ಕುಡಿದು ಕಿರಿಕ್ ಮಾಡುತ್ತಿದ್ದ ಮಗನ ಮೇಲೆ ಗುಂಡು ಹಾರಿಸಿದ ತಂದೆ..!

ಈ ಸುದ್ದಿಯನ್ನು ಶೇರ್ ಮಾಡಿ

Gun--01
ಕಲ್ಬುರ್ಗಿ, ಅ.17- ದುಶ್ಚಟಗಳನ್ನು ಬೆಳೆಸಿಕೊಂಡು ಕುಡಿದು ಬಂದು ಮನೆಯಲ್ಲಿ ಜಗಳವಾಡಿ ಕುಟುಂಬದವರ ಮೇಲೆ ಹಲ್ಲೆ ನಡೆಸುತ್ತಿದ್ದ ಪುತ್ರನ ವರ್ತನೆಯಿಂದ ಬೇಸತ್ತ ತಂದೆ ಆತನ ಮೇಲೆ ಗುಂಡು ಹಾರಿಸಿರುವ ಘಟನೆ ಶೆಟ್ಟಿ ಪೆನ್ ಜಂಕ್ಷನ್ ಚಿತ್ರಮಂದಿರದ ಬಳಿ ನಡೆದಿದೆ.ವೀರೇಶ್ ಚಿಚ್ಚ ಕೋಟೆ (23) ಗುಂಡೇಟಿನಿಂದ ತೀವ್ರವಾಗಿ ಗಾಯಗೊಂಡಿದ್ದು, ಆತನನ್ನು ಬಸವೇಶ್ವರ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಪರಿಸ್ಥಿತಿ ಚಿಂತಾಜನಕವಾಗಿದೆ ಎಂದು ಹೇಳಲಾಗಿದೆ.

ಬಿಎಸ್‍ಎಫ್‍ನಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಸೋಮಶೇಖರ್ ಚಿಚ್ಚಕೋಟೆ ಅವರ ಪುತ್ರನಾದ ವೀರೇಶ್ ಕೆಲ ಪುಂಡರ ಸಂಗದಿಂದ ದುಶ್ಚಟಗಳನ್ನು ಬೆಳೆಸಿಕೊಂಡಿದ್ದ. ಇತ್ತೀಚೆಗೆ ಮದ್ಯದ ವ್ಯಸನಿಯಾಗಿ ಮನೆಯಲ್ಲಿ ಜಗಳ ಮಾಡುತ್ತಿದ್ದ. ಆತನಿಗೆ ಎಷ್ಟೇ ಬುದ್ಧಿ ಹೇಳಿದರೂ ತನ್ನ ಹಳೆ ಚಾಳಿಯನ್ನು ಮುಂದುವರೆಸಿದ್ದರಿಂದ ಕುಟುಂಬದವರು ರೋಸಿ ಹೋಗಿದ್ದರು.

ಸ್ಥಳೀಯ ಬ್ಯಾಂಕ್‍ವೊಂದರ ಭದ್ರತಾ ಸಿಬ್ಬಂದಿಯಾಗಿ ಸೇವೆ ಸಲ್ಲಿಸುತ್ತಿರುವ ಸೋಮಶೇಖರ್ ತಮ್ಮ ಡಬಲ್ ಬ್ಯಾರೆಲ್ ಗನ್‍ನಿಂದ ನಿನ್ನೆ ರಾತ್ರಿ ಕೋಪದಲ್ಲಿ ಗುಂಡು ಹಾರಿಸಿದ್ದಾರೆ. ಅದು ವೀರೇಶನ ಎಡಗಾಲಿಗೆ ತಾಗಿದೆ. ಸ್ಥಳೀಯರು ಸಮಾಧಾನಪಡಿಸಿ ವೀರೇಶನನ್ನು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಈ ಬಗ್ಗೆ ರಾಘವೇಂದ್ರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Facebook Comments