ಮಕ್ಕಳಲ್ಲಿ ಜಂತುಹುಳು ಕಾಣಿಸಿಕೊಳ್ಳಲು ಕಾರಣಗಳೇನು.? ಪರಿಹಾರವೇನು.?

ಈ ಸುದ್ದಿಯನ್ನು ಶೇರ್ ಮಾಡಿ

Worm--01

ಹೊಟ್ಟೆಯಲ್ಲಿ ಹುಳುಗಳ ಬಾಧೆ ಮಕ್ಕಳಿಂದ ದೊಡ್ಡವರವರೆಗೂ ಕಾಡುವಂತಹ ಸಾಮಾನ್ಯ ಸಮಸ್ಯೆ. ಇದನ್ನು ಪ್ರಾರಂಭದಲ್ಲೇ ಹತೋಟಿಯಲ್ಲಿಟ್ಟರೆ ಮುಂದೆ ಆರೋಗ್ಯದ ಮೇಲೆ ಬೀರಬಹುದಾದ ದೊಡ್ಡ ಅನಾಹುತವನ್ನು ತಪ್ಪಿಸಬಹುದು. ಇದಕ್ಕೆ ವೈದ್ಯರ ಮೊರೆ ಹೋಗುವ ಮೊದಲು ನಮ್ಮ ಮನೆಯಲ್ಲೇ ಇರುವ ಕೆಲವು ವಸ್ತುಗಳಿಂದ ಕಡಿಮೆ ಮಾಡಿಕೊಳ್ಳಬಹುದು.  ಮೊದಲನೆಯದಾಗಿ ಜಂತು ಹುಳುಗಳು ಉತ್ಪತ್ತಿಯಾಗಲು ಕಾರಣವೇನೆಂಬುದನ್ನು ತಿಳಿದುಕೊಳ್ಳಿ,   ಜಂತುಹುಳು ಸಾಮಾನ್ಯವಾಗಿ ಹೆಚ್ಚು ಕಾಣಿಸಿಕೊಳ್ಳುವುದು ಆರು ವರ್ಷದ ಒಳಗಿನ ಮಕ್ಕಳಲ್ಲಿ. ಆ ವಯಸ್ಸಿನ  ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿಯು ಕಡಿಮೆ ಇರುವುದೂ ಇದಕ್ಕೆ ಒಂದು ಕಾರಣ. ಜಂತುಹುಳುವಿಗೆ ಮುಖ್ಯ ಕಾರಣ ಅಶುದ್ಧತೆ. ನಮ್ಮ ಆಹಾರ, ಕುಡಿಯುವ ನೀರು, ಅರೆಬೆಂದ ಮಾಂಸ ಇವುಗಳಲ್ಲಿ  ಜಂತುಹುಳುಗಳಿರುತ್ತವೆ. ಮಣ್ಣು ಹಾಗೂ ನೀರಿನಲ್ಲಿ ಇರುವ ಹುಳುಗಳು ಹೆಚ್ಚಾಗಿ ಮಕ್ಕಳನ್ನು ಕಾಡುತ್ತವೆ.  ಮಕ್ಕಳು ನೀರು ಹಾಗೂ ಮಣ್ಣಿನೊಂದಿಗೆ ಆಟವಾಡಿ, ಕೈ ಬಾಯಿ ತೊಳೆಯದೆ ಆಹಾರ ಸೇವಿಸುತ್ತಾರೆ. ಆ ಮೂಲಕ  ಅವುಗಳು ದೇಹದೊಳಗೆ ಸೇರಿಕೊಳ್ಳುತ್ತವೆ. ಕೆಲಮೊಮ್ಮೆ ಚಪ್ಪಲಿ ಧರಿಸದೆ ಬರಿಗಾಲಿನಲ್ಲಿ ಮಣ್ಣಿನ ಮೇಲೆ ನಡೆದಾಡಿದರೂ ಜಂತುಹುಳುಗಳು ದೇಹವನ್ನು ಸೇರುತ್ತವೆ. ಚಪ್ಪಲಿ ಧರಿಸದೆ ಇದ್ದಾಗ ಕಾಲನ್ನು ಕಚ್ಚಿ ಆ ಗಾಯದ ಮೂಲಕ ದೇಹವನ್ನು ಪ್ರವೇಶಿಸುತ್ತವೆ. ಈ ಹುಳುಗಳನ್ನು ಇಂಗ್ಲಿಷಿನಲ್ಲಿ ‘ಹುಕ್‌ವರ್ಮ್‌’ಗಳು ಎಂದು ಕರೆಯುತ್ತಾರೆ.

ಜಂತುಹುಳುಗಳು ಕಾಣಿಸಿಕೊಂಡ ಮಕ್ಕಳಲ್ಲಿ ರಕ್ತಹೀನತೆ, ಸುಸ್ತು, ಏಕಾಗ್ರತೆಯ ಕೊರತೆ, ಮಲವಿಸರ್ಜನೆಯ  ಸಂದರ್ಭದಲ್ಲಿ ರಕ್ತ ಹೋಗುವುದು ಇಂತಹ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಇನ್ನು ಕೆಲವು ಗಂಭೀರ  ಸಂದರ್ಭಗಳಲ್ಲಿ ಮೆದುಳಿನಲ್ಲಿ ಜಂತುಹಯಳು ಸೇರಿಕೊಂಡರೆ ಮಕ್ಕಳು ಕೋಪ ಮಾಡಿಕೊಳ್ಳುವುದು,
ಸಿಡಿಮಿಡಿಗೊಳ್ಳುವುದು ಮಾಡುತ್ತವೆ. ಕಾರಣವಿಲ್ಲದೆ ಅಳುವುದು, ಊಟ ಬಿಡುವುದು ಇವು ಕೂಡ ಜಂತುಹುಳುವಿನ  ಲಕ್ಷಣಗಳೇ. ಕೆಲವು ಮಕ್ಕಳಲ್ಲಿ ಮಲವಿಸರ್ಜನೆಯ ಜಾಗದಲ್ಲಿ ತುರಿಕೆಯಾಗುತ್ತದೆ. ಚರ್ಮದ ತುರಿಕೆಯೂ ಕಾಣಿಸುತ್ತದೆ.

ಮುಖ್ಯವಾಗಿ ಈ ಲಕ್ಷಣಗಳಿದ್ದಾಗ ದೇಹದಲ್ಲಿ ಕಬ್ಬಿಣಾಂಶ ಕಡಿಮೆಯಾಗುತ್ತದೆ. ‌ಮಕ್ಕಳಲ್ಲಿ ಸ್ವಲ್ಪ ಸ್ವಲ್ಪವಾಗಿ  ದೇಹದಿಂದ ರಕ್ತ ಹೊರ ಹೋಗುತ್ತಿರುತ್ತದೆ. ಇದರಿಂದ ರಕ್ತಹೀನತೆ ಕಾಣಿಸಿಕೊಳ್ಳುತ್ತದೆ. ಇವೆಲ್ಲವೂ ಒಂದಕ್ಕೊಂದು  ಕೊಂಡಿಯಂತಿದೆ. ಜಂತುಹುಳುಗಳು ಕರುಳನ್ನು ಸೇರಿ ಊಟ ಸೇರದೆ ಇರುವುದು, ನಿತ್ರಾಣದಂತಹ ಸಮಸ್ಯೆಗಳನ್ನು ತಂದೊಡ್ಡೊತ್ತವೆ.  ಆದರೆ ಇನ್ನು ಕೆಲವು ಜಂತುಹುಳುಗಳು ಶ್ವಾಸಕೋಶ, ಮೆದುಳು ಹಾಗೂ ಸ್ನಾಯುಗಳಲ್ಲಿ ಸೇರಿಕೊಂಡು ಗಂಭೀರ  ಸಮಸ್ಯೆಗಳಿಗೆ ಎಡೆ ಮಾಡಿಕೊಡಬಹುದು. ಕೆಲವೊಮ್ಮೆ ನೂರಾರು ಜಂತುಹುಳುಗಳು ಕರುಳಲ್ಲಿ ಸೇರಿಕೊಂಡು  ಕರುಳುಬಳ್ಳಿಯಲ್ಲಿ ತೊಡಕುಂಟಾಗಿ ಇದರ ಕಾರ್ಯವೈಖರಿಯಲ್ಲೂ ವ್ಯತ್ಯಾಸವಾಗಬಹುದು. ಜಂತುಹುಳುವಿನ ಸಮಸ್ಯೆ ಮಕ್ಕಳಿಗೆ ಮಾತ್ರ ಸೀಮಿತವಾಗಿಲ್ಲ. ಅದು ದೊಡ್ಡವರಲ್ಲೂ ಕಾಣಿಸಿಕೊಳ್ಳುತ್ತದೆ. ಮಕ್ಕಳಲ್ಲಿ  ಈ ಸಮಸ್ಯೆಯ ಲಕ್ಷಣಗಳು ಬೇಗನೇ ಕಾಣಿಸಿಕೊಂಡರೆ ದೊಡ್ಡವರಲ್ಲಿ ಸ್ವಲ್ಪ ನಿಧಾನಕ್ಕೆ ಕಾಣಿಸಿಕೊಳ್ಳುತ್ತದೆ. ಒಟ್ಟಾರೆ
ಸಮಸ್ಯೆ ಕಾಣಿಸಿಕೊಂಡ ಮೇಲೆ ಕೊರಗುವುದಕ್ಕಿಂತ ಸಮಸ್ಯೆ ಬರುವ ಮೊದಲೇ ಜಾಗ್ರತೆ ವಹಿಸುವುದು ಉತ್ತಮ.

# ಜಂತುಹುಳುಗಳ ನಿವಾರಣೆಗೆ ಮನೆಮದ್ದು ಏನು..?
# ಒಂದು ಚಮಚ ಜೇನುತುಪ್ಪದ ಜೊತೆಗೆ ಎರಡು ಚಮಚ ಬಿಲ್ವಪತ್ರೆ ರಸ ಸೇರಿಸಿ ಒಂದು ವಾರಗಳ ಕಾಲ ಸೇವನೆ
ಮಾಡುವುದರಿಂದ ಜಂತುಹುಳು ನಿವಾರಣೆ ಮಾಡಿಕೊಳ್ಳಬಹುದು. ಬೆಳ್ಳುಳ್ಳಿಯನ್ನು ಬಳಸಿ ಜಂತು ಹುಳು ನಿವಾರಣೆ ಮಾಡಿಕೊಳ್ಳಬಹುದಾಗಿದೆ, 5-6 ಬೆಳ್ಳುಳ್ಳಿಯನ್ನು ರಾತ್ರಿಯಿಡಿ ನೀರಿನಲ್ಲಿ ನೆನೆಸಿ ಆ ನೀರನ್ನು ಬೆಳಗ್ಗೆ ಖಾಲಿಹೊಟ್ಟೆಯಲ್ಲಿ ಸೇವಿಸುವುದರಿಂದ ಹೊಟ್ಟೆಯಲ್ಲಿನ ಜಂತುಹುಳು ನಿವಾರಣೆಯಾಗುತ್ತದೆ.

# ಸಿಹಿ ಕುಂಬಳಕಾಯಿ ಬೀಜದ ಪುಡಿಯನ್ನು ನೀರಲ್ಲಿ ಕುದಿಸಿ ತಣ್ಣಗಾದ ನಂತರ ಆ ನೀರನ್ನು ಸೇವಿಸಿದರೆ ಹೊಟ್ಟೆಯಲ್ಲಿನ ಜಂತುಹುಳು ಹೊರ ಬೀಳುತ್ತದೆ. ತುಂಬೆಹೂವು ಮತ್ತು ಅದರ ಎಲೆಗಳ ರಸವನ್ನು ನಿಯಮಿತವಾಗಿ ಸೇವಿಸಿದರೆ ಜಂತುಹುಳು ಕಡಿಮೆಯಾಗುತ್ತದೆ, ಜೊತೆಗೆ ಬಾಳೆದಿಂಡಿನ ಪಲ್ಯ, ಕೋಸಂಬರಿಯನ್ನು ನಿಯಮಿತವಾಗಿ ಸೇವಿಸಿದರೆ ಜಂತುಹುಳು ನಿವಾರಣೆಯಾಗುತ್ತದೆ.

# ಸೇಬನ್ನು ರಾತ್ರಿಯ ಹೊತ್ತು ಹಲವು ದಿನಗಳವರೆಗೆ ಸೇವಿಸಿದರೆ ಹೊಟ್ಟೆಯಲ್ಲಿರುವ ಜಂತುಗಳು ಮಲದ ಜೊತೆ ಹೊರಹೋಗುತ್ತವೆ. ಒಣಗಿದ ಮಾವಿನ ಬೀಜದ ಪುಡಿಯನ್ನು ಜೇನುತುಪ್ಪದೊಂದಿಗೆ ಸೇವಿಸಿದರೆ ಮಕ್ಕಳ ಹೊಟ್ಟೆಯಲ್ಲಿ ಬೆಳೆಯುವ ಜಂತುಗಳು ಸಾಯುವುವು . ಕಾಯಿ ಪಪ್ಪಾಯಿ ರಸವನ್ನು ಜೇನುತುಪ್ಪದೊಂದಿಗೆ ಬಿಸಿನೀರಿನಲ್ಲಿ ಬೆರೆಸಿ ಕುಡಿಸುವುದರಿಂದ ಮಕ್ಕಳಿಗೆ ಹೊಟ್ಟೆಯಲ್ಲಿ ಜಂತು ಹುಳುಗಳಿದ್ದರೆ ಸತ್ತು ಮಲದ ಮೂಲಕ ಹೊರಬರುತ್ತವೆ.

# ಪಪ್ಪಾಯ ಹಣ್ಣಿನ ಬೀಜಗಳನ್ನು ಜೇನುತುಪ್ಪದೊಂದಿಗೆ ತಿನ್ನಿಸುವುದರಿಂದ ಮಕ್ಕಳ ಹೊಟ್ಟೆಯಲ್ಲಿರುವ ಜಂತು ಹುಳುಗಳು ಮಲದ ಮೂಲಕ ಹೊರಬರುತ್ತವೆ. ಪಪ್ಪಾಯ ಹಣ್ಣನ್ನು 3-4 ದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ತಿಂದರೆ ಜಂತು ಹುಳುಗಳು ಸಾಯುತ್ತವೆ. ಬೇವಿನ ಸೊಪ್ಪು, ಕೊತ್ತಂಬರಿ, ಶುಂಠಿ, ಮೆಣಸಿನ ಕಾಯಿ, ಉಪ್ಪು ಮತ್ತು ಹುಣಸೇ ಹಣ್ಣನ್ನು ಬೆರೆಸಿ ಅರೆದು ವಾರಕ್ಕೊಮ್ಮೆ ಅದನ್ನು ಬಿಸಿ ಅನ್ನಕ್ಕೆ ಕಲೆಸಿ ತಿನ್ನುತ್ತಾ ಬಂದರೆ ಹೊಟ್ಟೆಯಲ್ಲಿರುವ ಜಂತು ಹುಳು ನಾಶವಾಗುತ್ತದೆ. ಕಲ್ಲಂಗಡಿ ಹಣ್ಣಿನ ಬೀಜದ ತಿರುಳನ್ನು ತಿನ್ನುವುದರಿಂದ ಹೊಟ್ಟೆಯಲ್ಲಿರುವ ಜಂತು ನಾಶವಾಗುತ್ತದೆ.

# ಮುನ್ನೆಚ್ಚರಿಕೆ ಹೇಗೆ ..?
ಜಂತುಹುಳುವಿನ ನಿವಾರಣೆಗೆ ಸ್ವಚ್ಛತೆ ತುಂಬ ಮುಖ್ಯ. ಮನೆ ಹಾಗೂ ಸುತ್ತಮುತ್ತಲಿನ ವಾತಾವರಣವನ್ನು  ಸ್ವಚ್ಛವಾಗಿಟ್ಟುಕೊಳ್ಳುವ ಮೂಲಕ ಆದಷ್ಟು ಈ ಸಮಸ್ಯೆಯನ್ನು ನಿವಾರಿಸಿಕೊಳ್ಳಬಹುದು. ಇದಕ್ಕೆ ಮುಖ್ಯವಾಗಿ  ಮಾಡಬೇಕಿರುವುದು ಶೌಚಾಲಯಕ್ಕೆ ಹೋಗುವ ಮೊದಲು ಹಾಗೂ ಹೋಗಿ ಬಂದ ಮೇಲೆ ಶುದ್ಧವಾಗಿ ಕೈ ತೊಳೆದುಕೊಳ್ಳಬೇಕು. ಊಟ ಮಾಡುವ ಮೊದಲು ಎರೆಡೆರಡು ಬಾರಿ ಕೈ ತೊಳೆದುಕೊಳ್ಳಬೇಕು. ತಿನ್ನುವ ಆಹಾರವನ್ನು ಮುಚ್ಚಿ ಇಡುವ ಅಭ್ಯಾಸ ಮಾಡಿಕೊಳ್ಳಿ. ಬಯಲಿನಲ್ಲಿ ಶೌಚ ಮಾಡುವುದನ್ನು ಆದಷ್ಟು ತಪ್ಪಿಸಿ.* ತೆರೆದ ಶೌಚಾಲಯಕ್ಕಿಂತ ಮುಚ್ಚಿದ ಶೌಚಲಯಕ್ಕೆ ಹೆಚ್ಚು ಒತ್ತು ನೀಡಿ. ಹೊರಗೆ ಹೋಗುವಾಗ ಚಪ್ಪಲಿ ಧರಿಸದೆ ಹೋಗಬೇಡಿ. ಕುಡಿಯುವ ನೀರಿನ ಡ್ರಮ್‌ ಒಳಗೆ ಕೈ ಹೋಗದಂತೆ ಎಚ್ಚರ ವಹಿಸಿ. ಮಣ್ಣಿನಲ್ಲಿ ಆಟವಾಡಿ ಬಂದ ಮಕ್ಕಳು ನೇರವಾಗಿ ಮನೆಯೊಳಗೆ ಬರದಂತೆ ತಡೆಯಿರಿ.

Facebook Comments