ಕೆ.ಆರ್.ಎಸ್. ನಲ್ಲಿ ದಸರಾ ಮೆರುಗು, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸಿಎಂ ಚಾಲನೆ

ಈ ಸುದ್ದಿಯನ್ನು ಶೇರ್ ಮಾಡಿ

CM--03
ಮೈಸೂರು. ಅ.16 : ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಇಂದು ಕೆ.ಆರ್.ಎಸ್. ನ ಬೃಂದಾವನ ಉದ್ಯಾನವನ ದಲ್ಲಿ ದಸರಾ ಅಂಗವಾಗಿ ಏರ್ಪಡಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡಿದರು.  ಬೃಂದಾವನ ಉದ್ಯಾನವನವು ದೃಶ್ಯ ವೈಭವದೊಂದಿಗೆ ಸಾಂಸ್ಕೃತಿಕ ವೈಭವಕ್ಕೂ ಸಾಕ್ಷಿಯಾಯಿತು. ದಸರಾ ಅಂಗವಾಗಿ ಬೃಂದಾವನ ಉದ್ಯಾನವನ ವನ್ನು ವಿಶೇಷ ಅಲಂಕಾರ ದಿಂದ ಕಂಗೊಳಿಸುತ್ತಾ ನೋಡುಗರ ಕಣ್ಮನ ಸೆಳೆಯುತ್ತಿತ್ತು. ಇದಕ್ಕೆ ಮೆರುಗು ನೀಡುವಂತೆ ಇಲ್ಲಿ ಶಾಸ್ತ್ರೀಯ ನೃತ್ಯ, ರವೀಂದ್ರನಾಥ ಅವರಿಂದ ಶಾಸ್ತ್ರೀಯ ಸಂಗೀತ ಹಾಗೂ ಬಾಲಿವುಡ್ ನ ಖ್ಯಾತ ಸಂಗೀತ ನಿರ್ದೇಶಕ ಹಿಮೇಶ್ ರೇಶಮಿಯಾ ಅವರ ಸಂಗೀತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

CM--05

CM--04

CM--02

# ಜಂಬೂ ಸವಾರಿ ತಾಲೀಮು : 
ಮೈಸೂರು, ಅ.16-ದಸರಾ ಉತ್ಸವದ ಪ್ರಮುಖ ಆಕರ್ಷಣೆಯಾದ ಜಂಬೂ ಸವಾರಿಯನ್ನು ಇಂದು ಕ್ಯಾಪ್ಟನ್ ಅರ್ಜುನನ ನೇತೃತ್ವದಲ್ಲಿ ತಾಲೀಮು ನಡೆಸಲಾಯಿತು. ಅರಮನೆ ಆವರಣದಲ್ಲಿ ಅರ್ಜುನನ ನೇತೃತ್ವದಲ್ಲಿ ದಸರಾ ಉತ್ಸವದ ಅಂತಿಮ ದಿನವಾದ ಜಂಬೂ ಸವಾರಿ ತಾಲೀಮು ನಡೆಯಿತು. ಮೊದಲು ಆನೆ ಬಲರಾಮ ಗಂಡಬೇರುಂಡ ಇರುವ ನಿಶಾನೆ ಹಿಡಿದು ಸಾಗಿ ಬಂದ. ಅವನ ಹಿಂದೆ ಮೂರು ಹೆಣ್ಣಾನೆಗಳು ಇವುಗಳ ಹಿಂದೆ ಪೊಲೀಸ್ ಪಡೆ, ಅಶ್ವಾರೋಹಿಗಳ ಪಡೆ ಸಾಗಿಬಂದವು. ಕೊನೆಯಲ್ಲಿ ಗಜಗಾಂಭೀರ್ಯದಿಂದ ಅರ್ಜುನ ಬಂದ.  ಅರಮನೆ ಬಳಿ ಹಾಕಿರುವ ವಿಶೇಷ ವೇದಿಕೆ ಹತ್ತಿರ ಬಂದು ನಿಂತ ಅರ್ಜುನ ಪೊಲೀಸ್ ಅಧಿಕಾರಿಗಳಿಗೆ ಸೊಂಡಲಿನಿಂದ ನಮಸ್ಕರಿಸಿದ. ಕೂಡಲೇ ಅವನ ಮೇಲೆ ಅಧಿಕಾರಿಗಳು ಪುಷ್ಪಗಳನ್ನು ಹಾಕಿ ನಮಸ್ಕರಿಸಿದರು. ಇದನ್ನು ಪ್ರವಾಸಿಗರು,  ಸಾರ್ವಜನಿಕರು ಕಣ್ತುಂಬಿಕೊಂಡರು.

# ಪ್ರವಾಸಿಗರನ್ನು ಸೆಳೆದ ಆಹಾರ ಮೇಳ :
ಮೈಸೂರು, ಅ.16- ನಾಡಹಬ್ಬ ದಸರಾದಲ್ಲಿ ಆಯೋಜಿಸಲಾಗಿರುವ ಆಹಾರ ಮೇಳದಲ್ಲಿ ಪ್ರವಾಸಿಗರನ್ನು ವಿವಿಧ ರೀತಿಯ ದೋಸೆ, ಪುಳಿಯೋಗರೆ, ಚಾಟ್ಸ್‍ಗಳು ತನ್ನತ್ತ ಸೆಳೆಯುತ್ತಿವೆ. ನಗರದ ಸ್ಕೌಟ್ ಅಂಡ್ ಗೈಡ್ಸ್ ಮತ್ತು ಲಲಿತ ಮಹಲ್ ಸಮೀಪ ಆಹಾರ ಮೇಳ ಆಯೋಜಿಸಲಾಗಿದ್ದು , ಇಲ್ಲಿಗೆ ಪ್ರತಿ ದಿನ ಸಾವಿರಾರು ಮಂದಿ ಆಹಾರ ಪ್ರಿಯರು ಆಗಮಿಸಿ ರುಚಿಯನ್ನು ಸವಿಯುತ್ತಿದ್ದಾರೆ.

ಸ್ಪೋಟ್ರ್ಸ್ ಮತ್ತು ಗೈಡ್ಸ್ ಮೈದಾನದಲ್ಲಿ 80 ಮಳಿಗೆಗಳನ್ನು ತೆರೆಯಲಾಗಿದೆ. ಈ ಹಿಂದಿನ ವರ್ಷದಲ್ಲಿ ಜೋಳದ ರೊಟ್ಟಿಗೆ ಹೆಚ್ಚಿನ ಬೇಡಿಕೆ ಉಂಟಾಗಿತ್ತು. ಆದರೆ ಈ ಬಾರಿ ದೋಸೆ ಮಳಿಗೆಗಳಲ್ಲಿ ಜನರು ಕಾದು ನಿಂತು ವಿವಿಧ ರೀತಿಯ ದೋಸೆಗಳನ್ನು ಸವಿಯುತ್ತಿದ್ದಾರೆ. ಇನ್ನು ಕೆಲವರು ರೈಸ್ ಪದಾರ್ಥಗಳನ್ನು ಸವಿಯುತ್ತಿದ್ದು , ಹೆಚ್ಚಾಗಿ ಪುಳಿಯೋಗರೆಗೆ ಬೇಡಿಕೆ ಇದೆ. ಇದರೊಂದಿಗೆ ಗಿರಿ ಜನರು ಸಿದ್ಧಪಡಿಸಿರುವ ಬಂಬು ಬಿರಿಯನಿ, ಮಾಕಳಿಬೇರಿನ ಟೀ ಹಾಗೂ ಇನ್ನಿತರ ತಿನಿಸುಗಳನ್ನು ಸವಿಯಲು ಪ್ರವಾಸಿಗರು ಸಾಲು ಗಟ್ಟಿ ನಿಂತಿರುವ ದೃಶ್ಯ ಕಂಡು ಬಂತು. ಕುರುಕಲು ತಿಂಡಿಗಳಾದ ಚಕ್ಕಲಿ, ನಿಪ್ಪಟ್ಟು , ಕೋಡಬಳೆ, ಬೆಣ್ಣೆ ಮುರುಕು ಹಾಗೂ ಚಾಟ್ಸ್ ತಿಂಡಿಗಳಾದ ಪಾನಿಪುರಿ, ಬೇಲ್‍ಪುರಿ, ಸೇವ್ ಪುರಿ ಸೇರಿದಂತೆ ಇನ್ನಿತರ ತಿಂಡಿಗಳು ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿದೆ.

Facebook Comments