ಜನಾರ್ಧನ್ ರೆಡ್ಡಿಯಿಂದ ದೂರವಿರುವಂತೆ ರಾಜ್ಯ ನಾಯಕರಿಗೆ ಬಿಜೆಪಿ ಹೈಕಮಾಂಡ್ ಸೂಚನೆ

ಈ ಸುದ್ದಿಯನ್ನು ಶೇರ್ ಮಾಡಿ

Janardhan-Reddy--01

ಬೆಂಗಳೂರು, ನ.7- ಅಕ್ರಮ ಗಣಿಗಾರಿಕೆ ಆರೋಪ ಪ್ರಕರಣದಲ್ಲಿ ಜಾಮೀನಿನ ಮೇಲೆ ಜೈಲಿನಿಂದ ಹೊರ ಬಂದಿರುವ ಮಾಜಿ ಸಚಿವ ಜನಾರ್ದನ ರೆಡ್ಡಿ ಇದೀಗ ಕಪ್ಪು ದಂಧೆಯಲ್ಲಿ ತೊಡಗಿಕೊಂಡ ಆರೋಪ ಕೇಳಿ ಬಂದಿದ್ದು, ಅವರೊಂದಿಗೆ ಅಂತರ ಕಾಯ್ದುಕೊಳ್ಳುವಂತೆ ಬಿಜೆಪಿ ಹೈಕಮಾಂಡ್ ರಾಜ್ಯ ನಾಯಕರಿಗೆ ಸ್ಪಷ್ಟ ಸೂಚನೆ ನೀಡಿದೆ ಎನ್ನಲಾಗುತ್ತಿದೆ. ಹೌದು, ಮಾಜಿ ಸಚಿವ ಜನಾರ್ದನ ರೆಡ್ಡಿ ಮೇಲೆ ಮತ್ತೊಂದು ಆರೋಪ ಕೇಳಿ ಬಂದಿದೆ. ಚಿನ್ನದ ಗಟ್ಟಿ ಹಾಗೂ ಹಣ ಎಕ್ಸ್‍ಚೇಂಜ್ ಆರೋಪದ ಹಿನ್ನೆಲೆಯಲ್ಲಿ ಜನಾರ್ದನ ರೆಡ್ಡಿ ಜೊತೆ ಅಂತರ ಕಾಯ್ದುಕೊಳ್ಳಲು ಬಿಜೆಪಿ ಹೈಕಮಾಂಡ್ ನಿರ್ದೇಶನ ನೀಡಿದೆ ಎನ್ನುವ ಮಾಹಿತಿ ಬಿಜೆಪಿ ಆಪ್ತ ಮೂಲಗಳಿಂದ ತಿಳಿದು ಬಂದಿದೆ.

ರೆಡ್ಡಿ ಜೊತೆ ಆಪ್ತತೆ ಹೊಂದಿದ ರಾಜ್ಯ ನಾಯಕರಿಗೆ ಬಿಜೆಪಿ ಹೈಕಮಾಂಡ್ ಈ ಖಡಕ್ ಸೂಚನೆ ನೀಡಿದೆ. ರೆಡ್ಡಿ ಮತ್ತೆ ಯಡವಟ್ಟು ಮಾಡ್ಕೊಂಡಿದ್ದಾರೆ. ಉಪ ಚುನಾವಣೆಯಲ್ಲಿ ಕೂಡ ಸುಮ್ಮನಿರಲಾಗದೆ ಸಿದ್ದರಾಮಯ್ಯ ಪುತ್ರನ ಸಾವಿನ ಬಗ್ಗೆ ಮಾತಾಡಿ ಪಕ್ಷಕ್ಕೆ ಮುಜುಗರ ಸೃಷ್ಟಿಸಿದ್ರು. ಈಗ ಮತ್ತೆ ಮತ್ತೊಂದು ಹಗರಣದಲ್ಲಿ ಸಿಲುಕಿಕೊಂಡಿದ್ದಾರೆ. ಈಗಾಗಲೇ ಬಿಜೆಪಿ ಉಪ ಚುನಾವಣೆಯಲ್ಲಿ ಮುಖಭಂಗ ಅನುಭವಿಸಿದೆ.

ಬಳ್ಳಾರಿಯಲ್ಲಿ ಬಿಜೆಪಿಗೆ ತೀವ್ರ ಹಿನ್ನಡೆಯಾಗಿದೆ. ಸಾರ್ವತ್ರಿಕ ಚುನಾವಣೆಯಲ್ಲಿ ಇದು ಇನ್ನಷ್ಟು ಸಂಕಷ್ಟ ತಂದೊಡ್ಡುತ್ತದೆ. ಹೀಗಾಗಿ ಜನಾರ್ದನ ರೆಡ್ಡಿ ಸಂಪರ್ಕ ಮಾಡಬೇಡಿ. ಯಾರೂ ಈ ವಿಚಾರ ಮಾತನಾಡಬೇಡಿ. ಅನಗತ್ಯವಾಗಿ ಈ ವಿಚಾರದ ಬಗ್ಗೆ ಮಾತನಾಡಿ ಗೊಂದಲ ಸೃಷ್ಟಿಸಬೇಡಿ ಎಂದು ರಾಜ್ಯ ನಾಯಕರಿಗೆ ಬಿಜೆಪಿ ಹೈಕಮಾಂಡ್ ತಾಕೀತು ಮಾಡಿದೆ.

ರಾಜ್ಯದಲ್ಲಿ ಮೈತ್ರಿ ಸರ್ಕಾರ ಇದೆ, ರೆಡ್ಡಿ ಮುಂದಿಟ್ಟುಕೊಂಡು ಬಿಜೆಪಿ ಹಣಿಯುವ ತಂತ್ರ ನಿರ್ಮಾಣವಾಗುತ್ತೆ. ಅದಕ್ಕೆ ಅವಕಾಶ ನೀಡದಂತೆ ರೆಡ್ಡಿ ಜೊತೆ ಅಂತರ ಕಾಯ್ದುಕೊಳ್ಳಲ ಬಿಜೆಪಿ ಹೈಕಮಾಂಡ್ ಸ್ಪಷ್ಟ ಸೂಚನೆ ನೀಡಿದ್ದು ಮತ್ತೆ ರಾಜಕೀಯಕ್ಕೆ ರೀ ಎಂಟ್ರಿ ಪಡೆಯುವ ಯತ್ನದಲ್ಲಿದ್ದ ರೆಡ್ಡಿಗೆ ಶಾಕ್ ನೀಡಿದೆ.

Facebook Comments