ಶಬರಿ ಮಲೈ ಮಹಾದ್ವಾರದಲ್ಲಿ ಮಹಿಳೆಯರಿಗೆ ತಡೆ, ಪರಿಸ್ಥಿತಿ ಉದ್ವಿಗ್ನ, ಪೊಲೀಸರ ಬಲಪ್ರಯೋಗ

ಈ ಸುದ್ದಿಯನ್ನು ಶೇರ್ ಮಾಡಿ

Sabarimala--01

ನೀಲಕಂಠ(ನೀಲಕ್ಕಳ್), ಅ.17 (ಪಿಟಿಐ)- ಸುಪ್ರೀಂಕೋರ್ಟ್ ಐತಿಹಾಸಿಕ ಆದೇಶದ ಹಿನ್ನೆಲೆಯಲ್ಲಿ ಶಬರಿ ಮಲೈನ ಶ್ರೀ ಅಯ್ಯಪ್ಪಸ್ವಾಮಿ ದರ್ಶನಕ್ಕೆ ಇಂದಿನಿಂದ ಮಹಿಳೆಯರಿಗೆ ಮುಕ್ತ ಅವಕಾಶ ಕಲ್ಪಿಸಲು ಒಂದೆಡೆ ಕೇರಳ ಸರ್ಕಾರ ಸಿದ್ಧವಾಗಿದ್ದರೆ, ಇನ್ನೊಂದೆಡೆ ಮಹಿಳೆಯರನ್ನು ತಡೆಯಲು ಭಕ್ತ ಸಮೂಹದ ದೊಡ್ಡ ಪಡೆಯೇ ಸಜ್ಜಾಗಿದೆ. ಈ ಹಿನ್ನೆಲೆಯಲ್ಲಿ ಶಬರಿಮಲೈ ಮಹಾದ್ವಾರ ನೀಲಕಂಠ (ನೀಲಕ್ಕಳ್)ನಲ್ಲಿ ಇಂದು ಮುಂಜಾನೆಯಿಂದಲೇ ಉದ್ವಿಗ್ನ ವಾತಾವರಣ ನಿರ್ಮಾಣಗೊಂಡಿದೆ. ವಿವಿಧ ರಾಜ್ಯಗಳಿಂದ ಶ್ರೀ ಅಯ್ಯಪ್ಪಸ್ವಾಮಿ ದರ್ಶನಕ್ಕೆ ಆಗಮಿಸಿದ ಮಹಿಳೆಯರ ಪ್ರವೇಶಕ್ಕೆ ತೀವ್ರ ವಿರೋಧ ವ್ಯಕ್ತಪಡಿಸುತ್ತಿರುವ ಭಕ್ತರನ್ನು ಚದುರಿಸಲು ಪೊಲೀಸರು ಲಾಠಿ ಪ್ರಹಾರದ ಬಲಪ್ರಯೋಗ ಮಾಡಿದ್ದಾರೆ. ಇದರಿಂದಾಗಿ ಅಲ್ಲಿ ಉದ್ವಿಗ್ನ ಪರಿಸ್ಥಿತಿ ನೆಲೆಗೊಂಡಿದ್ದು, ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಭಾರೀ ಸಂಖ್ಯೆಯ ಪೊಲೀಸರನ್ನು ನಿಯೋಜಿಸಲಾಗಿದೆ. ಹಿಂಸಾಚಾರ ಭುಗಿಲೇಳದಂತೆ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ.

ತುಳ್ಳುಂ ಪೂಜೆಗಾಗಿ ಇಂದು ಸಂಜೆ 5 ಗಂಟೆಯಿಂದ ದೇವಸ್ಥಾನ ಪುನರ್ ಆರಂಭಗೊಳ್ಳಲಿದ್ದು, ಭಾರೀ ಸಂಖ್ಯೆಯ ಮಹಿಳೆಯರು ಈಗಾಗಲೇ ನೀಲಕಂಠ ಪ್ರವೇಶದ್ವಾರದಲ್ಲಿ ಜಮಾವಣೆಗೊಂಡಿದ್ದಾರೆ. ನೀಲಕಂಠ ಹೆಬ್ಬಾಗಿಲಿನಿಂದ ಗಿರಿದೇಗುಲಕ್ಕೆ ಸಾಗುವ 20 ಕಿ.ಮೀ. ಮಾರ್ಗದುದ್ದಕ್ಕೂ ಪೊಲೀಸ್ ಸರ್ಪಗಾವಲು ಹಾಕಲಾಗಿದೆ. ಶಬರಿಮಲೈ ಆಚಾರ ಸಂರಕ್ಷಣಾ ಸಮಿತಿಯ ಪ್ರತಿಭಟನಾ ಗುಂಪುಗಳಿಂದ ಈ ಮಾರ್ಗದಲ್ಲಿ ಸ್ಥಾಪಿಸಲಾಗಿದ್ದ ತಾತ್ಕಾಲಿಕ ಆಶ್ರಯ ತಾಣಗಳನ್ನು ತೆಗೆದು ಹಾಕಲಾಗಿದೆ.

ಋತುಸ್ರಾವ(ಮಾಸಿಕ ಸ್ರಾವ)ಕ್ಕೆ ಒಳಗಾಗುವ ಯುವತಿಯರು ಮತ್ತು ಮಹಿಳೆಯರಿಗೆ ಶಬರಿಮಲೈಗೆ ಪ್ರವೇಶ ಕಲ್ಪಿಸಬಾರದು ಎಂದು ಆಗ್ರಹಿಸಿ ಅಸಂಖ್ಯಾತ ಭಕ್ತರು ಅಯ್ಯಪ್ಪ ಮಂತ್ರ ಪಠಿಸುತ್ತಾ ಧರಣಿ ನಡೆಸುತ್ತಿದ್ದು. ಅಲ್ಲಿ ತ್ವೇಷಮಯ ವಾತಾವರಣ ಸೃಷ್ಟಿಯಾಗಿದೆ. ಪ್ರತಿಭಟನೆ ನೆಪದಲ್ಲಿ ಯಾವುದೆ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸರು ಸಕಲರೀತಿಯಲ್ಲೂ ಸಜ್ಜಾಗಿದ್ದಾರೆ. ಭದ್ರತೆಗಾಗಿ ಹೆಲಿಕಾಪ್ಟರ್‍ಗಳು ಮತ್ತು ಡ್ರೋಣ್ ನೆರವು ಪಡೆಯಲಾಗಿದೆ. ವಿಶೇಷ ಕಮ್ಯಾಂಡೋಗಳನ್ನು ನಿಯೋಜಿಸಲಾಗಿದೆ. ಕಪ್ಪು ವಸ್ತ್ರದ ಭಕ್ತರಿಗಿಂತ ಖಾಕಿ ಧರಿಸಿದ ಪೊಲೀಸರ ಸಂಖ್ಯೆಯೇ ಅಲ್ಲಿ ಹೆಚ್ಚಾಗಿ ಕಂಡುಬರುತ್ತಿದೆ.

ಇಂದು ಮುಂಜಾನೆ ಮಹಿಳಾ ಭಕ್ತರಿಗೆ ಶಬರಿ ಮಲೆ ಪ್ರವೇಶಿಸುವುದಕ್ಕೆ ಅಡ್ಡಿಪಡಿಸಿದ ಭಕ್ತರ ಗುಂಪೊಂದನ್ನು ಪೊಲೀಸರು ಲಾಠಿ ಪ್ರಹಾರದ ಮೂಲಕ ಚುದುರಿಸಿದರು. ವಿವಿಧ ರಾಜ್ಯಗಳಿಂದ ಬಂದಿದ್ದ ಮಹಿಳೆಯರಿದ್ದ ಬಸ್‍ಗಳಿಗೆ ಪ್ರತಿಭಟನಾಕಾರರು ತಡೆಯೊಡ್ಡಿದಾಗ ಅಲ್ಲಿ ಕೆಲಕಾಲ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು. ಶಬರಿಮಲೈಗೆ ಎಲ್ಲ ವಯೋಮಾನದ ಮಹಿಳೆಯರಿಗೆ ಅವಕಾಶ ಕಲ್ಪಿಸುವ ಸುಪ್ರೀಂಕೋರ್ಟ್ ತೀರ್ಪನ್ನು ಯಥಾವತ್ ಅನುಷ್ಠಾನಗೊಳಿಸುವುದಾಗಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳುತ್ತಿದ್ದರೂ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ(ಕೆಎಸ್‍ಆರ್‍ಟಿಸಿ) ಬಸ್‍ನಿಂದ ಮಹಿಳಾ ಕಾರ್ಯಕರ್ತರನ್ನು ಪ್ರತಿಭಟನಾಕಾರರು ಕೆಳಗಿಳಿಸಿರುವ ಘಟನೆಯೂ ನಡೆದಿದೆ.

ದೇಗುಲಕ್ಕೆ ಭೇಟಿ ನೀಡುವ ಮಹಿಳೆಯರಿಗೆ ಪ್ರತಿಭಟನಾಕಾರರು ಅಡ್ಡಿ ಮಾಡಲು ಅವಕಾಶ ನೀಡುವುದಿಲ್ಲ. ಯಾರೊಬ್ಬರೂ ಕಾನೂನು ಕೈಗೆತ್ತಿಕೊಳ್ಳಲು ಆಸ್ಪದ ನೀಡುವುದಿಲ್ಲ. ಶಬರಿಮಲೈಗೆ ತೆರಳುವ ಎಲ್ಲ ಭಕ್ತರಿಗೂ ಪೂಜೆ ಸಲ್ಲಿಸಲು ಸರ್ಕಾರ ಸಕಲ ವ್ಯವಸ್ಥೆ ಮಾಡಿದೆ ಎಂದು ಮುಖ್ಯಮಂತ್ರಿ ಹೇಳಿದ್ದರೂ, ಪ್ರತಿಭಟನೆಕಾರರು ಮತ್ತು ಹಿರಿಯ ಸ್ತ್ರೀ ಭಕ್ತೆಯರು ಮಹಿಳೆಯರ ಪ್ರವೇಶಕ್ಕೆ ತಡೆಯೊಡ್ಡುವುದಾಗಿ ಪ್ರತಿ ಸವಾಲು ಹಾಕಿದ್ದಾರೆ. ಪಂಪಾ ನದಿ ದಂಡೆ ಪ್ರದೇಶದಲ್ಲೂ ಅಸಂಖ್ಯಾತ ಪೊಲೀಸರನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ. ಮುರಿದುಬಿದ್ದ ಸಂಧಾನ

ಮಾತುಕತೆ:
ಈ ಮಧ್ಯೆ ಎಲ್ಲ ವಯೋಮಾನದ ಮಹಿಳೆಯರಿಗೆ ಅಯ್ಯಪ್ಪ ದರ್ಶನ ಪಡೆದು ಪೂಜೆ ಸಲ್ಲಿಸಲು ಅವಕಾಶ ಕಲ್ಪಿಸುವ ಬಗ್ಗೆ ಟ್ರಾವಂಕೂರ್ ದೇವಸ್ಥಾನ ಮಂಡಳಿ ಮತ್ತು ಪಂಡಲಂ ರಾಯಲ್ ಕುಟುಂಬ ಸೇರಿದಂತೆ ವಿವಿಧ ಸಂಘಟನೆಗಳೊಂದಿಗೆ ನಿನ್ನೆ ನಡೆದ ಸಂಧಾನ ಮಾತುಕತೆ ವೇಳೆ ಒಮ್ಮತ ಮೂಡದೇ ವಿಫಲವಾಗಿದೆ.

Facebook Comments