ಶಬರಿಮಲೆ ವಿಶೇಷ ದರ್ಶನಕ್ಕೆ ಕ್ಷಣಗಣನೆ, ಮತ್ತೆ ಹಿಂಸಾಚಾರವಾಗುವ ಮುನ್ಸೂಚನೆ

ಈ ಸುದ್ದಿಯನ್ನು ಶೇರ್ ಮಾಡಿ

Sabarimala--01

ಪಟ್ಟಣಂತಿಟ್ಟ/ತಿರುವನಂತಪುರಂ, ನ.4- ನಾಳೆ ಅಯ್ಯಪ್ಪಸ್ವಾಮಿ ವಿಶೇಷ ದರ್ಶನ ನಡೆಯುವ ಹಿನ್ನೆಲೆಯಲ್ಲಿ ವಿಶ್ವವಿಖ್ಯಾತ ಪವಿತ್ರ ಯಾತ್ರಾಸ್ಥಳ ಶಬರಿಮಲೆಯಲ್ಲಿ ವ್ಯಾಪಕ ಭದ್ರತೆ ಒದಗಿಸಲಾಗಿದೆ. ಇದೇ ವೇಳೆ ಸ್ವಾಮಿ ಅಯ್ಯಪ್ಪ ದರ್ಶನಕ್ಕೆ ಬರುವ ಮಹಿಳೆಯರಿಗೆ ಮತ್ತೆ ಪ್ರತಿರೋಧ ಒಡ್ಡಲು ಹಿಂದೂಪರ ಸಂಘಟನೆಗಳು ಸಜ್ಜಾಗಿವೆ.  ಯುವ ಪತ್ರಕರ್ತೆಯರನ್ನು ನಾಳೆಯ ವಿಶೇಷ ದರ್ಶನದ ವರದಿ ಮಾಡಲು ನಿಯೋಜಿಸುವಂತೆ ಹಿಂದೂಪರ ಸಂಘಟನೆಗಳು ಮುದ್ರಣ ಮತ್ತು ವಿದ್ಯುನ್ಮಾನ ಮಾಧ್ಯಮಗಳಿಗೆ ಮನವಿ ಮಾಡುವ ಮೂಲಕ ನಾಳೆ ಪುನಃ ಪ್ರತಿಭಟನೆ ಮತ್ತು ಹಿಂಸಾಚಾರ ಸಾಧ್ಯತೆಯ ಸುಳಿವು ನೀಡಿದೆ.

ವಿಶ್ವ ಹಿಂದೂ ಪರಿಷತ್ ಮತ್ತು ಹಿಂದೂ ಐಕ್ಯ ವೇದಿ ಸಂಘಟನೆಗಳು ಒಳಗೊಂಡ ಶಬರಿಮಲೆ ಕರ್ಮಸಮಿತಿ ಈ ಸಂಬಂಧ ಎಲ್ಲ ಮಾಧ್ಯಮಗಳಿಗೂ ಮನವಿ ಸಲ್ಲಿಸಿದ್ದು, ಯುವ ಪತ್ರಕರ್ತೆಯರನ್ನು ಯಾವುದೇ ಕಾರಣಕ್ಕೂ ವರದಿ ಮಾಡಲು ಕಳುಹಿಸದಂತೆ ಕೋರಿದೆ. ಕಳೆದ ತಿಂಗಳು ಶಬರಿಮಲೆ ಬಳಿ ನಡೆದ ಪ್ರತಿಭಟನೆ ವೇಳೆ ಬೆಂಗಳೂರು ಪತ್ರಕರ್ತೆ ಸೇರಿದಂತೆ ಅನೇಕ ಮಾಧ್ಯಮದವರು ಗಾಯಗೊಂಡಿದ್ದರು.

ಪೊಲೀಸ್ ಸರ್ಪಗಾವಲು: ನಾಳೆಯಿಂದ ಶಬರಿಮಲೆಯಲ್ಲಿ ವಿಶೇಷ ದರ್ಶನದ ನಿಮಿತ್ತ ಅಯ್ಯಪ್ಪ ಸ್ವಾಮಿ ದೇಗುಲದ ಬಾಗಿಲು ತೆರೆಯಲಿದ್ದು, ಇದೇ ಕಾರಣಕ್ಕೆ ಶಬರಿಮಲೆಯಲ್ಲಿ ಭದ್ರತೆಗೆ 1500 ಪೊಲೀಸರನ್ನು ನಿಯೋಜಿಸಲಾಗುತ್ತಿದೆ. ಈ ಬಗ್ಗೆ ನಿನ್ನೆ ಪಟ್ಟಣಂತಿಟ್ಟ ಪೊಲೀಸ್ ವರಿಷ್ಠಾಧಿಕಾರಿಗಳ ಸಭೆಯಲ್ಲಿ ಚರ್ಚೆ ನಡೆಸಲಾಗಿದ್ದು, ಪೊಲೀಸ್ ವರಿಷ್ಠಾಧಿಕಾರಿ ಅನಿಲ್ ಕಾಂತ್ ಅವರ ನೇತೃತ್ವದಲ್ಲಿ ಭದ್ರತೆ ನಿಯೋಜಿಸಲಾಗಿದೆ. ಪೊಲೀಸರು ಮಾತ್ರವಲ್ಲದೆ 20 ಸದಸ್ಯರ ಕಮಾಂಡೋ ಪಡೆಯನ್ನೂ ಕೂಡ ನೀಳಕ್ಕಲ್, ಸನ್ನಿಧಾನಂ ಮತ್ತು ಪಂಪೆಯಲ್ಲಿ ನಿಯೋಜಿಸಲಾಗಿದೆ.

ನ.5ರಂದು ವಿಶೇಷ ಪೂಜೆಗಾಗಿ ಶಬರಿಮಲೆ ಅಯ್ಯಪ್ಪ ದೇವಸ್ಥಾನದ ಬಾಗಿಲು ತೆರೆಯಲಿದ್ದು, ಈ ಮಧ್ಯೆ ಸನ್ನಿಧಾನಂ, ಪಂಪಾ, ನೀಳಕ್ಕಲ್ ಹಾಗೂ ಎಲವುಂಕಾಲ್‍ನಲ್ಲಿ ನ.4ರಿಂದ 6ರವರೆಗೆ ಸೆಕ್ಷನ್ 144 ಜಾರಿ ಮಾಡಲು ಪಟ್ಟಣಂತಿಟ್ಟ ಜಿಲ್ಲಾಧಿಕಾರಿ ನಿರ್ಧರಿಸಿದ್ದಾರೆ. ಯಾವುದೇ ಅಹಿತಕರ ಘಟನೆ ನಡೆಯಂತೆ ತಡೆಯಲು ಮುಂಜಾಗ್ರತಾ ಕ್ರಮವಾಗಿ ಹೆಚ್ಚಿನ ಸಂಖ್ಯೆಯ ಪೊಲೀಸರನ್ನು ನಿಯೋಜಿಸಲು ಮುಂದಾಗಿದ್ದಾರೆ. 10 ರಿಂದ 50 ವರ್ಷ ನಡುವಿನ ಮಹಿಳೆಯರು ಕೂಡ ಶಬರಿಮಲೆ ಪ್ರವೇಶಿಸಬಹುದು ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದ ಬಳಿಕ ಕಳೆದ ತಿಂಗಳು ಶಬರಿಮಲೆ ದೇವಾಲಯದ ಬಳಿ ಭಾರೀ ಪ್ರತಿಭಟನೆ ನಡೆದಿತ್ತು. ಈ ವೇಳೆ ಹಿಂಸಾಚಾರ ಪ್ರಕರಣಗಳು ಹಾಗೂ ಅಯ್ಯಪ್ಪ ಭಕ್ತರ ಮೇಲೆ ಲಾಠಿ ಪ್ರಹಾರ ಕೂಡ ನಡೆಸಲಾಗಿತ್ತು.

ದೇವಾಲಯ ಪ್ರವೇಶಿಸಲು ಯತ್ನಿಸಿದ ಮಹಿಳೆಯರನ್ನು ಪ್ರತಿಭಟನಾಕಾರರು ತಡೆದು, ವಾಪಸ್ ಕಳುಹಿಸಿದ್ದರು. ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿ, ಹಲವರು ಗಾಯಗೊಂಡಿದ್ದರು. ಇದರಿಂದ ಕೇರಳ ಸರ್ಕಾರ ತೀವ್ರ ಮುಜುಗರಕ್ಕೀಡಾಗಿತ್ತು. ಈ ಸಂಬಂಧ ಈವರೆಗೆ 3505 ಮಂದಿಯನ್ನು ಬಂಧಿಸಲಾಗಿದ್ದು, ರಾಜಾ್ಯದ್ಯಂತ ಸುಮಾರು 529 ಕೇಸ್‍ಗಳು ದಾಖಲಾಗಿವೆ. ಶಬರಿಮಲೆಯಲ್ಲಿ ಹಿಂಸಾತ್ಮಕ ಪ್ರತಿಭಟನೆ ನಡೆದ ಹಿನ್ನೆಲೆಯಲ್ಲಿ ಪೊಲೀಸ್ ಕ್ರಮದ ಬಗ್ಗೆ ವರದಿ ನೀಡಿವಂತೆ ಕೇರಳ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಸೂಚಿಸಿತ್ತು.

Facebook Comments