ಹಾಸನದಲ್ಲಿ ಅನಧಿಕೃತವಾಗಿ ನಿರ್ಮಿಸಲಾಗಿದ್ದ ಹೊಟೇಲ್‍ಗೆ ಬೀಗ

ಈ ಸುದ್ದಿಯನ್ನು ಶೇರ್ ಮಾಡಿ

JCB--01

ಹಾಸನ, ಅ.17- ನಗರದಲ್ಲಿ ಅನಧಿಕೃತವಾಗಿ ನಿರ್ಮಿಸಲಾಗಿರುವ ಕಟ್ಟಡಗಳಿಗೆ ಇಂದು ಬೆಳ್ಳಂಬೆಳಗ್ಗೆ ನಗರಸಭೆ ಬೀಗ ಜಡಿದಿದೆ. ಕೆಆರ್ ಪುರ ಬಡಾವಣೆಯ ಸಿಲ್ವರ್ ಜ್ಯುಬ್ಲಿ ಪಾರ್ಕ್ ಬಳಿ ಅಕ್ರಮವಾಗಿ ನಿರ್ಮಿಸಲಾಗಿದ್ದ ಬಹು ಅಂತಸ್ತಿನ ಐಶ್ವರ್ಯ ಹೊಟೇಲ್‍ಗೆ ನಗರಸಭೆ ಬೀಗ ಜಡಿದಿದೆ.

ಬೆಳಗ್ಗೆ ಜೆಸಿಬಿ ಸಮೇತ ಆಗಮಿಸಿದ ನಗರಸಭೆ ಮುಖ್ಯ ಆಯುಕ್ತ ಪರಮೇಶ್, ಎಂಜಿನಿಯರ್‍ಗಳು ಹಾಗೂ ಸಿಬ್ಬಂದಿಗಳು ಹೊಟೇಲ್ ಪ್ರವೇಶದ್ವಾರಕ್ಕೆ ಬೀಗ ಜಡಿದು ವಿದ್ಯುತ್, ಒಳಚರಂಡಿ ಸಂಪರ್ಕವನ್ನು ಕಡಿತಗೊಳಿಸಿದ್ದಾರೆ. ಹೊಟೇಲ್ ಮಾಲೀಕ ಕಟ್ಟಡ ನಿರ್ಮಾಣಕ್ಕೆ ನಗರಸಭೆಯಿಂದ 1700 ಚದರ ಅಡಿಗೆ ಅನುಮತಿ ಪಡೆದಿದ್ದರು. ಅದನ್ನು ಉಲ್ಲಂಘಿಸಿ 7000 ಚದರ ಅಡಿಯಷ್ಟು ಸರ್ಕಾರಿ ಜಾಗವನ್ನು ಒತ್ತುವರಿ ಮಾಡಿಕೊಂಡು ಹೊಟೇಲ್ ನಿರ್ಮಿಸಿದ್ದಾರೆ. ಇದರಿಂದ ವಾಹನ ದಟ್ಟಣೆ ಹೆಚ್ಚಾಗಿದ್ದು, ಪಾದಚಾರಿಗಳಿಗೆ ತೀವ್ರ ಸಮಸ್ಯೆಯಾಗುತ್ತಿತ್ತು.

ಈ ಹಿಂದೆಯೂ ಸಹ ಸೂಚನೆ ನೀಡಿ ಕಾರ್ಯಾಚರಣೆ ನಡೆಸಲಾಗಿತ್ತು. ಆದರೂ ಸಹ ಒತ್ತುವರಿ ತೆರವು ಮಾಡಿರಲಿಲ್ಲ. ನ್ಯಾಯಾಲಯದ ಆದೇಶದ ಹಿನ್ನೆಲೆಯಲ್ಲಿ ಇಂದು ಅಧಿಕಾರಿಗಳು ಕಟ್ಟಡವನ್ನು ಬಂದ್ ಮಾಡಿದ್ದಾರೆ. ಹೌಸಿಂಗ್ ಬೋರ್ಡ್‍ನಲ್ಲಿ ಮತ್ತೊಂದು ಕಟ್ಟಡಕ್ಕೆ ಬೀಗಮುದ್ರೆ ಹಾಕಿದ್ದಾರೆ. ನಗರಸಭೆ ಅನುಮತಿ ಪಡೆಯದೆ ಏಳು ಅಂತಸ್ತಿನ ಕಟ್ಟಡ ನಿರ್ಮಿಸಿದ್ದು, ಇದು ನಗರಸಭೆ ನೀಲಿನಕ್ಷೆಯ ಉಲ್ಲಂಘನೆಯಾಗಿದೆ. ಕಟ್ಟಡದ ಒಳಚರಂಡಿ, ಯುಜಿಡಿ, ವಿದ್ಯುತ್ ಸಂಪರ್ಕವನ್ನು ಅಧಿಕಾರಿಗಳು ಕಡಿತಗೊಳಿಸಿದ್ದಾರೆ. ಒಟ್ಟಿನಲ್ಲಿ ನಗರದಲ್ಲಿ ಅಕ್ರಮವಾಗಿ ಕಟ್ಟಡ ಕಟ್ಟಿಕೊಂಡಿರುವ ಮಾಲೀಕರಿಗೆ ಭೀತಿ ಶುರುವಾಗಿದೆ.

Facebook Comments