BIG STORY : ಎಸ್-400 ಕ್ಷಿಪಣಿ ಸೇರಿ 20 ಮಹತ್ವದ ಒಪ್ಪಂದಗಳಿಗೆ ಮೋದಿ-ಪುಟಿನ್ ಸಹಿ

ಈ ಸುದ್ದಿಯನ್ನು ಶೇರ್ ಮಾಡಿ

S-400

ಮಾಸ್ಕೋ/ನವದೆಹಲಿ, ಅ.5 (ಪಿಟಿಐ)- ಅಮೆರಿಕದ ನಿರ್ಬಂಧ ಹೇರಿಕೆ ಎಚ್ಚರಿಕೆ ನಡುವೆಯೂ ಭಾರತ ಮತ್ತು ರಷ್ಯಾ ನಡುವೆ 39,000 ಕೋಟಿ ರೂ. ವೆಚ್ಚದ ಎಸ್-400 ಕ್ಷಿಪಣಿ ಪೂರೈಕೆ ಸೇರಿದಂತೆ 20 ಮಹತ್ವದ ಒಪ್ಪಂದಕ್ಕೆ ಸಹಿ ಇಂದು ಹಾಕಲಾಗಿದೆ. ಇದರೊಂದಿಗೆ ಭಾರತ ಮತ್ತು ರಷ್ಯಾ ನಡುವೆ ಸಂಬಂಧ ಮತ್ತಷ್ಟು ಬಲಗೊಂಡಿದ್ದು, ಈ ಬೆಳವಣಿಗೆ ಅಮೆರಿಕ, ಚೀನಾ, ಮತ್ತು ಪಾಕಿಸ್ತಾನಕ್ಕೆ ಆತಂಕ ಉಂಟು ಮಾಡಿದೆ.

ನಿನ್ನೆಯಿಂದ ಭಾರತ ಪ್ರವಾಸ ಕೈಗೊಂಡಿರುವ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಇಂದು ನವದೆಹಲಿ ಹೈದರಾಬಾದ್ ಹೌಸ್‍ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದರು. ಉಭಯ ನಾಯಕರು ಆತ್ಮೀಯವಾಗಿ ಹಸ್ತಲಾಘವ ಮಾಡಿ ಪರಸ್ಪರ ಆಲಂಗಿಸಿಕೊಂಡರು. ರಷ್ಯಾ ಉಪಪ್ರಧಾನಿ ಮೂರಿ ಬೋರಿಸೋವ್, ವಿದೇಶಾಂಗ ಸಚಿವ ಸರ್ಗೈ ಲವ್‍ರೋವ್, ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಡೆನಿಸ್ ಮ್ಯಾನ್ ಆರೊವ್ ಹಾಗೂ ಉನ್ನತ ಮಟ್ಟದ ನಿಯೋಗ ಸಹ ಪುಟಿನ್ ಜೊತೆ ಭಾರತ ಪ್ರವಾಸ ಕೈಗೊಂಡಿದ್ದಾರೆ.

S-400

ನಂತರ ಮೋದಿ ಮತ್ತು ಪುಟಿನ್ ನೇತೃತ್ವದಲ್ಲಿ ಉಭಯ ದೇಶಗಳ ಮಹತ್ವದ ಶೃಂಗಸಭೆ ಆರಂಭವಾಯಿತು. ಸಭೆಯಲ್ಲಿ ವಿಶ್ವದ ಎರಡು ಹಳೆಯ ಮಿತ್ರ ದೇಶಗಳ ನಡುವಣ ಬಾಂಧವ್ಯವನ್ನು ಮತ್ತಷ್ಟು ಬಲಗೊಳಿಸುವ ಬಗ್ಗೆ ಗಹನ ಸಮಾಲೋಚನೆ ನಡೆಯಿತು. ಭಯೋತ್ಪಾದನೆ ನಿಗ್ರಹ, ರಕ್ಷಣೆ, ವ್ಯಾಣಿಜ-ವ್ಯಾಪಾರ, ಬಾಹ್ಯಾಕಾಶ ತಂತ್ರಜ್ಞಾನ ವಿನಿಮಯ ಸೇರಿದಂತೆ ಅನೇಕ ವಿಷಯಗಳ ಬಗ್ಗೆ ಮೋದಿ-ಪುಟಿನ್ ನೇತೃತ್ವದ ಎರಡೂ ರಾಷ್ಟ್ರಗಳ ಉನ್ನತ ನಿಯೋಗ ಚರ್ಚಿಸಿದವು.

ಭಾರತಕ್ಕೆ ರಷ್ಯಾ 39,000 ಕೋಟಿ ರೂ. ಮೌಲ್ಯದ ಎಸ್-400 ವಾಯು ರಕ್ಷಣಾ ವ್ಯವಸ್ಥೆ(ಕ್ಷಿಪಣಿ) ಪೂರೈಸುವ ಮಹತ್ವದ ಒಪ್ಪಂದಕ್ಕೆ ನಂತರ ಉಭಯ ರಾಷ್ಟ್ರಗಳು ಸಹಿ ಹಾಕಿದವು. ಜೊತೆಗೆ ಬಾಹ್ಯಾಕಾಶ ತಂತ್ರಜ್ಞಾನ, ಇಂಧನ ಮೊದಲಾದ ಕ್ಷೇತ್ರಗಳಲ್ಲೂ ಪರಸ್ಪರ ಸಂಬಂಧ ಮತ್ತಷ್ಟು ಬಲಗೊಳಿಸುವ 20ಕ್ಕೂ ಹೆಚ್ಚು ಒಡಂಬಡಿಕೆಗಳಿಗೆ ಎರಡೂ ದೇಶಗಳು ಸಹಿ ಹಾಕಿವೆ. ಇದರೊಂದಿಗೆ ರಷ್ಯಾದಿಂದ ಅತ್ಯಂತ ಪ್ರಬಲ ಟ್ರಯಂಪ್‍ಕ್ಷಿಪಣಿ ಖರೀದಿ ಒಪ್ಪಂದ ಕುರಿತು ತಲೆದೋರಿದ್ದ ಗೊಂದಲ ಬಗೆಹರಿದಂತಾಗಿದೆ.

S-400-2

# ಟ್ರಂಪ್ ಕೋಪಕ್ಕೆ ಕಾರಣವಾದ ಟ್ರಯಂಪ್:

ಎಸ್-400 ಟ್ರಯಂಪ್ ಕ್ಷಿಪಣಿ ದೀರ್ಘ ಅಂತರದಲ್ಲಿರುವ ವೈರಿಗಳ ವಿಮಾನಗಳನ್ನು ನಿಖರವಾಗಿ ಧ್ವಂಸಗೊಳಿಸಬಲ್ಲ ಅಗಾಧ ಸಾಮಥ್ರ್ಯದ ಭೂಮಿಯಿಂದ ಗಗನಕ್ಕೆ ಚಿಮ್ಮುವ ಪ್ರಬಲ ಕ್ಷಿಪಣಿಯಾಗಿದೆ. ಇದು ಗಂಟೆಗೆ 400 ಕಿ.ಮೀ.ವೇಗದಲ್ಲಿ ಚಲಿಸಿ 30 ಕಿ.ಮೀ. ಮೇಲಿರುವ ಗುರಿಯನ್ನು ತಲುಪಿ ವೈರಿಗಳ ವಾಯುದಾಳಿಯನ್ನು ನಿಗ್ರಹಿಸುತ್ತದೆ. ಏಕಕಾಲಕ್ಕೆ 100 ಗುರಿಗಳನ್ನು ನಾಶಮಾಡಬಲ್ಲ ಇದು ಭಾರತದ ಸೇನೆಗೆ ಬ್ರಹ್ಮಾಸ್ತ್ರವಾಗಲಿದೆ. ಈ ಎರಡು ರಾಷ್ಟ್ರಗಳ ನಡುವಣ ಸಂಬಂಧ ಬಲವರ್ಧನೆಯಾಗಿರುವುದು ಅಮೆರಿಕ ಮತ್ತು ಚೀನಾಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ರಷ್ಯಾ ಜೊತೆಗಿನ ಕ್ಷಿಪಣಿ ಒಪ್ಪಂದ ಕೈಬಿಡುವಂತೆ ಭಾರತಕ್ಕೆ ಅಮೆರಿಕ ನೀಡಿರುವ ಗಂಭೀರ ಎಚ್ಚರಿಕೆ ನಡುವೆಯೂ ಈ ಒಡಂಬಡಿಕೆಗೆ ಅಂಕಿತ ಹಾಕಲಾಗಿದೆ.

S-400-3

# ಅಮೆರಿಕ ನಿರ್ಬಂಧ ಆತಂಕ :

ರಷ್ಯಾ ಜೊತೆಗಿನ ಕ್ಷಿಪಣಿ ಒಪ್ಪಂದ ಕೈಬಿಡುವಂತೆ ಈಗಾಗಲೇ ಭಾರತಕ್ಕೆ ಮತ್ತೊಮ್ಮೆ ತಾಕೀತು ಮಾಡಿರುವ ಅಮೆರಿಕ, ಈ ವಿಷಯದಲ್ಲಿ ಮುಂದುವರಿದರೆ, ಅದನ್ನು ಗಂಭೀರವಾಗಿ ಪರಿಗಣಿಸಿ ದೊಡ್ಡ ಮಟ್ಟದಲ್ಲಿ ನಿರ್ಬಂಧಗಳನ್ನು ಹೇರಬೇಕಾಗುತ್ತದೆ ಎಂದು ಪುನರಾವರ್ತಿತ ಎಚ್ಚರಿಕೆ ನೀಡಿದೆ. ರಷ್ಯಾ ಜೊತೆ ರಕ್ಷಣಾ ವ್ಯವಹಾರ ನಡೆಸುವ ದೇಶಗಳ ವಿರುದ್ಧ ನಿರ್ಬಂಧ ವಿಧಿಸುವ ಆದೇಶಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಗಸ್ಟ್‍ನಲ್ಲಿ ಸೂಚನೆ ನೀಡಿದ್ದರು. ರಷ್ಯಾ ಜೊತೆ ಭಾರತದ ಸಖ್ಯ ವೃದ್ದಿಯಾಗಿರುವುದು ಟ್ರಂಪ್ ಕೆಂಗಣ್ಣಿಗೆ ಕಾರಣವಾಗಿದೆ. ರಷ್ಯಾದೊಂದಿಗೆ ಭಾರತದ ರಕ್ಷಣಾ ವ್ಯವಹಾರಗಳ ಮೇಲೆ ಅಮೆರಿಕ ಮತ್ತು ಚೀನಾ ತೀವ್ರ ನಿಗಾ ಇಟ್ಟಿದ್ದು, ಮುಂದಿನ ಬೆಳವಣಿಗೆ ಕುತೂಹಲಕಾರಿಯಾಗಿದೆ. ರಷ್ಯಾ ಜೊತೆ ವಿಶೇಷವಾಗಿ ಟ್ರಯಂಪ್ ಕ್ಷಿಪಣಿ ಹೊಂದುವ ಭಾರತದ ನಿಲುವನ್ನು ಮೊದಲಿನಿಂದಲೂ ವಿರೋಧಿಸುತ್ತಲೇ ಬಂದಿರುವ ಅಮೆರಿಕ ನವದೆಹಲಿಗೆ ಕಠಿಣ ಆರ್ಥಿಕ ನಿರ್ಬಂಧಗಳನ್ನು ವಿಧಿಸಿ ಕೆಲವು ಸೌಲಭ್ಯಗಳಿಗೆ ಕತ್ತರಿ ಹಾಕುವ ಸಾಧ್ಯತೆಯೂ ಇದೆ.

S-400-5

Facebook Comments

Sri Raghav

Admin