ನೈಸರ್ಗಿಕ ವಿಕೋಪಗಳಿಂದ ಭಾರತಕ್ಕೆ 20 ವರ್ಷಗಳಲ್ಲಿ 5,98.000 ಕೋಟಿ ರೂ. ನಷ್ಟ..!

ಈ ಸುದ್ದಿಯನ್ನು ಶೇರ್ ಮಾಡಿ

natural--01

ನವದೆಹಲಿ, ಅ.11-ಭಾರತ ಕಳೆದ 20 ವರ್ಷಗಳಲ್ಲಿ ನೈಸರ್ಗಿಕ ವಿಕೋಪಗಳಿಂದ 80 ಶತಕೋಟಿ ಡಾಲರ್(ಸುಮಾರು 5,98,000 ಕೋಟಿ ರೂ.ಗಳು) ನಷ್ಟ ಅನುಭವಿಸಿದೆ ಎಂದು ವಿಶ್ವಸಂಸ್ಥೆ ವಿಪತ್ತು ಗಂಡಾಂತರ ತಗ್ಗಿಸುವ ವಿಶ್ವಸಂಸ್ಥೆ ಕಾರ್ಯಾಲಯ(ಯುಎನ್‍ಐಎಸ್‍ಡಿಆರ್) ಹೇಳಿದೆ. ಈ ಸಂಸ್ಥೆ ಬಿಡುಗಡೆ ಮಾಡಿದ ಅಧ್ಯಯನದಲ್ಲಿ 1988ರಿಂದ 2017ರವರೆಗೆ ಭಾರತದಲ್ಲಿ ಪ್ರಕೃತಿ ವಿಕೋಪಗಳಲ್ಲಿ 80 ಶತಕೋಟಿ ಆರ್ಥಿಕ ನಷ್ಟ ಉಂಟಾಗಿದೆ ಎಂದು ಮಾಹಿತಿ ನೀಡಿದೆ. ನೈಸರ್ಗಿಕ ದುರಂತಗಳಿಂದ ಭಾರೀ ಆರ್ಥಿಕ ನಷ್ಟ ಅನುಭವಿಸಿದ ವಿಶ್ವದ ಐದು ದೇಶಗಳಲ್ಲಿ ಭಾರತ ಅಗ್ರ ಸ್ಥಾನದಲ್ಲಿದೆ.

ಇದೇ ಅವಧಿಯಲ್ಲಿ ಪ್ರಕೃತಿ ವಿಕೋಪಗಳಲ್ಲಿ ಜಾಗತಿಕವಾಗಿ ಒಟ್ಟು 3 ಲಕ್ಷ ಕೋಟಿ ಡಾಲರ್‍ಗಳಷ್ಟು ಆರ್ಥಿಕ ನಷ್ಟ ಸಂಭವಿಸಿದೆ ಎಂದು ವರದಿಯಲ್ಲಿ ಅಂದಾಜು ಮಾಡಲಾಗಿದೆ. ಈ ದುರಂತಗಳಲ್ಲಿ ಒಟ್ಟು 10.30 ಲಕ್ಷ ಮಂದಿ ಮೃತಪಟ್ಟು, 40.40 ಲಕ್ಷ ಜನರು ಗಾಯಗೊಂಡು ಸಂತ್ರಸ್ತರಾಗಿದ್ದಾರೆ. ಭಾರತದಲ್ಲೂ ಸಾವು-ನೋವಿನ ಪ್ರಮಾಣ ಅತ್ಯಧಿಕವಾಗಿದೆ ಎಂದು ವರದಿಯಲ್ಲಿ ತಿಳಿಸಿವೆ. ಭಾರತದಂಥ ಅಭಿವೃದ್ದಿ ಹೊಂದುತ್ತಿರುವ ದೇಶಗಳಲ್ಲಿ ಹವಾಮಾನ ಬದಲಾವಣೆ ಅಭಿವೃದ್ಧಿಗೆ ದೊಡ್ಡ ಮಟ್ಟದ ಅಡ್ಡಿ ಎದುರಾಗಿದೆ. ಭಾರತದಲ್ಲಿ ಕಳೆದ 20 ವರ್ಷಗಳಲ್ಲಿ ನೈಸರ್ಗಿಕ ವಿಕೋಪದಿಂದ ಅತ್ಯಧಿಕ ನಷ್ಟ ಮತ್ತು ಹಾನಿ ಉಂಟಾಗಿದೆ.

ಇದಕ್ಕಿಂತ ಎರಡು ದಶಕಗಳ ಹಿಂದೆ (1978-1997) ಸಂಭವಿ ಸಿದ ದುರಂತಗಳಿಂದ ಆದ ನಷ್ಟಕ್ಕಿಂತಲೂ ಇದು ಶೇ.120ರಷ್ಟು ಹೆಚ್ಚು. ವಾತಾವರಣಕ್ಕೆ ಸಂಬಂಧಿಸಿದ ದುರಂತಗಳಲ್ಲಿ ಅತಿಹೆಚ್ಚು ಹಾನಿ ಉಂಟಾಗಿದೆ. ಇದು ಶೇ.151ಕ್ಕಿಂತಲೂ ಹೆಚ್ಚು ಎಂಬ ಅಂಶವನ್ನೂ ಸಹ ಅಧ್ಯಯನದಲ್ಲಿ ತಿಳಿಸಲಾಗಿದೆ.

ವಿಶ್ವದಲ್ಲಿ ಕಳೆದ 20 ವರ್ಷಗಳಲ್ಲಿ ಸಂಭವಿಸಿದ ನೈಸರ್ಗಿಕ ಪ್ರಕೋಪಗಳಲ್ಲಿ ಆರ್ಥಿಕ ನಷ್ಟ ಅನುಭವಿಸಿದ ವಿಶ್ವದ ವಿವಿಧ ರಾಷ್ಟ್ರಗಳ ಪಟ್ಟಿಯನ್ನು ವಿಶ್ವಸಂಸ್ಥೆ ಪ್ರಕಟಿಸಿದೆ. ಅಮೆರಿಕ(945 ಶತಕೋಟಿ ಡಾಲರ್), ಚೀನಾ(492), ಜಪಾನ್(379), ಭಾರತ(80), ಪ್ಯುರ್ಟೊರಿಕೊ(72), ಜರ್ಮನಿ(58),, ಇಟಲಿ(57),, ಥೈಲೆಂಡ್(52), ಮೆಕ್ಸಿಕೋ(47), ಮತ್ತು ಫ್ರಾನ್ಸ್ (43).

Facebook Comments