ಪ್ರತ್ಯೇಕ ಲಿಂಗಾಯತ ಧರ್ಮ ವಿಚಾರ ಕುರಿತ ಡಿಕೆಶಿ ಹೇಳಿಕೆ ಬಗ್ಗೆ ಟೀಕೆ-ಟಿಪ್ಪಣಿ ಸರಿಯಲ್ಲ : ಯಡಿಯೂರಪ್ಪ

ಈ ಸುದ್ದಿಯನ್ನು ಶೇರ್ ಮಾಡಿ

DKs-BSY

ಶಿವಮೊಗ್ಗ,ಅ.20- ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅವರು ಪ್ರತ್ಯೇಕ ಲಿಂಗಾಯತ ಧರ್ಮ ವಿಚಾರ ಕುರಿತು ತಮ್ಮ ಸ್ವಂತ ಅಭಿಪ್ರಾಯ ಹೇಳಿದ್ದಾರೆ. ಈ ಹೇಳಿಕೆ ಬಗ್ಗೆ ಟೀಕೆ-ಟಿಪ್ಪಣಿ ಮಾಡುವುದು ಸರಿಯಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಡಿ.ಕೆ.ಶಿವಕುಮಾರ್ ವಾಸ್ತವಿಕ ಸಂಗತಿ ಅರ್ಥ ಮಾಡಿಕೊಂಡು ಅವರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಕುಹಕ, ವಿರೋಧ ವ್ಯಕ್ತಪಡಿಸುವುದು ಯಾರಿಗೂ ಶೋಭೆಯಲ್ಲ. ಅವರ ಹೇಳಿಕೆಯಲ್ಲಿ ಯಾವುದೇ ತಪ್ಪಿಲ್ಲ. ಅವರ ಹೇಳಿಕೆಯನ್ನು ನಾನು ಸ್ವಾಗತಿಸುತ್ತೇನೆ. ಇದರಲ್ಲಿ ನನಗೆ ಯಾವುದೇ ರಾಜಕಾರಣ ಕಾಣುತ್ತಿಲ್ಲ ಎಂದು ಹೇಳಿದರು.

ಗದಗದಲ್ಲಿ ನಡೆದ ರಂಭಾಪುರಿ ಶ್ರೀಗಳ ದಸರಾ ಧರ್ಮ ಸಮ್ಮೇಳನ ಕಾರ್ಯಕ್ರಮದಲ್ಲಿ ವೀರಶೈವ-ಲಿಂಗಾಯತ ಧರ್ಮ ವಿಭಜನೆ ವಿಚಾರವಾಗಿ ಮಾತನಾಡಿದ್ದ ಡಿ.ಕೆ ಶಿವಕುಮಾರ್, ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗ ನಾವು ದೊಡ್ಡ ತಪ್ಪೊಂದನ್ನು ಮಾಡಿದ್ದೇವೆ. ನಮ್ಮ ಸರ್ಕಾರದಿಂದ ದೊಡ್ಡ ಅಪರಾಧವಾಗಿದೆ. ನಾನೂ ಸಹ ಆ ಸರ್ಕಾರದಲ್ಲಿ ಮಂತ್ರಿಯಾಗಿದ್ದೆ. ಹೀಗಾಗಿ ನಾನೂ ಕೂಡ ತಪ್ಪು ಮಾಡಿದ್ದೇನೆ ಎಂದಿದ್ದರು.

ಸರ್ಕಾರದವರು, ರಾಜಕೀಯದವರು ಧರ್ಮದ ವಿಚಾರದಲ್ಲಿ ಜಾತಿಯ ವಿಚಾರದಲ್ಲಿ ಕೈ ಹಾಕಬಾರದು. ಹಾಕಿದರೆ ಏನಾಗುತ್ತದೆ ಅನ್ನೋದಕ್ಕೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಂದ ಜನಾಭಿಪ್ರಾಯವೇ ಸಾಕ್ಷಿ. ದಯವಿಟ್ಟು ನಾವು, ನಮ್ಮ ಸರ್ಕಾರ ತಪ್ಪು ಮಾಡಿದರೆ ನಿಮ್ಮ ಕ್ಷಮಾಪಣೆ ಇರಲಿ. ಹೃದಯತುಂಬಿ ನಮ್ಮನ್ನು ಕ್ಷಮಿಸಿ ಎಂದು ಡಿ.ಕೆ. ಶಿವಕುಮಾರ್ ಹೇಳಿದ್ದರು.

ಇದೀಗ ಅವರ ಡಿ.ಕೆ.ಶಿವಕುಮಾರ್ ಅವರ ಹೇಳಿಕೆಯನ್ನು ಸಮರ್ಥಿಸಿಕೊಂಡಿರುವ ಬಿಎಸ್‍ವೈ, ವಾಸ್ತವ ಸಂಗತಿ ಅರ್ಥಮಾಡಿಕೊಂಡು ಅವರು ಈ ರೀತಿ ಮಾತನಾಡಿರುವುದರಿಂದ ಅವರ ಹೇಳಿಕೆಯನ್ನು ಸ್ವಾಗತಿಸಬೇಕು ಎಂದರು.  ಯಡಿಯೂರಪ್ಪ ಈ ಹೇಳಿಕೆಯನ್ನು ಸ್ವಾಗತಾರ್ಹ ಎಂದು ಹೇಳುವ ಮೂಲಕ ಸಚಿವ ಡಿ.ಕೆ ಶಿವಕುಮಾರ್ ವಿಚಾರದಲ್ಲಿ ಯಾವುದೇ ಟೀಕೆಗೆ ಮುಂದಾಗದೆ, ಮೃಧು ಧೋರಣೆ ಅನುಸರಿಸಿರುವುದರ ಹಿಂದೆ ರಾಜಕೀಯ ಕಾರಣಗಳೂ ಇವೆ ಎಂದು ಹೇಳಲಾಗುತ್ತಿದೆ.

ಶಿವಮೊಗ್ಗ ಲೋಕಸಭೆ ಕ್ಷೇತ್ರಕ್ಕೆ ಮೈತ್ರಿಕೂಟದಿಂದ ಅಭ್ಯರ್ಥಿಯನ್ನು ಆಯ್ಕೆ ಮಾಡುವುದರ ಹಿಂದೆ ಡಿ.ಕೆ ಶಿವಕುಮಾರ್ ಅವರೇ ಸ್ವತಃ ಆಸಕ್ತ್ತಿ ವಹಿಸಿದ್ದರು. ಮಧು ಬಂಗಾರಪ್ಪ ಅವರನ್ನು ಒಪ್ಪಿಸಿದ್ದೇ ಡಿಕೆಶಿ ಎಂದು ವರದಿಗಳಾಗಿದ್ದವು. ಅಲ್ಲದೆ, ಶಿವಮೊಗ್ಗದಿಂದ ಮೈತ್ರಿ ಕೂಟದ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳಲು ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರೊಂದಿಗೆ ಸೇರಿ ಡಿಕೆಶಿ ರಣತಂತ್ರ ರೂಪಿಸಿದ್ದಾರೆ ಎಂದೂ ಮಾಧ್ಯಮಗಳು ವರದಿ ಮಾಡಿದ್ದವು.  ಹೀಗಿರುವಾಗಲೇ ಯಡಿಯೂರಪ್ಪ ಅವರ ಈ ಮೃಧು ಧೋರಣೆ ಹಲವು ಕುತೂಹಲಗಳಿಗೆ ಎಡೆ ಮಾಡಿಕೊಟ್ಟಿದೆ. ಡಿಕೆಶಿ ಅವರನ್ನು ಈ ಮೂಲಕವಾದರೂ ತಣ್ಣಗಾಗಿಸುವ ಪ್ರಯತ್ನ ಬಿಜೆಪಿ ಪಾಳಯದ್ದು ಎಂದು ಹೇಳಲಾಗುತ್ತಿದೆ.

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin