ತುಮಕೂರಲ್ಲಿ ಎಚ್1ಎನ್1ಗೆ ತಾಯಿ ಮತ್ತು ಅವಳಿ ಶಿಶುಗಳು ಬಲಿ..!

ಈ ಸುದ್ದಿಯನ್ನು ಶೇರ್ ಮಾಡಿ

H1N1

ತುಮಕೂರು, ಅ.16- ಜಿಲ್ಲೆಯಲ್ಲಿಯೂ ಮಾರಕ ರೋಗ ಎಚ್1ಎನ್1ಗೆ ಬಾಣಂತಿ ಸೇರಿ ಆಕೆಯ ಅವಳಿ ನವಜಾತ ಶಿಶುಗಳು ಬಲಿಯಾಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ತುಮಕೂರು ತಾಲೂಕಿನ ಕುಪ್ಪೂರು ಗ್ರಾಮದ ರಂಗನಾಥ್ ಅವರ ಪತ್ನಿ ಕಾವ್ಯಾ ಹಾಗೂ ಆಕೆಯ ನವಜಾತ ಅವಳಿ ಹೆಣ್ಣು ಶಿಶುಗಳು ಆಗಸ್ಟ್ 27ರಂದು ಎಚ್1ಎನ್1 ಗೆ ಬಲಿಯಾಗಿವೆ. ಆದರೆ ಈ ಶಿಶುಗಳು ನ್ಯುಮೋನಿಯಾದಿಂದ ಸಾವನ್ನಪ್ಪಿವೆ ಎಂದು ಹೇಳಲಾಗಿತ್ತು.

ಆದರೆ ಈಗ , ಶಿಶುಗಳು ಎಚ್1ಎನ್1 ನಿಂದಲೇ ಅಸುನೀಗಿವೆ ಎಂದು ಆರೋಗ್ಯ ಇಲಾಖೆ ದೃಢೀಕರಿಸಿದೆ. 7 ತಿಂಗಳ ಗರ್ಭಿಣಿಯಾದ ಕಾವ್ಯಾ ಅವರಿಗೆ ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮೊದಲು ತುಮಕೂರು ದೊಡ್ಡಮನೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ಜ್ವರ ಹತೋಟಿಗೆ ಬಾರದೇ ಇದ್ದಾಗ ಕ್ರಮವಾಗಿ ಬೆಂಗಳೂರಿನ ವಾಣಿವಿಲಾಸ್, ಚಿನ್ಮಯ್ ಹಾಗೂ ಮಣಿಪಾಲ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸಲಾಗಿತ್ತು.

ಮಣಿಪಾಲ್ ಆಸ್ಪತ್ರೆಯಲ್ಲಿ ಕಾವ್ಯಾ ಅವಳಿ ಹೆಣ್ಣುಮಕ್ಕಳಿಗೆ ಜನ್ಮ ನೀಡಿದ್ದರು. ಆದರೆ ಮಕ್ಕಳು ಸಾವನ್ನಪ್ಪಿದ್ದವು. ಬಳಿಕ ಕಾವ್ಯಾ ಅವರನ್ನು ರಾಜೀವ್ ಗಾಂಧಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಅವರು ಕೂಡ ಸಾವನ್ನಪ್ಪಿದ್ದಾರೆ. ತಾಯಿ ಮತ್ತು ನವಜಾಶ ಶಿಶುಗಳ ಸಾವಿನಿಂದ ಜಿಲ್ಲೆಯ ಜನತೆಯಲ್ಲಿ ಮಾರಕ ರೋಗ ಎಚ್1ಎನ್1 ರ ಭೀತಿ ಶುರುವಾಗಿದೆ.

ಜಿಲ್ಲಾ ಕುಟುಂಬ ಕಲ್ಯಾಣ ಇಲಾಖೆ ಉಪ ನಿರ್ದೇಶಕರಾದ ಚಂದ್ರ ಕಲಾ ಅವರು ಈ ಸಂಜೆ ಪತ್ರಿಕೆಯೊಂದಿಗೆ ಮಾತಾನಾಡಿ, ಜಿಲ್ಲೆಯ ಎಲ್ಲಾ ತಾಲೂಕು ಅಧಿಕಾರಿಗಳಿಗೆ ಕಟ್ಟ ನಿಟ್ಟಿನ ಅದೇಶ ನೀಡಲಾಗಿದೆ. ಮಾರಕ ರೋಗದ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವುದು ಸೇರಿದಂತೆ ಸೋಂಕು ತಡೆಗೆ ಎಲ್ಲಾ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದೇನೆ ಎಂದು ಅವರು ತಿಳಿಸಿದರು.

Facebook Comments