ಸಾವಿರಾರು ಮರಗಳ ಮಾರಣಹೋಮ ನಡೆಸಿದ ಮೆಸ್ಕಾಂ ವಿರುದ್ಧ ಕೇಸ್

ಈ ಸುದ್ದಿಯನ್ನು ಶೇರ್ ಮಾಡಿ

mesco-tree-cattingಕಡೂರು, ನ.1- ಪರಿಸರ ನಾಶದಿಂದ ಮಳೆಯಿಲ್ಲ ಎಂದು ತಜ್ಞರು ಹೇಳುತ್ತಾರೆ. ಆದರೆ, ಮೆಸ್ಕಾಂ ಇಲಾಖೆಯವರು ರಸ್ತೆಬದಿಯ ಸಾವಿರಾರು ಮರಗಳನ್ನು ಕಡಿದು ನಾಶಮಾಡಿರುವುದರ ವಿರುದ್ಧ ಕೋರ್ಟ್‍ಗೆ ಮೊರೆ ಹೋಗಲಾಗುವುದು ಎಂದು ಕಾಂಗ್ರೆಸ್ ಮುಖಂಡ ಹಾಗೂ ಪಿಕಾರ್ಡ್ ಬ್ಯಾಂಕ್ ಮಾಜಿ ಅಧ್ಯಕ್ಷ ಡಿ.ಉಮೇಶ್ ತಿಳಿಸಿದರು.ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮೆಸ್ಕಾಂ ಇಲಾಖೆಯಿಂದ ಕೇಂದ್ರ ಸರ್ಕಾರದ ನಿರಂತರ ಜ್ಯೋತಿ ಯೋಜನೆಗೆ ವಿದ್ಯುತ್ ಕಂಬಗಳನ್ನು ಅಳವಡಿಸಲು ಸುಮಾರು 40 ರಿಂದ 50 ವರ್ಷಗಳಿಂದ ರಸ್ತೆ ಬದಿಯಲ್ಲಿದ್ದ ಮರಗಳನ್ನು ಕಡಿದಿದ್ದು,ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ಗಮನಕ್ಕೂ ತಾರದೆ, ಅರಣ್ಯ ಇಲಾಖೆಯವರ ಒಪ್ಪಿಗೆ ಪಡೆಯದೆ ಮರಗಳ ಮಾರಣ ಹೋಮ ನಡೆಸಲಾಗಿದೆ ಎಂದು ದೂರಿದರು.

ಸಂಬಂಧಪಟ್ಟ ಇಲಾಖೆಗಳಿಗೆ ಹಲವಾರು ಬಾರಿ ಸಾರ್ವಜನಿಕರು ದೂರು ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ.ಸಾರ್ವಜನಿಕ ಹಿತಾಸಕ್ತಿ ಮೂಲಕ ಕೋರ್ಟ್‍ನಲ್ಲಿ ಎರಡೂ ಇಲಾಖೆಗಳ ಅಧಿಕಾರಿಗಳಿಗೆ ದಾವೆ ಹೂಡಲಾಗುವುದು ಎಂದರು.ಕಳೆದ ಬಾರಿ ನಡೆದ ತಾಪಂ ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷ ರೇಣುಕಾ ಉಮೇಶ್ ಅವರು, ಮರಗಳ ಕಡಿತದ ಬಗ್ಗೆ ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಳ್ಳಬೇಕಿದೆ ಎಂದು ನಿರ್ಣಯ ಮಾಡಲಾಗಿತ್ತಾದರೂ ಅರಣ್ಯ ಇಲಾಖೆ ಅಧಿಕಾರಿಗಳು ಏನೂ ಗೊತ್ತಿಲ್ಲದ ರೀತಿಯಲ್ಲಿ ವರ್ತಿಸುತ್ತಿರುವುದನ್ನು ನೋಡಿದರೆ ಇಲಾಖೆಯವರಿಗೂ ಪರಿಸರದ ಬಗ್ಗೆ ಕಾಳಜಿ ಇಲ್ಲ ಎಂಬಂತಾಗಿದೆ.

ಮೆಸ್ಕಾಂನವರು ಹಾಡಹಗಲೇ ಸಾವಿರಾರು ಮರಗಳ ಕಡಿದು ಹಾಕಿದ್ದು, ಇಲಾಖೆಯವರೊಂದಿಗೆ ಗುಮಾನಿ ಬಂದಿದೆ ಎಂದರು.ಮೆಸ್ಕಾಂ ಮತ್ತು ಅರಣ್ಯ ಇಲಾಖೆಯ ಮಂಗಳೂರು ವಿಭಾಗಕ್ಕೂ ಹಾಗೂ ಶಿವಮೊಗ್ಗ ವಿಭಾಗಕ್ಕೂ ದೂರು ನೀಡಲಾಗಿದೆ. ಪರಿಸರವಾದಿಗಳಿಗೆ ಸಂಪೂರ್ಣ ಚಿತ್ರಣವನ್ನು ದಾಖಲೆ ಸಮೇತ ನೀಡಲಾಗಿದೆ. ಈಗಾಗಲೇ ಎರಡೂ ಇಲಾಖೆಗಳ ಮೇಲೆ ಕೋರ್ಟಿಗೆ ಹೋಗಲು ವಕೀಲರಿಗೆ ಪರಿಸರ ನಾಶದ ಸಂಪೂರ್ಣ ದಾಖಲೆ ಒದಗಿಸಲಾಗಿದೆ ಎಂದರು.
ತಾಪಂ ಮಾಜಿ ಅಧ್ಯಕ್ಷ ಆಸಂಧಿ ಕಲ್ಲೇಶ , ಯಗಟಿಪುರ ಗ್ರಾಪಂ ಮಾಜಿ ಅಧ್ಯಕ್ಷ ಹನುಮಂತಪ್ಪ, ಗ್ರಾಪಂ ಸದಸ್ಯ ಗೋವಿಂದಪ್ಪ, ಶಂಕರನಾಯ್ಕ ಇದ್ದರು.

Facebook Comments