ಚಿದಂಬರಂ ಸುಪುತ್ರ ಉದ್ಯಮಿ ಕಾರ್ತಿಗೆ ಸೇರಿದ 54 ಕೋಟಿ ರೂ.ಗಳ ಆಸ್ತಿ ಜಪ್ತಿ..!

ಈ ಸುದ್ದಿಯನ್ನು ಶೇರ್ ಮಾಡಿ

Karti--02
ನವದೆಹಲಿ, ಅ.11-ಕೇಂದ್ರ ಹಣಕಾಸು ಖಾತೆ ಮಾಜಿ ಸಚಿವ ಮತ್ತು ಕಾಂಗ್ರೆಸ್ ಧುರೀಣ ಪಿ.ಚಿದಂಬರಂ ಅವರ ಪುತ್ರ-ಉದ್ಯಮಿ ಕಾರ್ತಿ ಚಿದಂಬರಂಗೆ ಸೇರಿದ ಒಟ್ಟು 54 ಕೋಟಿ ರೂ.ಗಳ ಆಸ್ತಿಯನ್ನು ಜಾರಿ ನಿರ್ದೇಶನಾಲಯ ಜಪ್ತಿ ಮಾಡಿದೆ. ಐಎನ್‍ಎಕ್ಸ್ ಮೀಡಿಯಾ ಹಣ ದುರ್ಬಳಕೆ(ಪಿಎಂಎಲ್‍ಎ) ಪ್ರಕರಣದ ಸಂಬಂಧ ಭಾರತ, ಇಂಗ್ಲೆಂಡ್ ಮತ್ತು ಸ್ಪೇನ್‍ನಲ್ಲಿರುವ ಕಾರ್ತಿಗೆ ಸೇರಿದ 54 ಕೋಟಿ ರೂ. ಮೌಲ್ಯದ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ಇಡಿ ತಿಳಿಸಿದೆ.

ತಮಿಳುನಾಡಿನ ಕೊಡೈಕಾನಲ್ ಮತ್ತು ಊಟಿಯಲ್ಲಿನ ಆಸ್ತಿಗಳು ಹಾಗೂ ದೆಹಲಿಯ ಜೊರ್‍ಬಾಗ್‍ನಲ್ಲಿರುವ ಒಂದು ಫ್ಲಾಟ್ ಜಪ್ತಿಗಾಗಿ ಹಣ ದುರ್ಬಳಕೆ ನಿಯಂತ್ರಣ ಕಾಯ್ದೆ(ಪಿಎಂಎಲ್‍ಎ) ಅಡಿ ಜಾರಿ ನಿರ್ದೇಶನಾಲಯ ಆದೇಶವೊಂದನ್ನು ಜಾರಿಗೊಳಿಸಿದೆ. ಅದೇ ರೀತಿ ಯುನೈಟೆಡ್ ಕಿಂಗ್‍ಡಂನ ಸೊಮೆರ್‍ಸೆಟ್‍ನ ಕಾಟೇಜ್ ಮತ್ತು ಬಂಗಲೆ ಹಾಗೂ ಸ್ಪೇನ್‍ನ ಬಾರ್ಸಿಲೋನಾದಲ್ಲಿನ ಟೆನಿಸ್ ಇವುಗಳನ್ನೂ ಸಹ ಇದೇ ಆದೇಶದ ಅಡಿ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ.

ಚೆನ್ನೈನ ಬ್ಯಾಂಕೊಂದರಲ್ಲಿ ಅಡ್ವಾನ್‍ಟೇಜ್ ಸ್ಟ್ರಾಟಿಜಿಕ್ ಕನ್ಸಲ್ಟಿಂಗ್ ಪೈವೇಟ್ ಲಿಮಿಟೆಡ್(ಎಎಸ್‍ಸಿಪಿಎಲ್) ಹೆಸರಿನಲ್ಲಿ ಇಡಲಾಗಿದ್ದ 90 ಲಕ್ಷ ರೂ. ಮೌಲ್ಯದ ನಿಶ್ಚಿತ ಠೇವಣಿ(ಎಫ್‍ಡಿ) ಸಹ ಜಪ್ತಿ ಮಾಡಲಾಗಿದೆ ಎಂದು ಜಾರಿ ನಿರ್ದೇಶನಾಲಯ ತಿಳಿಸಿದೆ. ಕಾರ್ತಿ ಮತ್ತು ಎಎಸ್‍ಸಿಪಿಎಲ್ ಹೆಸರಿನಲ್ಲಿರುವ ಆಸ್ತಿಗಳು ಚಿದಂಬರಂ ಪುತ್ರನಿಗೆ ಸೇರಿದಂತೆ ಇಡಿ ಉನ್ನತಾಧಿಕಾರಿಯೊಬ್ಬರು ಹೇಳಿದ್ದಾರೆ. ಇವುಗಳ ಒಟ್ಟು ಮೌಲ್ಯ 54 ಕೋಟಿ ರೂ.ಗಳು.

ಪಿ.ಚಿದಂಬರಂ ಅವರು ಕೇಂದ್ರ ವಿತ್ತ ಸಚಿವರಾಗಿದ್ದಾಗ, 2007ರಲ್ಲಿ 305 ಕೋಟಿ ರೂ.ಗಳನ್ನು ಕಾರ್ತಿಗೆ ಲಂಚ ರೂಪದಲ್ಲಿ ನೀಡಲಾಗಿತ್ತು. ಸಾಗರೋತ್ತರ ರಾಷ್ಟ್ರದಿಂದ ನಿಧಿಗಳನ್ನು ಸ್ವೀಕರಿಸಲು ಐಎನ್‍ಎಕ್ಸ್ ಮೀಡಿಯಾಗಿ ಎಫ್‍ಐಪಿಬಿ ಅನುಮೋದನೆ ನೀಡಿಕೆಯಲ್ಲಿ ಭಾರೀ ಅಕ್ರಮಗಳು ನಡೆದಿವೆ ಎಂದು ಸಿಬಿಐ ಎಫ್‍ಐಆರ್ ದಾಖಲಿಸಿತ್ತು. ಇದರ ಆಧಾರ ಮೇಲೆ ಈ ವ್ಯವಹಾರದ ಸಂಬಂದ ಇಡಿ ಅಧಿಕಾರಿಗಳು ಪಿಎಂಎಲ್‍ಎ ಪ್ರಕರಣ ದಾಖಲಿಸಿಕೊಂಡಿದ್ದರು. ಈ ಹಿಂದೆ ಇದೇ ಪ್ರಕರಣದ ಸಂಬಂಧ ಇಡಿ ಕಾರ್ತಿ ಚಿದಂಬರಂ ಅವರನ್ನು ತೀವ್ರ ವಿಚಾರಣೆಗೆ ಒಳಪಡಿಸಿತ್ತು.

Facebook Comments