‘ನಾನು ಬಿಜೆಪಿ ನಾಯಕರ ಜೊತೆ ‘ಅಡ್ಜೆಸ್ಟ್’ ಮಾಡ್ಕೋಬೇಕಂತೆ” : ಡಿ.ಕೆ.ಸುರೇಶ್ ಗಂಭೀರ ಆರೋಪ

ಈ ಸುದ್ದಿಯನ್ನು ಶೇರ್ ಮಾಡಿ

D-K-Suresh--01

ಬೆಂಗಳೂರು,ನ.7- ಬಿಜೆಪಿ ನಾಯಕರ ಜೊತೆ ಚರ್ಚೆ ಮಾಡಿ ವ್ಯವಹಾರ ಸರಿಮಾಡಿಕೊಳ್ಳಿ ಎಂದು ಕೇಂದ್ರ ಸರ್ಕಾರದ ಸ್ವತಂತ್ರ ತನಿಖಾ ಸಂಸ್ಥೆಗಳ ಅಧಿಕಾರಿಗಳು ನಮ್ಮ ಮೇಲೆ ಒತ್ತಡ ಹಾಕುತ್ತಿದ್ದಾರೆ ಎಂದು ಸಂಸದ ಡಿ.ಕೆ.ಸುರೇಶ್ ಗಂಭೀರ ಆರೋಪ ಮಾಡಿದ್ದಾರೆ. ಸದಾಶಿವನಗರದ ಡಿ.ಕೆ.ಶಿವಕುಮಾರ್ ಅವರ ಕಚೇರಿಯಲ್ಲಿ ಜಂಟಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಸಿಬಿಐ, ಜಾರಿ ನಿರ್ದೇಶನಾಲಯ, ಆದಾಯ ತೆರಿಗೆ ಇಲಾಖೆಯಂತಹ ಸ್ವತಂತ್ರ ಸಂಸ್ಥೆಗಳನ್ನು ಬಿಜೆಪಿ ದುರುಪಯೋಗಪಡಿಸಿಕೊಳ್ಳುತ್ತಿದೆ.

ಲೋಕಸಭೆ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ವಿವಿಧ ರಾಜ್ಯಗಳ ಪ್ರಬಲ ನಾಯಕರನ್ನುಗುರಿಯಾಗಿಸಿಕೊಂಡು ಈ ಸಂಸ್ಥೆಗಳು ದಾಳಿ ಮಾಡಿ ಸುಳ್ಳಿನ ಪ್ರಕರಣ ದಾಖಲಿಸಿ, ಬಂಧಿಸುವ ಬೆದರಿಕೆವೊಡ್ಡುತ್ತಿವೆ ಎಂದು ಆರೋಪಿಸಿದರು. ತಮಗೆ ಹಾಗೂ ಸಹೋದರ ಸಚಿವ ಡಿ.ಕೆ.ಶಿವಕುಮಾರ್‍ಗೆ ಅಧಿಕಾರಿಗಳಿಂದ ಕಿರುಕುಳವಾಗುತ್ತಿದೆ, ಬಿಜೆಪಿಯೊಂದಿಗೆ ವ್ಯವಹಾರ ಬಗೆಹರಿಸಿಕೊಳ್ಳಿ ಇಲ್ಲವಾದರೆ ಕ್ರಮ ಜರುಗಿಸಬೇಕಾಗುತ್ತದೆ ಎಂಬ ಎಚ್ಚರಿಕೆ ಬರುತ್ತಿದೆ ಎಂದು ದೂರಿದರು.

ನಾವು ಬಿಜೆಪಿಗೆ ಹೋಗಬೇಕು ಇಲ್ಲದಿದ್ದರೆ ಜೈಲಿಗೆ ಹೋಗಬೇಕೋ ಎಂಬ ವಾತಾವರಣ ನಿರ್ಮಿಸುತ್ತಿವೆ. ಕಾಂಗ್ರೆಸ್‍ನವರಾದ ನಾವು ಯಾವುದೇ ಬೆದರಿಕೆಗೆ ಬಗ್ಗುವುದಿಲ್ಲ. ಜೈಲಿಗೆ ಹೋಗಲು ನಾವು ಸಿದ್ದರಿದ್ದೇವೆ ಎಂದು ಸವಾಲು ಹಾಕಿದರು. ಒಂದು ವರ್ಷದ ಹಿಂದೆ ನಡೆದ ಆದಾಯ ತೆರಿಗೆ ಇಲಾಖೆ ದಾಳಿಯಿಂದ ನಮ್ಮನ್ನು ಏನು ಮಾಡಲಾಗಲಿಲ್ಲ. ನಮ್ಮ ವಿರುದ್ದ ಯಾವ ಸಾಕ್ಷ್ಯಗಳು ಸಿಗಲಿಲ್ಲ. ಅಂತಿಮವಾಗಿ ಈ ಪ್ರಕರಣವನ್ನು ಜಾರಿ ನಿರ್ದೇಶನಾಲಯಕ್ಕೆ ವರ್ಗಾವಣೆ ಮಾಡಲಾಗಿದೆ. ಅಲ್ಲಿ ಸುಳ್ಳು ಕೇಸ್ ದಾಖಲಿಸಿ ಬಂಧಿಸುವ ಹುನ್ನಾರ ನಡೆದಿದೆ ಎಂದರು.

ಉಪಚುನಾವಣೆಗಳ ಆರಂಭದಲ್ಲೇ ಬಿಜೆಪಿ ಉಪಾಧ್ಯಕ್ಷ ಶ್ರೀರಾಮುಲು ಹೇಳಿಕೆ ನೀಡಿ, ಡಿಕೆಶಿ ಜೈಲಿಗೆ ಶಾಂತ ದೆಹಲಿಗೆ ಎಂದಿದ್ದರು. ಜವಾಬ್ದಾರಿಯುತ ನಾಯಕ ಸುಮ್ಮನೆ ಈ ರೀತಿ ಹೇಳಿಕೆ ನೀಡುವುದಿಲ್ಲ. ಪಕ್ಷದ ಒಳಗಿನ ಚರ್ಚೆಯನ್ನು ಅವರು ಬಹಿರಂಗಪಡಿಸಿದ್ದಾರೆ. 6ನೇ ತಾರೀಖು ಫಲಿತಾಂಶ ಪ್ರಕಟವಾಗಿದೆ 7ನೇ ತಾರೀಖಿನಿಂದ ನಮ್ಮ ವಿರುದ್ಧ ಕಾರ್ಯಾಚರಣೆ ಆರಂಭಗೊಂಡಂತಿದೆ ಎಂದರು.

ಜಾರಿ ನಿರ್ದೇಶನಾಲಯವನ್ನು ದುರುಪಯೋಗಪಡಿಸಿಕೊಂಡು ರಾಜಕೀಯ ಎದುರಾಳಿ ವಿರುದ್ದ ಕಾರ್ಯಾಚರಣೆ ನಡೆಸುತ್ತಿರುವ ಬಗ್ಗೆ ಸೆ.13ರಂದು ರಾಜ್ಯ ಕಾಂಗ್ರೆಸ್ 9 ಮಂದಿ ಸಂಸದರು ಪತ್ರ ಬರೆದದಿದ್ದಾರೆ. ಜಾರಿ ನಿರ್ದೇಶಕರಿಗೆ ಈವರೆಗೂ ಸಮಯಾವಕಾಶ ಸಿಕ್ಕಿಲ್ಲ. ಪ್ರಧಾನಿಯವರಿಗೂ ಮನವಿ ಮಾಡಲಾಗಿದೆ. ಅವರು ಸಮಯ ನೀಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಸಂಸದರಾದ ಧೃವ ನಾರಾಯಣ್, ಚಂದ್ರಪ್ಪ ರಾಜ್ಯಸಭಾ ಸದಸ್ಯರಾದ ಕೆ.ಸಿ.ರಾಮಮೂರ್ತಿ, ಜೆ.ಸಿ.ಚಂದ್ರಶೇಖರ್ ಮತ್ತಿತರರು ಪತ್ರಿಕಾಗೋಷ್ಠಿಯಲ್ಲಿದ್ದರು.

Facebook Comments