ಪ್ರತಿದಿನ ದೇಹಕ್ಕೆ ಎಷ್ಟು ಅಯೋಡಿನ್ ಬೇಕು..? ಏಕೆ ಬೇಕು…?

ಈ ಸುದ್ದಿಯನ್ನು ಶೇರ್ ಮಾಡಿ

Salt--1

ಅಯೋಡಿನ್ ಒಂದು ಸೂಕ್ಷ್ಮ ಖನಿಜಾಂಶವಾಗಿದ್ದು, ಇದು ಮನುಷ್ಯನ ದೇಹಕ್ಕೆ ಆವಶ್ಯಕ. ಹಾರ್ಮೋನ್‍ಗಳ ಸಂಶ್ಲೇಷಣೆ ಮತ್ತು ಥೈರಾಯ್ಡ್ ಗ್ರಂಥಿಗಳ ಕಾರ್ಯ ಚಟುವಟಿಕೆಗೆ ಅಯೋಡಿನ್ ಅಗತ್ಯವಿರುವ ಖನಿಜವಾಗಿದೆ. ಅಯೋಡಿನ್, ಅಮೈನೊ ಆಮ್ಲದೊಂದಿಗೆ ಸಂಯೋಜಿಸಿದಾಗ ಥೈರಾಯ್ಡ್ ಹಾರ್ಮೋನ್‍ಗಳನ್ನು ಉತ್ಪಾದಿಸುತ್ತದೆ. ಅದು ಎಲ್ಲ ಶಾರೀರಿಕ ಕಾರ್ಯಗಳಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಥೈರಾಕ್ಸಿನ್ ಟಿ-4 ಮತ್ತು ಟ್ರೈ-ಅಯೋಡೋಥೈರೋನಿನ್ ಟಿ-3, ಎರಡು ಥೈರಾಯ್ಡ್ ಹಾರ್ಮೋನ್‍ಗಳು ದೇಹದ ಪ್ರತಿ ಕೋಶದಲ್ಲಿ ಛಾಯಪಚನವನ್ನು ನಿಯಂತ್ರಿಸುತ್ತದೆ. ದೇಹದ ಅಸ್ಥಿಪಂಜರ ಮತ್ತು ನರಮಂಡಲದ ಬೆಳವಣಿಗೆಗೆ ಇದು ಅವಶ್ಯಕವಾಗಿದೆ.

ಪೈಬ್ರೋಸಿಸ್ಟಿಕ್ ಸ್ತನರೋಗಗಳನ್ನು ತಡೆಗಟ್ಟುವಲ್ಲಿ ಅಯೋಡಿನ್ ಪ್ರಮುಖ ಪಾತ್ರ ವಹಿಸುತ್ತದೆ. ಈ ಸ್ಥಿತಿಯು ಸ್ತನ ಅಂಗಾಂಶಗಳ ಊತವನ್ನುಂಟುಮಾಡುತ್ತದೆ. ಸ್ತನ ಅಂಗಾಂಶದಲ್ಲಿ ಹಾರ್ಮೋನ್ ಈಸ್ಟ್ರೋಜಿನ್ ಪರಿಣಾಮವನ್ನು ಅಯೋಡಿನ್ ಮಾಡ್ಯೂಲ್ ಮಾಡುತ್ತದೆ. ಇದರಿಂದಾಗಿ ಊತವನ್ನು ಕಡಿಮೆ ಮಾಡುತ್ತದೆ. ಸ್ತನ ಪೈಬ್ರೋಸಿಸ್ಟಿಕ್ ರೋಗಗಳ ಜತೆಗೆ ಅಯೋಡಿನ್ ಸಹ ಅರಿವಿನ ದುರ್ಬಲತೆ(ಬುದ್ಧಿಮಾಂದ್ಯತೆ), ಕ್ರೆಟಿನಿಸಂ, ಹೈಪೋಥೈರಾಯ್ಡಿಸಂ , ಹೈಪರ್‍ಥೈರಾಯ್ಡಿಸಂ, ಅನೇಕ ಗರ್ಭಪಾತಗಳಂತಹ ಆರೋಗ್ಯದ ಪರಿಸ್ಥಿತಿಗಳನ್ನು ತಡೆಗಟ್ಟುತ್ತದೆ.

ದೇಹವು 20 ರಿಂದ 30 ಮೈಕ್ರೋ ಗ್ರಾಂ ಅಯೋಡಿನ್ ಹೊಂದಿದ್ದು, ಥೈರಾಯ್ಡ್ ಗ್ರಂಥಿಗಳಲ್ಲಿ ಶೇಖರಿಸಲ್ಪಟ್ಟಿದೆ. ಇದು ಧ್ವನಿ ಪೆಟ್ಟಿಗೆಯ ಕೆಳಗಿರುತ್ತದೆ. ಅಯೋಡಿನ್ ಕೆಲವು ಪ್ರಮಾಣದಲ್ಲಿ ಹಾಲುಣಿಸುವ ಸ್ತನ ಗ್ರಂಥಿಗಳು, ಲವಣ ಗ್ರಂಥಿಗಳು, ಹೊಟ್ಟೆಯ ಒಳ ಪದರ ಮತ್ತು ರಕ್ತದಲ್ಲಿ ಕಂಡುಬರುತ್ತದೆ. ಅಯೋಡಿನ್ ಕೊರತೆಯಿಂದಾಗುವ ನ್ಯೂನತೆಗಳು: ಅಯೋಡಿನ್ ಕೊರತೆಯು ದೇಹದಲ್ಲಿ ಭೀಕರ ಪ್ರಭಾವ ಬೀರುತ್ತದೆ. ಅಯೋಡಿನ್ ಸಮೃದ್ಧ ಆಹಾರಗಳ ಕೊರತೆಯಿಂದಾಗಿ ದೇಹದಲ್ಲಿ ಅಯೋಡಿನ್ ಕಡಿಮೆ ಮಟ್ಟದ ಪ್ರತಿ ರಕ್ಷಣಾ ವ್ಯವಸ್ಥೆಯ ಕಾರ್ಯನಿರ್ವಹಣೆ ದುರ್ಬಲಗೊಳಿಸುತ್ತದೆ.

ಮಕ್ಕಳಲ್ಲಿ ಬುದ್ಧಿಮಾಂದ್ಯತೆ, ಕಲಿಕೆಯಲ್ಲಿ ಹಿಂದುಳಿಯುವಿಕೆ, ದೈಹಿಕ ಮತ್ತು ಮಾನಸಿಕ ವಿಕಲತೆ, ಕುಂಠಿತ ಬೆಳವಣಿಗೆ, ಕಿವುಡುತನ ಮತ್ತು ಮೂಕತನ, ಮೆಳ್ಳಗಣ್ಣು, ನಡಿಗೆಯಲ್ಲಿ ಲೋಪ ದೋಷಗಳು, ವಯಸ್ಕರಲ್ಲಿ ನಿಶ್ಯಕ್ತಿ, ಕಾರ್ಯನಿರ್ವಹಣೆಯ ವೈಫಲ್ಯ, ಗಳಗಂಡ ರೋಗ, ಗರ್ಭಿಣಿಯರಲ್ಲಿ ಗರ್ಭಪಾತ, ಸತ್ತು ಹುಟ್ಟುವ ಮಕ್ಕಳ ಸಂಖ್ಯೆಯಲ್ಲಿ ಹೆಚ್ಚಳವನ್ನು ಕಾಣಬಹುದು.

# ಅಯೋಡಿನ್ ಕೊರತೆಯ ಲಕ್ಷಣಗಳು:
ದೇಹದಲ್ಲಿ ಅಯೋಡಿನ್ ಕೊರತೆಯಾದಾಗ ಗಾಯಿಟರ್ (ಥೈರಾಯ್ಡ್ ಗ್ರಂಥಿ ಹಿಗ್ಗುವಿಕೆ), ಅಧಿಕ ಕೊಲೆಸ್ಟ್ರಾಲ್, ಆಯಾಸ, ಖಿನ್ನತೆ, ತೂಕ ಹೆಚ್ಚುವುದು, ಶೀಘ್ರ ಹೃದಯ ಬಡಿತ, ದುರ್ಬಲತೆ, ಹಸಿವು ಏರಿಳಿತಗಳು ಕಂಡು ಬರುತ್ತದೆ. ಆಹಾರ ಮೂಲಗಳು: ಅಯೋಡಿಕರಿಸಿದ ಉಪ್ಪು, ಹಾಲು, ಸಮುದ್ರ ತರಕಾರಿಗಳು(ಸೀಗಡಿ ಸಮುದ್ರಕಳೆ), ಮೊಸರು, ಮೊಟ್ಟೆ, ಬೀನ್ಸ್, ಹಸಿರು ಸೊಪ್ಪು, ತರಕಾರಿ, ಬೇಯಿಸಿದ ಆಲೂಗಡ್ಡೆ, ಮೀನು ಬಳಸುವುದರಿಂದ ಅಯೋಡಿನ್ ಕೊರತೆಯನ್ನು ನಿಯಂತ್ರಿಸಬಹುದಾಗಿದೆ.

# ಪ್ರತಿ ನಿತ್ಯ ಬೇಕಾಗಿರುವ ಅಯೋಡಿನ್ ಪ್ರಮಾಣ:
ಪ್ರತಿನಿತ್ಯದ ಆಹಾರದಲ್ಲಿ 1-8 ವರ್ಷದೊಳಗಿನವರಿಗೆ 90 ಮೈಕ್ರೋ ಗ್ರಾಂ. 9 ರಿಂದ 13 ವರ್ಷದೊಳಗಿನವರಿಗೆ 120 ಮೈಕ್ರೋ ಗ್ರಾಂ., 14 ರಿಂದ ಮೇಲ್ಪಟ್ಟ ವಯಸ್ಕರಿಗೆ 150 ಮೈಕ್ರೋ ಗ್ರಾಂ, ಗರ್ಭಿಣಿಯರಿಗೆ 220 ಮೈಕ್ರೋ ಗ್ರಾಂ., ಹಾಲುಣಿಸುವ ತಾಯಂದಿರಿಗೆ 290 ಮೈಕ್ರೋ ಗ್ರಾಂ ಅಯೋಡಿನ್ ಅವಶ್ಯಕತೆ ಇರುತ್ತದೆ.

ಜೀವಿತಾವಧಿಯಲ್ಲಿ ಸರಿಯಾದ ಆರೋಗ್ಯ ಮತ್ತು ಅಭಿವೃದ್ಧಿಗಾಗಿ ಒಂದು ಟೀ ಸ್ಪೂನ್ ಅಯೋಡಿನ್‍ಗಿಂತ ಕಡಿಮೆ ಅಗತ್ಯವಿದೆ. ದೇಹವು ಅಯೋಡಿನ್‍ಅನ್ನು ಶೇಖರಿಸದ ಕಾರಣ ಪ್ರತಿದಿನ ನಾವು ತಿನ್ನುವ ಆಹಾರದಲ್ಲಿ ಅಯೋಡಿನ್ ಇರಬೇಕಾಗಿರುತ್ತದೆ. ಇದಕ್ಕೆ ವ್ಯತಿರಿಕ್ತವಾಗಿ ಹೆಚ್ಚಿನ ಅಯೋಡಿನ್ ಪೂರಕಗಳು ಸೇರಿದರೆ ಹೊಟ್ಟೆ ನೋವು, ವಾಕರಿಕೆ, ವಾಂತಿ, ದುರ್ಬಲನಾಡಿ ಹಾಗೂ ಅಯೋಡಿನ್ ಹೆಚ್ಚಿನ ಸೇವನೆಯು ಥೈರಾಯ್ಡ್ ಹಾರ್ಮೋನ್‍ಗಳ ಸಂಶ್ಲೇಷಣೆಯನ್ನು ಪ್ರತಿಬಂಧಿಸುತ್ತದೆ. ದಿನನಿತ್ಯದ ಆಹಾರದಲ್ಲಿ ಅಯೋಡಿನ್‍ಯುಕ್ತ ಉಪ್ಪನ್ನೇ ಬಳಸಿರಿ.

Facebook Comments