ಸ್ವಪಕ್ಷದ ನಾಯಕರ ವಿರುದ್ಧವೇ ಸೊಗಡು ಶಿವಣ್ಣ ಆಕ್ರೋಶ

ಈ ಸುದ್ದಿಯನ್ನು ಶೇರ್ ಮಾಡಿ

Sogadu-shivanna

ತುಮಕೂರು, ನ.7-ಮೂಲ ಕಾರ್ಯಕರ್ತರನ್ನು ಕಡೆಗಣಿಸಿ ಅನ್ಯ ಪಕ್ಷದವರಿಗೆ ಮಣೆ ಹಾಕುತ್ತಿರುವುದಲ್ಲದೆ, ಸಿಕ್ಕ ಸಿಕ್ಕವರಿಗೆ ಜವಾಬ್ದಾರಿ ವಹಿಸುತ್ತಿರುವುದೇ ನಮ್ಮ ಪಕ್ಷದ ಅಭ್ಯರ್ಥಿಗಳ ಸೋಲಿಗೆ ಕಾರಣ. ಇನ್ನಾದರೂ ಎಚ್ಚೆತ್ತುಕೊಳ್ಳಿ ಎಂದು ಮಾಜಿ ಸಚಿವ ಸೊಗಡು ಶಿವಣ್ಣ ಸ್ವಪಕ್ಷೀಯ ವಿರುದ್ಧವೇ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೂರು ಲೋಕಸಭೆ, ಎರಡು ವಿಧಾನಸಭೆ ಉಪಚುನಾವಣೆಗಳಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರ ಹೊರತುಪಡಿಸಿದರೆ ಉಳಿದ ಕ್ಷೇತ್ರಗಳಲ್ಲಿ ಬಿಜೆಪಿಗೆ ಭಾರೀ ಪೆಟ್ಟು ಬಿದ್ದಿದೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಇದೇ ರೀತಿಯಾದರೆ ಚುನಾವಣೆ ಎದುರಿಸುವುದು ಹೇಗೆ? ಎಂದು ಪ್ರಶ್ನಿಸಿದರು.

ಅಟಲ್ ಬಿಹಾರಿ ವಾಜಪೇಯಿ, ಅಡ್ವಾಣಿ, ಮುರಳಿ ಮನೋಹರ್ ಜೋಷಿಯವರಂತಹ ನಾಯಕರು ಕಾರ್ಯಕರ್ತರನ್ನು ಒಗ್ಗೂಡಿಸಿ ಪಕ್ಷ ಬೆಳೆಸಿದ್ದಾರೆ. ಆದರೆ ಇತ್ತೀಚೆಗೆ ಎಲ್ಲೆಡೆ ಒಂದೊಂದು ಬಣಗಳಾಗಿ ಮಾರ್ಪಟ್ಟಿದೆ. ಜಾತಿಗೊಬ್ಬ ನಾಯಕನಂತೆ ಎಲ್ಲಾ ಕಡೆ ಗುಂಪುಗಾರಿಕೆ ಮಾಡಿಕೊಂಡು ಪಕ್ಷವನ್ನು ಅವನತಿಯತ್ತ ಕೊಂಡೊಯ್ಯಲಾಗುತ್ತಿದೆ. ಇನ್ನಾದರೂ ಈ ಬಗ್ಗೆ ಎಚ್ಚೆತ್ತುಕೊಳ್ಳಬೇಕು ಎಂದರು. ಬಿಜೆಪಿ ಭದ್ರಕೋಟೆಗೆ ಕಾಂಗ್ರೆಸ್-ಜೆಡಿಎಸ್ ಸೇರಿದಂತೆ ಇತರೆ ಪಕ್ಷಗಳು ಲಗ್ಗೆ ಇಟ್ಟಿವೆ. ಬಿಜೆಪಿ ಶಕ್ತಿಯನ್ನು ಕುಂದುವಂತೆ ಮಾಡುತ್ತಿದ್ದಾರೆ. ಇದೆಲ್ಲಕ್ಕಿಂತ ಮುಖ್ಯವಾಗಿ ಅನ್ಯ ಪಕ್ಷಗಳಿಂದ ತಮ್ಮ ಪಕ್ಷಕ್ಕೆ ಕರೆತಂದು ಮೂಲ ಕಾರ್ಯಕರ್ತರನ್ನು, ಮುಖಂಡರನ್ನು ಕಡೆಗಣಿಸುತ್ತಿರುವ ಹಿನ್ನೆಲೆಯಲ್ಲಿ ಬಿಜೆಪಿಗೆ ಆಘಾತ ತಂದಿದೆ ಎಂದು ವಿಷಾದಿಸಿದರು.

ಇಲ್ಲಿ ವ್ಯಕ್ತಿ ಮುಖ್ಯವಲ್ಲ, ಪಕ್ಷ ಮುಖ್ಯವಾಗಿದೆ. ಇದನ್ನು ಪ್ರತಿಯೊಬ್ಬ ನಾಐಕರು ಮನಗಾಣಬೇಕಿದೆ. ಆರ್‍ಎಸ್‍ಎಸ್ ಮುಖಂಡ ಭಾನುಪ್ರಕಾಶ್ ಅವರು ಇತ್ತೀಚೆಗೆ ಶಿವಮೊಗ್ಗದಲ್ಲಿ ರಾಜ್ಯ ಕಾರ್ಯಕಾರಿಣಿ ಸಮಿತಿಗೆ ಕಿವಿಮಾತು ಹೇಳಿದ್ದಾರೆ. ಅವರ ಮಾತನ್ನಾದರೂ ಆಲಿಸಿ ಎಚ್ಚೆತ್ತುಕೊಳ್ಳಿ. ಮೂಲ ಕಾರ್ಯಕರ್ತರನ್ನು ಗಣನೆಗೆ ತೆಗೆದುಕೊಳ್ಳಿ. ದ್ವೇಷ ರಾಜಕಾರಣ ಬಿಡಿ, ಅಸೂಯೆ ತ್ಯಜಿಸಿ ಎಂದು ಮನವಿ ಮಾಡಿದರು. ರಾಜ್ಯಾದ್ಯಂತ ಪಕ್ಷದ ನಿಷ್ಠಾವಂತ ಕಾರ್ಯಕರ್ತರಿಗೆ ಮನ್ನಣೆ ನೀಡಿ ಎಂದು ಭಾನುಪ್ರಕಾಶ್ ಅವರು ಹೇಳಿರುವುದು ಪಕ್ಷದ ಪ್ರತಿಯೊಬ್ಬ ನಾಯಕರಿಗೂ ಅನ್ವಯಿಸುತ್ತದೆ. ಕಟ್ಟಿದ ಹುತ್ತದಲ್ಲಿ ವಿವಿಧ ರೀತಿಯ ಘಟ ಸರ್ಪಗಳು ಬಂದು ಸೇರಿಕೊಂಡಂತೆ ಮೂಲ ಕಾರ್ಯಕರ್ತರನ್ನು ಕಡೆಗಣಿಸುತ್ತಿರುವುದರ ಬಗ್ಗೆ ಇನ್ನಾದರೂ ಪಕ್ಷದ ರಾಜ್ಯಾಧ್ಯಕ್ಷರಾಗಿರುವ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಇತರೆ ನಾಯಕರೂ ಸಹ ಪಾಠ ಕಲಿಯಬೇಕಿದೆ ಎಂದರು.

ತುರ್ತು ಪರಿಸ್ಥಿತಿಯಲ್ಲಿ ಲಾಲ್ ಕೃಷ್ಣ ಅಡ್ವಾಣಿ ಹಾಗೂ ನಾವು ಜೈಲು ಸೇರಿ ಹಲವು ಕಷ್ಟಗಳನ್ನು ಎದುರಿಸಿ ಪಕ್ಷವನ್ನು ಕಟ್ಟಿ ಬೆಳೆಸಿದ ನಮಗೆ ಪಕ್ಷ ವಿರೋಧಿ ಚಟುವಟಿಕೆ ನಡೆಸುತ್ತಿದ್ದಾರೆ ಎಂದು ಆರೋಪಿಸುತ್ತಿರುವುದು ಸರಿಯೇ ಎಂದು ತಮ್ಮ ಅಳಲು ತೋಡಿಕೊಂಡರು. ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮುಖಂಡರಾದ ನಂದೀಶ್, ಶಾಂತರಾಜು, ಬನಶಂಕರಿ ಬಾಬು, ನವೀನ್, ನಂಜುಂಡಪ್ಪ, ಮಹೇಶ್ ಮತ್ತಿತರರು ಉಪಸ್ಥಿತರಿದ್ದರು.

Facebook Comments