ಉಪಚುನಾವಣೆ ಹಿನ್ನಡೆ ಕುರಿತು 15ರಂದು ಬಿಜೆಪಿ ಆತ್ಮಾವಲೋಕನ ಸಭೆ

ಈ ಸುದ್ದಿಯನ್ನು ಶೇರ್ ಮಾಡಿ

Yddiyurappa--01

ಬೆಂಗಳೂರು,ನ.9- ಮೂರು ಲೋಕಸಭೆ ಹಾಗೂ ಎರಡು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಭಾರೀ ಹಿನ್ನಡೆ ಉಂಟಾಗಿರುವ ಹಿನ್ನೆಲೆಯಲ್ಲಿ ಇದೇ 15ರಂದು ಬಿಜೆಪಿ ಆತ್ಮಾವಲೋಕನ ಸಭೆ ಕರೆದಿದೆ.ಬೆಂಗಳೂರಿನ ಮಲ್ಲೇಶ್ವರಂ ಕಚೇರಿಯಲ್ಲಿ ನಡೆಯಲಿರುವ ಅಂದಿನ ಸಭೆಗೆ ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ , ಹಿರಿಯ ಉಪಾಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು, ಕೋರ್ ಕಮಿಟಿ ಸದಸ್ಯರು, ಜಿಲ್ಲಾಧ್ಯಕ್ಷರು, ಸಂಸದರು, ಶಾಸಕರು, ಪದಾಧಿಕಾರಿಗಳು ಸೇರಿದಂತೆ ಪ್ರಮುಖರು ಭಾಗವಹಿಸುವಂತೆ ಸೂಚಿಸಲಾಗಿದೆ.

ಸಭೆಯಲ್ಲಿ ಮುಖ್ಯವಾಗಿ ಬಳ್ಳಾರಿ, ಜಮಖಂಡಿಯಲ್ಲಿ ಉಂಟಾದ ಸೋಲು ಹಾಗೂ ಪಕ್ಷದ ಭದ್ರಕೋಟೆ ಎನಿಸಿದ ಶಿವಮೊಗ್ಗದಲ್ಲೇ ಕಡಿಮೆ ಅಂತರದ ಗೆಲುವು ಸೇರಿದಂತೆ ಮಹತ್ವದ ವಿಷಯಗಳ ಬಗ್ಗೆ ಚರ್ಚೆ ನಡೆಯಲಿದೆ.  ಐದು ಕ್ಷೇತ್ರಗಳ ಉಪಚುನಾವಣೆ ಫಲಿತಾಂಶದ ಬಗ್ಗೆ ಕೇಂದ್ರ ವರಿಷ್ಠರು ತೀವ್ರ ಅಸಮಾಧಾನ ವ್ಯಕ್ತಪಡಿಸಿ ಫಲಿತಾಂಶ ಇಷ್ಟು ಕಳಪೆಯಾಗಲು ಕಾರಣ ಏನು ಎಂಬುದರ ಬಗ್ಗೆ ವರದಿ ನೀಡುವಂತೆ ಸೂಚನೆ ಕೊಟ್ಟಿದ್ದರು.  ಭಿನ್ನಮತ, ಅಸಮಾಧಾನ, ನಾಯಕರ ನಡುವೆ ಉಂಟಾಗಿರುವ ಗೊಂದಲ, ಬಿಕ್ಕಟ್ಟು ಪರಿಹರಿಸುವಲ್ಲಿ ಉಂಟಾಗಿರುವ ಹಿನ್ನಡೆ ನಿಷ್ಠಾವಂತ ಕಾರ್ಯಕರ್ತರ ಕಡೆಗಣನೆ ಸೇರಿದಂತೆ ಪಕ್ಷದಲ್ಲಿ ಉಂಟಾಗಿರುವ ಭಿನ್ನಮತವನ್ನು ಶಮನಗೊಳಿಸುವಲ್ಲಿ ವಿಫಲರಾಗಿದ್ದೇ ಫಲಿತಾಂಶ ಹಿನ್ನಡೆಯಾಗಲು ಕಾರಣ ಎಂಬ ಮಾತುಗಳು ಕೇಳಿಬರುತ್ತಿದೆ.

ಮತ ಎಣಿಕೆ ಒಂದು ದಿನ ಬಾಕಿ ಇರುವಾಗ ಉಪಾಧ್ಯಕ್ಷ ಭಾನುಪ್ರಕಾಶ್, ತಾವು ಯಾವುದೇ ಕಾರಣಕ್ಕೂ ಈ ಸ್ಥಾನವನ್ನು ವಹಿಸಿಕೊಳ್ಳುವುದಿಲ್ಲ. ಮೊದಲು ಪಕ್ಷದಲ್ಲಿ ಉಂಟಾಗಿರುವ ಭಿನ್ನಮತವನ್ನು ಪರಿಹರಿಸಬೇಕೆಂದು ಒತ್ತಾಯಿಸಿದ್ದರು. ಈ ನಡುವೆ ರಾಜ್ಯಾಧ್ಯಕ್ಷ ಯಡಿಯೂರಪ್ಪನವರ ನಾಯಕತ್ವ ಬದಲಾವಣೆಗೂ ಬಿಜೆಪಿಯೊಳಗಿನ ಒಂದು ಗುಂಪು ವರಿಷ್ಠರ ಮೇಲೆ ಒತ್ತಡ ಹಾಕಲು ಮುಂದಾಗಿದೆ. ಈ ಎಲ್ಲ ಬೆಳವಣಿಗೆಗಳ ಕುರಿತಂತೆ ಚರ್ಚಿಸಲು 15ರಂದು ಸಭೆ ಕರೆಯಲಾಗಿದೆ.

# ಲೋಕಸಭೆ ಚುನಾವಣೆಗೆ ರಣತಂತ್ರ:
ಅಂದು ನಡೆಯಲಿರುವ ಸಭೆಯಲ್ಲಿ ಫಲಿತಾಂಶದ ಆತ್ಮಾವಲೋಕನ ಹಾಗೂ ಮುಂಬರುವ 2019ರ ಲೋಕಸಭೆ ಚುನಾವಣೆ ಕುರಿತಂತೆ ಪಕ್ಷವನ್ನು ಬೇರು ಮಟ್ಟದಿಂದ ರಾಜ್ಯಾದ್ಯಂತ ಸಂಘಟಿಸುವ ಬಗ್ಗೆ ಚರ್ಚೆ ನಡೆಯಲಿದೆ.  ಉಪಚುನಾವಣೆಯ ಫಲಿತಾಂಶದಿಂದ ಯಾರೊಬ್ಬರೂ ಧೃತಿಗೆಡದೆ ಲೋಕಸಭೆ ಚುನಾವಣೆಯನ್ನು ಧೈರ್ಯದಿಂದಲೇ ಎದುರಿಸಬೇಕು. ಉದ್ದೇಶಿತ 20 ಲೋಕಸಭಾ ಕ್ಷೇತ್ರಗಳನ್ನು ಗೆಲ್ಲುವ ಗುರಿಯೊಂದಿಗೆ ಕಾರ್ಯಕರ್ತರು ಸಜ್ಜಾಗಬೇಕೆಂದು ರಾಜ್ಯ ನಾಯಕರು ಸೂಚನೆ ನೀಡಲಿದ್ದಾರೆ.

ಯಾವುದೇ ಕಾರಣಕ್ಕೂ ಫಲಿತಾಂಶದಿಂದ ಧೃತಿಗೆಡಬಾರದು. ಮಂಡ್ಯದಂತಹ ಕ್ಷೇತ್ರದಲ್ಲೂ ನಮ್ಮ ಪಕ್ಷ ನಿರೀಕ್ಷೆಗೂ ಮೀರಿದ ಮತಗಳು ಬಂದಿವೆ. ಕಾಂಗ್ರೆಸ್ ಮತ್ತು ಜೆಡಿಎಸ್ ಒಂದಾದರೂ ತಲೆಕೆಡಿಸಿಕೊಳ್ಳದೆ ರಾಜ್ಯಾದ್ಯಂತ ಪ್ರವಾಸ ಮಾಡಿ ಪಕ್ಷವನ್ನು ಬೇರು ಮಟ್ಟದಿಂದ ಸಂಘಟಿಸುವ ಮೂಲಕ ಹೆಚ್ಚಿನ ಸ್ಥಾನಗಳಿಸಲು ಎಲ್ಲ ನಾಯಕರು ಗಮನ ನೀಡಲಿದ್ದಾರೆ. ಮುಂದಿನ ದಿನಗಳಲ್ಲಾದರೂ ಪಕ್ಷದಲ್ಲಿರುವ ಕೆಲವು ಸಣ್ಣಪುಟ್ಟ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಿಕೊಂಡು ಎಲ್ಲರೂ ಒಗ್ಗಟ್ಟಿನಿಂದ ಚುನಾವಣೆ ಎದುರಿಸಲು ಸಜ್ಜಾಗಬೇಕೆಂದು ಕೇಂದ್ರ ನಾಯಕರು ಕೂಡ ಸೂಚನೆ ಕೊಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಮುಂದಿನ ದಿನಗಳಲ್ಲಿ ಯಡಿಯೂರಪ್ಪ ಕೂಡ ಮೂಲ ಕಾರ್ಯಕರ್ತರನ್ನು ಕಡೆಗಣಿಸದೆ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಆಲೋಚನೆಯಲ್ಲಿದ್ದಾರೆ. ನಾವು ಒಗ್ಗಟ್ಟಾಗದಿದ್ದರೆ ಇದರ ಲಾಭ ಪ್ರತಿಪಕ್ಷಗಳಿಗೆ ಸಿಗುತ್ತದೆ ಎಂಬುದು ಮನವರಿಕೆಯಾದ ಹಿನ್ನೆಲೆಯಲ್ಲಿ ವ್ಯತ್ಯಾಸಗಳನ್ನು ಮರೆತು ಪಕ್ಷದ ಸಂಘಟನೆಗೆ ಎಲ್ಲರೂ ಒತ್ತು ನೀಡಲಿದ್ದಾರೆ.

Facebook Comments