ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸ್ಥಾನಕ್ಕೆ ಎನ್‌.ಮಹೇಶ್ ರಾಜೀನಾಮೆ..!

ಈ ಸುದ್ದಿಯನ್ನು ಶೇರ್ ಮಾಡಿ

N-Mahesh--01
ಬೆಂಗಳೂರು. ಅ. 11 : ಮೈತ್ರಿ ಸರ್ಕಾರದಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಾಗಿದ್ದ ಎನ್‌.ಮಹೇಶ್ ಅವರುತಮ್ಮ ಸಚಿವ ಸ್ಥಾನಕ್ಕೆ ದಿಢೀರ್ ರಾಜೀನಾಮೆ ನೀಡಿದ್ದಾರೆ. ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿಯನ್ನು ಭೇಟಿ ಮಾಡಿ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿರುವುದಾಗಿ ವಿಕಾಸಸೌದದಲ್ಲಿರುವ ತಮ್ಮ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಪ್ರಕಟಿಸಿದರು. ಜೊತೆಗೆ ತಮ್ಮ ರಾಜೀನಾಮೆ ಪತ್ರವನ್ನು ರಾಜ್ಯಪಾಲರಿಗೆ ಇಂದು ಸಂಜೆ ರವಾನಿಸಿದ್ದಾರೆ. ಕೊಳ್ಳೆಗಾಲ ಕ್ಷೇತ್ರದಲ್ಲಿ ಬಿಎಸ್ಪಿ ಪಕ್ಷದಿಂದ ಏಕೈಕ ಶಾಸಕರಾಗಿ ಎನ್‌.ಮಹೇಶ್ ಆಯ್ಕೆಯಾಗಿದ್ದರು. ತದನಂತರ ಮೈತ್ರಿ ಸರ್ಕಾರದಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಾಗಿ ಕಳೆದ 4 ತಿಂಗಳಿನಿಂದ ಕಾರ್ಯ ನಿರ್ವಹಿಸಿದ್ದರು .

ಪತ್ರಿಕಾಘೋಷ್ಠಿಯಲ್ಲಿ ಮಾತನಾಡಿದ ಅವರು ‘ಇನ್ನು ಮುಂದೆ ನಾನು ಸರ್ಕಾರದ ಭಾಗವಾಗಿರುವುದಿಲ್ಲ. ಆದರೆ ಸರ್ಕಾರದ ಬೆಂಬಲಿಗನಾಗಿ ಮುಂದುವರೆಯುತ್ತೇನೆ. ಮುಂಬರುವ ವಿಧಾನಸಭೆ ಮತ್ತು ಲೋಕಸಭೆ ಉಪಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಗಳು ಸ್ಪರ್ಧಿಸುವ ಕ್ಷೇತ್ರಗಳಲ್ಲಿ ಜೆಡಿಎಸ್ ಪರವಾಗಿ ಪ್ರಚಾರ ಮಾಡುತ್ತೇನೆ. ನನ್ನ ಕ್ಷೇತ್ರಕ್ಕೆ ಹೆಚ್ಚಿನ ಸಮಯ ಕೊಡಲು ಸಾಧ್ಯವಾಗದಿರುವ ಕಾರಣ ಹಾಗೂ ಬಿಎಸ್ಪಿ ಪಕ್ಷದ ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಕೊಳ್ಳಲು ಸಾಧ್ಯವಾಗದಿರುವುದರಿಂದ ರಾಜೀನಾಮೆ ನಿರ್ಧಾರ ಕೈಗೊಂಡಿದ್ದೇನೆ. ಯಾವುದೇ ಕಾರಣಕ್ಕೂ ರಾಜೀನಾಮೆಯಿಂದ ಹಿಂದಕ್ಕೆ ಸರಿಯುವ ಪ್ರಶ್ನೆಯೇ ಇಲ್ಲ. ನನ್ನ ನಿರ್ಧಾರವನ್ನು ಬಿಎಸ್ಪಿ ವರಿಷ್ಠೆ ಮಾಯಾವತಿಯವರಿಗೂ ತಿಳಿಸುತ್ತೇನೆ’ ಎಂದು ಹೇಳಿದರು. ರಾಜ್ಯದಲ್ಲಿ ಬಿಎಸ್‌ಪಿ ಪಕ್ಷದ ಕೆಲಸಗಳು ಮೂಲೆಗುಂಪಾಗಿವೆ. ಲೋಕಸಭೆ ಚುನಾವಣೆ ಸನಿಹದಲ್ಲಿರುವ ಕಾರಣ ಪಕ್ಷವನ್ನು ಬಲಿಷ್ಠಪಡಿಸಬೇಕಿದೆ. ಅಲ್ಲದೆ ನನ್ನ ಕ್ಷೇತ್ರವಾದ ಕೊಳ್ಳೆಗಾಲಕ್ಕೂ ಹೆಚ್ಚು ಕಾಲಾವಕಾಶ ನೀಡಬೇಕಿದೆ ಹಾಗಾಗಿ ರಾಜೀನಾಮೆ ನಿರ್ಧಾರ ಕೈಗೊಂಡಿದ್ದೇನೆ ಎಂದು ಅವರು ಮಾಧ್ಯಮಗಳಿಗೆ ಹೇಳಿದ್ದಾರೆ.

ಇತ್ತೀಚೆಗಷ್ಟೆ ಮಾಯಾವತಿ ಅವರು ಕಾಂಗ್ರೆಸ್‌ ಜೊತೆ ಮೈತ್ರಿಯನ್ನು ನಿರಾಕರಿಸಿದ್ದರು. ಅಲ್ಲದೆ ಕಾಂಗ್ರೆಸ್‌ ಮೇಲೆ ವಾಗ್ದಾಳಿ ಸಹ ನಡೆಸಿದ್ದರು. ಅವರು ಹೇಳಿಕೆ ನೀಡಿದ ಕೆಲವೇ ದಿನಗಳಲ್ಲಿ ಬಿಎಸ್‌ಪಿ ಪಕ್ಷದಿಂದ ಗೆದ್ದು ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಸರ್ಕಾರದಲ್ಲಿ ಮಂತ್ರಿ ಆಗಿದ್ದ ಮಹೇಶ್‌ ಅದೇ ಕಾರಣಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ. ಜೊತೆಗೆ ಸದ್ಯದಲ್ಲೇ ರಾಜ್ಯ ಸಚಿವ ಸಂಪುಟ ರಚನೆಯಾಗಲಿದ್ದು ಎನ್‌.ಮಹೇಶ್ ಅವರನ್ನು ಸಚಿವ ಸ್ಥಾನದಿಂದ ಕೈಬಿಡುತ್ತಾರೆ ಎಂಬ ಕಾರಣದಿಂದ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎನ್ನಲಾಗಿದೆ. ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಬಿಎಸ್ಪಿ ಉಸ್ತುವಾರಿ ಹಾಗೂ ರಾಜ್ಯಸಭಾ ಸದಸ್ಯ ಅಶೋಕ್ ಸಿದ್ದಾರ್ಥ ಉಪಸ್ಥತರಿದ್ದರು.

# ಸಚಿವ ಪುಟ್ಟರಂಗ ಶೆಟ್ಟಿ ಜತೆ ಮಾತಿನ ಚಕಮಕಿ
ರಾಜ್ಯದ ಮೈತ್ರಿ ಸರ್ಕಾರದಲ್ಲಿ ಬಿಎಸ್ಪಿಯ ಏಕೈಕ ಶಾಸಕರಾಗಿ ಸಚಿವರೂ ಆಗಿದ್ದ ಎನ್.ಮಹೇಶ್ ಕಾಂಗ್ರೆಸ್ ವಿರುದ್ಧದ ಟೀಕೆಯಿಂದ ಕಾಂಗ್ರೆಸ್ ನಾಯಕ, ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಪುಟರಂಗ ಶೆಟ್ಟಿ ಜತೆ ಮಾತಿನ ಚಕಮಕಿಗೂ ಗುರಿಯಾಗಿದ್ದರು. ಜೆಡಿಎಸ್ ಜತೆಗೆ ಚುನಾವಣಾ ಪೂರ್ವದ ಮೈತ್ರಿಯನ್ನು ಮಹೇಶ್ ರಾಜ್ಯಾಧ್ಯಕ್ಷರಾಗಿರುವ ಬಹುಜನ ಸಮಾಜ ಪಕ್ಷ ಮಾಡಿಕೊಂಡಿತ್ತು.

# ಆಪರೇಷನ್ ಕಮಲಕ್ಕೆ ನೆರವಾದೀತೆ?
ಮಹೇಶ್ ರಾಜೀನಾಮೆ ಆಪರೇಷನ್ ಕಮಲಕ್ಕೆ ಮುನ್ನುಡಿಯೇ ಎಂಬ ಪ್ರಶ್ನೆಯೂ ಈ ಸಂದರ್ಭದಲ್ಲಿ ಉದ್ಭವಿಸಿದೆ. ಒಂದೆರಡು ತಿಂಗಳಲ್ಲಿ ಸರ್ಕಾರ ರಚಿಸುತ್ತೇವೆ ಎಂಬ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರ ಹೇಳಿಕೆ ಇಂತಹ ಅನುಮಾನಕ್ಕೆ ಕಾರಣವಾಗಿದೆ. ರಾಜ್ಯದ ಮೈತ್ರಿ ಸರ್ಕಾರದಲ್ಲಿ ಬಿಎಸ್ಪಿಯ ಏಕೈಕ ಶಾಸಕರಾಗಿ ಸಚಿವರೂ ಆಗಿದ್ದ ಎನ್.ಮಹೇಶ್ ಕಾಂಗ್ರೆಸ್ ವಿರುದ್ಧದ ಟೀಕೆಯಿಂದ ಕಾಂಗ್ರೆಸ್ ನಾಯಕರ ಕೆಂಗಣ್ಣಿಗೆ ಗುರಿಯಾಗಿದ್ದರು.

Facebook Comments