ಕಬ್ಬನ್ ಪಾರ್ಕ್ ಪೊಲೀಸರೆದುರು ಹಾಜರಾದ ನಟ ಅರ್ಜುನ್ ಸರ್ಜಾ

ಈ ಸುದ್ದಿಯನ್ನು ಶೇರ್ ಮಾಡಿ

Arjun-Sarja--1

ಬೆಂಗಳೂರು, ನ.5-ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಅರ್ಜುನ್ ಸರ್ಜಾ ಇಂದು ಕಬ್ಬನ್ ಪಾರ್ಕ್ ಪೊಲೀಸರ ಎದುರು ವಿಚಾರಣೆಗೆ ಹಾಜರಾದರು. ಬಹುಭಾಷಾ ನಟಿಯೊಬ್ಬರು ನೀಡಿದ್ದ ದೂರಿನ ಹಿನ್ನೆಲೆಯಲ್ಲಿ ಅರ್ಜುನ್ ಸರ್ಜಾಗೆ ಪೊಲೀಸರು ನೋಟಿಸ್ ಜಾರಿ ಮಾಡಿದ್ದರು. ಅದರಂತೆ ಇಂದು ವಿಚಾರಣೆಗೆ ಹಾಜರಾದರು. ಸುಮಾರು 3 ಗಂಟೆ ಕಾಲ ಸರ್ಜಾ ಅವರನ್ನು ಪೊಲೀಸರು ವಿಚಾರಣೆ ನಡೆಸಿದರು.

ಬೆಳಗ್ಗೆ 11 ಗಂಟೆಗೆ ಕಬ್ಬನ್ ಪಾರ್ಕ್ ಠಾಣೆಗೆ ಆಗಮಿಸಿದ ಸರ್ಜಾ ಅವರು ಮಧ್ಯಾಹ್ನ 2 ಗಂಟೆಗೆ ವಿಚಾರಣೆಗೆ ಮುಗಿಸಿ ತೆರಳಿದರು. ವಿಚಾರಣೆಯ ವೇಳೆ ಬಹುತೇಕ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಿ, ವಿಚಾರಣೆಗೆ ಸಹಕರಿಸಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಈ ಸಂಜೆಗೆ ತಿಳಿಸಿದ್ದಾರೆ. ಸರ್ಜಾ ಅವರೊಂದಿಗೆ ಸಂಬಂಧಿಕರಾದ ಧ್ರುವ ಸರ್ಜಾ, ಚಿರಂಜೀವಿ ಸರ್ಜಾ ಕೂಡ ಆಗಮಿಸಿದ್ದರು. ತನಿಖಾಧಿಕಾರಿ ಅಣ್ಣಯ್ಯ ರೆಡ್ಡಿ, ಎಸ್‍ಐ ರೇಣುಕಾ ಅವರು ಸರ್ಜಾ ಅವರನ್ನು ವಿಚಾರಣೆ ನಡೆಸಿದ್ದಾರೆ.

ವಿಸ್ಮಯ ಚಿತ್ರದ ಚಿತ್ರೀಕರಣದ ವೇಳೆ ನಟ ತನಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಬಹು ಭಾಷಾ ನಟಿಯೊಬ್ಬರು ಮೀ ಟೂ ಅಭಿಯಾನದಲ್ಲಿ ಆರೋಪಿಸಿದ್ದರು. ಅಲ್ಲದೇ ಈ ಬಗ್ಗೆ ಕಬ್ಬನ್ ಪಾರ್ಕ್ ಪೊಲೀಸರಿಗೆ ದೂರು ಕೂಡ ನೀಡಿದ್ದರು. ಅವರ ದೂರಿನಂತೆ ಸರ್ಜಾ ವಿರುದ್ಧ ಕಬ್ಬನ್ ಪಾರ್ಕ್ ಪೆಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿತ್ತು.

ಈಗಾಗಲೇ ದೂರು ಸಂಬಂಧ ಪೊಲೀಸರು ಕೃತ್ಯ ನಡೆದಿದೆ ಎನ್ನಲಾದ ಮೂರು ಸ್ಥಳಗಳಲ್ಲಿ ಮಹಜರು ಪ್ರಕ್ರಿಯೆ ನಡೆಸಿದ್ದರು. ನಟಿ ದೂರಿನಲ್ಲಿ ಪ್ರಸ್ತಾಪಿಸಿದ್ದ ಐವರು ಸಾಕ್ಷಿಗಳ ಹೇಳಿಕೆಯನ್ನು ಕೂಡ ಪೊಲೀಸರು ಪಡೆದುಕೊಂಡಿದ್ದಾರೆ. ವಿಸ್ಮಯ ಚಿತ್ರದ ನಿರ್ದೇಶಕ ಅರುಣ್ ವೈದ್ಯನಾಥನ್, ನಿರ್ಮಾಪಕ ಉಮೇಶ್, ಮೇಕಪ್ ಮ್ಯಾನ್ ಕಿರಣ್, ಸಹ ನಿರ್ದೇಶಕಿ ಮೋನಿಕಾ ಹಾಗೂ ಶೃತಿ ಸಹಾಯಕ ಬೋರೆಗೌಡ ಹೇಳಿಕೆಯನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ.  ತನಿಖೆ ಮುಂದುವರಿಸಿರುವ ಪೊಲೀಸರು ಅರ್ಜುನ್ ಸರ್ಜಾ ಅವರಿಗೆ ನೋಟಿಸ್ ನೀಡಿದ್ದರು. ಈ ಹಿನ್ನೆಲೆಯಲ್ಲಿ ಅರ್ಜುನ್ ಸರ್ಜಾ ಅವರು ಕಬ್ಬನ್ ಪಾರ್ಕ್ ಠಾಣೆಗೆ ಇಂದು ವಿಚಾರಣೆಗೆ ಹಾಜರಾದರು.

Facebook Comments