜ್, ಎಂ.ಕೃಷ್ಣಪ್ಪ , ರಾಮಲಿಂಗಾರೆಡ್ಡಿ, ಟಿ.ಎ.ಶರವಣ, ಕೆ.ಗೋವಿಂದರಾಜ್, ಪಿ.ಸಿ.ಮೋಹನ್, ರಾಜೀವ್ ಚಂದ್ರಶೇಖರ್, ಜಿ.ಸಿ.ಚಂದ್ರಶೇಖರ್, ಪಿ.ಆರ್.ರಮೇಶ್, ಎಚ್.ಎಂ.ರೇವಣ್ಣ, ಉಗ್ರಪ್ಪ , ಸಿ.ಆರ್.ಮನೋಹರ್, ದಿನೇಶ್ ಗುಂಡೂರಾವ್, ಗೋಪಾಲಯ್ಯ, ಅಶ್ವಥ್ ನಾರಾಯಣ್, ಆರ್.ಅಶೋಕ್, ಎಸ್.ಆರ್.ವಿಶ್ವನಾಥ್, ಸತೀಶ್ ರೆಡ್ಡಿ ಸೇರಿದಂತೆ ಬಿಬಿಎಂಪಿ ಸದಸ್ಯರು, ನಗರ ಶಾಸಕರು, ನಗರ ವ್ಯಾಪ್ತಿ ರಾಜ್ಯಸಭಾ ಸದಸ್ಯರು, ಸಂಸದರು, ಪರಿಷತ್ ಸದಸ್ಯರು ಪಾಲ್ಗೊಂಡಿದ್ದರು.

Facebook Comments

Sri Raghav

Admin