ದುನಿಯಾ ವಿಜಿ ಪತ್ನಿ ನಾಗರತ್ನಾಗೆ ಜಾಮೀನು ಮಂಜೂರು ಮಾಡಿದ ಕೋರ್ಟ್

ಈ ಸುದ್ದಿಯನ್ನು ಶೇರ್ ಮಾಡಿ

Nagaranta--01
ಬೆಂಗಳೂರು. ನ. 05 ; ದುನಿಯಾ ವಿಜಯ್ ಅವರ ಪತ್ನಿ ನಾಗರತ್ನಾಗೆ ಕೋರ್ಟ್ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ. ನಗರ ಸಿವಿಲ್ ಕೋರ್ಟ್ ನ್ಯಾಯಾಧೀಶ ಜಕಾತಿ ಅವರು ನಾಗರತ್ನಗೆ ಮಧ್ಯಂತರ ನಿರೀಕ್ಷಣಾ ಜಾಮೀನು ಕೊಟ್ಟಿದ್ದಾರೆ. 50 ಸಾವಿರ ಬಾಂಡ್ ಹಾಗೂ ಒಬ್ಬರ ಶೂರಿಟಿ ಪಡೆದು ಷರತ್ತಿನ ಮೇಲೆ ಜಾಮೀನು ಕೊಡಲಾಗಿದೆ. ಪೊಲೀಸರು ಕರೆದರೆ ವಿಚಾರಣೆಗೆ ಹಾಜರಾಗಬೇಕು ಎಂದು ಕೋರ್ಟ್ ಷರತ್ತು ವಿಧಿಸಿದ್ದು, ಮುಂದಿನ ವಿಚಾರಣೆಯನ್ನು ನ. 12ಕ್ಕೆ ಮುಂದೂಡಿದೆ.

ಆದರೆ, ಇದು ಕೇವಲ ಮಧ್ಯಂತರ ಆದೇಶವಾಗಿದ್ದು, ನಿರೀಕ್ಷಣಾ ಜಾಮೀನು ಅರ್ಜಿಯ ಅಂತಿಮ ಆದೇಶ ಬರುವವರೆಗಷ್ಟೇ ಅನ್ವಯವಾಗುತ್ತದೆ. ನಟ ದುನಿಯಾ ವಿಜಯ್ ಹಾಗೂ ಅವರ ಮೊದಲ ಪತ್ನಿ ನಾಗರತ್ನ ನಡುವಿನ ರಂಪಾಟದಲ್ಲಿ ಗಿರಿನಗರ ಪೊಲೀಸ್ ಠಾಣೆಯಲ್ಲಿ ನಾಗರತ್ನ ವಿರುದ್ಧ ವಿಜಿ ಎರಡನೇ ಪತ್ನಿ ಕೀರ್ತಿಗೌಡ ದೂರು ನೀಡಿದ್ದರು.

ಈ ಹಿನ್ನೆಲೆಯಲ್ಲಿ ನಾಗರತ್ನ ನಿರೀಕ್ಷಣಾ ಜಾಮೀನು ಕೋರಿ ಕೋರ್ಟ್ ಮೆಟ್ಟಿಲೇರಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು 60 ನೇ ಸೆಷನ್ಸ್ ಕೋರ್ಟ್ ನಲ್ಲಿ ನಾಗರತ್ನ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ ನಡೆಯಿತು. ಬಂಧನದ ಭೀತಿಯಲ್ಲಿ ಅಜ್ಞಾತವಾಸದಲ್ಲಿದ್ದ ನಾಗರತ್ನಾಗೆ ಇದೀಗ ನಿರೀಕ್ಷಣಾ ಜಾಮೀನು ದೊರೆತಿರುವ ಹಿನ್ನೆಲೆಯಲ್ಲಿ ಅವರು ಪೊಲೀಸ್ ವಿಚಾರಣೆಗೆ ಹಾಜರಾಗುವ ಸಾಧ್ಯತೆ ಇದೆ.

Facebook Comments