ಸೋನಿಯಾ ಅಳಿಯ ವಾದ್ರಾನಿಂದ ತಾವರೆಕೆರೆ ಬಳಿ 1100 ಎಕರೆ ಭೂಕಬಳಿಕೆ, ಡಿಕೆಶಿ ಸಾಥ್..!

ಈ ಸುದ್ದಿಯನ್ನು ಶೇರ್ ಮಾಡಿ

NR-Ramesh--1

ಬೆಂಗಳೂರು, ಅ.11-ಯಶವಂತಪುರದ ತಾವರೆಕೆರೆ ಹೋಬಳಿಯಲ್ಲಿ 7000 ಕೋಟಿ ರೂ. ಮೌಲ್ಯದ 1100 ಎಕರೆ ಪ್ರದೇಶವನ್ನು ಕಾಂಗ್ರೆಸ್ ವರಿಷ್ಠೆ ಸೋನಿಯಾ ಗಾಂಧಿಯವರ ಅಳಿಯ ರಾಬರ್ಟ್ ವಾದ್ರಾ ಪಾಲುದಾರಿಕೆಯ ಡಿಎಲ್‍ಎಫ್ ಕಂಪನಿ ಕಬಳಿಸಿದ್ದು, ಈ ಅಕ್ರಮಕ್ಕೆ  ಸಚಿವ ಡಿ.ಕೆ.ಶಿವಕುಮಾರ್ ಸಹಾಯ ಮಾಡಿದ್ದಾರೆ ಎಂದು ಬಿಜೆಪಿ ವಕ್ತಾರ ಎನ್.ಆರ್.ರಮೇಶ್ ಗಂಭೀರ ಆರೋಪ ಮಾಡಿದ್ದಾರೆ.  ನಗರದಲ್ಲಿಂದು ನಡೆಸಿದ ಸುದ್ದಿಗೋಷ್ಠಿಯಲ್ಲಿ ಈ ಸಂಬಂಧದ 437 ಪುಟಗಳ ದಾಖಲೆಗಳನ್ನು ಬಿಡುಗಡೆ ಮಾಡಿ ಮಾತನಾಡಿದ ಅವರು, ಈ ಅಕ್ರಮದ ವಿರುದ್ಧ ಡಿಎಲ್‍ಎಫ್ ಸಂಸ್ಥೆಯ ಮುಖ್ಯಸ್ಥರು ಮತ್ತು ಸಚಿವ ಡಿ.ಕೆ.ಶಿವಕುಮಾರ್ ವಿರುದ್ಧ ಜಾರಿ ನಿರ್ದೇಶನಾಲಯ, ಆದಾಯ ತೆರಿಗೆ ಇಲಾಖೆ, ಎಸಿಬಿ, ಬಿಎಂಟಿಎಫ್ ಮತ್ತು ಲೋಕಾಯುಕ್ತಕ್ಕೆ ದೂರು ದಾಖಲು ಮಾಡಲಾಗಿದೆ ಎಂದು ತಿಳಿಸಿದರು.

ಇವರೆಲ್ಲದೆ, ಸರ್ಕಾರಿ ಭೂ ಕಬಳಿಕೆ, ನಕಲಿ ದಾಖಲೆ ತಯಾರಿಕೆ, ವಂಚನೆ, ಅಧಿಕಾರ ದುರುಪಯೋಗ, ಸರ್ಕಾರಿ ಭೂ ಕಬಳಿಕೆಗೆ ಸಹಕಾರ ಮತ್ತು ಭ್ರಷ್ಟಾಚಾರ ಪ್ರಕರಣಗಳಡಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಶಾಸಕ ಎಸ್.ಟಿ.ಸೋಮಶೇಖರ್, ಹಿಂದಿನ ಜಿಲ್ಲಾಧಿಕಾರಿ ವಿ.ಶಂಕರ್, ಅಪರ ಜಿಲ್ಲಾಧಿಕಾರಿ ವೆಂಕಟಾಚಲಪತಿ ಮತ್ತು ಜಗದೀಶ್,ತಹಶೀಲ್ದಾರ್‍ಗಳಾಗಿದ್ದ ಬಿ.ಆರ್. ದಯಾನಂದ್, ವಿ.ಮುನಿಯಪ್ಪ, ಬಿ.ಕೆ.ಮಮತಾ, ಎಸ್.ಎಂ. ಶಿವಕುಮಾರ್ ಹಾಗೂ ನಾಲ್ಕು ಗ್ರಾಮ ಲೆಕ್ಕಿಗರ ವಿರುದ್ಧವೂ ದೂರು ದಾಖಲು ಮಾಡಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ಬೆಂಗಳೂರು ದಕ್ಷಿಣ ತಾಲೂಕು ತಾವರಕೆರೆ ಹೋಬಳಿಯ ಗಂಗೇನಹಳ್ಳಿ, ವರ್ತೂರು, ವರ್ತೂರು ನರಸೀಪುರ ಮತ್ತು ಪೆದ್ದನಹಳ್ಳಿ ಗ್ರಾಮಗಳಲ್ಲಿರುವ 1100 ಎಕರೆ ಸ್ವತ್ತನ್ನು ಡಿಎಲ್‍ಎಫ್ ಸಂಸ್ಥೆ ಕಬಳಿಸಿದೆ. ಗಂಗೇನಹಳ್ಳಿ ಗ್ರಾಮದ ಸರ್ವೆ ನಂಬರ್ 1ರಿಂದ 99, ವರ್ತೂರು ಗ್ರಾಮದ ಸರ್ವೆ ನಂಬರ್ 7ರಿಂದ 10, ವರ್ತೂರು ನರಸೀಪುರದ ಸರ್ವೆ ನಂಬರ್ 1ರಿಂದ 35, ಪೆದ್ದನಪಾಳ್ಯ ಗ್ರಾಮದ ಸರ್ವೆ ನಂಬರ್ 17ರಿಂದ 20ರಲ್ಲಿರುವ ಸುಮಾರು 1100 ಎಕರೆ ಸರ್ಕಾರಿ ಸ್ವತ್ತುಗಳನ್ನು ಕಬಳಿಸಲಾಗಿದೆ. ಈ ಸ್ವತ್ತಿಗೆ ಸಚಿವ ಡಿ.ಕೆ.ಶಿವಕುಮಾರ್ ಅವರ ಸಾರಥ್ಯದಲ್ಲಿ ರಕ್ಷಣಾ ಬೇಲಿ ಹಾಕಲಾಗುತ್ತಿದೆ ಎಂದು ಅವರು ಆರೋಪಿಸಿದರು.

ಕನಿಷ್ಠ 12 ವರ್ಷಗಳ ಕಾಲ ಸಾಗುವಳಿ ಮಾಡಿರುವ ಜಮೀನು ರಹಿತ ಸ್ಥಳೀಯ ರೈತರಿಗೆ ಮಾತ್ರ ನೀಡಬೇಕಾಗಿರುವ ಸರ್ಕಾರಿ ಜಮೀನುಗಳ ಮ್ಯೂಟೇಷನ ರಿಜಿಸ್ಟರ್‍ಗಳನ್ನು ಸ್ಥಳೀಯರಲ್ಲದ ಉತ್ತರ ಭಾರತ ಮೂಲದ ಡಿಎಲ್‍ಎಫ್ ಗೆ ನೀಡಲಾಗಿದೆ. ಸ್ಥಳೀಯರಲ್ಲದ ಮತ್ತು ಸಾಗುವಳಿ ಚೀಟಿಗಳನ್ನು ಹೊಂದಿಲ್ಲದ ಜನರಿಗೆ ಮ್ಯೂಟೇಷನ್ ರಿಜಿಸ್ಟರ್ ನೀಡುವುದು, ಸರ್ಕಾರಿ ಜಮೀನುಗಳನ್ನು ಹಂಚಿಕೆ ಮಾಡುವುದು ಕಾನೂನು ರೀತಿಯಲ್ಲಿ ಅಪರಾಧ. ಡಿಎಲ್‍ಎಫ್ ಸಂಸ್ಥೆಯ ಕೆ.ಪಿ.ಸಿಂಗ್, ಆರ್.ಕೆ.ಬುಧವಾರ್, ಆರ್.ಕೆ.ಖನ್ನಾ, ಸುಖವಂತ್ ಸಿಂಗ್, ಭೂಪೇಂದ್ರ ಸಿಂಗ್, ಲಾಲ್ ಶರ್ಮಾ ಮುಂತಾದವರಿಗೆ ಕಾನೂನುಬಾಹಿರವಾಗಿ ಮ್ಯೂಟೇಷನ್ ರಿಜಿಸ್ಟರ್‍ಗಳನ್ನು ನೀಡಲಾಗಿದೆ ಎಂದು ಎನ್.ಅರ್.ರಮೇಶ್ ಆರೋಪಿಸಿದರು.

ಡಿಎಲ್‍ಎಫ್ ಸಂಸ್ಥೆಯಿಂದ ಜಿಲ್ಲಾಧಿಕಾರಿ ಕಚೇರಿಯ ಅಧಿಕಾರಿಗಳು ಅಪಾರ ಪ್ರಮಾಣದ ಲಂಚ ಸ್ವೀಕರಿಸಿದ್ದಾರೆ ಎಂದು ಗಂಭೀರ ಆರೋಪ ಮಾಡಿದ ರಮೇಶ್, ರಾಬರ್ಟ್ ವಾದ್ರಾ ಮತ್ತು ಡಿ.ಕೆ.ಶಿವಕುಮಾರ್ ಅವರ ರಾಜಕೀಯ ಪ್ರಭಾವಗಳಿಗೆ ಅಧಿಕಾರಿಗಳು ಮಣಿದಿದ್ದಾರೆ. ಕಬಳಿಸಿರುವ 1100 ಎಕರೆ ಸರ್ಕಾರಿ ಸ್ವತ್ತುಗಳನ್ನು ಡಿಎಲ್‍ಎಫ್ ಸಂಸ್ಥೆ, ಕಾನೂನುಬಾಹಿರವಾಗಿ ಒಂದೊಂದಾಗಿ ಮಾರಾಟ ಮಾಡುತ್ತಿದೆ. ಇವುಗಳ ಮಾರಾಟ ಪತ್ರದಲ್ಲಿ ಈ ಸ್ವತ್ತಿನ ಮೂಲಗಳನ್ನು ತೋರಿಸುತ್ತಿಲ್ಲ. ಕಾನೂನುಬಾಹಿರ ಮಾರಾಟ ಪತ್ರಗಳಿಗೆ ತಾವರೆಕೆರೆ ಉಪ ನೋಂದಣಿ ಕಚೇರಿಯ ಅಧಿಕಾರಿಗಳು ಅಧಿಕೃತ ಮುದ್ರೆ ಒತ್ತುತ್ತಿದ್ದಾರೆ ಎಂದು ಅವರು ಆರೋಪಿಸಿದರು.

ಈಗಾಗಲೇ ರಾಬರ್ಟ್ ವಾದ್ರಾ ವಿರುದ್ದ ಜಾರಿ ನಿರ್ದೇಶನಾಲಯ 13ಎಫ್‍ಐಆರ್‍ಗಳನ್ನು ದಾಖಲಿಸಿಕೊಂಡಿದೆ ಎಂದು ಹೇಳಿದ ಅವರು, ರಾಜ್ಯ ಸರ್ಕಾರಕ್ಕೆ ಇಚ್ಛಾ ಶಕ್ತಿ ಇದ್ದರೆ ಈ ಸ್ವತ್ತುಗಳಿಗೆ ಸಂಬಂಧಿಸಿದ ಕೈ ಬರಹದ ಪಹಣಿ, ಖೇತುವಾರು ಮತ್ತು ಆಕಾರ್ ಬಂದ್, ಮೈಸೂರು ಸೆಟ್ಲಮೆಂಟ್ ಕಾಪಿ, ಇನಾಂ ಡಿಸಿ ಆದೇಶ, ಕರ್ದಾ ಪ್ರತಿ ದಾಖಲೆಗಳನ್ನು ಸರ್ಕಾರದ ಅಧಿಕೃತ ವೆಬ್‍ಸೈಟ್‍ಗಳಲ್ಲಿ ಹಾಕಬೇಕು ಎಂದು ಎನ್.ಆರ್.ರಮೇಶ್ ಒತ್ತಾಯಿಸಿದರು.

Facebook Comments