ಕನ್ನಡದಲ್ಲಿ ಪ್ರಮಾಣವಚನ ಸ್ವೀಕರಿಸಿದ್ದ ಕೇರಳ ಶಾಸಕ ವಿಧಿವಶ

ಈ ಸುದ್ದಿಯನ್ನು ಶೇರ್ ಮಾಡಿ

Kasaragod--01

ಕಾಸರಗೋಡು, ಅ.20- ಮಂಜೆಶ್ವರ ಶಾಸಕ ಪಿಬಿ ಅಬ್ದುಲ್ ರಜಾಕ್ (63) ಅವರು ನುಳ್ಳಿಪಾಡಿಯ ಖಾಸಗಿ ಆಸ್ಪತ್ರೆಯಲ್ಲಿ ಇಂದು ಬೆಳಗ್ಗೆ ನಿಧನ ಹೊಂದಿದ್ದಾರೆ. ಮೂರು ದಿನಗಳಿಂದ ಜ್ವರ ಬಾಧಿತರಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

ಮುಸ್ಲಿಂ ಲೀಗ್ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸದಸ್ಯರಾಗಿದ್ದ ಅವರು, 2011 ರಿಂದ ಮಂಜೇಶ್ವರ ಶಾಸಕರಾಗಿದ್ದರು. 2016 ರ ಚುನಾವಣೆಯಲ್ಲಿ ಬಿಜೆಪಿಯ ಕೆ.ಸುರೇಂದ್ರ ಅವರನ್ನು ಕೇವಲ 89 ಮತಗಳ ಅಂತರದಿಂದ ಅವರು ಸೋಲಿಸಿದ್ದರು. ಚೆಂಗಳ ಗ್ರಾಮ ಪಂಚಾಯಿತಿ ಅಧ್ಯಕ್ಷ, ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾಗಿಯೂ ಅವರು ಸೇವೆ ಸಲ್ಲಿಸಿದ್ದಾರೆ. ಮಂಜೇಶ್ವರ ಕ್ಷೇತ್ರದಿಂದ ಶಾಸಕರಾಗಿ ಎರಡನೇ ಬಾರಿ ಯುಡಿಎಫ್ ಬೆಂಬಲಿತ ಅಭ್ಯರ್ಥಿಯಾಗಿ ಸ್ಪರ್ಧಿಸಿ ಆಯ್ಕೆಯಾಗಿದ್ದರು.

ಕೇರಳ ವಿಧಾನಸಭೆಯಲ್ಲಿ ಕನ್ನಡದಲ್ಲೇ ಪ್ರಮಾಣ ವಚನ ಸ್ವೀಕರಿಸಿದ್ದ ಅವರು, ಭಾರಿ ಪ್ರಶಂಸೆಗೆ ಪಾತ್ರರಾಗಿದ್ದರು. ಮೃತರಿಗೆ ಪತ್ನಿ ಹಾಗೂ ನಾಲ್ಕು ಮಕ್ಕಳಿದ್ದಾರೆ. ರಜಾಕ್ ಅವರ ಅಗಲಿಕೆಗೆ ರಾಜ್ಯದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕಂಬನಿ ಮಿಡಿದಿದ್ದಾರೆ. ಕನ್ನಡದಲ್ಲಿಯೇ ಪ್ರಮಾಣವಚನ ಸ್ವೀಕರಿಸಿದ್ದ ಪಿ.ಬಿ.ರಜಾಕ್ ಅವರು, ಕನ್ನಡದ ಹಿರಿಮೆಯನ್ನು ಹೆಚ್ಚಿಸಿದ್ದರು ಎಂದು ಮುಖ್ಯಮಂತ್ರಿ ಪ್ರಶಂಸಿಸಿದ್ದಾರೆ.

Facebook Comments