ನಾಳೆ ಶ್ರುತಿ – ಸರ್ಜಾ ನಡುವೆ #MeToo ಸಂಧಾನ

ಈ ಸುದ್ದಿಯನ್ನು ಶೇರ್ ಮಾಡಿ

Arjun--Sarja-Shruti-Hassan

ಬೆಂಗಳೂರು. ಅ.24 : ಸ್ಯಾಂಡಲ್ವುಡ್ ನಲ್ಲಿ ಎದ್ದಿರುವ ‘ಮಿ ಟೂ’ ಬಿರುಗಾಳಿ ತಣ್ಣಗಾಗುವಂತೆ ಕಾಣುತ್ತಿಲ್ಲ. ಗುರುವಾರ ಸಂಜೆ 4 ಗಂಟೆಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಸಭೆ ಸೇರಲಿದ್ದು, ಅರ್ಜುನ್‌ ಸರ್ಜಾ ಮತ್ತು ಶ್ರುತಿ ಭಾಗವಹಿಸುವ ಸಾಧ್ಯತೆಯಿದೆ. ಈ ಸಭೆಯಲ್ಲಿ ಕಲಾವಿದರ ಸಂಘದ ಅಧ್ಯಕ್ಷ ಅಂಬರೀಶ್‌, ನಿರ್ದೇಶಕ ಸಂಘದ ಅಧ್ಯಕ್ಷ ವಿ.ನಾಗೇಂದ್ರ ಪ್ರಸಾದ್‌ , ನಿರ್ಮಾಪಕರ ಸಂಘದ ಅಧ್ಯಕ್ಷ ಮುನಿರತ್ನ ಮತ್ತು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಚಿನ್ನೇಗೌಡ ಮತ್ತು ಸದಸ್ಯರು ಹಾಗೂ ಕನ್ನಡ ಚಲನಚಿತ್ರ ರಂಗದ ಹಿರಿಯ ಕಲಾವಿದರು ಪಾಲ್ಗೊಳ್ಳಲಿದ್ದಾರೆ.

ಹಿರಿಯ ಕಲಾವಿದರು ಅರ್ಜುನ್‌ ಸರ್ಜಾ ಪರ ನಿಂತಿದ್ದರೆ ಶ್ರುತಿ ಹರಿಹರನ್‌ ಬೆನ್ನಿಗೆ ನಿಂತಿದ್ದಾರೆ ಕಿರಿಯ ಕಲಾವಿದರು. ”ಸರ್ಜಾ ಕುಟುಂಬವನ್ನು ನಾನು ಮೂರು ದಶಕಗಳಿಂದಲೂ ಬಲ್ಲೆ. ಅರ್ಜುನ್‌ ಸರ್ಜಾ ಹೆಣ್ಣು ಮಕ್ಕಳಿಗೆ ತುಂಬಾ ಗೌರವವನ್ನು ಕೊಡುತ್ತಾರೆ. ಹೆಣ್ಣು ಮಕ್ಕಳ ಜತೆ ಅವರು ಅಸಭ್ಯವಾಗಿ ವರ್ತಿಸುವಂಥವರು ಅಲ್ಲ. ಶ್ರುತಿ ಹರಿಹರನ್‌ ಬಗ್ಗೆ ನನಗೆ ಗೊತ್ತಿಲ್ಲ. ಆ ಹುಡುಗಿ ಯಾಕೆ ಆ ರೀತಿ ಮಾತನಾಡಿದ್ದಾರೋ ಗೊತ್ತಾಗುತ್ತಿಲ್ಲ,” ಎಂದು ಬಿ. ಸರೋಜಾದೇವಿ ಹೇಳಿದ್ದಾರೆ.

”ಅರ್ಜುನ್‌ ವಿಚಾರದಲ್ಲಿ ಶ್ರುತಿ ಹರಿಹರನ್‌ ತಪ್ಪು ಮಾಡಿದ್ದಾರೆ ಎನಿಸುತ್ತದೆ. ಅರ್ಜುನ್‌ ಸುಸಂಸ್ಕೃತ, ಅವರ ಬಗ್ಗೆ ಶ್ರುತಿ ಏಕ ವಚನದಲ್ಲಿ ಮಾತನಾಡುವುದು ತಪ್ಪು. ಡಾ.ರಾಜ್‌, ಡಾ.ವಿಷ್ಣು ರೀತಿಯಲ್ಲೇ ಅರ್ಜುನ್‌ ಸರಳತೆ ಇರುವ ಮನುಷ್ಯ. ಅವರ ಶ್ರಮವನ್ನೆಲ್ಲ ಆ ಹುಡುಗಿ ಹಾಳು ಮಾಡುತ್ತಿದ್ದಾರೆ” ಎಂದು ಜಗ್ಗೇಶ್‌ ಕಿಡಿಕಾರಿದ್ದಾರೆ.

ಇನ್ನು  ಚೇತನ್‌ಗೆ ಅರ್ಜುನ್‌ ಹತ್ತು ಲಕ್ಷ ರೂ. ಕೊಟ್ಟಿದ್ದರು. ಅದನ್ನು ಚೇತನ್‌ ವಾಪಸ್‌ ನೀಡಿರಲಿಲ್ಲ. ಹಣದ ಕಾರಣದಿಂದ ಶ್ರುತಿ ಅವರಿಗೆ ಚೇತನ್‌ ಬೆಂಬಲಿಸುತ್ತಿದ್ದಾರೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿರುವ ಚೇತನ್‌, ಹತ್ತು ಲಕ್ಷ ವಾಪಸ್‌ ನೀಡುವುದಾಗಿ ಹೇಳಿದ್ದಾರೆ. ‘ಅರ್ಜುನ್‌ ಸರ್ಜಾ ನಿರ್ದೇಶನದ ಪ್ರೇಮ ಬರಹ ಸಿನಿಮಾದಲ್ಲಿ ನಾನು ನಟಿಸಬೇಕಿತ್ತು. ಆ ವೇಳೆಯಲ್ಲಿ ಅರ್ಜುನ್‌ ಅವರ ಜತೆ ಆರು ತಿಂಗಳುಗಳ ಕಾಲ ಕೆಲಸ ಮಾಡಿದ್ದೇನೆ. ಈ ಚಿತ್ರಕ್ಕಾಗಿ ಹತ್ತು ಲಕ್ಷ ನೀಡಿದ್ದರು. ಆನಂತರ ಆ ಪ್ರಾಜೆಕ್ಟ್‌ನಲ್ಲಿ ನನ್ನನು ಮುಂದುವರಿಸಲಿಲ್ಲ. ಮತ್ತೊಂದು ಸಿನಿಮಾ ಮಾಡೋಣ. ಮುಂಗಡ ನಿಮ್ಮ ಬಳಿಯಲ್ಲೇ ಇರಲಿ ಎಂದು ಅವರು ಹೇಳಿದ್ದರು. ಈ ಕುರಿತು ನಡೆದಿರುವ ಮಾತುಕತೆಯ ಇಮೇಲ್‌ ವಿವರಗಳನ್ನು ಚೇತನ್‌ ಬಿಡುಗಡೆ ಮಾಡಿದ್ದಾರೆ. ನನ್ನೊಂದಿಗೆ ಅವರಿಗೆ ಕೆಲಸ ಮಾಡಲು ಇಷ್ಟವಿಲ್ಲದಿದ್ದರೆ ಅವರು ನೀಡಿದ ಹಣವನ್ನು ತಕ್ಷಣ ವಾಪಸ್‌ ಕೊಡುವೆ” ಎಂದು ಹೇಳಿದ್ದಾರೆ.

Facebook Comments