ರೆಡ್‍ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದ ಲಂಚಕೋರ ಅರಣ್ಯಾಧಿಕಾರಿ ವಿರುದ್ಧ ಇಲಾಖಾ ವಿಚಾರಣೆ

ಈ ಸುದ್ದಿಯನ್ನು ಶೇರ್ ಮಾಡಿ

Forest-Department

ಬೆಂಗಳೂರು, ಅ.23- ಎರಡು ಕಾಡುಮರ ತೆರವುಗೊಳಿಸಲು ಗುತ್ತಿಗೆದಾರರೊಬ್ಬರಿಂದ ಲಂಚ ಸ್ವೀಕರಿಸುವಾಗ ರೆಡ್‍ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದ ಉಪ ವಲಯ ಅರಣ್ಯಾಧಿಕಾರಿ ವಿರುದ್ಧ ಇಲಾಖಾ ವಿಚಾರಣೆ ನಡೆಸಿ ಆರು ತಿಂಗಳೊಳಗೆ ವರದಿ ಸಲ್ಲಿಸುವಂತೆ ಉಪ ಲೋಕಾಯುಕ್ತರಿಗೆ ಸರ್ಕಾರ ಆದೇಶಿಸಿದೆ. ಬಿಬಿಎಂಪಿ ಯಲಹಂಕ ವಲಯದ ಉಪ ವಲಯ ಅರಣ್ಯಾಧಿಕಾರಿ ರಾಧಾಕೃಷ್ಣ ಇಲಾಖಾ ವಿಚಾರಣೆ ಎದುರಿಸಬೇಕಾದ ಅಧಿಕಾರಿ. ಪ್ರಥಮ ದರ್ಜೆ ಗುತ್ತಿಗೆದಾರ ರಾಮಕೃಷ್ಣ ರೆಡ್ಡಿನವರ್ ಅವರು ಸಹಕಾರ ನಗರದಲ್ಲಿ ಜಲಮಂಡಳಿ ನೌಕರರ ವಸತಿ ಕಟ್ಟಡ ನಿರ್ಮಿಸಲು ಗುತ್ತಿಗೆ ಪಡೆದಿದ್ದರು.

ಆದರೆ, ಆ ಜಾಗ ವಿವಾದಕ್ಕೊಳಗಾದ ಹಿನ್ನೆಲೆಯಲ್ಲಿ ಕಟ್ಟಡವನ್ನು ದೊಡ್ಡಬಳ್ಳಾಪುರ ರಸ್ತೆಯಲ್ಲಿ ಯಲಹಂಕ ನ್ಯೂಟೌನ್‍ಗೆ ಸ್ಥಳಾಂತರಿಸಲು ತೀರ್ಮಾನಿಸಲಾಯಿತು. ಕಟ್ಟಡ ನಿರ್ಮಿಸಬೇಕಾದ ಜಾಗದಲ್ಲಿ ಎರಡು ಕಾಡು ಮರಗಳಿದ್ದು, ಅವುಗಳನ್ನು ತೆರವುಗೊಳಿಸಲು ರಾಮಕೃಷ್ಣ ಅವರು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳಾದ ಸತ್ಯನಾರಾಯಣ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದರು.

ಅರಣ್ಯ ಸಂರಕ್ಷಣಾಧಿಕಾರಿಗಳು ಗುತ್ತಿಗೆದಾರರನ್ನು ಉಪ ವಲಯ ಅರಣ್ಯಾಧಿಕಾರಿ ರಾಧಾಕೃಷ್ಣ ಅವರ ಬಳಿಗೆ ಕಳುಹಿಸಿದ್ದರು. ಈ ಸಂದರ್ಭದಲ್ಲಿ ರಾಧಾಕೃಷ್ಣ ಅವರು ಮರ ತೆರವುಗೊಳಿಸಬೇಕಾದರೆ 15 ಸಾವಿರ ಲಂಚ ನೀಡಬೇಕು ಎಂದು ಒತ್ತಾಯಿಸಿದ್ದರು. ಕೊನೆಗೆ ಏಳು ಸಾವಿರ ಲಂಚ ನೀಡಲು ಒಡಂಬಡಿಕೆ ಮಾಡಿಕೊಂಡು ಸ್ಥಳದಲ್ಲೇ 2 ಸಾವಿರ ನಗದು ನೀಡಿ ಉಳಿದ 5 ಸಾವಿರ ರೂ.ಗಳನ್ನು ತದನಂತರ ನೀಡುವುದಾಗಿ ಗುತ್ತಿಗೆದಾರರು ಒಪ್ಪಿಕೊಂಡಿದ್ದರು.

ಆದರೆ, ರಾಧಾಕೃಷ್ಣ ಅವರೊಂದಿಗೆ ಸಂಭಾಷಣೆ ಮಾಡಿದ ಮೊಬೈಲ್ ಕರೆ ರೆಕಾರ್ಡ್ ಮಾಡಿಕೊಂಡ ಗುತ್ತಿಗೆದಾರರು ಈ ಕುರಿತಂತೆ ಲೋಕಾಯುಕ್ತರಿಗೆ ದೂರು ನೀಡಿದ್ದರು. ದೂರು ದಾಖಲಿಸಿಕೊಂಡು ಕಾರ್ಯಾಚರಣೆಗಿಳಿದ ಲೋಕಾಯುಕ್ತ ಪೊಲೀಸರು ಮಾಗಡಿ ರಸ್ತೆಯ ವೀರೇಶ್ ಚಿತ್ರಮಂದಿರ ಬಳಿ ರಾಧಾಕೃಷ್ಣ ಅವರು 5 ಸಾವಿರ ಲಂಚದ ಹಣ ಸ್ವೀಕರಿಸುವಾಗ ರೆಡ್‍ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದರು.

ಉಪ ವಲಯ ಅರಣ್ಯಾಧಿಕಾರಿ ರಾಧಾಕೃಷ್ಣ ವಿರುದ್ಧದ ಆರೋಪ ಮೇಲ್ನೋಟಕ್ಕೆ ಸಾಬೀತಾಗಿರುವುದರಿಂದ ಅವರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲು ಇಲಾಖಾ ವಿಚಾರಣೆ ನಡೆಸುವ ಅವಶ್ಯಕತೆ ಇದೆ ಎಂದು ಉಪಲೋಕಾಯುಕ್ತರು ಸರ್ಕಾರವನ್ನು ಕೋರಿದ್ದರು. ಲೋಕಾಯುಕ್ತರ ಈ ಮನವಿ ಮೇರೆಗೆ ರಾಜ್ಯಪಾಲರ ಆದೇಶಾನುಸಾರ ಸರ್ಕಾರದ ಅಧೀನ ಕಾರ್ಯದರ್ಶಿಗಳಾದ ಕೆ.ಉಮಾಪತಿ ಅವರು ರಾಧಾಕೃಷ್ಣ ಅವರ ವಿರುದ್ಧ ಇಲಾಖಾ ವಿಚಾರಣೆ ನಡೆಸಿ ಆರು ತಿಂಗಳೊಳಗೆ ಸರ್ಕಾರಕ್ಕೆ ವರದಿ ಸಲ್ಲಿಸುವಂತೆ ಆದೇಶಿಸಿದ್ದಾರೆ.

Facebook Comments