ವಿಶ್ವ ಮಟ್ಟದಲ್ಲಿ ಹರಾಜಾಗುತ್ತಿದೆ ಬೆಂಗಳೂರಿನ ಮಾನ..!

ಈ ಸುದ್ದಿಯನ್ನು ಶೇರ್ ಮಾಡಿ

 

Garbage--04ಬೆಂಗಳೂರು, ಅ.23-ಇಡೀ ವಿಶ್ವದ ಗಮನ ಸೆಳೆದಿರುವ ಸಿಲಿಕಾನ್ ಸಿಟಿ ಎಂದೇ ಬಿಂಬಿತವಾಗಿರುವ ನಮ್ಮ ಬೆಂಗಳೂರು ನಗರ ಕಸದ ರಾಶಿಯಿಂದಾಗಿ ಜಾಗತಿಕ ಮಟ್ಟದಲ್ಲಿ ಕಪ್ಪು ಚುಕ್ಕಿ ಪಡೆಯುವಂತಾಗಿದೆ.  ಬೆಂಗಳೂರು ಮಹಾನಗರದ ಶುಚಿತ್ವ ಕಾಪಾಡಬೇಕಾದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಅತಿ ಹತ್ತಿರದಲ್ಲೇ ಇರುವ ಜೆ.ಸಿ.ರಸ್ತೆಯ ಉದ್ದಕ್ಕೂ ಕಸದ ರಾಶಿ ರಾರಾಜಿಸುತ್ತಿದೆ.

ಬೆಂಗಳೂರಿನ ಹೃದಯ ಭಾಗವಾದ ಅದರಲ್ಲೂ ಪುರಭವನ, ರವೀಂದ್ರ ಕಲಾಕ್ಷೇತ್ರ, ಎಡಿಎ ರಂಗಮಂದಿರ ಮತ್ತಿತರ ಪ್ರಮುಖ ಸ್ಥಳಗಳು ಜೆ.ಸಿ.ರಸ್ತೆಗೆ ಸಮೀಪದಲ್ಲೇ ಇದೆ. ಈ ಭಾಗ ಅತ್ಯಂತ ಜನನಿಬಿಡವಾಗಿದೆ. ಪುರಭವನದ ಮುಂದೆ ಪ್ರತಿಭಟನೆಗಳು, ಹೋರಾಟಗಳು ಆಗಾಗ ನಡೆಯುತ್ತಿರುತ್ತವೆ. ಸದಾ ವಾಹನ, ಜನಸಂಚಾರ ಇದ್ದೇ ಇರುತ್ತದೆ. ಗಣ್ಯಾತಿಗಣ್ಯರು ಇದೇ ರಸ್ತೆಯಲ್ಲಿ ಸಂಚರಿಸುತ್ತಾರೆ.

ಆದರೂ ಇಂತಹ ಪ್ರಮುಖರಸ್ತೆಯಲ್ಲೇ ತ್ಯಾಜ್ಯ ಕೊಳೆತು ಗಬ್ಬು ನಾರುತ್ತಿದ್ದರೂ ಬಿಬಿಎಂಪಿ ಅಧಿಕಾರಿಗಳಿಗೆ ಕಾಣಿಸದೆ ಇರುವುದು ನಿಜಕ್ಕೂ ದುರದೃಷ್ಟಕರ. ಜೆ.ಸಿ.ರಸ್ತೆ ಪಾಲಿಕೆಗೆ ಕೂಗಳತೆ ದೂರದಲ್ಲಿದ್ದು, ಪಾಲಿಕೆ ಅಧಿಕಾರಿಗಳು, ಕಾರ್ಪೊರೇಟರ್ ಗಳು , ಜನಪ್ರತಿನಿಧಿಗಳು ದಿನ ಬೆಳಗಾದರೆ ಇದೇ ರಸ್ತೆಯಲ್ಲಿ ಸಂಚರಿಸುತ್ತಾರೆ. ಆದರೂ ಕಸದ ರಾಶಿ ಕಾಣದಿರುವುದು ಕಣ್ಣಿದ್ದು ಕುರುಡರಂತೆ ವರ್ತಿಸುತ್ತಿರಬಹುದೇ ಎಂದು ನಾಗರಿಕರು ಪ್ರಶ್ನಿಸುವಂತಾಗಿದೆ.

ಈಗಾಗಲೇ ರಾಜ್ಯಾದ್ಯಂತ ಎಚ್1ಎನ್1 ಸೇರಿದಂತೆ ಅನೇಕ ಮಾರಕ ರೋಗಗಳು ಹರಡುತ್ತಿವೆ. ಸೊಳ್ಳೆಗಳು ಮಿತಿಮೀರಿವೆ. ಬಿಬಿಎಂಪಿಗೆ ಈಗಾಗಲೇ ಹೈಕೋರ್ಟ್ ಛೀಮಾರಿ ಕೂಡ ಹಾಕಿದೆ. ಆದರೂ ಪಾಲಿಕೆಯ ಜಿಡ್ಡುಗಟ್ಟಿದ ಮೈಗೆ ಇದಾವುದೂ ತಾಕಿದಂತಿಲ್ಲ. ರೋಗಗಳು ಉಲ್ಬಣಿಸಿ ಸಾವು-ನೋವು ಸಂಭವಿಸುವ ಮೊದಲು ಬಿಬಿಎಂಪಿ ಅಧಿಕಾರಿಗಳು ಎಚ್ಚೆತ್ತುಕೊಳ್ಳಲಿ.

Facebook Comments