ಮೂರು ಪಕ್ಷಗಳಲ್ಲೂ ಏರುತ್ತಿದೆ ಚುನಾವಣಾ ಕಾವು, ಅಖಾಡಕ್ಕಿಳಿದ ಗೌಡರು

ಈ ಸುದ್ದಿಯನ್ನು ಶೇರ್ ಮಾಡಿ

By-Election
ಬೆಂಗಳೂರು, ಅ.23- ಉಪ ಚುನಾವಣೆಯ ಮತದಾನಕ್ಕೆ ಕೆಲವೇ ದಿನಗಳು ಬಾಕಿ ಇರುವಾಗ ಇಂದು ಪ್ರಮುಖ ಪಕ್ಷಗಳ ನಾಯಕರು ಭರ್ಜರಿ ಪ್ರಚಾರ ನಡೆಸುವ ಮೂಲಕ ಚುನಾವಣಾ ಕಾವು ಏರತೊಡಗಿದೆ. ರಾಜ್ಯದ ಮೂರು ಲೋಕಸಭೆ ಹಾಗೂ ಎರಡು ವಿಧಾನಸಭೆ ಕ್ಷೇತ್ರಗಳಲ್ಲಿ ಕಣಕ್ಕಿಳಿದಿರುವ ಕಾಂಗ್ರೆಸ್ -ಜೆಡಿಎಸ್ ನೇತೃತ್ವದ ದೋಸ್ತಿ ಅಭ್ಯರ್ಥಿಗಳು ಹಾಗೂ ಬಿಜೆಪಿ ಪರ ಪ್ರಮುಖ ನಾಯಕರು ಕ್ಷೇತ್ರದಾದ್ಯಂತ ಬೆಂಬಲಿಗರು ಮತ್ತು ಮುಖಂಡರ ಜತೆ ಬಿರುಸಿನ ಪ್ರಚಾರ ನಡೆಸಿದರು.

ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಮಧುಬಂಗಾರಪ್ಪ ಪರ ಇಂದು ಜಿಲ್ಲೆಯ ವಿವಿಧ ಭಾಗಗಳಲ್ಲಿ ಮತಯಾಚನೆ ಮಾಡಿದರು.  ಸಕ್ಕರೆ ಜಿಲ್ಲೆ ಮಂಡ್ಯದಲ್ಲಿ ಬಿಜೆಪಿ ಅಭ್ಯರ್ಥಿ ಡಾ.ಸಿದ್ದರಾಮಯ್ಯ ಪರ ರಾಜ್ಯ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಬಳ್ಳಾರಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ವಿ.ಎಸ್.ಉಗ್ರಪ್ಪ ಪರ ಸಿದ್ದರಾಮಯ್ಯ, ಜಮಖಂಡಿಯಲ್ಲಿ ಕೈ ಪರ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಸೇರಿದಂತೆ ಅನೇಕ ನಾಯಕರು ಸುಡುವ ಬಿಸಿಲು, ಚಳಿ, ಗಾಳಿ, ಮಳೆ ಯಾವುದನ್ನೂ ಲೆಕ್ಕಿಸದೆ ಮತಬೇಟೆಗೆ ಮುಂದಾಗಿದ್ದಾರೆ.

# ಅಖಾಡಕ್ಕಿಳಿದ ದೇವೇಗೌಡರು:
ಶತಾಯ-ಗತಾಯ ಶಿವಮೊಗ್ಗ ಲೋಕಸಭೆ ಕ್ಷೇತ್ರದಲ್ಲಿ ಗೆಲ್ಲಲೇಬೇಕೆಂದು ಪಣತೊಟ್ಟಿರುವ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರು ಇಂದು ಜಿಲ್ಲೆಯ ಪ್ರಮುಖ ಭಾಗಗಳಲ್ಲಿ ಮಧುಬಂಗಾರಪ್ಪ ಪರ ಮತಯಾಚನೆ ಮಾಡುವ ಮೂಲಕ ಬಿಜೆಪಿಗೆ ಸಡ್ಡು ಹೊಡೆದಿದ್ದಾರೆ. ತೀರ್ಥಹಳ್ಳಿ, ಶಿವಮೊಗ್ಗ ನಗರ, ಸಾಗರ ಸೇರಿದಂತೆ ಮತ್ತಿತರ ಕಡೆ ಜೆಡಿಎಸ್ ಅಭ್ಯರ್ಥಿಯನ್ನು ಹೆಚ್ಚಿನ ಮತಗಳ ಅಂತರದಿಂದ ಗೆಲ್ಲಿಸಿ ಲೋಕಸಭೆಗೆ ಆಯ್ಕೆ ಮಾಡಬೇಕೆಂದು ಮತಬಾಂಧವರಿಗೆ ಗೌಡರು ಮನವಿ ಮಾಡಿದರು. ಜಿಲ್ಲಾ ಜೆಡಿಎಸ್ ಮುಖಂಡರಾದ ಮಂಜುನಾಥ್‍ಗೌಡ, ಅಪ್ಪಾಜಿಗೌಡ, ಶ್ರೀಕಾಂತ್, ಮಧುಬಂಗಾರಪ್ಪ, ಮಾಜಿ ಸಚಿವರಾದ ಕಾಗೋಡು ತಿಮ್ಮಪ್ಪ, ಕಿಮ್ಮನೆ ರತ್ನಾಕರ ಸೇರಿದಂತೆ ಮತ್ತಿತರರು ಸಾಥ್ ನೀಡಿದರು.

# ಸಕ್ಕರೆ ನಾಡಿನಲ್ಲಿ ಯಡಿಯೂರಪ್ಪ:
ಪರಿಸ್ಥಿತಿಯ ಲಾಭ ಮಾಡಿಕೊಳ್ಳಲು ಹವಣಿಸುತ್ತಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಇಂದು ಮಂಡ್ಯದಲ್ಲಿ ಬಿಜೆಪಿ ಅಭ್ಯರ್ಥಿ ಡಾ.ಸಿದ್ದರಾಮಯ್ಯ ಪರ ಬಿರುಸಿನ ಪ್ರಚಾರ ನಡೆಸಿದರು. ಮುಖಂಡರಾದ ಆರ್.ಅಶೋಕ್, ಸಂಸದರಾದ ಶೋಭಾಕರಂದ್ಲಾಜೆ, ಪ್ರತಾಪ್‍ಸಿಂಹ, ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಸೇರಿದಂತೆ ಸ್ಥಳೀಯ ಮುಖಂಡರ ಜತೆ ತಾಲ್ಲೂಕು ಹಾಗೂ ಹೋಬಳಿ ಮಟ್ಟದಲ್ಲಿ ಪ್ರಚಾರ ನಡೆಸಿ ಸಿದ್ದರಾಮಯ್ಯ ಅವರನ್ನು ಗೆಲ್ಲಿಸುವಂತೆ ಮನವಿ ಮಾಡಿದರು.

# ಬಳ್ಳಾರಿಯಲ್ಲಿ ಸಿದ್ದರಾಮಯ್ಯ:
ಇನ್ನು ರಾಜ್ಯದ ಗಮನ ಸೆಳೆದಿರುವ ಗಣಿ ಜಿಲ್ಲೆ ಬಳ್ಳಾರಿಯಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಪಕ್ಷದ ಅಭ್ಯರ್ಥಿ ವಿ.ಎಸ್.ಉಗ್ರಪ್ಪ ಪರ ಕಳೆದೆರಡು ದಿನಗಳಿಂದ ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ. ನಿನ್ನೆಯಿಂದಲೇ ಜಿಲ್ಲೆಯ ನಾನಾ ಕಡೆ ಪ್ರಚಾರ ನಡೆಸುತ್ತಿರುವ ಅವರು ಇಂದೂ ಕೂಡ ಬೆಳಗ್ಗಿನಿಂದಲೇ ಶಾಸಕರು, ವಿಧಾನಪರಿಷತ್ ಸದಸ್ಯರು ಸೇರಿದಂತೆ ಸ್ಥಳೀಯ ಮುಖಂಡರ ಜತೆ ಜಿಲ್ಲೆಯ ವಿವಿಧ ಭಾಗಗಳಲ್ಲಿ ತೆರೆದೆ ವಾಹನದಲ್ಲಿ ತೆರಳಿ ಪ್ರಚಾರ ನಡೆಸಿದರು.

ಇನ್ನು ಕಾಂಗ್ರೆಸ್‍ಗೆ ಸಡ್ಡು ಹೊಡೆಯುತ್ತಿರುವ ಬಿಜೆಪಿ ರಾಜ್ಯ ಉಪಾಧ್ಯಕ್ಷ ಶ್ರೀರಾಮುಲು ಸಹೋದರಿ ಜೆ.ಶಾಂತಾ ಪರ ಜಿಲ್ಲೆಯ ವಿವಿಧ ಭಾಗಗಳಲ್ಲಿ ಇಂದೂ ಕೂಡ ಬಿರುಸಿನ ಪ್ರಚಾರ ನಡೆಸಿದರು. ರಾಮುಲುಗೆ ಶಾಸಕ ಸಿ.ಟಿ.ರವಿ, ವಿಧಾನಪರಿಷತ್ ಸದಸ್ಯ ರವಿಕುಮಾರ್ ಸೇರಿದಂತೆ ಅನೇಕರು ಸಾಥ್ ನೀಡಿದರು. ಬಾಗಲಕೋಟೆ ಜಿಲ್ಲೆ ಜಮಖಂಡಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಆನಂದ್ ನ್ಯಾಮೇಗೌಡ ಪರವಾಗಿ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಮತಯಾಚನೆ ಮಾಡಿದರು.

ಮತ್ತೊಂದೆಡೆ ಬಿಜೆಪಿ ಅಭ್ಯರ್ಥಿ ಶ್ರೀಕಾಂತ್ ಕುಲಕರ್ಣಿ ಪರವಾಗಿ ಕ್ಷೇತ್ರದಲ್ಲೇ ಬೀಡು ಬಿಟ್ಟಿರುವ ಅರವಿಂದ ಲಿಂಬಾವಳಿ, ಮುರುಗೇಶ್ ನಿರಾಣಿ, ಗೋವಿಂದಕಾರಜೋಳ ಮತ್ತಿತರರು ಕಾರ್ಯಕರ್ತರ ಸಭೆ, ಪಕ್ಷದ ಸಮಾವೇಶ ಮೂಲಕ ಮತಯಾಚನೆ ಮಾಡಿದರು. ರಾಮನಗರದಲ್ಲೂ ಕೂಡ ಜೆಡಿಎಸ್ ಹಾಗೂ ಬಿಜೆಪಿ ಅಭ್ಯರ್ಥಿಗಳ ಪರವಾಗಿ ಪ್ರಮುಖರು ಮತಯಾಚನೆ ಮಾಡಿದರು. ಮತದಾನಕ್ಕೆ ಕೆಲವೇ ದಿನಗಳು ಉಳಿದಿರುವುದರಿಂದ ಓಲೈಕೆ ಮಾಡಲು ರಾಜಕಾರಣಿಗಳು ನಾನಾ ರೀತಿಯ ತಂತ್ರ, ಪ್ರತಿತಂತ್ರ ಹೆಣಿಯುತ್ತಿದ್ದಾರೆ.

Facebook Comments