ಯುಪಿ ಮತ್ತು ಉತ್ತರಖಾಂಡ್ ಮಾಜಿ ಸಿಎಂ, ಅಪರೂಪದ ರಾಜಕಾರಣಿ ಎನ್‌.ಡಿ.ತಿವಾರಿ ಇನ್ನಿಲ್ಲ

ಈ ಸುದ್ದಿಯನ್ನು ಶೇರ್ ಮಾಡಿ

NDTiwari

ನವದೆಹಲಿ. ಅ. 8 : ಅಪರೂಪದ ರಾಜಕಾರಣಿ ಎನ್‌. ಡಿ. ತಿವಾರಿ ವಿಧಿವಶರಾಗಿದ್ದಾರೆ. ನವದೆಹಲಿಯಲ್ಲಿ ಸಾಕೇತ್‌ ಮಾಕ್ಸ್‌ ಆಸ್ಪತ್ರೆಯಲ್ಲಿ ಅವರು ಅಸುನೀಗಿದ್ದು, ಅವರಿಗೆ 93 ವರ್ಷ ವಯಸ್ಸಾಗಿತ್ತು. ಮಿದುಳು ಆಘಾತಕ್ಕೆ ಒಳಗಾಗಿದ್ದ ಅವರನ್ನು ಸೆಪ್ಟೆಂಬರ್‌ 20ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ವಯೋ ಸಹಜ ಖಾಯಿಲೆಗಳಿಂದಲೂ ಬಳಲುತ್ತಿದ್ದ ಅವರು ಗುರುವಾರ ಇಹಲೋಕ ತ್ಯಜಿಸಿದ್ದಾರೆ.

1963ರಲ್ಲಿ ಕಾಂಗ್ರೆಸ್ ಪಕ್ಷ ಸೇರಿದ್ದ ತಿವಾರಿ ಭಾರತೀಯ ರಾಜಕಾರಣದಲ್ಲಿ ಹಲವು ಕಾರಣಗಳಿಗಾಗಿ ವಿಶಿಷ್ಟವಾಗಿ ಗುರುತಿಸಿಕೊಳುತ್ತಾರೆ. ಮುಖ್ಯವಾಗಿ ದೇಶದಲ್ಲಿ ಎರಡು ರಾಜ್ಯಗಳಿಗೆ ಮುಖ್ಯಮಂತ್ರಿಯಾದ ಏಕೈಕ ವ್ಯಕ್ತಿ ಎನ್‌. ಡಿ. ತಿವಾರಿ. ಅವರು ಉತ್ತರ ಪ್ರದೇಶ ಮತ್ತು ಕೆಲವು ಅವಧಿಗೆ ಉತ್ತರಾಖಂಡ್‌ ರಾಜ್ಯದ ಮುಖ್ಯಮಂತ್ರಿಯಾಗಿದ್ದರು.

1976, 84 ಮತ್ತು 89ರಲ್ಲಿ ಅವರು ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿದ್ದರು. ಸಂಜಯ್‌ ಗಾಂಧಿ ಮತ್ತು ಇಂದಿರಾ ಗಾಂಧಿಯವರಿಗೆ ಆಪ್ತರಾಗಿದ್ದ ಅವರು ರಾಜ್ಯಸಭೆ ಮತ್ತು ಲೋಕಸಭೆಯ ಸದಸ್ಯರೂ ಆಗಿದ್ದರು. ರಾಜೀವ್‌ ಗಾಂಧಿಯವರ ಸಂಪುಟದಲ್ಲಿ 1986 ರಿಂದ 87ರವರೆಗೆ ವಿದೇಶಾಂಗ ಖಾತೆ ಸಚಿವರಾಗಿಯೂ ತಿವಾರಿ ಸೇವೆ ಸಲ್ಲಿಸಿದ್ದರು.

ಮುಂದೆ ಅವರು 2002ರಲ್ಲಿ ಉತ್ತರಾಖಂಡದ ಮುಖ್ಯಮಂತ್ರಿಯಾದರು. ನಂತರ 2007ರಿಂದ 2009ರವರೆಗೆ ಆಂಧ್ರ ಪ್ರದೇಶದ ರಾಜ್ಯಪಾಲರಾಗಿದ್ದರು. ಈ ವೇಳೆ ಸ್ಟಿಂಗ್‌ ಆಪರೇಷನ್‌ ಒಂದರಲ್ಲಿ ಮೂವರು ಮಹಿಳೆಯರೊಂದಿಗೆ ಅಶ್ಲೀಲ ಭಂಗಿಯಲ್ಲಿರುವ ತಿವಾರಿ ಚಿತ್ರಗಳು ಬಿಡುಗಡೆಯಾಗಿ ವಿವಾದ ಸೃಷ್ಟಿಸಿತ್ತು. ನಂತರ ಆರೋಗ್ಯದ ಕಾರಣ ನೀಡಿ ಅವರು ಹುದ್ದೆಯಿಂದ ಕೆಳಗಿಳಿದರು. ಅಲ್ಲಿಂದ ಅವರ ರಾಜಕೀಯ ಜೀವನದಲ್ಲಿ ಮೋಡ ಕವಿಯಿತು.

ಮುಂದೆ ಅವರು ಸುದ್ದಿಗೆ ಬಂದಿದ್ದು 2014ರಲ್ಲಿ. ರೋಹಿತ್‌ ಶೇಖರ್‌ ಎಂಬ ವಕೀಲರು ಎನ್.ಡಿ. ತಿವಾರಿ ನನ್ನ ತಂದೆ ಎಂದು ಕೋರ್ಟ್‌ ಮೆಟ್ಟಿಲೇರಿದ್ದರು. ಆರಂಭದಲ್ಲಿ ಡಿಎನ್‌ಎ ಪರೀಕ್ಷೆಗೆ ನಿರಾಕರಿಸಿದ್ದ ತಿವಾರಿ ಮುಂದೆ ಪರೀಕ್ಷೆಗ ಒಳಪಟ್ಟಿದ್ದರು. ಇದರಲ್ಲಿ ಅವರು ನಿಜವಾದ ತಂದೆ ಎಂದು ಗೊತ್ತಾಗಿತ್ತು. ಈ ಸಂಬಂಧ ದೆಹಲಿ ಹೈಕೋರ್ಟ್‌ ಆದೇಶ ನೀಡಿತ್ತು.

ಅದಾದ ನಂತರ ಹೆಚ್ಚುಕಡಿಮೆ ಮರೆತೇ ಹೋಗಿದ್ದ ಎನ್‌ಡಿ ತಿವಾರಿ ಈ ವರ್ಷದ ಆರಂಭದಲ್ಲಿ ನಡೆದ ಉತ್ತರಾಖಂಡ್‌ ವಿಧಾನಸಭೆ ಚುನಾವಣೆ ವೇಳೆ ಪುತ್ರ ರೋಹಿತ್‌ ಜತೆ ಬಿಜೆಪಿ ಸೇರಿದ್ದರು. ಹೆಚ್ಚು ಕಡಿಮೆ 65 ವರ್ಷಗಳ ಕಾಲ ಭಾರತದ ರಾಜಕಾರಣದಲ್ಲಿದ್ದು ತಮ್ಮದೇ ಆದ ಛಾಪು ಮೂಡಿಸಿದ್ದ ಎನ್‌ಡಿ ತಿವಾರಿ ಎಂಬ ಹೆಸರು ಇನ್ನು ನೆನಪು ಮಾತ್ರ.

Facebook Comments