ಲಿಂಗಾಯಿತ ಧರ್ಮದ ಕುರಿತು ಸಿಎಂ ಕುಮಾರಸ್ವಾಮಿ ಹೇಳಿದ್ದೇನು..?
ಮೈಸೂರು,ಅ.18- ಲಿಂಗಾಯಿತ ಧರ್ಮದ ವಿಚಾರದಲ್ಲಿ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ಯಾವುದೇ ಕ್ರಮವನ್ನು ಕೈಗೊಂಡಿಲ್ಲ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸ್ಪಷ್ಟಪಡಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲಿಂಗಾಯಿತ ಧರ್ಮದ ವಿಚಾರಕ್ಕೆ ಸಂಬಂಧಿಸಿದಂತೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ಹಿಂದಿನ ಸರ್ಕಾರದ ಸಂದರ್ಭದಲ್ಲಿ ಈ ವಿಚಾರ ಪ್ರಸ್ತಾಪವಾದಾಗ ನಾವು ಧಾರ್ಮಿಕ ಸಮಸ್ಯೆಗಳ ಬಗ್ಗೆ ಧಾರ್ಮಿಕ ಗುರುಗಳೇ ಚರ್ಚಿಸಿ ತೀರ್ಮಾನ ಕೈಗೊಳ್ಳಬೇಕೆಂದು ಹೇಳಿದ್ದಾಗಿ ತಿಳಿಸಿದರು.
ಈಗ ಧರ್ಮದ ವಿಚಾರದಲ್ಲಿ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಲಾರೆ. ಅವರು ಯಾವ ಅರ್ಥದಲ್ಲಿ ಹೇಳಿದ್ದಾರೆ ಎಂಬ ಬಗ್ಗೆ ತಮಗೆ ಮಾಹಿತಿ ಇಲ್ಲ ಎಂದು ತಳ್ಳಿ ಹಾಕಿದರು. ಧಾರ್ಮಿಕ ವಿವಾದಗಳಿಗಿಂತ ಮುಖ್ಯವಾಗಿ ಜನಸಾಮಾನ್ಯರ ಬದುಕು ಹಸನು ಮಾಡುವ ಕಡೆ ಗಮನಹರಿಸುವುದು ಸೂಕ್ತ ಎಂದರು.
ವೈಜ್ಞಾನಿಕ ಮಾರ್ಗದಲ್ಲಿ ಎಷ್ಟೇ ಮುಂದುವರೆದಿದ್ದರೂ ಸುಧಾರಣೆ ತರಲು ಪ್ರಯತ್ನಗಳಾದರೂ ಪ್ರಾಕೃತಿಕ ವಿಕೋಪವನ್ನು ತಡೆಯಲು ಸಾಧ್ಯವಿಲ್ಲ. ಪ್ರಾಕೃತಿಕ ವಿಕೋಪಗಳಿಂದ ಆಗುವ ಹಾನಿ ಭಾರೀ ಪ್ರಮಾಣದಲ್ಲಿರುತ್ತದೆ ಎಂದರು. ನಮ್ಮ ಪೂರ್ವಿಕರು ಸಾವಿರಾರು ವರ್ಷಗಳಿಂದ ನಡೆಸಿಕೊಂಡು ಬಂದಿರುವ ಶಿಷ್ಟಾಚಾರದ ಉಲ್ಲಂಘನೆ ಮಾಡುವುದು ಸೂಕ್ತವಲ್ಲ ಎಂಬುದು ತಮ್ಮ ವೈಯಕ್ತಿಕ ಭಾವನೆ. ದೈವಶಕ್ತಿಗಳ ವಿರುದ್ಧ ನಾವೇ ಸಂಘರ್ಷಕ್ಕಿಳಿಯುವುದು ಸರಿಯಲ್ಲ ಎಂದು ಶಬರಿಮಲೆ ಅಯ್ಯಪ್ಪ ಸ್ವಾಮಿ ದರ್ಶನಕ್ಕೆ ಮಹಿಳೆಯರ ಪ್ರವೇಶ ಕುರಿತು ಕೇಳಲಾದ ಪ್ರಶ್ನೆಗೆ ಮೇಲಿನಂತೆ ಅವರು ಉತ್ತರಿಸಿದರು.
ಧಾರ್ಮಿಕ ಶಿಷ್ಟಾಚಾರವನ್ನು ಕೆಲವರು ಮೌಢ್ಯ, ಮೂಢನಂಬಿಕೆ ಎಂದು ವಿಶ್ಲೇಷಿಸುತ್ತಾರೆ. ಆದರೆ ನಮ್ಮ ಪೂರ್ವಿಕರು ಯಾವುದೋ ಒಂದು ಮಹತ್ವದ ಉದ್ದೇಶದಿಂದಲೇ ಮಾಡಿರುತ್ತಾರೆ. ಸಂಕ್ರಾಂತಿಗೆ ಮಾತ್ರ ಏಕೆ ಎಳ್ಳುಬೆಲ್ಲ ಬಳಸುತ್ತಾರೆ ಎಂದು ಪ್ರಶ್ನಿಸಿದ ಮುಖ್ಯಮಂತ್ರಿ, ಪ್ರತಿಯೊಂದು ಹಬ್ಬಕ್ಕೂ ಒಂದೊಂದು ತಿಂಡಿ-ತಿನಿಸು ಹಾಗೂ ಆಹಾರವನ್ನು ನಿಗದಿಪಡಿಸಿದ್ದಾರೆ. ಪ್ರಕೃತಿ ಹಾಗೂ ಹವಾಗುಣಕ್ಕೆ ಅನುಗುಣವಾಗಿ ಆಹಾರ ಪದ್ದತಿಗಳನ್ನು ನಿಗದಿಪಡಿಸಿದ್ದಾರೆ ಎಂದರು.