ಡಿ.6ರಂದು ರಾಮಮಂದಿರ ನಿರ್ಮಾಣಕ್ಕೆ ಶಂಕುಸ್ಥಾಪನೆ

ಈ ಸುದ್ದಿಯನ್ನು ಶೇರ್ ಮಾಡಿ

Ram-Mandir

ನವದೆಹಲಿ, ನ.4- ಸುಪ್ರೀಂ ಕೋರ್ಟ್ ಅಯೋಧ್ಯೆ ಪ್ರಕರಣದ ವಿಚಾರಣೆಯನ್ನು 2019ರ ಜನವರಿಗೆ ಮುಂದೂಡಿದ್ದರಿಂದ ಬೇಸರಗೊಂಡಿರುವ ವಿಶ್ವ ಹಿಂದೂ ಪರಿಷತ್‍ನ ಸಾಧ್ವಿ ಪ್ರಾಚಿ ಏನೇ ಆಗಲಿ ಡಿ.6ರಂದು ರಾಮಮಂದಿರಕ್ಕೆ ಶಂಕುಸ್ಥಾಪನೆ ಮಾಡಲಿದ್ದೇವೆ ಎಂದರು.  ಸಾಧ್ವಿ ಪ್ರಾಚಿ ಅವರು ರಾಮಮಂದಿರ ನಿರ್ಮಾಣಕ್ಕೆ ಯಾರ ನೆರವೂ ಬೇಡ ಎಂದು ತಿಳಿಸಿದ್ದಾರೆ. ಶ್ರೀ ರಾಮಚಂದ್ರರ ಮಂದಿರವನ್ನು ಧಾಂ ಧೂಂ ಎಂದು ನಿರ್ಮಾಣ ಮಾಡಲಾಗುವುದು ಎಂದರು.ಮುಂದಿನ ತಿಂಗಳ 6ರಂದು ಶಿಲಾನ್ಯಾಸ ಮಾಡಲಿದ್ದೇವೆ.

ಹಿಂದೂಸ್ಥಾನದಲ್ಲಿರುವ ಹಿಂದೂಗಳನ್ನು ಅಯೋಧ್ಯೆಗೆ ಬರಹೇಳಿ. ರಾಮಮಂದಿರ ಘೋಷಣೆ ಮಾಡಿ ಎಂದು ಪ್ರಾಚಿ ಹೇಳಿದ್ದಾರೆ. ಅಗತ್ಯ ಬಿದ್ದಲ್ಲಿ 1992ರ ಶೈಲಿಯಲ್ಲಿ ಇನ್ನೊಂದು ಆಂದೋಲನಕ್ಕೆ ಚಾಲನೆ ನೀಡಲಾಗುವುದು ಎಂದು ಆರ್‍ಎಸ್‍ಎಸ್‍ನ ಮಹಾ ಕಾರ್ಯದರ್ಶಿ ಭಯ್ಯಾಜಿ ಜೋಷಿ ಹೇಳಿದ ಬೆನ್ನಲ್ಲಿ ಪ್ರಾಚಿ ಈ ಹೇಳಿಕೆ ನೀಡಿದ್ದಾರೆ.

# ರಾಮಮಂದಿರ ನಿರ್ಮಾಣ ನನ್ನ ಮಹತ್ವಾಕಾಂಕ್ಷೆ : ಉಮಾ ಭಾರತಿ
ಪಾಟ್ನಾ, ನ.4- ಉತ್ತರ ಪ್ರದೇಶದ ವಿವಾದಿತ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ತಮ್ಮ ಕನಸಾಗಿದ್ದು, ತಮ್ಮ ಕಡೆಯಿಂದ ಸಾಧ್ಯವಾದ ಎಲ್ಲಾ ನೆರವನ್ನು ನೀಡಲು ಸಿದ್ಧವಿರುವುದಾಗಿ ಕೇಂದ್ರ ಸಚಿವೆ ಉಮಾ ಭಾರತಿ ಹೇಳಿದ್ದಾರೆ.  ಈ ಬಗ್ಗೆ ಎಎನ್‍ಐ ಸುದ್ದಿಸಂಸ್ಥೆಗೆ ಪ್ರತಿಕ್ರಿಯೆ ನೀಡಿದ ಅವರು, ರಾಮ ಜನ್ಮಭೂಮಿ ಅಂದೋಲನದಲ್ಲಿ ನಾನು ಸಕ್ರಿಯವಾಗಿ ಭಾಗವಹಿಸಿದ್ದೇನೆ, ನನ್ನ ಹಾಗೂ ಎಲ್ ಕೆ ಅಡ್ವಾಣಿ ಮೇಲೆ ಅಯೋಧ್ಯೆ ವಿವಾದ ಕುರಿತ ಕೇಸು ವಿಚಾರಣೆ ನಡೆಯುತ್ತಿದ್ದು, ನನಗೆ ಈ ಬಗ್ಗೆ ಹೆಮ್ಮೆಯಿದೆ. ರಾಮ ಮಂದಿರ ನಿರ್ಮಾಣ ನನ್ನ ಕನಸಾಗಿದ್ದು ನನ್ನ ಕಡೆಯಿಂದ ಯಾವುದೇ ರೀತಿಯ ಸಹಕಾರ ನೀಡಲು ಸಿದ್ಧನಿದ್ದೇನೆ ಎಂದು ಹೇಳಿದ್ದಾರೆ.

ಸುಪ್ರೀಂ ಕೋರ್ಟ್ ತೀರ್ಪು ಬರುವ ಮುನ್ನ ರಾಮಮಂದಿರ ನಿರ್ಮಾಣಕ್ಕೆ ವಿಧೇಯಕ ತರಬೇಕೆಂದು ಒತ್ತಾಯ ಕೇಳಿಬರುತ್ತಿರುವುದರ ಮಧ್ಯೆ, ನ್ಯಾಯಾಂಗ ವಿಳಂಬದ ಬಗ್ಗೆ ಕಾನೂನು ರಚನೆಯಾಗಬೇಕು ಎಂದು ಕೇಂದ್ರ ಸಚಿವ ಪಿಪಿ ಚೌಧರಿ ಅಭಿಪ್ರಾಯ ವ್ಯಕ್ತಪಡಿಸಿದ್ದರು. ರಾಮ ಮಂದಿರ ನಿರ್ಮಾಣವಾಗಲೇಬೇಕು. ಸುಪ್ರೀಂ ಕೋರ್ಟ್ ಮುಂದಿರುವ ಕೇಸು ಶೀಘ್ರವೇ ಇತ್ಯರ್ಥವಾಗಬೇಕು. ಸರ್ಕಾರದ ಬಗ್ಗೆ ನನಗೇನು ಗೊತ್ತಿಲ್ಲ. ನ್ಯಾಯಾಂಗ ತೀರ್ಪು ವಿಳಂಬವಾಗುವುದಾದರೆ ಕಾನೂನು ರಚನೆಯಾಗಬೇಕು ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ ಎಂದು ಪಿ ಪಿ ಚೌಧರಿ ಹೇಳಿದ್ದರು.

ಕಳೆದ ಅ.29ರಂದು ಸುಪ್ರೀಂ ಕೋರ್ಟ್ ಕೇಸಿನ ವಿಚಾರಣೆಯನ್ನು ಜನವರಿಗೆ ಮುಂದೂಡಿತ್ತು. ವಿವಾದಿತ ಅಯೋಧ್ಯೆ ಭೂಮಿಯನ್ನು ಸುನ್ನಿ ವಕ್ಫ್ ಮಂಡಳಿ, ನಿರ್ಮೋಹಿ ಅಕಾರಾ ಮತ್ತು ರಾಮ್ ಲಲ್ಲಾ ಎಂಬುದಾಗಿ ಮೂರು ಭಾಗಗಳಾಗಿ ಮಾಡಬೇಕು ಎಂಬ 2010ರಲ್ಲಿ ಅಲಹಾಬಾದ್ ಕೋರ್ಟ್ ನೀಡಿದ್ದ ತೀರ್ಪು ಪ್ರಶ್ನಿಸಿ ಸುಪ್ರೀಂ ಕೋರ್ಟ್‍ಗೆ ಅಲ್ಲಿ ಸಲ್ಲಿಸಲಾಗಿತ್ತು, ಅದರ ವಿಚಾರಣೆ ಇನ್ನೂ ನಡೆಯುತ್ತಿದೆ.

 

Facebook Comments