‘ಮೋದಿ ಮಹಾ ಭ್ರಷ್ಟ’ : ರಾಹುಲ್ ವಾಗ್ದಾಳಿ

ಈ ಸುದ್ದಿಯನ್ನು ಶೇರ್ ಮಾಡಿ

Modi-And-Rahul--01

ನವದೆಹಲಿ, ಅ.11-ಭಾರತ ಮತ್ತು ಫ್ರಾನ್ಸ್ ನಡುವಣ 56 ಸಾವಿರ ಕೋಟಿ ರೂ. ಮೌಲ್ಯದ 36 ರಫೇಲ್ ಯುದ್ಧ ವಿಮಾನ ಖರೀದಿ ಒಪ್ಪಂದದಲ್ಲಿ ನಡೆದಿದೆ ಎನ್ನಲಾದ ಹಗರಣ ಕುರಿತು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ವಿರುದ್ಧ ಕಾಂಗ್ರೆಸ್ ಅಧ್ಯಕ್ಷ ರಾಹುಲ್‍ಗಾಂಧಿ ವಾಗ್ದಾಳಿ ನಡೆಸಿದ್ದಾರೆ.

ಈ ಹಗರಣದಲ್ಲಿ ಪ್ರಧಾನಿ ಮೋದಿ ಮಹಾ ಭ್ರಷ್ಟ ಎಂದು ಬಣ್ಣಿಸಿರುವ ರಾಹುಲ್, ದೇಶದ ಅತಿ ದೊಡ್ಡ ರಕ್ಷಣಾ ಖರೀದಿ ಒಪ್ಪಂದದ ಹಗರಣದ ಬಗ್ಗೆ ಜಂಟಿ ಸಂಸದೀಯ ಸಮಿತಿ (ಜೆಪಿಸಿ)ಯಿಂದ ತನಿಖೆ ನಡೆಸಬೇಕು ಹಾಗೂ ಪ್ರಧಾನಿ ವಿರುದ್ಧವೂ ತನಿಖೆ ಆಗಬೇಕು ಎಂದು ಒತ್ತಾಯಿಸಿದ್ದಾರೆ. ರಫೇಲ್ ಹಗರಣ ಕುರಿತು ದೆಹಲಿಯಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಹುಲ್, ಇಡೀ ದೇಶದಲ್ಲಿ ರಫೇಲ್ ಹಗರಣದ ಬಗ್ಗೆ ಚರ್ಚೆಯಾಗುತ್ತಿದೆ. ಆದರೆ ಪ್ರಧಾನಿ ಮೋದಿ ಈ ಬಗ್ಗೆ ಏನೂ ಮಾತನಾಡದೆ ಮೌನವಾಗಿದ್ದಾರೆ ಎಂದು ಕಟುವಾಗಿ ಟೀಕಿಸಿದರು.

ರಫೇಲ್ ಖರೀದಿ ಒಪ್ಪಂದ ಹಗರಣ ಸ್ಫೋಟಗೊಳ್ಳುತ್ತಿದ್ದಂತೆ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಫ್ರಾನ್ಸ್‍ಗೆ ಪ್ರವಾಸ ಕೈಗೊಂಡು ವಿವಾದಕ್ಕೆ ತೇಪೆ ಹಾಕುವ ಯತ್ನ ಮಾಡಿದ್ದಾರೆ. ಇದಲ್ಲದೆ, ಬೇರ್ಯಾವ ಕಾರಣಕ್ಕಾಗಿ ಅವರು ಫ್ರಾನ್ಸ್ ಪ್ರವಾಸ ಕೈಗೊಂಡಿದ್ದರು ಎಂದು ರಾಹುಲ್ ಪ್ರಶ್ನಿಸಿದರು. ಫ್ರಾನ್ಸ್ ಮಾಧ್ಯಮಗಳಲ್ಲಿ ಕೇಂದ್ರ ಸರ್ಕಾರ ಮತ್ತು ಬಿಜೆಪಿಯ ಭ್ರಷ್ಟಾಚಾರ ಮತ್ತು ಅವ್ಯವಹಾರಗಳ ಬಗ್ಗೆ ವ್ಯಾಪಕವಾಗಿ ವರದಿಯಾಗಿದೆ. ರಫೇಲ್ ಹಗರಣದಲ್ಲಿ ಮೋದಿ ಕೈವಾಡವಿರುವುದು ಬಹಿರಂಗವಾಗಿದೆ. ಅವರು ಮಹಾ ಭ್ರಷ್ಟರು ಎಂದು ಆರೋಪಿಸಿದರು.

ರಫೇಲ್ ಖರೀದಿ ಒಪ್ಪಂದದಲ್ಲಿ ಎನ್‍ಡಿಎ ಸರ್ಕಾರ ಪಾರದರ್ಶಕ ಮತ್ತು ನ್ಯಾಯಸಮ್ಮತ ವ್ಯವಹಾರದಲ್ಲಿ ನಂಬಿಕೆ ಇದ್ದರೆ, ತನಿಖೆಗೆ ಒಪ್ಪಿಸಲು ಏಕೆ ಹಿಂದೇಟು ಹಾಕುತ್ತಿದೆ ಎಂದು ಎಐಸಿಸಿ ಅಧ್ಯಕ್ಷರು ಪ್ರಶ್ನಿಸಿದರು.

Facebook Comments