12 ವರ್ಷಗಳ ಬಳಿಕ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡ ಗೌಡರು ಮತ್ತು ಸಿದ್ದರಾಮಯ್ಯ ಹೇಳಿದ್ದೇನು..?

ಈ ಸುದ್ದಿಯನ್ನು ಶೇರ್ ಮಾಡಿ

deveGowda---Siddaramayya

ಬೆಂಗಳೂರು, ಅ.20-ಹಳೆಯದನ್ನೆಲ್ಲ ಮರೆತು ಒಂದಾಗಿದ್ದೇವೆ. ಇನ್ನು ಒಟ್ಟಾಗಿಯೇ ಮುಂದೆ ಸಾಗುತ್ತೇವೆ. ಕೆಳಹಂತದ ಕಾರ್ಯಕರ್ತರು ದೇಶದ ಹಿತದೃಷ್ಟಿಯಿಂದ ತಮ್ಮೆಲ್ಲ ಹಿಂದಿನ ನೋವನ್ನು ಮರೆತು ಒಟ್ಟಾಗಬೇಕು ಎಂದು ಜೆಡಿಎಸ್ ವರಿಷ್ಠರಾದ ಎಚ್.ಡಿ.ದೇವೇಗೌಡರು ಹಾಗೂ ಕಾಂಗ್ರೆಸ್‍ನ ಮಾಜಿ ಮುಖ್ಯಮಂತ್ರಿ ಹಾಗೂ ಎರಡೂ ಪಕ್ಷಗಳ ಇತರ ನಾಯಕರು ಜಂಟಿಯಾಗಿ ಮನವಿ ಮಾಡಿದ್ದಾರೆ.

ಖಾಸಗಿ ಹೊಟೆಲ್‍ನಲ್ಲಿಂದು ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಜೆಡಿಎಸ್ ವರಿಷ್ಠರಾದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಕೆಪಿಸಿಸಿ ಅಧ್ಯಕ್ಷ ದಿನೇಶ್‍ಗುಂಡೂರಾವ್, ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅವರುಗಳು ಅಭೇದ್ಯವಾದ ಒಗ್ಗಟ್ಟನ್ನು ಪ್ರದರ್ಶಿಸಿದ್ದು, ನಮ್ಮ ಈ ಜಂಟಿ ಪತ್ರಿಕಾಗೋಷ್ಠಿ ರಾಷ್ಟ್ರಮಟ್ಟದಲ್ಲಿ ಸಂದೇಶ ರವಾನೆಯಾಗುತ್ತದೆ. ಜಾತ್ಯತೀತ ಮತಗಳ ವಿಭಜನೆಯಿಂದ ಕೋಮುವಾದಿ ಬಿಜೆಪಿ ಗೆಲ್ಲುವುದನ್ನು ತಡೆಯಲಿದೆ. ಮುಂದಿನ ದಿನಗಳಲ್ಲಿ ದೇಶ ಉಳಿಯಬೇಕಾದರೆ ಬಿಜೆಪಿಯನ್ನು ಅಧಿಕಾರದಿಂದ ತೊಲಗಿಸುವುದು ಅನಿವಾರ್ಯವಿದೆ ಎಂದು ಮನವಿ ಮಾಡಿದರು.

ಎಚ್.ಡಿ.ದೇವೇಗೌಡ ಅವರು ಮಾತನಾಡಿ, ನಮ್ಮ ಹಳೆಯ ನೆನಪುಗಳನ್ನೆಲ್ಲ ಮರೆತಿದ್ದೇವೆ. 12 ವರ್ಷಗಳ ಬಳಿಕ ನಾನು ಮತ್ತು ಸಿದ್ದರಾಮಯ್ಯ ಒಂದೇ ವೇದಿಕೆಯಲ್ಲಿ ಕುಳಿತಿದ್ದೇವೆ. ಇನ್ನು ಮುಂದೆ ಒಟ್ಟಾಗಿ ಕೆಲಸ ಮಾಡುತ್ತೇವೆ. ಐದು ಕ್ಷೇತ್ರಗಳ ಉಪಚುನಾವಣೆಯಲ್ಲೂ ನಾವು ಗೆದ್ದೇ ಗೆಲ್ಲುತ್ತೇವೆ. ಮುಂದಿನ 2019ರ ಲೋಕಸಭೆ ಚುನಾವಣೆಯನ್ನು ಒಟ್ಟಾಗಿಯೇ ಎದುರಿಸುತ್ತೇವೆ.  ಒಂದೆರಡು ಸೀಟುಗಳ ಹಂಚಿಕೆಯಲ್ಲಿ ವ್ಯತ್ಯಾಸವಾದರೂ ಒಟ್ಟಾರೆ ಹಿತದೃಷ್ಟಿಯಿಂದ ಜಂಟಿ ಹೋರಾಟವನ್ನು ಮುಂದುವರೆಸುತ್ತೇವೆ. ಹಿರಿಯವನಾಗಿ ಎಲ್ಲರನ್ನು ಒಟ್ಟಾಗಿ ತೆಗೆದುಕೊಂಡು ಹೋಗುವುದು ನನ್ನ ಕರ್ತವ್ಯ, ಇಲ್ಲವಾದರೆ ದೇಶವನ್ನು ಕಟ್ಟಲು ನಮಗೆ ಯಾವ ಯೋಗ್ಯತೆಯೂ ಇರುವುದಿಲ್ಲ. ಇದು ಐದು ಕ್ಷೇತ್ರಗಳ ಉಪಚುನಾವಣೆಗೆ ಮಾತ್ರ ಸೀಮಿತವಾಗಿಲ್ಲ. ಮುಂದಿನ ದಿನಗಳಲ್ಲಿ ದೇಶದ ರಾಜಕೀಯ ದಿಕ್ಸೂಚಿ ಬದಲಾವಣೆ ಮಾಡುತ್ತದೆ. ಈ ವೇದಿಕೆ ಮೂಲಕ ದೇಶದ ಜಾತ್ಯತೀತ ಪಕ್ಷಗಳಿಗೆ ಮತ್ತು ಬಿಜೆಪಿಗೆ ಸ್ಪಷ್ಟ ಸಂದೇಶ ಕೊಡುತ್ತಿದ್ದೇವೆ. ಜಾತ್ಯತೀತ ಶಕ್ತಿಗಳ ಒಗ್ಗೂಡುವಿಕೆಗೆ ಈಗಿನಿಂದಲೇ ನಾಂದಿ ಹಾಡುತ್ತಿದ್ದೇವೆ ಎಂದು ಹೇಳಿದರು.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಆಡಳಿತದಲ್ಲಿ ದೇಶ ಹಲವಾರು ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿದೆ. ಗುಜರಾತ್, ಉತ್ತರ ಪ್ರದೇಶ, ಕಾಶ್ಮೀರದಲ್ಲಿ ನಾನಾ ರೀತಿಯ ಘಟನೆಗಳು ನಡೆದಿವೆ. ಅಲ್ಪಸಂಖ್ಯಾತರು, ಹಿಂದುಳಿದ ವರ್ಗಗಳು, ದಲಿತರು ಆತಂಕದಲ್ಲಿದ್ದಾರೆ. ಎಲ್ಲರ ಉಳಿವಿಗಾಗಿ ಜಾತ್ಯತೀತ ಶಕ್ತಿಗಳು ಒಂದಾಗಬೇಕು. ಬಿಜೆಪಿಯನ್ನು ಅಧಿಕಾರದಿಂದ ತೊಲಗಿಸಬೇಕು. ಆ ಕಾರಣಕ್ಕಾಗಿ ನಾವು ಈ ಹಿಂದೆ ಏನೆಲ್ಲ ಆರೋಪ-ಪ್ರತ್ಯಾರೋಪಗಳನ್ನು ಮಾಡಿಕೊಂಡಿದ್ದೆವೋ ಅವೆಲ್ಲವನ್ನು ಮರೆಯುತ್ತೇವೆ. ನಮ್ಮ ಎರಡೂ ಪಕ್ಷಗಳ ಕಾರ್ಯಕರ್ತರಿಗೂ ಕೈ ಮುಗಿದು ಕೇಳುತ್ತೇವೆ. ಇಷ್ಟು ದಿನ ಪರಸ್ಪರ ಎರಡು ಗುಂಪುಗಳಾಗಿ ಹೋರಾಟ ಮಾಡಿದ್ದೀವಿ. ಈಗ ದೇಶದ ಹಿತದೃಷ್ಟಿಯಿಂದ ಪರಸ್ಪರ ಹೋರಾಟ ಮಾಡಿಕೊಳ್ಳದೆ ಒಟ್ಟಾಗಿ ಬಿಜೆಪಿಯನ್ನು ಸೋಲಿಸಬೇಕಿದೆ ಎಂದು ಮನವಿ ಮಾಡಿದರು.

ನಮ್ಮ ಕೆಲ ಕಾರ್ಯಕರ್ತರಿಗೆ ನೋವಿದೆ. ಅವರಿಗೆ ತಿಳಿ ಹೇಳುತ್ತೇವೆ. ತುಂಬಾ ನೋವು ಪಟ್ಟವರು ಇದ್ದರೆ ಅವರ ಕೈ ಹಿಡಿದು ತಿಳಿ ಹೇಳಿ ಮನವೊಲಿಸುತ್ತೇವೆ. ನಮ್ಮ ಎರಡೂ ಪಕ್ಷದ ನಾಯಕರಿಗೆ ಆ ಸಾಮಥ್ರ್ಯವಿದೆ. ಬಹಳ ಸುದೀರ್ಘವಾದ ಹೋರಾಟವನ್ನು 15-20 ದಿನದಲ್ಲಿ ಸರಿಪಡಿಸುತ್ತೇವೆ ಎಂದು ಹೇಳಲಾಗುವುದಿಲ್ಲ. ಆದರೆ ಸ್ವಲ್ಪ ದಿನ ಕಾದು ನೋಡಿ ಎಲ್ಲವೂ ಸರಿಹೋಗುತ್ತದೆ. ನಾವೆಲ್ಲ ಒಟ್ಟಾಗಿ ಬಿಜೆಪಿಯನ್ನು ಸೋಲಿಸುತ್ತೇವೆ ಎಂದರು.

ಕಾಂಗ್ರೆಸ್ ಜೊತೆಗಿನ ಮೈತ್ರಿಯಿಂದ ಜೆಡಿಎಸ್ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳಲಿದೆ ಎಂಬ ಆತಂಕ ಬೇಡ. ತಮಿಳುನಾಡಿನಲ್ಲಿ ಕರುಣಾನಿಧಿ, ಆಂಧ್ರಪ್ರದೇಶದಲ್ಲಿ ಚಂದ್ರಬಾಬು ನಾಯ್ಡು ಸೇರಿದಂತೆ ಹಲವಾರು ಮಂದಿ ಪ್ರಾದೇಶಿಕ ನಾಯಕರು ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್ ಜೊತೆ ಕಾಲ ಕಾಲಕ್ಕೆ ಮೈತ್ರಿ ಮಾಡಿಕೊಂಡಿದ್ದಾರೆ. ಹಾಗೆಂದು ಅವರು ತಮ್ಮ ಅಸ್ತಿತ್ವ ಕಳೆದುಕೊಂಡಿಲ್ಲ. ಜೆಡಿಎಸ್ ಸಹ ಅಸ್ತಿತ್ವ ಕಳೆದುಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಬಿಎಸ್‍ಪಿ ಮಹಾ ಘಟಬಂಧನ್‍ನಿಂದ ಹೊರಗುಳಿದಿದೆ ಎಂಬ ವ್ಯಾಖ್ಯಾನ ಈಗಲೇ ಮಾಡಬೇಡಿ. ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷ ಮತ್ತು ಬಿಎಸ್‍ಪಿ ಒಟ್ಟಾಗಿ ಚುನಾವಣೆ ಎದುರಿಸಿವೆ. ಸಮಯ ಬಂದಾಗ ಬಿಎಸ್‍ಪಿ ಸೂಕ್ತ ನಿರ್ಣಯ ತೆಗೆದುಕೊಳ್ಳುತ್ತದೆ. ಸದ್ಯಕ್ಕೆ ಕಾಂಗ್ರೆಸ್ ಜೊತೆ ಬಿಎಸ್‍ಪಿ ಎಂದು ಹೇಳಿದರು.
ರಾಜ್ಯದಲ್ಲಿ ಮಿತ್ರ ಪಕ್ಷಗಳು ಒಟ್ಟಾಗಿ ಕೆಲಸ ಮಾಡುತ್ತವೆ. ಐದು ವರ್ಷ ಸರ್ಕಾರದ ಅವಧಿ ಪೂರ್ಣಗೊಳಿಸಲಿವೆ. ಬಿಜೆಪಿಯವರು ಸರ್ಕಾರದ ವೈಫಲ್ಯದ ಬಗ್ಗೆ ಚರ್ಚಿಸುವುದಾದರೆ ನಾನು ಸಿದ್ಧನಿದ್ದೇನೆ. 60 ವರ್ಷದ ಅನುಭವದಲ್ಲಿ ವೈಫಲ್ಯಗಳ ಪಟ್ಟಿ ಏನು ಎಂದು ನನಗೆ ಚೆನ್ನಾಗಿ ಗೊತ್ತಿದೆ. ಬಹಿರಂಗ ಚರ್ಚೆಗೆ ಬರಲಿ ಎಂದು ದೇವೇಗೌಡರು ಸಿಟ್ಟಾಗಿ ಸವಾಲು ಹಾಕಿದರು.

ಮುಂದಿನ ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ಅಭ್ಯರ್ಥಿ ಯಾರು ಎಂಬುದನ್ನು ಈಗಲೇ ನಿರ್ಧರಿಸುವುದು ಅನಗತ್ಯ. ಭಾರತಾಂಬೆ 99 ಕೋಟಿ ಜನರಿಗೆ ಜನ್ಮ ಕೊಟ್ಟಿದ್ದಾಳೆ. ಬಂಜೆ ಅಲ್ಲ, ಅದರಲ್ಲಿ ಒಬ್ಬರಾದರೂ ಪ್ರಧಾನಿಯಾಗುವ ಅರ್ಹತೆ ಇರುವವರು ಸಿಗುವುದಿಲ್ಲವೆ ಎಂದು ಪ್ರಶ್ನಿಸಿದ ಅವರು, ಅವಕಾಶ ಸಿಕ್ಕರೆ ಯಾರು ಬೇಕಾದರೂ ನಾಯಕತ್ವ ಸಾಬೀತುಪಡಿಸುತ್ತಾರೆ ಎಂದು ಹೇಳಿದರು. ಕಾಂಗ್ರೆಸ್ ನಾಯಕರಾದ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ಉಗ್ರಪ್ಪ ಅವರೊಂದಿಗೆ ಈ ಹಿಂದೆ ನಡೆದಂತಹ ಚರ್ಚೆಗಳು ಅಪ್ರಸ್ತುತ. ನಾವು ಈಗ ಎಲ್ಲವನ್ನೂ ಮರೆತಿದ್ದೇವೆ. ಒಟ್ಟಾಗಿ ಹೋಗುತ್ತೇವೆ ಎಂದು ಪದೇ ಪದೇ ಒತ್ತಿ ಹೇಳಿದರು.

Facebook Comments

Sri Raghav

Admin