ಉಪ ಚುನಾವಣೆ ಮುಗಿಯುವವರೆಗೂ ಬಸ್ ದರ ಏರಿಕೆ ಇಲ್ಲ

ಈ ಸುದ್ದಿಯನ್ನು ಶೇರ್ ಮಾಡಿ

KSRTC01

ಬೆಂಗಳೂರು, ಅ.11- ಕಾರಣಾಂತರಗಳಿಂದ ಎರಡು ಬಾರಿ ಮುಂದೂಡಲ್ಪಟ್ಟ ಸಾರಿಗೆ ಬಸ್ ದರ ಏರಿಕೆಯನ್ನು ಉಪ ಚುನಾವಣೆ ಮುಗಿಯುವವರೆಗೂ ಮುಂದೂಡಲು ಸರ್ಕಾರ ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ. ಹಲವು ಸುತ್ತಿನ ಮಾತುಕತೆಯ ಬಳಿಕ ಈ ವಾರಾಂತ್ಯದಲ್ಲಿ ಬಸ್ ದರ ಏರಿಕೆ ಮಾಡಲು ಸಿದ್ಧತೆ ನಡೆಸಲಾಗಿತ್ತು. ಆದರೆ ಉಪ ಚುನಾವಣೆ ಘೋಷಣೆ ಹಿನ್ನೆಲೆಯಲ್ಲಿ ಮತ್ತೆ ಮುಂದೂಡಲಾಗಿದೆ.

ಇಂಧನ ದರ ಏರಿಕೆಯಿಂದ ಆಗುತ್ತಿರುವ ನಷ್ಟ ಸರಿದೂಗಿಸಲು ಪ್ರಯಾಣದರ ಏರಿಕೆ ಅನಿವಾರ್ಯ. ಆದ್ದರಿಂದ ಪ್ರಯಾಣ ದರ ಏರಿಕೆ ಮಾಡಲು ತೀರ್ಮಾನ ಕೈಗೊಳ್ಳಲಾಗಿದೆ ಎಂದು ಸಾರಿಗೆ ಇಲಾಖೆಯ ಮೂಲಗಳು ತಿಳಿಸಿವೆ. ಆದರೆ ಪ್ರಯಾಣಿಕರಿಗೆ ಹೊರೆಯಾಗದ ರೀತಿಯಲ್ಲಿ ಮತ್ತು ಸಾರಿಗೆ ನಿಗಮಗಳ ನಷ್ಟ ಸರಿದೂಗಿಸುವ ನಿಟ್ಟಿನಲ್ಲಿ ಅಲ್ಪ ಪ್ರಮಾಣದ ಬೆಲೆ ಏರಿಕೆ ಮಾಡುವ ಮೂಲಕ ಪ್ರಯಾಣಿಕರ ಜೇಬಿಗೆ ಕತ್ತರಿ ಬೀಳಲಿದೆ.

ಈ ಹಿಂದೆ ಸಾರಿಗೆ ಇಲಾಖೆ ಶೇಕಡಾ 18ರಷ್ಟು ಬೆಲೆ ಏರಿಕೆಗೆ ಮನವಿ ಮಾಡಿತ್ತು. ಎರಡು ದಿನಗಳ ಹಿಂದೆಯಷ್ಟೇ ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ನೇತೃತ್ವದಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯನ್ನು ಭೇಟಿಯಾಗಿ ಬೆಲೆ ಏರಿಕೆ ಅನಿವಾರ್ಯ ಎಂದು ಮನವರಿಕೆ ಮಾಡಿಕೊಟ್ಟಿದ್ದರು. ಆದರೆ ಮುಖ್ಯಮಂತ್ರಿಯವರು ರಾಜ್ಯದಲ್ಲಿ ಉಪ ಚುನಾವಣೆ ಘೋಷಣೆಯಾಗಿರುವುದರಿಂದ ಬಸ್ ದರ ಏರಿಕೆ ಮಾಡಿದರೆ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಬಹುದು.
ದರ ಏರಕೆಯನ್ನು ಚುನಾವಣೆ ಮುಗಿಯುವವರೆಗ ಮುಂದೂಡಿ ಎಂದು ಸಲಹೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಸಾರಿಗೆ ಸಚಿವರು ದರ ಏರಿಕೆ ಪ್ರಸ್ತಾಪವನ್ನು ತಾತ್ಕಾಲಿಕವಾಗಿ ಮುಂದೂಡಿದ್ದಾರೆ. ಇದರಿಂದ ಪ್ರಯಾಣಿಕರಿಗೆ ತಾತ್ಕಾಲಿಕ ನೆಮ್ಮದಿ ದೊರೆತಂತಾಗಿದೆ.

Facebook Comments