ಜನಾರ್ಧನ್ ರೆಡ್ಡಿಗೆ ಬಂಧನ ಭೀತಿ, ಆಪ್ತ ಅಲಿ ಖಾನ್’ಗೆ ನಿರೀಕ್ಷಣಾ ಜಾಮೀನು

ಈ ಸುದ್ದಿಯನ್ನು ಶೇರ್ ಮಾಡಿ

Janardhan-Reddy-Ali-lkhan

ಬೆಂಗಳೂರು, ನ.7- ಜಾರಿ ನಿರ್ದೇಶನಾಲಯದಲ್ಲಿ ದಾಖಲಾಗಿದ್ದ ಪ್ರಕರಣದಿಂದ ರಕ್ಷಿಸುವುದಾಗಿ ಉದ್ಯಮಿಯೊಬ್ಬರಿಂದ ಮಾಜಿ ಸಚಿವ ಜನಾರ್ದನ ರೆಡ್ಡಿ 20 ಕೋಟಿ ರೂ. ಪಡೆದಿರುವ ಆರೋಪ ಕೇಳಿಬಂದಿರುವ ಹಿನ್ನೆಲೆಯಲ್ಲಿ ರೆಡ್ಡಿಗೆ ಮತ್ತೆ ಬಂಧನದ ಭೀತಿ ಎದುರಾಗಿದೆ. ಹೂಡಿಕೆ ಹೆಸರಿನಲ್ಲಿ ಸಾರ್ವಜನಿಕರಿಗೆ ವಂಚಿಸಿದ ಆಂಬಿಡೆಂಟ್ ಕಂಪನಿಯ ಮೇಲೆ ಜಾರಿ ನಿರ್ದೇಶನಾಲಯ ದಾಳಿ ಮಾಡಿತ್ತು.

ಮಾರ್ಕೆಟಿಂಗ್ ಹೆಸರಿನಲ್ಲಿ ಹಣ ದ್ವಿಗುಣ ಮಾಡುವುದಾಗಿ ಲಕ್ಷಾಂತರ ಜನರಿಗೆ ಬೆಂಗಳೂರಿನ ಆಂಬಿಡೆಂಟ್ ಮಾರ್ಕೆಟಿಂಗ್ ಪ್ರೈವೇಟ್ ಲಿಮಿಟೆಡ್ ಆಮಿಷ ತೋರಿಸಿ ವಂಚಿಸಿತ್ತು. ಈ ಸಂಬಂಧ ಡಿಜೆಹಳ್ಳಿ ಪೊಲೀಸ್ ಠಾಣೆಯಲ್ಲಿ 2017ರಲ್ಲಿ ಪ್ರಕರಣ ದಾಖಲಾಗಿತ್ತು. ಬಳಿಕ ಪ್ರಕರಣವನ್ನು ಸಿಸಿಬಿಗೆ ವರ್ಗಾಯಿಸಲಾಗಿತ್ತು. ಕಂಪನಿಯ ಮಾಲೀಕ, ಉದ್ಯಮಿ ಸಯ್ಯದ್ ಅಹ್ಮದ್ ಫರೀದ್ ಅವರನ್ನು ಪ್ರಕರಣದಿಂದ ಮುಕ್ತಗೊಳಿಸುವುದಾಗಿ ಮಾಜಿ ಸಚಿವ ಜನಾರ್ದನ ರೆಡ್ಡಿ ಮತ್ತು ಉದ್ಯಮಿ ನಡುವೆ ಹಣದ ಒಪ್ಪಂದವಾಗಿತ್ತು. ಅದರಂತೆ ರಮೇಶ್ ಕೊಠಾರಿಯಾ ಅವರ ಬ್ಯಾಂಕ್ ಖಾತೆಗೆ 18 ಕೋಟಿ ರೂ. ವರ್ಗಾಯಿಸಲಾಗಿತ್ತು. ಇದರ ಜಾಡು ಹಿಡಿದು ತನಿಖೆ ಚುರುಕುಗೊಳಿಸಲಾಗಿದೆ.

ಸಾರ್ವಜನಿಕರಿಂದಲೂ ಹಲವಾರು ದೂರುಗಳು ಬಂದಿತ್ತು. ಪ್ರಕರಣ ಕೂಡ ದಾಖಲಾಗಿತ್ತು. ಹೆಚ್ಚುವರಿ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ಮತ್ತು ಡಿಸಿಪಿ ಗಿರೀಶ್ ಅವರು ಇದರ ಬಗ್ಗೆ ತನಿಖೆಯನ್ನು ಚುರುಕುಗೊಳಿಸಿದಾಗ ಈ ಹಣ ವರ್ಗಾವಣೆ ಬಗ್ಗೆ ಮಾಹಿತಿ ಸಿಕ್ಕಿದೆ ಎಂದು ನಗರ ಪೊಲೀಸ್ ಆಯುಕ್ತರಾದ ಸುನಿಲ್‍ಕುಮಾರ್ ತಿಳಿಸಿದ್ದಾರೆ.  ಪ್ರಕರಣ ಸಂಬಂಧ ಕಂಪನಿ ಮಾಲೀಕ ಫರೀದ್, ಚಿನ್ನಾಭರಣ ಅಂಗಡಿ ಮಾಲೀಕ ರಮೇಶ್ ಅವರನ್ನು ಬಂಧಿಸಲಾಗಿದೆ ಎಂದು ಅಪರಾಧ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ಈ ಸಂಜೆಗೆ ತಿಳಿಸಿದ್ದಾರೆ.

ಈ ಮಧ್ಯೆ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಜನಾರ್ಧನ್ ರೆಡ್ಡಿ ಆಪ್ತ ಅಲಿಖಾನ್‍ಗೆ 61ನೇ ಸೆಷನ್ಸ್ ಕೋರ್ಟ್ 50 ಸಾವಿರ ಬಾಂಡ್ ಹಾಗೂ ಶ್ಯೂರಿಟಿ ನೀಡುವಂತೆ ಸೂಚಿಸಿ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.  ವಿಚಾರಣೆ ವೇಳೆ ಫರೀದ್ ಅವರ ಬ್ಯಾಂಕ್ ವ್ಯವಹಾರಗಳನ್ನು ಪರಿಶೀಲಿಸಿದಾಗ ಜನಾರ್ದನ ರೆಡ್ಡಿಯೊಂದಿಗೆ ಹಣದ ವ್ಯವಹಾರ ನಡೆಸಿರುವುದು ಸಿಸಿಬಿ ಪೊಲೀಸರ ಗಮನಕ್ಕೆ ಬಂದಿದೆ. ಈ ಬಗ್ಗೆ ತೀವ್ರ ವಿಚಾರಣೆ ನಡೆಸಿದಾಗ ಫರೀದ್ ಮತ್ತು ರೆಡ್ಡಿ ನಡುವಿನ ವ್ಯವಹಾರ ಬಹಿರಂಗಗೊಂಡಿದೆ ಎಂದು ಸಿಸಿಬಿ ಮೂಲಗಳು ತಿಳಿಸಿವೆ. ಅಪರಾಧ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ನೇತೃತ್ವದ ತಂಡ ಇದೀಗ ಈ ಪ್ರಕರಣದ ಬೆನ್ನು ಬಿದ್ದಿದ್ದು, ರೆಡ್ಡಿಗಾಗಿ ಶೋಧ ಆರಂಭಿಸಿದೆ.

ಸದ್ಯ ಹೈದರಾಬಾದ್‍ಗೆ ತೆರಳಿರುವ ಜನಾರ್ದನ ರೆಡ್ಡಿ ಅವರು ಅಲ್ಲಿಂದಲೇ ನಿರೀಕ್ಷಣಾ ಜಾಮೀನು ಪಡೆಯುವ ಪ್ರಯತ್ನ ನಡೆಸಿದ್ದಾರೆ ಎನ್ನಲಾಗಿದೆ. ಸಿಸಿಬಿಯ ಒಂದು ತಂಡ ಈಗಾಗಲೇ ಹೈದರಾಬಾದ್‍ಗೆ ತೆರಳಿದ್ದು, ಇದರಿಂದ ದೀಪಾವಳಿ ಸಂದರ್ಭದಲ್ಲೇ ರೆಡ್ಡಿಗೆ ಮತ್ತೊಂದು ಸಂಕಷ್ಟ ಎದುರಾಗುವ ಸಾಧ್ಯತೆ ಇದೆ. ಈ ಸಂಬಂಧ ಬೆಂಗಳೂರು ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಹಿರಿಯ ಅಧಿಕಾರಿಗಳ ಸಭೆ ನಡೆಸಲಾಗಿದೆ. ಈ ಬೆಳವಣಿಗೆಗಳನ್ನು ಗಮನಿಸಿದಾಗ ಜನಾರ್ಧನ್ ರೆಡ್ಡಿ ಅವರ ಬಂಧನದ ಸಾಧ್ಯತೆ ದಟ್ಟವಾಗಿದೆ.

Facebook Comments