3 ಲೋಕಸಭೆ ಹಾಗೂ 2 ವಿಧಾನಸಭಾ ಉಪಚುನಾವಣೆ ಫಲಿತಾಂಶ (Live Updates )

ಈ ಸುದ್ದಿಯನ್ನು ಶೇರ್ ಮಾಡಿ

Live-Election

# ಬಳ್ಳಾರಿ (ಲೋಕಸಭಾ ಕ್ಷೇತ್ರ ): ಶೇ.63.85 ಮತದಾನ

Ugrappa-and-Shanta-Ballary
ಜೆ ಶಾಂತ (ಬಿಜೆಪಿ) : ಸೋಲು  – 360608
ವಿ.ಎಸ್.ಉಗ್ರಪ್ಪ (ಕಾಂಗ್ರೆಸ್) : ಗೆಲುವು  – 588863

# ಶಿವಮೊಗ್ಗ (ಲೋಕಸಭಾ ಕ್ಷೇತ್ರ) : ಶೇ.61.05 ಮತದಾನ

Raghavendra-Madhu
ಬಿ.ವೈ. ರಾಘವೇಂದ್ರ (ಬಿಜೆಪಿ) : ಗೆಲುವು  – 547956
ಮಧು ಬಂಗಾರಪ್ಪ (ಜೆಡಿಎಸ್) : ಸೋಲು  -490788

# ರಾಮನಗರ (ವಿಧಾನಸಭಾ ಕ್ಷೇತ್ರ ) ಶೇ. 71.88 ಮತದಾನ

Anitha-Kumaraswamy-Ramanaga
ಅನಿತಾ ಕುಮಾರಸ್ವಾಮಿ (ಜೆಡಿಎಸ್) : ಗೆಲುವು -125043
ಚಂದ್ರಶೇಖರ್ (ಬಿಜೆಪಿ) : ಸೋಲು  -15906

# ಮಂಡ್ಯ (ಲೋಕಸಭಾ ಕ್ಷೇತ್ರ) : ಶೇ. 53.93 ಮತದಾನ

Mandya--01
ಎಲ್ ಆರ್.ಶಿವರಾಮೇಗೌಡ(ಜೆಡಿಎಸ್ ) : ಗೆಲುವು  -494728
ಡಾ.ಸಿದ್ದರಾಮಯ್ಯ (ಬಿಜೆಪಿ) : ಸೋಲು  -205357

# ಜಮಖಂಡಿ (ವಿಧಾನಸಭಾ ಕ್ಷೇತ್ರ ) : ಶೇ. 77.17 ಮತದಾನ

Jamakhandi--01
ಆನಂದ್  ನ್ಯಾಮೇಗೌಡ (ಕಾಂಗ್ರೆಸ್):  ಗೆಲುವು -97013
ಶ್ರೀಕಾಂತ್ ಕುಲಕರ್ಣಿ (ಬಿಜೆಪಿ) : ಸೋಲು  -57529

#Live Updates

#  ಜಮಖಂಡಿಯಲ್ಲಿ ಗೆಲುವಿನ ನಗೆ ಬೀರಿದ ‘ಕೈ’ ಅಭ್ಯರ್ಥಿ ಆನಂದ್ ಹೇಳಿದ್ದೇನು..?

Anand--01
ಜಮಖಂಡಿ, ನ.6- ನಮ್ಮ ತಂದೆಯವರು ಮಾಡಿದ ಸಾಧನೆಗಳು ಅನುಕಂಪ ನನ್ನ ಕೈ ಹಿಡಿದಿದೆ. ನನ್ನ ಗೆಲುವಿಗೆ ಶ್ರೀರಕ್ಷೆಯಾಗಿದೆ ಎಂದು ಜಮಖಂಡಿ ವಿಧಾನಸಭಾ ಕ್ಷೇತ್ರದಲ್ಲಿ ಜಯಗಳಿಸಿದ ಕಾಂಗ್ರೆಸ್ ಅಭ್ಯರ್ಥಿ ಆನಂದ್ ನ್ಯಾಮೇಗೌಡ ಹೇಳಿದರು. ಚುನಾವಣಾ ಫಲಿತಾಂಶದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ತಂದೆಯವರ ಎಲ್ಲ ಕನಸುಗಳನ್ನು ನಾನು ಈಡೇರಿಸುತ್ತೇನೆ. ಜಮಖಂಡಿ ಕ್ಷೇತ್ರದ ಜನರ ಆಶಯದಂತೆ ಕೆಲಸ ನಿರ್ವಹಿಸುತ್ತೇನೆ ಎಂದು ಹೇಳಿದರು.

ಚಿಕ್ಕಪಡಸಲಗಿ ಬ್ಯಾರೇಜ್ ಸೇರಿದಂತೆ ಹಲವು ಬ್ಯಾರೇಜ್‍ಗಳನ್ನು ನಿರ್ಮಾಣ ಮಾಡಿ ಇಲ್ಲಿನ ಜನರ ಅಭಿವೃದ್ಧಿಗೆ ನಮ್ಮ ತಂದೆಯವರು ನೆರವಾಗಿದ್ದರು. ಅಕಾಲಿಕ ಮರಣಕ್ಕೀಡಾಗಿದ್ದರಿಂದ ಅನಿವಾರ್ಯವಾಗಿ ಚುನಾವಣೆ ಎದುರಾಗಿತ್ತು. ಕಾಂಗ್ರೆಸ್ ಪಕ್ಷ ನನ್ನನ್ನು ಗುರುತಿಸಿ ನನಗೆ ಟಿಕೆಟ್ ನೀಡಿತ್ತು. ನಮ್ಮ ತಂದೆಯವರು ಮಾಡಿದ ಅಭಿವೃದ್ಧಿ ಕೆಲಸಗಳು, ಕಳೆದ ಬಾರಿ ಕಾಂಗ್ರೆಸ್ ಮಾಡಿದ ಜನಪರ ಕೆಲಸಗಳು, ಮೈತ್ರಿ ಸರ್ಕಾರದ ಜನಪರ ಕಾರ್ಯಗಳ ಹಿನ್ನೆಲೆಯಲ್ಲಿ ನಮಗೆ ಮತ ನೀಡಿ ಅಪಾರ ಬಹುಮತಗಳಿಂದ ಗೆಲುವು ಸಾಧಿಸಲು ಕಾರಣರಾಗಿದ್ದಾರೆ.  ಆ ಜನತೆಯ ಋಣ ತೀರಿಸುತ್ತೇನೆ. ನನ್ನ ಗೆಲುವಿಗೆ ಸಹಕರಿಸಿದ ಡಾ.ಜಿ.ಪರಮೇಶ್ವರ್, ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ಮುಖ್ಯಮಂತ್ರಿ ಕುಮಾರಸ್ವಾಮಿ ಸೇರಿದಂತೆ ಸ್ಥಳೀಯ ಎಲ್ಲ ಮುಖಂಡರಿಗೂ ನಾನು ಕೃತಜ್ಞತೆ ಸಲ್ಲಿಸುವುದಾಗಿ ಅವರು ಹೇಳಿದರು.

#  ರಾಮನಗರದಲ್ಲಿ ಇತಿಹಾಸ ಸೃಷ್ಟಿಸಿದ ಅನಿತಾ ಕುಮಾರಸ್ವಾಮಿ

Anitha--01
ಬೆಂಗಳೂರು, ಸೆ.6-ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಪತ್ನಿ ಹಾಗೂ ಮಾಜಿ ಶಾಸಕಿ ಅನಿತಾ ಕುಮಾರಸ್ವಾಮಿ ಅವರು ರಾಮನಗರ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಭಾರೀ ಬಹುಮತದ ಮೂಲಕ ಚುನಾಯಿತರಾಗಿ ಹೊಸ ಇತಿಹಾಸ ಸೃಷ್ಟಿಸಿದ್ದಾರೆ.ರಾಮನಗರ ವಿಧಾನಸಭಾ ಕ್ಷೇತ್ರದಲ್ಲಿ ಮಹಿಳಾ ಅಭ್ಯರ್ಥಿಯಾಗಿ ಸ್ಪರ್ಧಿಸಿ ಮೊದಲ ಬಾರಿಗೆ ಚುನಾಯಿತರಾಗಿ ದಾಖಲೆ ಮಾಡಿದ್ದಾರೆ. ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಅನಿತಾ ಕುಮಾರಸ್ವಾಮಿ ಆರಂಭದಿಂದಲೂ ನಿರಂತರವಾಗಿ ಮುನ್ನಡೆ ಕಾಯ್ದುಕೊಂಡು ಬಂದಿದ್ದರು.

ಅನಿತಾ ಕುಮಾರಸ್ವಾಮಿ ಜಯಭೇರಿ ಬಾರಿಸುವ ಮೂಲಕ ರಾಮನಗರ ಕ್ಷೇತ್ರವನ್ನು ಮತ್ತೆ ಉಳಿಸಿಕೊಂಡಿದ್ದಲ್ಲದೆ ಜೆಡಿಎಸ್‍ನ ಭದ್ರಕೋಟೆ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ.ಈ ಬಾರಿಯ ವಿಧಾನಸಭೆಯಲ್ಲಿ ಜೆಡಿಎಸ್‍ನ ಏಕೈಕ ಮಹಿಳಾ ಶಾಸಕಿಯೂ ಆಗಿದ್ದಾರೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಮಧುಗಿರಿ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಸ್ಪರ್ಧಿಸಿ ಚುನಾಯಿತರಾಗಿದ್ದರು. ನಂತರ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿ ಸೋಲಿನ ಅನುಭವವನ್ನೂ ಪಡೆದಿದ್ದರು. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ರಾಮನಗರ, ಚನ್ನಪಟ್ಟಣ ಎರಡೂ ಕ್ಷೇತ್ರಗಳಲ್ಲಿ ಚುನಾಯಿತರಾಗಿದ್ದರು. ಆದರೆ ಚನ್ನಪಟ್ಟಣ ಕ್ಷೇತ್ರವನ್ನು ಉಳಿಸಿಕೊಂಡು ರಾಮನಗರ ಕ್ಷೇತ್ರದ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಚುನಾವಣಾ ಆಯೋಗ ಉಪ ಚುನಾವಣೆ ನಡೆಸಿತು.

ಈ ಉಪ ಚುನಾವಣೆಯಲ್ಲಿ ಕಾಂಗ್ರೆಸ್, ಜೆಡಿಎಸ್ ಚುನಾವಣಾಪೂರ್ವ ಮೈತ್ರಿ ಮಾಡಿಕೊಂಡು ರಾಮನಗರ ಕ್ಷೇತ್ರದಲ್ಲಿ ಉಭಯ ಪಕ್ಷಗಳ ಒಮ್ಮತದ ಅಭ್ಯರ್ಥಿಯಾಗಿ ಅನಿತಾ ಕುಮಾರಸ್ವಾಮಿ ಅವರನ್ನು ಕಣಕ್ಕಿಳಿಸಲಾಗಿತ್ತು. ಆದರೆ ವಿರೋಧ ಪಕ್ಷವಾದ ಬಿಜೆಪಿ, ಕಾಂಗ್ರೆಸ್ ಮುಖಂಡ ಎಲ್. ಚಂದ್ರಶೇಖರ್ ಅವರನ್ನು ಪಕ್ಷಕ್ಕೆ ಸೇರ್ಪಡೆಮಾಡಿಕೊಂಡು ತನ್ನ ಅಭ್ಯರ್ಥಿಯಾಗಿ ಕಣಕ್ಕಿಳಿಸಿತ್ತು. ಮತದಾನಕ್ಕೂ ಮುನ್ನ ಚಂದ್ರಶೇಖರ್ ಚುನಾವಣಾ ಕಣದಿಂದ ನಿವೃತ್ತಿ ಘೋಷಿಸಿದ್ದಲ್ಲದೆ ಕಾಂಗ್ರೆಸ್‍ಗೆ ಮರಳಿ ಗೊಂದಲ ಸೃಷ್ಟಿ ಮಾಡಿದ್ದರು. ಬಿಜೆಪಿಗೆ ದೊಡ್ಡ ಆಘಾತವನ್ನೇ ನೀಡಿದ್ದರು. ಹೀಗಾಗಿ ರಾಮನಗರ ಕ್ಷೇತ್ರದಲ್ಲಿ ತೀವ್ರ ಪ್ರತಿಸ್ಪರ್ಧೆ ಇಲ್ಲದಂತಾಗಿತ್ತು.

# ನಿರೀಕ್ಷೆಯಂತೆ ಮಂಡ್ಯ ಜಿಲ್ಲೆಯ ಜನ ಆಶೀರ್ವಾದ ಮಾಡಿದ್ದಾರೆ :
ಮಂಡ್ಯ, ನ.6-ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸಂದರ್ಭದಲ್ಲಿ ಯಾವ ನಿರೀಕ್ಷೆ ಇಟ್ಟುಕೊಂಡಿದ್ದೆವೋ ಆ ನಿರೀಕ್ಷೆಯಂತೆ ಮಂಡ್ಯ ಜಿಲ್ಲೆಯ ಜನ ಆಶೀರ್ವಾದ ಮಾಡಿದ್ದಾರೆ ಎಂದು ಎಲ್.ಆರ್.ಶಿವರಾಮೇಗೌಡ ಸಂತಸ ಹಂಚಿಕೊಂಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೋಕಸಭೆ ಚುನಾವಣೆಗೆ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಮಾಡಿಕೊಂಡು ತಮ್ಮನ್ನು ಅಭ್ಯರ್ಥಿಯನ್ನಾಗಿ ಘೋಷಣೆ ಮಾಡಲಾಗಿತ್ತು. ಆಗಿನ ನಿರೀಕ್ಷೆ ಹುಸಿಯಾಗಲಿಲ್ಲ ಎಂದರು.

ಜಿಲ್ಲೆಯ ಜ್ವಲಂತ ಸಮಸ್ಯೆಗಳನ್ನು ನಿವಾರಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ¸ ಕ್ರಮ ವಹಿಸಿದ್ದಾರೆ. ಅದಕ್ಕಾಗಿ ಬಜೆಟ್‍ನಲ್ಲಿ ಜಿಲ್ಲೆಗೆ 200 ಕೋಟಿ ಮೀಸಲಿರಿಸಿದ್ದಾರೆ ಎಂದರು.ನಾನು ಕೆಲವೇ ತಿಂಗಳ ಅವಧಿಗೆ ಆಯ್ಕೆಯಾಗಿದ್ದೇನೆ. ಆ ಅವಧಿಯಲ್ಲಿ ಏನು ಮಾಡಬೇಕೋ ಆ ಎಲ್ಲಾ ಕೆಲಸವನ್ನು ಪೂರ್ಣಗೊಳಿಸಲು ಶ್ರಮಿಸುತ್ತೇನೆ ಎಂದು ಭರವಸೆ ನೀಡಿದರು. ಜಿಲ್ಲಾ ಉಸ್ತುವಾರಿ ಸಚಿವ ಪುಟ್ಟರಾಜು, ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ, ಜೆಡಿಎಸ್ ಜಿಲ್ಲಾಧ್ಯಕ್ಷ ರಮೇಶ್ ಮತ್ತಿತರರಿದ್ದರು.

#  ‘ಶ್ರೀರಾಮುಲು ಅಣ್ಣನಿಗೆ ಧನ್ಯವಾದಗಳು’ : ಡಿ.ಕೆ.ಶಿವಕುಮಾರ್

DK-Shivakumar
ಬೆಂಗಳೂರು, ನ.6-ಚುನಾವಣೆಯಲ್ಲಿ ಸೋಲು, ಗೆಲುವು ಮುಖ್ಯವಲ್ಲ. ಬಳ್ಳಾರಿಯಲ್ಲಿ ಯಾವುದೇ ಸಂಘರ್ಷ ಇಲ್ಲದೆ ಶಾಂತಿಯುತ ಚುನಾವಣೆ ನಡೆಯಲು ಸಹಕರಿಸಿದ ಶ್ರೀರಾಮುಲು ಅಣ್ಣ ಅವರಿಗೆ ಅಭಿನಂದನೆ ಹೇಳುವುದಾಗಿ ಬಳ್ಳಾರಿ ಜಿಲ್ಲೆಯ ಉಸ್ತುವಾರಿ ಸಚಿವ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ. ಉಪಚುನಾವಣೆ ಫಲಿತಾಂಶದ ಬಳಿಕ ಬೆಂಗಳೂರಿನ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ನನಗೆ ನೀಡಿದ ಜವಾಬ್ದಾರಿಯನ್ನು ನಾನು ನಿಭಾಯಿಸಿದ್ದೇನೆ ಎಂದು ಹೇಳಿದರು.

ಚುನಾವಣೆಯ ಆರಂಭದಲ್ಲಿ ಶ್ರೀರಾಮುಲು ಅವರು ಶಾಂತಕ್ಕ ಪಾರ್ಲಿಮೆಂಟ್‍ಗೆ, ಡಿ.ಕೆ.ಶಿವಕುಮಾರ್ ಜೈಲಿಗೆ ಎಂದು ಹೇಳಿಕೊಂಡಿದ್ದರು. ಈಗ ಯಾರು ಎಲ್ಲಿಗೆ ಹೋಗಿದ್ದಾರೆ ಎಂದು ಜನ ತೀರ್ಮಾನಿಸಿದ್ದಾರೆ. ಹಣ, ಹೆಂಡ ಹಂಚಿ ಕಾಂಗ್ರೆಸ್ ಗೆದ್ದಿದೆ ಎಂದು ಫಲಿತಾಂಶದ ನಂತರ ಆರೋಪಿಸಲಾಗುತ್ತಿದೆ. ಬಿಜೆಪಿಯವರಿಗೆ ಮಾಹಿತಿ ಇದ್ದರೆ ಆರಂಭದಲ್ಲೇ ದೂರು ಕೊಟ್ಟು ಹಣ, ಹೆಂಡ ಹಂಚುವವರನ್ನು ಹಿಡಿಸಬಹುದಿತ್ತು. ಕಾಲ ಕಾಲಕ್ಕೆ ಪ್ರಚೋದನಾತ್ಮಕವಾಗಿ ಮಾತನಾಡಿ, ನಮ್ಮನ್ನು ಕೆರಳಿಸುವ ಪ್ರಯತ್ನ ಮಾಡಿದರು. ಆದರೆ ನಾವು ಅತ್ಯಂತ ಸಂಯಮದಿಂದ ವರ್ತಿಸಿದ್ದೇವೆ. ನಮ್ಮ ಕಾರ್ಯಕರ್ತರಿಗೂ ಕೂಡ ಶಾಂತಿ ರೀತಿಯಿಂದಿರಲು ಮನವಿ ಮಾಡಿಕೊಂಡಿದ್ದೆ.

DK-Shivakumar-02

ಚುನಾವಣೆಯಲ್ಲಿ ಸೋಲು-ಗೆಲುವು ಸಾಮಾನ್ಯ. ಈಗ ನಾವು ಗೆದ್ದಿರಬಹುದು, ಅವರು ಸೋತಿರಬಹುದು. ಅದು ಮುಖ್ಯವಲ್ಲ. ಒಂದು ಸಣ್ಣ ಘರ್ಷಣೆಯೂ ಆಗದಂತೆ ಶಾಂತಿಯುತವಾಗಿ ಚುನಾವಣೆ ನಡೆಯಲು ಶ್ರೀರಾಮುಲು ಅಣ್ಣ ಸಹಕರಿಸಿದ್ದಾರೆ, ಅದಕ್ಕಾಗಿ ಅವರಿಗೆ ಧನ್ಯವಾದ ಹೇಳುತ್ತೇನೆ ಎಂದರು. ಬಳ್ಳಾರಿ ವಿಷಯದಲ್ಲಿ ನನ್ನ ಬಾಂಬ್ ಒಂದೇ. ಅದು ಅಭಿವೃದ್ಧಿಯ ಬಾಂಬ್. ಬಳ್ಳಾರಿಯಲ್ಲಿ ಹಲವಾರು ರೀತಿಯ ಸವಾಲುಗಳಿವೆ. ಶುದ್ಧ ಕುಡಿಯುವ ನೀರು, ನಿರುದ್ಯೋಗ, ಜನರ ವಲಸೆ, ಧೂಳು ಸೇರಿ ಸಾಕಷ್ಟು ಸಮಸ್ಯೆಗಳಿವೆ. ಪರಿಹಾರ ಮಾಡಲು ಅವಕಾಶಗಳಿವೆ. 371(ಜೆ) ವಿಶೇಷ ಸ್ಥಾನಮಾನವನ್ನು ಸಮರ್ಥವಾಗಿ ಬಳಸಿಕೊಳ್ಳಬೇಕಿದೆ. ನಾನು ಅದರತ್ತ ಗಮನ ಕೊಡುತ್ತೇನೆ ಎಂದರು.

ಬಳ್ಳಾರಿಯ ಜನ ಜಾತಿ, ಧರ್ಮದ ಭೇದ ಬಿಟ್ಟು ಚುನಾವಣೆ ನಡೆಸಿದ್ದಾರೆ. ಉಗ್ರಪ್ಪ ಅವರು ರಾಜ್ಯ ಮತ್ತು ಕೇಂದ್ರ ಸರ್ಕಾರದಲ್ಲಿ ನಮ್ಮ ಧ್ವನಿಯಾಗುತ್ತಾರೆ ಎಂಬ ವಿಶ್ವಾಸವಿಟ್ಟಿದ್ದಾರೆ. ಉಗ್ರಪ್ಪ ಅವರನ್ನು ಅಭ್ಯರ್ಥಿ ಮಾಡಬೇಕು ಎಂದು ಪ್ರಸ್ತಾಪಿಸಿದ್ದೇ ನಾನು. ಅದಕ್ಕೆ ರಾಹುಲ್‍ಗಾಂಧಿ ಸೇರಿದಂತÉ ಕಾಂಗ್ರೆಸ್‍ನ ಎಲ್ಲಾ ನಾಯಕರು ಸಹಕಾರ ನೀಡಿದರು ಎಂದು ಹೇಳಿದರು.

ಡಿ.ಕೆ.ಶಿವಕುಮಾರ್ ಜೈಲಿಗೆ ಹೋಗುತ್ತಾರೆ ಎಂದು ಶ್ರೀರಾಮುಲು ಅಣ್ಣ ಜರ್ಜ್‍ಮೆಂಟ್ ನೀಡಿದ್ದರು. ಅವರ ಹೇಳಿಕೆ ನೋಡಿ ನನಗೆ ಆಶ್ಚರ್ಯವಾಗಿತ್ತು. ಶ್ರೀರಾಮುಲು ಯಾವಾಗ ನ್ಯಾಯಾಧೀಶರಾದರು? ಇತ್ತೀಚೆಗೆ 12 ಜನ ನ್ಯಾಯಾಧೀಶರು ಪ್ರಮಾಣವಚನ ಸ್ವೀಕರಿಸಿದಾಗ ಶ್ರೀರಾಮುಲು ಕೂಡ ಪ್ರಮಾಣ ವಚನ ತೆಗೆದುಕೊಂಡಿದ್ದರೆ ಎಂದು ಅನುಮಾನ ಕಾಡಿತ್ತು ಎಂದು ಡಿ.ಕೆ.ಶಿವಕುಮಾರ್ ಲೇವಡಿ ಮಾಡಿದರು. ರಾಜಕಾರಣದಲ್ಲಿ ಯಾವುದೂ ಶಾಶ್ವತವಲ್ಲ. ಈಗ ನಮ್ಮ ಹಣೆಬರಹವನ್ನೇ ಜನ ನೋಡುತ್ತಿದ್ದಾರೆ. ಬಿಜೆಪಿ ಆಪರೇಷನ್ ಕಮಲ ಮಾಡುತ್ತೇವೆ, ಸರ್ಕಾರ ರಚಿಸುತ್ತೇವೆ ಎಂದು ಬ್ಯಾಗ್ ನೇತುಹಾಕಿಕೊಂಡು ತಿರುಗಾಡುತ್ತಿದೆ. ನಾವು ಯಾವುದೇ ಆಪರೇಷನ್ ನಡೆಸುವುದಿಲ್ಲ, ಬಿಜೆಪಿಯವರು ಏನು ಮಾಡುತ್ತಾರೋ ಮಾಡಲಿ ಕಾದು ನೋಡುತ್ತೇವೆ ಎಂದರು.

# ಮಂಡ್ಯದಲ್ಲಿ ಅಂಬರೀಶ್ ದಾಖಲೆ ಮುರಿದ ಶಿವರಾಮೇಗೌಡ
ಮಂಡ್ಯ, ನ.6- ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಅತ್ಯಧಿಕ ಮತಗಳನ್ನು ಪಡೆದಿರುವ ಮೈತ್ರಿ ಅಭ್ಯರ್ಥಿ ಎಲ್.ಆರ್.ಶಿವರಾಮೇಗೌಡ ಹಿಂದಿನ ದಾಖಲೆಯನ್ನು ಮುರಿದಿದ್ದಾರೆ. ಕಳೆದ 1998ರ ಲೋಕಸಭೆ ಚುನಾವಣೆಯಲ್ಲಿ ಅಂಬರೀಶ ಅವರು 1.80 ಲಕ್ಷ ಮತ ಪಡೆದು ಜಯ ಸಾಧಿಸಿದ್ದು ದಾಖಲೆಯಾಗಿತ್ತು. ಈ ಬಾರಿ ಎಲ್.ಆರ್.ಶಿವರಾಮೇಗೌಡ ಅವರು ಈ ದಾಖಲೆ ಸರಿಗಟ್ಟಿದ್ದು, ಎಂಟು ಸುತ್ತು ಎಣಿಕೆ ಮುಗಿಯುವಷ್ಟರಲ್ಲೇ 2 ಲಕ್ಷಕ್ಕೂ ಅಧಿಕ ಮತಗಳಿಸಿದ್ದಾರೆ.  ಎಲ್.ಆರ್.ಶಿವರಾಮೇಗೌಡ ಸ್ಪರ್ಧಿಸಿರುವ ಒಟ್ಟು 9 ಚುನಾವಣೆಗಳಲ್ಲಿ ಎರಡು ಬಾರಿ ಗೆಲುವು ಕಂಡಿದ್ದಾರೆ. ಜನಜಂಗುಳಿ ಇಲ್ಲ: ಮಂಡ್ಯ ಬಾಲಕರ ಕಾಲೇಜಿನಲ್ಲಿ ನಡೆಯುತ್ತಿರುವ ಮತ ಎಣಿಕೆಯ ಫಲಿತಾಂಶ ವೀಕ್ಷಿಸಲು ಕಾರ್ಯಕರ್ತರಾಗಲಿ, ಅಭಿಮಾನಿಗಳಾಗಲಿ ಇಲ್ಲದೆ ಖಾಲಿ ಖಾಲಿಯಾಗಿತ್ತು.ಚುನಾವಣಾ ಫಲಿತಾಂಶದ ಹಿನ್ನೆಲೆಯಲ್ಲಿ ಭಾರೀ ಜನಸ್ತೋಮ ಸೇರುವ ಕಾರಣದಿಂದ ಜಿಲ್ಲಾಧಿಕಾರಿ ಮಂಜುಶ್ರೀ ಅತ್ಯಧಿಕ ಪೊಲೀಸರನ್ನು ಭದ್ರತೆಗೆ ನೇಮಿಸಿದ್ದರು.

ಆದರೆ, ಬೆಳಗಿನಿಂದ ಮತ ಎಣಿಕೆ ಕೇಂದ್ರದ ಬಳಿ ಜನರೇ ಇಲ್ಲದೆ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿ ನಿರಾಳರಾಗಿದ್ದು, ಮೊಬೈಲ್‍ನೊಂದಿಗೆ ಕಾಲ ಕಳೆಯಲುವಂತಾಗಿತ್ತು. ಜಿದ್ದಾಜಿದ್ದಿನ ರಾಜಕಾರಣಕ್ಕೆ ಹೆಸರಾಗಿದ್ದ ಜಿಲ್ಲೆಯಲ್ಲಿ ಪ್ರತಿದಿನ ರಾಜಕೀಯ ವಿಚಾರಗಳೇ ಕೇಳಿಬರುತ್ತಿದ್ದ ವಾತಾವರಣವಿದ್ದರೂ ಇಂದು ಬಾಲಕರ ಕಾಲೇಜು ಮುಂಭಾಗ ಜನರಿಲ್ಲದೆ ಬಿಕೋ ಎನ್ನುತ್ತಿತ್ತು. ಅಧಿಕಾರಿಗಳು, ಮಾಧ್ಯಮದವರು ಹಾಗೂ ಪೊಲೀಸ್‍ನವರನ್ನು ಹೊರತುಪಡಿಸಿ ಬೆರಳೆಣಿಕೆಯಷ್ಟು ಮಾತ್ರ ಜನ ಸೇರಿದ್ದರು.

11 ಸಾವಿರ ನೋಟಾ: ರಾಜಕಾರಣಕ್ಕೆ ಹೆಸರಾಗಿದ್ದ ಜಿಲ್ಲೆಯಲ್ಲಿ ಈ ಬಾರಿ ಮತದಾನ ತಿರಸ್ಕರಿಸುವವರ ಸಂಖ್ಯೆಯೂ ಹೆಚ್ಚಾಗಿದ್ದು, ಇದುವರೆಗೂ ನಡೆದ ಎಣಿಕೆಯಲ್ಲಿ 11 ಸಾವಿರ ಮಂದಿ ನೋಟಾ ಒತ್ತಿದ್ದಾರೆ. ಅಭ್ಯರ್ಥಿ ಆಯ್ಕೆಯನ್ನು ಜನ ತಿರಸ್ಕರಿಸಿದ್ದಾರೆ.

# ಮಂಡ್ಯ ಉಪಚುನಾವಣೆ ಫಲಿತಾಂಶ ಕುರಿತು ಸಚಿವ ಪುಟ್ಟರಾಜು ಹೇಳಿದ್ದೇನು..?
ಬೆಂಗಳೂರು, ನ.6-ಮಂಡ್ಯ ಲೋಕಸಭಾ ಕ್ಷೇತ್ರದ ಉಪಚುನಾವಣೆ ಫಲಿತಾಂಶದ ಮೂಲಕ ಮಂಡ್ಯ ಜಿಲ್ಲೆ ಜೆಡಿಎಸ್‍ನ ಭದ್ರಕೋಟೆ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ ಎಂದು ಸಣ್ಣ ನೀರಾವರಿ ಸಚಿವ ಸಿ.ಎಸ್.ಪುಟ್ಟರಾಜು ತಿಳಿಸಿದ್ದಾರೆ.  ಈ ಸಂಜೆಯೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್-ಜೆಡಿಎಸ್ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡು ಮಂಡ್ಯ ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಒಮ್ಮತದ ಅಭ್ಯರ್ಥಿಯನ್ನು ಕಣಕ್ಕಿಳಿಸಲಾಗಿತ್ತು. ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಮಾಜಿ ಶಾಸಕ ಎಲ್.ಆರ್.ಶಿವರಾಮೇಗೌಡ ಅವರು ಪ್ರಚಂಡ ಬಹುಮತದ ಮೂಲಕ ಜಯಗಳಿಸಿದ್ದಾರೆ. ಇದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಹಾಗೂ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ನಾಯಕತ್ವಕ್ಕೆ ಜನ ನೀಡಿರುವ ಆಶೀರ್ವಾದವಾಗಿದೆ ಎಂದರು. ಕಳೆದ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಲೋಕಸಭಾ ಕ್ಷೇತ್ರದ ಎಂಟು ವಿಧಾನಸಭಾ ಕ್ಷೇತ್ರಗಳಲ್ಲೂ ಒಟ್ಟಾರೆ ಜೆಡಿಎಸ್ 2,80,000 ಮತಗಳ ಮುನ್ನಡೆ ಗಳಿಸಿತ್ತು. ಅದೇ ರೀತಿ ಈ ಚುನಾವಣೆಯಲ್ಲೂ ಮತದಾರರು ಜೆಡಿಎಸ್‍ಗೆ ಪ್ರಚಂಡ ಗೆಲುವು ನೀಡಿದ್ದು, ಅವರಿಗೆ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದರು.

#  ಉಪಚುನಾವಣೆ ರಿಸಲ್ಟ್ ಕುರಿತು ಜೆಡಿಎಸ್ ರಾಜ್ಯಾಧ್ಯಕ್ಷ ವಿಶ್ವನಾಥ್ ಪ್ರತಿಕ್ರಿಯಿಸಿದ್ದು ಹೀಗೆ ..?
ಬೆಂಗಳೂರು, ನ.6- ರಾಜ್ಯದ ಎರಡು ವಿಧಾನಸಭೆ, ಮೂರು ಲೋಕಸಭೆ ಚುನಾವಣೆ ಫಲಿತಾಂಶ ಕಾಂಗ್ರೆಸ್-ಜೆಡಿಎಸ್ ದೋಸ್ತಿಗೆ ಆಶಾದಾಯಕ ಗೆಲುವು ತಂದುಕೊಟ್ಟಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್ ತಿಳಿಸಿದ್ದಾರೆ. ಈ ಸಂಜೆಯೊಂದಿಗೆ ಮಾತನಾಡಿದ ಅವರು, ಈ ಉಪಚುನಾವಣೆ ಫಲಿತಾಂಶ ಮುಂಬರುವ ಲೋಕಸಭಾ ಚುನಾವಣೆಗೂ ದಿಕ್ಸೂಚಿಯಾಗಲಿದೆ. ಸಮಾನ ಮನಸ್ಕ ಪಕ್ಷಗಳು ಜತೆಗೂಡಿ ಚುನಾವಣೆಯನ್ನು ಎದುರಿಸಿದರೆ ಕೋಮುವಾದಿ ಪಕ್ಷವನ್ನು ದೂರವಿಡಬಹುದು ಎಂಬ ಸ್ಪಷ್ಟ ಸಂದೇಶವನ್ನು ನಾಡಿನ ಮತದಾರರು ನೀಡಿದ್ದಾರೆ ಎಂದರು.

ಈ ಬಾರಿಯ ಉಪಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಪಕ್ಷಗಳು ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸಿದ್ದವು. ದೀಪಾವಳಿ ಹಾಗೂ ನರಕ ಚತುರ್ದಶಿ ಸಂದರ್ಭದಲ್ಲಿ ಮತದಾರರು ಉತ್ತಮ ಸಂದೇಶವನ್ನೇ ನೀಡಿದ್ದಾರೆ. ಇನ್ನು ಮುಂದೆ ದೇಶದಲ್ಲಿ ಸಮ್ಮಿಶ್ರ ಸರ್ಕಾರಗಳಿಗೆ ಮನ್ನಣೆ ದೊರೆಯಲಿದೆ ಎಂಬ ಸಂದೇಶ ಈ ಫಲಿತಾಂಶದಿಂದ ಹೊರಬಿದ್ದಂತಾಗಿದೆ. ಕಾಂಗ್ರೆಸ್ ಮತ್ತು ಜೆಡಿಎಸ್ ಜತೆಗೂಡಿ ಬಿಜೆಪಿ ವಿರುದ್ಧ ಚುನಾವಣೆ ಎದುರಿಸಲಾಗಿತ್ತು. ಮತದಾರರು ಜತೆಗೂಡಿ ಚುನಾವಣೆ ಎದುರಿಸಿದರೆ ಬೆಂಬಲಿಸುತ್ತಾರೆ ಎಂಬ ಸಂದೇಶ ಇದರಿಂದ ವ್ಯಕ್ತವಾಗಿದೆ ಎಂದು ಹೇಳಿದರು. ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ನಿರೀಕ್ಷಿತ ಫಲಿತಾಂಶ ದೊರೆಯದಿದ್ದರೂ ಮುಂದಿನ ಚುನಾವಣೆಯಲ್ಲಿ ಆಗಿರುವ ಲೋಪಗಳನ್ನು ಸರಿಪಡಿಸಿಕೊಳ್ಳುವ ಪ್ರಯತ್ನ ಮಾಡಲಾಗುವುದು.

ಐದು ಉಪಚುನಾವಣೆಗಳ ಪೈಕಿ ಕಾಂಗ್ರೆಸ್ ಹಾಗೂ ಜೆಡಿಎಸ್ ತಲಾ ಎರಡು ಕ್ಷೇತ್ರಗಳಲ್ಲಿ ಜಯಗಳಿಸಿವೆ ಎಂದರು.
ಉಪಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿಗಳಿಗೆ ಮತ ನೀಡಿದ ಮತದಾರರಿಗೆ ಕೃತಜ್ಞತೆ ಸಲ್ಲಿಸುವುದಾಗಿ ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.

# ಬಿಜೆಪಿ ನಾಯಕರು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ :
ಬೆಂಗಳೂರು, ನ.6-ರಾಜ್ಯ ವಿಧಾನಸಭೆ ಹಾಗೂ ಲೋಕಸಭೆ ಉಪಚುನಾವಣೆಗಳ ಫಲಿತಾಂಶದಿಂದ ಬಿಜೆಪಿ ನಾಯಕರು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ ಎಂದು ಬಿಜೆಪಿ ಮುಖಂಡ ಮಾಜಿ ಸಚಿವ ಸುರೇಶ್‍ಕುಮಾರ್ ತಿಳಿಸಿದ್ದಾರೆ. ಈ ಸಂಬಂಧ ಟ್ವೀಟ್ ಮಾಡಿರುವ ಅವರು, ಎರಡು ವಿಧಾನಸಭೆ ಹಾಗೂ ಮೂರು ಲೋಕಸಭೆ ಚುನಾವಣೆಯ ಬಗ್ಗೆ ನಾಯಕರು ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಸಂದರ್ಭವನ್ನು ಸೃಷ್ಟಿ ಮಾಡಿದೆ ಎಂದು ಹೇಳಿದ್ದಾರೆ.  ಇಂದು ಬೆಳಗ್ಗೆ ಐದು ಉಪಚುನಾವಣೆಗಳ ಮತ ಎಣಿಕೆ ನಡೆಯುತ್ತಿದ್ದ ಸಂದರ್ಭದಲ್ಲೇ ಅವರು ಈ ರೀತಿ ಟ್ವೀಟ್ ಮಾಡಿದ್ದಾರೆ. ಶಿವಮೊಗ್ಗ ಹೊರತು ಪಡಿಸಿ ಉಳಿದೆಲ್ಲ ಕ್ಷೇತ್ರಗಳಲ್ಲಿ ಬಿಜೆಪಿ ಹಿನ್ನಡೆ ಅನುಭವಿಸುತ್ತಿರುವುದನ್ನು ಗಮನಿಸಿದ ಸುರೇಶ್‍ಕುಮಾರ್ ಉಪಚುನಾವಣೆ ಬಗ್ಗೆ ಗಂಭೀರವಾಗಿ ಪಕ್ಷದ ನಾಯಕರು ಚರ್ಚೆ ಮಾಡುವ ಅಗತ್ಯವಿದೆ ಎಂದು ಪ್ರತಿಪಾದಿಸಿದ್ದಾರೆ.

 

Facebook Comments