ನಾಳೆಯಿಂದ ಕಡಿಮೆಯಾಗಲಿದೆ ಮಳೆ ಆರ್ಭಟ

ಈ ಸುದ್ದಿಯನ್ನು ಶೇರ್ ಮಾಡಿ

Weather--01

ಬೆಂಗಳೂರು,ಅ.18- ಕಳೆದ ಮೂರ್ನಾಲ್ಕು ದಿನಗಳಿಂದ ರಾಜ್ಯದ ಒಳನಾಡಿನಲ್ಲಿ ಮುಂಗಾರು ಮಳೆ ಉತ್ತಮವಾಗಿ ಬೀಳುತ್ತಿದ್ದು, ಇಂದು ಕೂಡ ಮುಂದುವರೆಯಲಿದೆ. ನಾಳೆಯಿಂದ ಮಳೆ ಇಳಿಮುಖವಾಗುವ ಮುನ್ಸೂಚನೆಗಳಿವೆ ಎಂದು ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿರ್ದೇಶಕ ಡಾ.ಜಿ.ಎಸ್.ಶ್ರೀನಿವಾಸ ರೆಡ್ಡಿ ತಿಳಿಸಿದರು. ಈ ಸಂಜೆಯೊಂದಿಗೆ ಮಾತನಾಡಿದ ಅವರು, ಮುಂಗಾರು ಇನ್ನು ರಾಜ್ಯದಿಂದ ವಾಪಸ್ಸಾಗಿಲ್ಲ. ಹೀಗಾಗಿ ಹಿಂಗಾರು ಮಳೆ ಆರಂಭವಾಗಿಲ್ಲ. ಇಂದು ಕೂಡ ರಾಜ್ಯದ ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವು ಭಾಗಗಳಲ್ಲಿ ಉತ್ತಮ ಮಳೆಯಾಗಲಿದೆ.

ಮೇಲ್ಮೈ ಸುಳಿ ಗಾಳಿಯಿಂದಾಗಿ ಗಾಳಿಯ ಒತ್ತಡ ಕಡಿಮೆಯಾಗಿದ್ದು, ಆ ಮಾರ್ಗದಲ್ಲಿ ಉತ್ತಮ ಮಳೆಯಾಗುತ್ತಿದೆ. ನಿನ್ನೆ ಬೆಂಗಳೂರು, ಚಿತ್ರದುರ್ಗ, ಬಳ್ಳಾರಿ, ತುಮಕೂರು ಜಿಲ್ಲೆಗಳ ಹಲವು ಭಾಗಗಳಲ್ಲಿ ಉತ್ತಮ ಮಳೆಯಾಗಿದೆ.
ಬೆಂಗಳೂರು ಗ್ರಾಮಾಂತರ, ರಾಮನಗರ, ಕೊಪ್ಪಳ, ರಾಯಚೂರು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಸಾಧಾರಣದಿಂದ ಉತ್ತಮ ಪ್ರಮಾಣದ ಮಳೆಯಾದ ವರದಿಯಾಗಿದೆ.

ಮುಂಗಾರು ಮಾರುತಗಳು ಮರಳಿದ ನಂತರ ಹಿಂಗಾರು ಮಾರುತಗಳು ಆರಂಭವಾಗುತ್ತವೆ. ಮುಂಗಾರಿನ ಮಾರುತಗಳು ಇನ್ನು ಪೂರ್ಣ ಪ್ರಮಾಣದಲ್ಲಿ ರಾಜ್ಯದಿಂದ ವಾಪಸ್ಸಾಗಿಲ್ಲ. ಈಗಲೂ ಬೀಳುತ್ತಿರುವ ಮಳೆ ಮುಂಗಾರು ಮಳೆಯೆಂದೇ ಪರಿಗಣಿತವಾಗುತ್ತದೆ ಎಂದು ಹೇಳಿದರು. ಅಕ್ಟೋಬರ್ 20ರ ನಂತರ ಹಿಂಗಾರು ಮಳೆ ಆರಂಭವಾಗುವ ಸಾಧ್ಯತೆಗಳಿವೆ. ಮುಂಗಾರಿನಂತೆ ಹಿಂಗಾರಿನಲ್ಲಿ ದೀರ್ಘ ಕಾಲದ ಹವಾ ಮುನ್ಸೂಚನೆ ನೀಡುವುದು ಕಷ್ಟ. ವಾಯುಭಾರ ಕುಸಿತ, ಮೇಲ್ಮೈ ಸುಳಿ ಗಾಳಿ, ಚಂಡ ಮಾರುತದಂತಹ ಸನ್ನಿವೇಶಗಳು ವಾತಾವರಣದಲ್ಲಿ ಸೃಷ್ಟಿಯಾದಾಗ ಮಾತ್ರ ಹೆಚ್ಚಿನ ಮಳೆಯನ್ನು ನಿರೀಕ್ಷಿಸಬಹುದಾಗಿದೆ. ಇಲ್ಲದಿದ್ದರೆ ಮಳೆಯ ಪ್ರಮಾಣ ವಿರಳವಾಗಿರುತ್ತದೆ ಎಂದು ಅವರು ತಿಳಿಸಿದರು.

ರಾಜಧಾನಿ ಬೆಂಗಳೂರಿನಲ್ಲಿ ರಾತ್ರಿ ಬಿದ್ದ ಮಳೆಯಿಂದಾಗಿ ಹಲವು ಕಡೆ ಸಂಚಾರ ದಟ್ಟಣೆ ಉಂಟಾಗಿ ವಾಹನ ಸವಾರರು ಸಂಕಷ್ಟ ಎದುರಿಸುವಂತಾಗಿತ್ತು. ಪ್ರಯಾಣಿಕರು ಕೂಡ ಸಂಜೆ ಹಾಗೂ ರಾತ್ರಿ ಬಿದ್ದ ಮಳೆಯಿಂದ ಪರದಾಡುವಂತಾಗಿತ್ತು. ಬೆಂಗಳೂರಿನಿಂದ ತಮ್ಮ ತಮ್ಮ ಊರಿಗೆ ತೆರಳುವವರಿಗೆ ಮಳೆಯಿಂದ ತೊಂದರೆ ಉಂಟಾಗಿತ್ತು.

Facebook Comments