ಜನರ ರಕ್ಷಿಸುವ ಆರಕ್ಷಕರಿಗೆ ಅಪಾಯದ ಭೀತಿ

ಈ ಸುದ್ದಿಯನ್ನು ಶೇರ್ ಮಾಡಿ

chanpatana-police
ಚನ್ನಪಟ್ಟಣ,ನ.2-ದೂರು ದುಮ್ಮಾನಗಳನ್ನು ಆಲಿಸಿ, ದೂರುದಾರರ ಸಮಸ್ಯೆಗಳಿಗೆ ಸ್ಪಂದಿಸಿ ಕಾನೂನಿನಡಿ ಕ್ರಮ ತಗೆದುಕೊಳ್ಳುವ ರಕ್ಷಕರಿಗೆ ತಾವು ಕರ್ತವ್ಯ ನಿರ್ವಹಿಸುವ ಕಟ್ಟಡಗಳು ಎಷ್ಟು ಪ್ರಮಾಣದಲ್ಲಿ ರಕ್ಷಣೆ ನೀಡುತ್ತವೆ ಎಂಬುದು ನಗರ ಪೊಲೀಸ್ ಠಾಣೆಗೆ ಹೋಗಿ ಗಮನಿಸಿದರೆ ತಿಳಿಯುತ್ತದೆ.

ಹೊರಗಿನ ನೋಟಕ್ಕೆ ಭರ್ಜರಿ ಸುಣ್ಣಬಣ್ಣ ಬಳಿದುಕೊಂಡು ಕಂಗೊಳಿಸುತ್ತಿರುವ ಮಹಾರಾಜರ ಕಾಲದ ಇತಿಹಾಸದ ಕಟ್ಟಡ, ಕೆಲ ದಿನಗಳ ಹಿಂದೆ ಉದ್ಘಾಟನೆಗೊಂಡ ಕಾಳಜಿ ಹೊತ್ತ ಕರ್ತವ್ಯ ನಿರತ ಪೊಲೀಸ್ ಅಧಿಕಾರಿಗಳ ಪರಿಶ್ರಮದಿಂದ ನಿರ್ಮಾಣಗೊಂಡ ಠಾಣೆಯ ಮುಂಬದಿಯ ಹಸಿರು ಗಾರ್ಡನ್ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.ಆದರೆ ಮೆಲೆಲ್ಲಾ ತಳಕು,ಒಳಗೆಲ್ಲಾ ಹುಳುಕು ಎಂಬಂತೆ ಪೊಲೀಸ್ ಠಾಣೆಯ ಹೊರಗಿನ ನೋಟಕ್ಕಿಂತ ಒಳಗಿನ ನೋಟ ನೋಡಿದರೆ ಅವರ ಪರಿಸ್ಥಿತಿ ಅರ್ಥವಾಗದೆ ಇರಲಾರದು. ಪೊಲೀಸರು ಕರ್ತವ್ಯ ನಿರ್ವಹಿಸುವ ಕಟ್ಟಡದ ಸಿಮೆಂಟ್ ಸೀಲಿಂಗ್ ಸಂಪೂರ್ಣವಾಗಿ ಶಿಥಿಲಗೊಂಡು ಕಳಚಿ ಬಿದ್ದು ಪೊಲೀಸರಿಗೆ ಭಯವನ್ನು ಸೃಷ್ಟಿಮಾಡಿದೆ.

ನಿನ್ನೆ ಬೆಳಿಗ್ಗೆ 11 ಸುಮಾರಿನಲ್ಲಿ ಸಂಚಾರಿ ಪೊಲೀಸ್ ಠಾಣೆಯ ಕಚೇರಿಯಲ್ಲಿ ಭಾರಿ ಶಬ್ದ ಮಾಡಿ ಸುಮಾರು 40 ರಿಂದ 50 ಕೆ.ಜಿ ತೂಗುವ ಕಟ್ಟಡದ ಸೀಲಿಂಗ್ ಕಳಚಿ ಬಿದ್ದಿದೆ. ಅದೃಷ್ಟವಶಾತ್ ಆ ಸ್ಥಳದಲ್ಲಿ ಖಾಲಿ ಚೇರುಗಳು ಇದ್ದುದ್ದರಿಂದ ಪ್ರಾಣಹಾನಿಯಾಗುವುದು ಸ್ವಲ್ಪದರಲ್ಲಿಯೇ ತಪ್ಪಿದೆ.ಸುಮಾರು 15 ಅಡಿ ಎತ್ತರದಲ್ಲಿರುವ ಸೀಲಿಂಗ್ ಗಾರೆ ಬಿದ್ದ ರಭಸಕ್ಕೆ ಕೆಳಗೆ ಇದ್ದ ಚೇರುಗಳು ಜಖಂಗೊಂಡಿವೆ, ಈ ರೀತಿ ಅವಘಡ ನಡೆಯುವ ಕೆಲ ಸಕೆಂಡುಗಳಲ್ಲಿ ಕೆಲವರು ಇದೇ ಚೇರಿನಲ್ಲಿ ಕುಳುತ್ತಿದ್ದರೆನ್ನಲ್ಲಾಗಿದ್ದು, ಅದೃಷ್ಟವಶಾತ್ ಅವರು ಎದ್ದು ಹೋಗಿದ್ದಾರೆ, ಅವರು ಹೋದ ತಕ್ಷಣ ಈ ರೀತಿ ಸೀಲಿಂಗ್ ಗಾರೆ ಬಿದ್ದಿದೆ, ಒಂದು ವೇಳೆ ಅವರ ತಲೆಯ ಮೇಲೆ ಬಿದ್ದಿದ್ದರೆ ಮುಂದಿನ ಘಟನೆಯನ್ನು ಊಹಿಸಲು ಸಾದ್ಯವಾಗುತ್ತಿರಲಿಲ್ಲ.

ಮಹಾರಾಜರ ಕಾಲದಲ್ಲಿ ದಿವಾನರಾಗಿದ್ದ ಸರ್‍ಮಿರ್ಜಾಇಸ್ಮಾಹಿಲ್ ಅಡಳಿತಾದವಧಿಯಲ್ಲಿ ನಿರ್ಮಾಣಗೊಂಡಿರುವ ಕಟ್ಟಡ ದುರಸ್ತಿಗೊಂಡಿತ್ತು, ಮಳೆಗಾಲದಲ್ಲಿ ಕಟ್ಟಡದ ಸೋರುವಿಕೆಯನ್ನು ಗಮನಿಸಿ ಒಳಂಗಾಣದ ಸೀಲಿಂಗ್ ಹೊಸದಾಗಿ ಮಾಡಿಸಿರುವುದರಿಂದ ಹಳೆಯ ಕಾಂಕ್ರೀಟ್ ಸಿಮೆಂಟ್ ಕಟ್ಟಡಕ್ಕೆ ಹೊಸ ಸಿಮೆಂಟ್ ಹೊಂದಿಕೊಳ್ಳದೆ ಈ ರೀತಿಯಾಗಿ ಬೀಳಲು ಕಾರಣವಾಗಿದೆ.

ಇತಿಹಾಸದ ಮೆಲುಕಾಗಿರುವ ಪೊಲೀಸ್ ಠಾಣಾ ಕಟ್ಟಡದಲ್ಲಿ ಪೊಲೀಸ್ ಉಪವಿಭಾಗಾಧಿಕಾರಿಗಳ ಕಚೇರಿ, ನಗರ ವೃತ್ತ ನಿರೀಕ್ಷಕರ ಕಚೇರಿ,ಸಂಚಾರಿ ಪೊಲೀಸ್ ಕಚೇರಿ, ಅಪರಾಧ ವಿಭಾಗದ ಕಚೇರಿ ಹಾಗೂ ಹಲವಾರು ಕಚೇರಿಗಳಿದ್ದು ನೂರಕ್ಕೂ ಹೆಚ್ಚು ಪೊಲೀಸರು ಕರ್ತವ್ಯ ಪಾಲನೆ ಮಾಡುವ ಕಟ್ಟಡ ಇದಾಗಿದ್ದರೆ, ಲೆಕ್ಕವಿಲ್ಲದಷ್ಟು ಮಂದಿ ಪೊಲೀಸ್ ಠಾಣೆಗೆ ಪ್ರತಿನಿತ್ಯ ಬರುತ್ತಿರುತ್ತಾರೆ.ಯಾವ ಸಂದರ್ಭದಲ್ಲಿ ಯಾರ ತಲೆಯ ಮೇಲೆ ಸಿಮೆಂಟ್ ಸೀಲಿಂಗ್ ಬೀಳುವುದೋ ಎಂಬ ಆತಂಕದಲ್ಲಿ ಕರ್ತವ್ಯ ಪಾಲನೆ ಮಾಡುವುದು ಪೊಲೀಸರ ಚಿಂತೆಯಾಗಿದೆ. ಮುಂದಾಗುವ ಅನಾಹುತಕ್ಕೆ ದಾರಿ ಮಾಡಿಕೊಡದೆ ಕೂಡಲೇ ಪೊಲೀಸ್ ಅಧಿಕಾರಿಗಳು ಎಚ್ಚೆತ್ತುಕೊಂಡು ಪೊಲೀಸ್ ಠಾಣೆಯ ಸೀಲಿಂಗ್‍ಗೆ ಮುಕ್ತಿ ನೀಡುವರೇ ಕಾದುನೋಡಬೇಕು.

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )