ದೀಪಾವಳಿಗೆ ಬೇಡ ಪಟಾಕಿ ಹಾವಳಿ, ಅಂಧಕಾರ ತರದಿರಲಿ ಬೆಳಕಿನ ಹಬ್ಬ

ಈ ಸುದ್ದಿಯನ್ನು ಶೇರ್ ಮಾಡಿ

Diwali-01

ದೀಪಗಳ ಹಬ್ಬ ದೀಪಾವಳಿ ಎಂದಾಕ್ಷಣ ಥಟ್ಟನೆ ನೆನಪಾಗುವುದು ಪಟಾಕಿ-ಸಿಡಿಮದ್ದುಗಳು, ಬಾಣ-ಬಿರುಸುಗಳು.. ಇದು ಆಚರಣೆ, ಸಂತೋಷ ಮತ್ತು ಸಂಭ್ರಮದ ಪ್ರತೀಕವಾದರೂ ಈ ಪಟಾಕಿಗಳು ಮತ್ತು ಬಾಣಬಿರುಸುಗಳಿಂದ ಸಂಭವಿಸಿರುವ ಅನಾಹುತ, ದುರಂತಗಳಿಗೆ ಲೆಕ್ಕವಿಲ್ಲ.ಭಾರೀ ಶಬ್ಧ ಮಾಡುವ ಅಪಾಯಕಾರಿ ಪಟಾಕಿಗಳನ್ನು ನಿಷೇಧಿಸಲಾಗಿದ್ದು, ಈ ಸಂಬಂಧ ಸ್ಫೋಟಕಗಳ ಕಾಯ್ದೆ ಮತ್ತು ನಿಯಮಗಳು ಎಂಬ ಕಾನೂನೇ ಇದ್ದರೂ ಅದು ಪರಿಣಾಮಕಾರಿಯಾಗಿ ಜಾರಿಯಾಗದಿರುವುದು ದುರದೃಷ್ಟಕರ. ಉತ್ತಮ ಗುಣಮಟ್ಟದ ಪಟಾಕಿಗಳು, ಸಿಡಿಮದ್ದುಗಳ ತಯಾರಿಕೆ, ಅವುಗಳ ಸಂಗ್ರಹ, ಅಪಾಯಕಾರಿ ಸಿಡಿಮದ್ದನ್ನು ಬಳಸದಿರುವಿಕೆ ಮುಂತಾದ ನಿಯಮಗಳನ್ನು ಯಾರೂ ಪಾಲಿಸುತ್ತಿಲ್ಲ.

ಈ ಕಾರಣದಿಂದ ಇಡೀ ವಾತಾವರಣ ಕಲುಷಿತಗೊಳ್ಳುತ್ತಿದೆ. ಆಸ್ತಮಾ ಮತ್ತು ಶ್ವಾಸಕೋಶಕ್ಕೆ ಸಂಬಂಧಪಟ್ಟ ರೋಗಗಳು ಈ ಸಂದರ್ಭದಲ್ಲಿ ಉಲ್ಬಣಿಸುತ್ತಿವೆ. ಇದರ ಜೊತೆಗೆ ಪಟಾಕಿಗಳ ಸ್ಫೋಟದಿಂದ ಉಂಟಾಗುವ ಹಾನಿಯನ್ನು ಕಡೆಗಣಿಸುವಂತಿಲ್ಲ. ಭಾರೀ ಶಬ್ದದ ಪಟಾಕಿ-ಸಿಡಿಮದ್ದುಗಳಿಂದ ಶ್ರವಣಶಕ್ತಿ ಕುಂದುತ್ತದೆ. ಅಜಾಗರೂಕತೆಯಿಂದ ಸುಟ್ಟಗಾಯಗಳಾಗುತ್ತವೆ. ಅಮೂಲ್ಯವಾದ ಕಣ್ಣುಗಳಿಗೆ ಹಾನಿಯಾಗುತ್ತದೆ. ರಸ್ತೆಗಳಲ್ಲಿ ಜನ ಮತ್ತು ವಾಹನ ಸಂಚಾರಕ್ಕೆ ಅಡ್ಡಿಯಾಗುತ್ತದೆ. ಸಾಕು ಪ್ರಾಣಿಗಳು ಹಿಂಸೆಗೆ ಒಳಗಾಗುತ್ತವೆ. ಹಾಗಾಗಿ ಒಂದಷ್ಟು ಮುನ್ನೆಚ್ಚರಿಕೆಗಳನ್ನು ಖಂಡಿತವಾಗಿ ವಹಿಸಬೇಕಾಗುತ್ತದೆ.

# ಸಲಹೆ, ಸೂಚನೆ ಮತ್ತು ಮುನ್ನೆಚ್ಚರಿಕೆ ” 
#ಮತಾಪು ಅಥವಾ ಪಟಾಕಿಗಳನ್ನು ಖರೀದಿಸುವಾಗ ಅವು ಒಳ್ಳೆಯ ಗುಣಮಟ್ಟದವು ಎಂಬುದನ್ನು ಖಚಿತಪಡಿಸಿಕೊಳ್ಳಿ.
#ಮಕ್ಕಳು ಪಟಾಕಿಗಳನ್ನು ಸಿಡಿಸುವಾಗ ಅವರ ಬಗ್ಗೆ ಗಮನವಿರಲಿ. ಚಿಕ್ಕ ಮಕ್ಕಳ ಬಗ್ಗೆ ವಿಶೇಷ ಎಚ್ಚರಿಕೆ ವಹಿಸಬೇಕು. ಒಮ್ಮೆ ಉಪಯೋಗಿಸಲ್ಪಟ್ಟ ಯಾವುದೇ ಬಗೆಯ ಮತಾಪುಗಳನ್ನು ಪುನ: ಹೊತ್ತಿಸಿ ನೋಡುವುದಕ್ಕೆ ಹೋಗಬಾರದು.
#ಮನೆಯೊಳಗೆ ಪಟಾಕಿಗಳನ್ನು ಸುಡುವ ಸಂಭ್ರಮ ಬೇಡ. ಭಾರೀ ಶಬ್ದ ಮಾಡುವ ಆಟಂಬಾಂಬ್‍ನಂಥ ಪಟಾಕಿಗಳನ್ನು ಸಿಡಿಸುವಾಗ ಕಿವಿಗೆ ಹತ್ತಿಯನ್ನು ಇಟ್ಟುಕೊಳ್ಳುವುದು ಕ್ಷೇಮಕರ. ಸುಪ್ರೀಂಕೋರ್ಟ್ ಆದೇಶ ಪಾಲನೆ ಅಗತ್ಯವಿದೆ.
#ಹೂಕುಂಡ, ಭೂಚಕ್ರ ಮುಂತಾದವುಗಳನ್ನು ಬೆಂಕಿ ಹಚ್ಚಿದ ನಂತರ ಆರಿ ಹೋಗಿರಬಹುದೆಂಬ ಆತುರದಲ್ಲಿ ಹೋಗಿ ಪರೀಕ್ಷೆ ಮಾಡುವುದು ಅಪಾಯಕಾರಿ.
#ಸಿಡಿಯುವ ಪಟಾಕಿಗಳನ್ನು ಕೈಯಲ್ಲಿ ಹಿಡಿದುಕೊಂಡು ಹೊತ್ತಿಸಲೇಬಾರದು. ರಾಕೆಟ್ ಪಟಾಕಿಗಳನ್ನು ಹಚ್ಚುವಾಗ ವಿಶೇಷ ಎಚ್ಚರಿಕೆ ಅಗತ್ಯ. ಅವು ನೇರವಾಗಿ ಮೇಲ್ಮುಖವಾಗಿ ಹಾರುವಂತಿರಬೇಕು. ಕೈಯಲ್ಲಿ ಹಿಡಿದು ಬೆಂಕಿ ಹಚ್ಚಬಾರದು.
#ಯಾವುದೇ ಬಗೆಯ ಪಟಾಕಿಗಳನ್ನು ಹೊತ್ತಿಸುವಾಗ ಹತ್ತಿ ಬಟ್ಟೆ ಧರಿಸುವುದು ಉತ್ತಮ ಪಟಾಕಿಗಳನ್ನು ಹಚ್ಚುವಾಗ ಚಪ್ಪಲಿಗಳನ್ನು ಧರಿಸಬೇಕು. ಕನ್ನಡಕ ಹಾಕಿಕೊಂಡರೆ ಇನ್ನೂ ಒಳಿತು. ಮನೆಯ ಮುಂಭಾಗದಲ್ಲಿ ನೀರಿನ ಬಕೆಟ್ ಹಾಗೂ ಮರಳನ್ನು ಇಟ್ಟುಕೊಳ್ಳುವುದು ಉಪಯುಕ್ತ. ದಾಸ್ತಾನು ಪಟಾಕಿಗಳನ್ನು  ಅಡುಗೆ ಮನೆ ಅಥವಾ ಪೂಜಾ ಕೊಠಡಿಗಳಲ್ಲಿ ಸಂಗ್ರಹಿ ಇಡಬೇಡಿ.ಮಕ್ಕಳ ಕೈಗೆ ಪಟಾಕಿಗಳು ಲಭ್ಯವಾಗದಂತೆ ಇಡಿ ಪಟಾಕಿಗಳನ್ನು ರಸ್ತೆಗಳ ಮೇಲೆ ಸ್ಫೋಟಿಸಬೇಡಿ ಹಾಗೂ ರಸ್ತೆಗಳ ಮೇಲೆ ಎಸೆಯಬೇಡಿ. ಏಕೆಂದರೆ ಇವು ದಾರಿಯಲ್ಲಿ ಹೋಗುವ ಮುಗ್ಧರನ್ನು ಗಾಯಗೊಳಿಸಬಹುದು.

#ಪಟಾಕಿಗಳನ್ನು ಹಚ್ಚಲು ಮುಕ್ತ ಮೈದಾನಗಳು ಉತ್ತಮ.
ಹಸುಳೆಗಳು, ವೃದ್ದರು ಮತ್ತು ರೋಗಿಗಳಿಗೆ ತೊಂದರೆಯಾಗದಂತೆ ದೀಪಾವಳಿ ಆಚರಿಸಿ.ಪಟಾಕಿಗಳನ್ನು ಹಚ್ಚುವಾಗ ಬೆಳಕಿನ ಮೇಲೆ ಬಾಗಬೇಡಿ. ಪಟಾಕಿಗಳನ್ನು ಸದಾ ಎತ್ತರದ ಮಟ್ಟದಲ್ಲಿ ಇರಿಸಿ. ಹಚ್ಚಿದ ಪಟಾಕಿಗಳನ್ನು ಪರಸ್ಪರ ಎಸೆದಾಡುವುದು ಅಪಾಯಕಾರಿ, ಹುಡುಗಾಟ ಖಂಡಿತ ಬೇಡ.ಪಟಾಕಿಗಳನ್ನು ಒಂದೆಡೆ ಸೇರಿಸಿ ಅದನ್ನು ಒಟ್ಟಿಗೆ ಹಚ್ಚಲು ಎಂದೂ ಪ್ರಯತ್ನಿಸಬೇಡಿ.ಶಬ್ಧ ಹೊಮ್ಮಿಸುವ ಪಟಾಕಿಗಳನ್ನು ಹಚ್ಚುವಾಗ ಉದ್ದವಾದ ಗಂಧದ ಕಡ್ಡಿ ಬಳಸಿ.ಭಾರಿ ಶಬ್ಧ ಹೊಮ್ಮಿಸುವ ದೊಡ್ಡ ಪಟಾಕಿಯನ್ನು ಹಚ್ಚಿ ಅದರ ಮೇಲೆ ಖಾಲಿ ಡಬ್ಬ ಇಡಬೇಡಿ.125 ಡೆಸಿಬಲ್‍ಗಿಂತ ಕಡಿಮೆ ಶಬ್ಧದ ಪಟಾಕಿ ಸಿಡಿಸಬೇಕು.

#ಪಟಾಕಿಯ ದುಷ್ಪರಿಣಾಮಗಳು
ಪಟಾಕಿಗಳು ಹೊರ ಸೂಸುವ ನೈಟ್ರಸ್ ಆಕ್ಸೈಡ್ ಹಾಗೂ ಸಲ್ಫರ್ ಡೈ ಆಕ್ಸೈಡ್‍ನಿಂದಾಗಿ ವಾತಾವರಣದ ಮಾಲಿನ್ಯದ ಮಟ್ಟ ಶೇ.10ರಿಂದ ಶೇ.15ರಷ್ಟು ಹೆಚ್ಚಾಗುತ್ತದೆ.ವಾಯು ಮಾಲಿನ್ಯದಿಂದ ಅಸ್ತಮಾ, ಶ್ವಾಸಕೋಶ ಸಮಸ್ಯೆ ಇತ್ಯಾದಿಗೆ ಕಾರಣವಾಗುತ್ತದೆ.ಶಬ್ಧ ಮಾಲಿನ್ಯ ಇದರಿಂದ ಒಂದು ವರ್ಷದ ಕೆಳಗಿನ ಮಕ್ಕಳಿಗೆ, ವೃದ್ಧರಿಗೆ ಹಾಗೂ ಸಾಕು ಪ್ರಾಣಿಗಳಿಗೂ ಹಾನಿಕಾರಕ.ಪಟಾಕಿಯಿಂದ ದೃಷ್ಟಿ ನಾಶ, ಕೈಕಾಲುಗಳಿಗೆ ಗಾಯ ಹಾಗೂ ಜೀವಕ್ಕೂ ಸಂಚಕಾರ ಬರಬಹುದು.
#ಸಲಹೆ
ದೀಪಾವಳಿ ಬೆಳಕಿನ ಹಬ್ಬವಾಗಬೇಕೇ ಹೊರತು ಅಂಧಕಾರವಾಗಬಾರದು. ಮಣ್ಣಿನ ದೀಪ ಹಚ್ಚಿ ದೀಪಾವಳಿ ಆಚರಿಸಿ. ಶಬ್ದರಹಿತ ಮತ್ತು ಪರಿಸರ ಮಾಲಿನ್ಯ ರಹಿತ ದೀಪಾವಳಿ ಆಚರಿಸಿ.

Facebook Comments