24 ಗಂಟೆಗಳ ಉಪವಾಸ ಸತ್ಯಾಗ್ರಹ ಆರಂಭಿಸಿದ ಮಾಜಿ ಸಚಿವ ಕಿಮ್ಮನೆ

ಈ ಸುದ್ದಿಯನ್ನು ಶೇರ್ ಮಾಡಿ

Kimmane-ratnakar
ಚಿಕ್ಕಮಗಳೂರು, ಅ.2- ಕೇಂದ್ರ ಸರ್ಕಾರದ ಜನವಿರೋಧಿ ನೀತಿಯನ್ನು ವಿರೋಧಿಸಿ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಅವರ ನೇತೃತ್ವದಲ್ಲಿ ತೀರ್ಥಹಳ್ಳಿ ತಾಲೂಕು ಕಚೇರಿ ಮುಂಭಾಗ 24 ಗಂಟೆಗಳ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ. ಇಂದು ಬೆಳಗ್ಗೆ ಆರಂಭಗೊಂಡಿರುವ ಉಪವಾಸ ಸತ್ಯಾಗ್ರಹ ನಾಳೆ ಬೆಳಗ್ಗೆ 9 ಗಂಟೆಯವರೆಗೆ ನಡೆಯಲಿದೆ.

ಸತ್ಯಾಗ್ರಹಿಗಳನ್ನು ಉದ್ದೇಶಿಸಿ ಮಾತನಾಡಿದ ಕಿಮ್ಮನೆ ರತ್ನಾಕರ, ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಮಹಾನ್ ಚೇತನ, ರಾಷ್ಟ್ರಪಿತ ಮಹಾತ್ಮ ಗಾಂಧಿಯವರಿಗೆ ಇತ್ತೀಚೆಗೆ ಅಗೌರವ ತೋರುವ ಪ್ರವೃತ್ತಿ ಹೆಚ್ಚಾಗುತ್ತಿದೆ. ಅವರ ಚಾರಿತ್ರ್ಯ ವಧೆ ಮಾಡುತ್ತಿರುವ ಕೋಮುವಾದಿ ಶಕ್ತಿಗಳ ವಿರುದ್ಧ ನಾಗರಿಕ ಸಮಾಜ ಧ್ವನಿ ಎತ್ತಬೇಕು ಎಂದು ಹೇಳಿದರು.

ಕೇಂದ್ರ ಸರ್ಕಾರ ನಿರಂತರವಾಗಿ ಜನವಿರೋಧಿ ನೀತಿಯನ್ನು ಅನುಸರಿಸುತ್ತಿದೆ. ದೇಶದ ಬಂಡವಾಳಶಾಹಿಗಳ ಪರವಾಗಿ ಕೇಂದ್ರದ ಎನ್‍ಡಿಎ ಸರ್ಕಾರ ಕೆಲಸ ಮಾಡುತ್ತಿದೆ. ಇದರ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಈ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.  ಇಡೀ ದೇಶದ ಜನರನ್ನು ಭ್ರಮೆಗೆ ತಳ್ಳಿರುವ ಮೋದಿ ಸರ್ಕಾರದ ವಿರುದ್ಧ ಜನರಲ್ಲಿ ಜಾಗೃತಿ ಮೂಡಿಸಲು ಇಂತಹ ಕಾರ್ಯಕ್ರಮ ಅನಿವಾರ್ಯವಾಗಿದೆ. ರಾಜ್ಯದ ಎಲ್ಲಾ ಕಡೆಗಳಲ್ಲೂ ಇಂತಹ ಕಾರ್ಯಕ್ರಮ ನಡೆಯಬೇಕು ಎಂದು ಅವರು ತಿಳಿಸಿದರು.ರಾಜ್ಯ ಸರ್ಕಾರವನ್ನು ಉರುಳಿಸಲು ಬಿಜೆಪಿ ವಾಮ ಮಾರ್ಗ ಅನುಸರಿಸುತ್ತಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಂಬಿಕೆ ಇಲ್ಲದ ಬಿಜೆಪಿ ಇಂತಹ ಕೆಲಸಗಳಲ್ಲಿ ತೊಡಗಿದೆ ಎಂದು ಅವರು ಆರೋಪಿಸಿದರು.

ಉಪವಾಸ ಸತ್ಯಾಗ್ರಹಕ್ಕೆ ರಾಜ್ಯ ಕಾಂಗ್ರೆಸ್ ನಾಯಕರಾದ ಕಾಗೋಡು ತಿಮ್ಮಪ್ಪ, ಮಾಜಿ ಶಾಸಕ ಪ್ರಸನ್ನ ಕುಮಾರ್, ಭದ್ರಾವತಿ ಶಾಸಕರಾದ ಸಂಗಮೇಶ್, ಶೃಂಗೇರಿ ಶಾಸಕ ರಾಜೇಗೌಡ, ಎಂಎಲ್ಸಿ ಪ್ರಸನ್ನ ಕುಮಾರ್, ಕಾಂಗ್ರೆಸ್ ನಾಯಕ ಮಂಜುನಾಥ ಭಂಡಾರಿ, ನಾಯಕರಾದ ಗೋಪಾಲ ಪೂಜಾರಿ, ಗೋಣಿ ಮಾಲತೇಶ್, ಡಾ.ಶ್ರೀನಿವಾಸ್, ರಾಜು ತಲ್ಲೂರು, ತಿ.ನಾ.ಶ್ರೀನಿವಾಸ್, ರಮೇಶ್ ಹೆಗ್ಡೆ, ತೀರ್ಥಹಳ್ಳಿ ಕಾಂಗ್ರೆಸ್ ನಾಯಕರಾದ ಕೆಸ್ತೂರು ಮಂಜುನಾಥ್, ಮುಡುಬ ರಾಘವೇಂದ್ರ, ನಾರಾಯಣ ರಾವ್ ಸೇರಿದಂತೆ ಎಲ್ಲಾ ಕಾಂಗ್ರೆಸ್ ನಾಯಕರು, ಜನಪ್ರತಿನಿಧಿಗಳು, ಕಾಂಗ್ರೆಸ್ ಕಾರ್ಯಕರ್ತರು ಭಾಗವಹಿಸಿದ್ದಾರೆ. ದೇಶಕ್ಕೆ ಗಾಂಧಿ, ಬುದ್ಧ, ಬಸವಣ್ಣ, ಲೋಹಿಯಾ, ನಾರಾಯಣಗುರು, ವಿವೇಕಾನಂದ ಅವರ ಚಿಂತನೆಗಳನ್ನು ಯುವ ಜನತೆಗೆ ತಲುಪಿಸುವ ಕೆಲಸವನ್ನು ಕಿಮ್ಮನೆ ನೇತೃತ್ವದಲ್ಲಿ ಮಾಡಲಾಗುತ್ತಿದೆ.

Facebook Comments

Sri Raghav

Admin