ಅನಂತ್‍ ಅವರ ಆ ಒಂದು ಮಾತು ಲಾವಾರಸದಂತೆ ಕುದಿಯುತ್ತಿದ್ದ ಯಡಿಯೂರಪ್ಪರನ್ನು ತಣ್ಣಗಾಗಿಸಿತ್ತು..!

ಈ ಸುದ್ದಿಯನ್ನು ಶೇರ್ ಮಾಡಿ

Anant-Kumar-And-BSY

ಬೆಂಗಳೂರು, ನ.12- ನಮ್ಮ-ನಿಮ್ಮ ನಡುವೆ ಏನೇ ವಿರಸ, ವೈಮನಸ್ಯಗಳಿರಲಿ. ಆದರೆ, ಕಾಂಗ್ರೆಸ್ ವಿರುದ್ಧ ಹೋರಾಟ ಮಾಡುವ ವಿಷಯ ಬಂದಾಗ ನಾವಿಬ್ಬರೂ ಅಣ್ಣ-ತಮ್ಮಂದಿರಂತೆ…  ಈ ಮಾತುಗಳು ಲಾವಾರಸದಂತೆ ಕುದಿಯುತ್ತಿದ್ದ ಯಡಿಯೂರಪ್ಪ ಅವರನ್ನು ಕ್ಷಣ ಮಾತ್ರದಲ್ಲೇ ತಣ್ಣಗಾಗಿಸಿ ಪ್ರಶಾಂತಗೊಳಿಸಿದ್ದವು.  ಅದು 2006ರ ವರ್ಷ. ಜೆಡಿಎಸ್-ಬಿಜೆಪಿ ಮಿತ್ರ ಕೂಟದಲ್ಲಿ ಸರ್ಕಾರ ರಚನೆಯಾಗಿತ್ತು. ದಕ್ಷಿಣ ಭಾರತದಲ್ಲೇ ಪ್ರಥಮ ಬಾರಿಗೆ ಬಿಜೆಪಿ ಕರ್ನಾಟಕದಲ್ಲಿ ಅಧಿಕಾರದ ಗದ್ದುಗೆಗೇರಿತ್ತು. ಯಡಿಯೂರಪ್ಪ ಅವರು ಉಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ಅನಂತರ ಮೊದಲ ಬಾರಿಗೆ ನಗರದ ವುಡ್‍ಲ್ಯಾಂಡ್ ಹೋಟೆಲ್‍ನಲ್ಲಿ ಬಿಜೆಪಿ ಶಾಸಕಾಂಗ ಸಭೆ ಆಯೋಜನೆಗೊಂಡಿತ್ತು.

ಆ ಸಭೆಗೂ ಮುನ್ನಾ ನಡೆದ ಮಾತುಕತೆಯಲ್ಲಿ ಯಡಿಯೂರಪ್ಪ ಮತ್ತು ಅನಂತ್‍ಕುಮಾರ್ ನಡುವೆ ಸಂಘರ್ಷಮಯವಾದ ವಾತಾವರಣ ನಿರ್ಮಾಣವಾಗಿತ್ತು. ಅನಂತ್‍ಕುಮಾರ್ ಅನಗತ್ಯವಾಗಿ ರಾಜ್ಯ ರಾಜಕಾರಣದಲ್ಲಿ ಮೂಗು ತೂರಿಸುತ್ತಿದ್ದಾರೆ ಎಂದು ಯಡಿಯೂರಪ್ಪ ಸಿಟ್ಟಾಗಿದ್ದರು. ಅವರಿಬ್ಬರ ನಡುವೆ ಅಳತೆ ಮೀರಿದ ಸಂಘರ್ಷ ನಡೆದಿತ್ತು ಎಂಬ ವದಂತಿಗಳು ಹಬ್ಬಿದ್ದವು. ಅದಕ್ಕೆ ಪೂರಕ ಎಂಬಂತೆ ಅನಂತ್‍ಕುಮಾರ್ ಅವರ ಮಾತುಕತೆಯ ನಂತರ ಕೊಠಡಿಯಿಂದ ಹೊರ ಬಂದ ಯಡಿಯೂರಪ್ಪ ಅವರು ಧುಮುಗುಡುತ್ತಿದ್ದರು. ಅಲ್ಲಿಂದ ನೇರವಾಗಿ ಶಾಸಕಾಂಗ ಸಭೆ ನಡೆಯುವ ಸಭಾಂಗಣಕ್ಕೆ ತೆರಳಿ ವೇದಿಕೆ ಏರಿದ್ದರು. ಅವರ ಹಿಂದೆಯೇ ಅನಂತ್‍ಕುಮಾರ್ ಕೂಡ ಆಗಮಿಸಿ ವೇದಿಕೆಯಲ್ಲಿ ಆಸೀನರಾದರು.

ಮೊದಲು ಮಾತನಾಡಲು ಅವಕಾಶ ಪಡೆದ ಅನಂತ್‍ಕುಮಾರ್ ಅವರು, ನಮ್ಮ-ನಿಮ್ಮ ನಡುವೆ ಏನೇ ಮಾತುಕತೆಗಳು ನಡೆದರೂ ಅದು ಮುಖ್ಯ ಅಲ್ಲ. ನಮ್ಮಿಬ್ಬರ ಗುರಿಯೂ ಒಂದೇ. ಅದು ಕಾಂಗ್ರೆಸನ್ನು ಸೋಲಿಸುವುದು. ಈ ವಿಷಯ ಬಂದಾಗ ನಾವಿಬ್ಬರೂ ಅಣ್ಣ-ತಮ್ಮಂದಿರು ಇದ್ದಂತೆ ಎಂದು ನಗುತ್ತಲೇ ಹೇಳಿದರು. ಆವರೆಗೂ ಸಿಟ್ಟಾಗಿಯೇ ಕುಳಿತಿದ್ದ ಯಡಿಯೂರಪ್ಪ ಅನಂತ್‍ಕುಮಾರ್ ಅವರ ಮಾತು ಕೇಳಿ ಪ್ರಸನ್ನರಾದರು.ತಮ್ಮ ಮಾತಿನ ಸರತಿ ಬಂದಾಗ ಅನಂತ್‍ಕುಮಾರ್ ಅವರನ್ನು ಉಲ್ಲೇಖಿಸಿ ಪಕ್ಷಕ್ಕಾಗಿ ಇಬ್ಬರೂ ದುಡಿಯೋಣ ಎಂದು ಹೇಳುವ ಮೂಲಕ ಯಡಿಯೂರಪ್ಪ ಅವರು ಸಂಘರ್ಷಮಯವಾದ ವಾತಾವರಣೆಕ್ಕೆ ತೆರೆ ಎಳೆದಿದ್ದರು.

ಬಿಜೆಪಿ-ಜೆಡಿಎಸ್‍ನ 20:20 ಒಪ್ಪಂದ ವಿಫಲಗೊಂಡು ವಿಧಾನಸಭೆ ಚುನಾವಣೆ ಎದುರಾದಾಗ ಎಲ್ಲಾ ಮನಸ್ತಾಪಗಳನ್ನು ಬದಿಗಿಟ್ಟು ಅನಂತ್‍ಕುಮಾರ್ ಅವರು ಯಡಿಯೂರಪ್ಪ ಅವರ ಜತೆ ರಾಜ್ಯ ಪ್ರವಾಸ ಮಾಡಿದರು. 2008ರ ಚುನಾವಣೆಯಲ್ಲಿ ಬಿಜೆಪಿ ಹೆಚ್ವು ಸ್ಥಾನಗಳನ್ನು ಗಳಿಸಿ ಪಕ್ಷೇತರ ಶಾಸಕರ ಬೆಂಬಲದೊಂದಿಗೆ ಸರ್ಕಾರ ರಚಿಸಿದಾಗ ನಡೆದ ಮೊದಲ ಶಾಸಕಾಂಗ ಸಭೆಯಲ್ಲಿ ಅನಂತ್‍ಕುಮಾರ್ ಅವರು, ಯಡಿಯೂರಪ್ಪ ಅವರು ದಕ್ಷಿಣ ಭಾರತ ರಾಜ್ಯ ಕರ್ನಾಟಕದ ಬಿಜೆಪಿಯ ಮೊದಲ ಮುಖ್ಯಮಂತ್ರಿ.

ಹಾಗೆಯೇ ಈವರೆಗೂ ವಿರೋಧ ಪಕ್ಷವಾಗಿದ್ದ ಬಿಜೆಪಿಯ ಅಧ್ಯಕ್ಷರಾಗಿದ್ದ ಡಿ.ವಿ.ಸದಾನಂದಗೌಡರು ಇನ್ನು ಮುಂದೆ ಆಡಳಿತ ಪಕ್ಷದ ಅಧ್ಯಕ್ಷರಾಗಿರುತ್ತಾರೆ ಎಂದು ಸಂದರ್ಭೋಚಿತವಾಗಿ ಹೇಳಿ ಪಕ್ಷದ ಹೊಸ ಭರವಸೆಗಳಿಗೆ ರೆಕ್ಕೆ-ಪುಕ್ಕ ಕಟ್ಟಿಕೊಟ್ಟಿದ್ದರು. ಸಮಯ, ಸಂದರ್ಭಕ್ಕನುಗುಣವಾಗಿ ತಮ್ಮ ಮಾತುಗಳನ್ನು ಜೋಡಿಸಿಕೊಳ್ಳುತ್ತಿದ್ದ ಅನಂತ್‍ಕುಮಾರ್, ಅತ್ಯಂತ ಪ್ರಕರ ವಾಗ್ಮಿ. ಅವರ ಮಾತುಗಳಲ್ಲೇ ಮಂತ್ರಶಕ್ತಿ ಇತ್ತು. ಎಲ್ಲಾ ಕ್ಷೇತ್ರಗಳ ಬಗ್ಗೆಯೂ ಅತ್ಯಂತ ಕರಾರುವಕ್ಕಾಗಿ ಅಧಿಕೃತವಾಗಿ ಮಾತನಾಡಬಲ್ಲ ಸಾಮಥ್ರ್ಯ ಅನಂತ್‍ಕುಮಾರ್ ಅವರಿಗಿತ್ತು.

Facebook Comments