ಉಪಸಮರದಲ್ಲಿ ನಾವು ಪಾಂಡವರು, ಕೌರವರಾದ ಕಾಂಗ್ರೆಸ್ಸಿಗರ ಸೋಲು ಖಚಿತ : ರಾಮುಲು

ಈ ಸುದ್ದಿಯನ್ನು ಶೇರ್ ಮಾಡಿ

Sriramulu--01

ಬಳ್ಳಾರಿ, ಅ.11- ಈ ಬಾರಿಯ ಉಪ ಚುನಾವಣೆ ಮಹಾಭಾರತದಲ್ಲಿ ನಡೆದ ಧರ್ಮಯುದ್ಧದಂತೆ. ಪಾಂಡವರಾದ ನಮ್ಮ ವಿರುದ್ಧ ಕೌರವರಾದ ಕಾಂಗ್ರೆಸಿಗರು ಬರುತ್ತಿದ್ದಾರೆ. ಅಂತಿಮವಾಗಿ ಗೆಲುವು ನಮ್ಮದೇ ಎಂದು ಬಿಜೆಪಿ ಶಾಸಕ ಶ್ರೀರಾಮುಲು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹಾಭಾರತದಲ್ಲಿ ಕೌರವರು ಪಾಂಡವರ ವಿರುದ್ಧ ಎಷ್ಟೇ ಒಳಸಂಚು ನಡೆಸಿದರೂ ಅಂತಿಮವಾಗಿ ಗೆಲುವು ಸಾಧಿಸಿದ್ದು ಪಾಂಡವರೇ. ಈಗ ಇತಿಹಾಸ ಮತ್ತೆ ಮರುಕಳಿಸಲಿದೆ ಎಂದು ರಾಮುಲು ಹೇಳಿದರು.

ಒಂದು ಕಾಲದಲ್ಲಿ ಕಾಂಗ್ರೆಸ್‍ನ ಭದ್ರಕೋಟೆಯಾಗಿದ್ದ ಬಳ್ಳಾರಿಯಲ್ಲಿ ಬಿಜೆಪಿಯ ಕಮಲ ಅರಳುವಂತೆ ಮಾಡಿದ್ದು ನಮ್ಮ ಸಾಧನೆ. ಇಲ್ಲಿ ಯಾರೇ ಬರಲಿ ನಾವು ತಲೆ ಕೆಡಿಸಿಕೊಳ್ಳುವುದಿಲ್ಲ. ಈ ಉಪ ಚುನಾವಣೆಯನ್ನು ಸಾವಾಲಾಗಿ ತೆಗೆದುಕೊಂಡಿದ್ದು, ಗೆದ್ದೇ ಗೆಲ್ಲುತ್ತೇವೆ ಎಂದು ಆತ್ಮ ವಿಶ್ವಾಸದಿಂದ ನುಡಿದರು.

ಸರ್ಕಾರವೇ ಬರಲಿ, ಪ್ರಭಾವಿಗಳೇ ಬರಲಿ ನಾವು ಅದಕ್ಕೆ ತಲೆ ಕೆಡಿಸಿಕೊಳ್ಳುವವರಲ್ಲ. ನಮಗೆ ಕಾರ್ಯಕರ್ತರೇ ಆಸ್ತಿ. ಈ ಚುನಾವಣೆಯನ್ನು ಗೆದ್ದು ಇತಿಹಾಸ ಸೃಷ್ಟಿಸಬೇಕೆಂಬ ಛಲವನ್ನು ಇಟ್ಟುಕೊಂಡಿದ್ದೇನೆ. ಅದನ್ನು ಸಾಧಿಸಿಯೇ ತೋರಿಸುತ್ತೇನೆ ಎಂದು ಶಪಥ ಮಾಡಿದರು.

ನನ್ನ ಜೀವನದಲ್ಲಿ ನಾನು ಎಂದಿಗೂ ಬೆನ್ನು ತೋರಿಸಿ ಹೋಗುವ ಜಾಯಮಾನದವನಲ್ಲ. ಬಳ್ಳಾರಿ ಜನತೆ ನನಗೆ ನಾಲ್ಕೂವರೆ ವರ್ಷ ಸಂಸದನಾಗಿ ಕೆಲಸ ಮಾಡಲು ಅವಕಾಶ ಕೊಟ್ಟಿದ್ದಾರೆ. ಹಿಂದೆ ಸಚಿವ, ಶಾಸಕನಾಗಿ ನನ್ನದೇ ಆದ ರೀತಿಯಲ್ಲಿ ಸೇವೆ ಸಲ್ಲಿದ್ದೇನೆ. ಕ್ಷೇತ್ರದಿಂದ ಐದು ಜನರ ಪಟ್ಟಿಯನ್ನು ಪಕ್ಷದ ಹೈಕಮಾಂಡ್‍ಗೆ ಕಳುಹಿಸಿಕೊಡಲಾಗಿದೆ. ಸಹೋದರಿ ಶಾಂತ ಕೂಡ ಓರ್ವ ಆಕಾಂಕ್ಷಿ. ಅಂತಿಮವಾಗಿ ಹೈಕಮಾಂಡ್ ಯಾರಿಗೆ ಟಿಕೆಟ್ ನೀಡುತ್ತದೆಯೋ ಅದಕ್ಕೆ ಎಲ್ಲರೂ ಬದ್ಧರಾಗಬೇಕು. ಇಲ್ಲಿ ಪ್ರತಿಷ್ಠೆಯ ಪ್ರಶ್ನೆ ಬರುವುದಿಲ್ಲ ಎಂದು ರಾಮುಲು ಸ್ಪಷ್ಟಪಡಿಸಿದರು.

Facebook Comments