ಕಲಿಕೆಗೆ ಅಡ್ಡಿಯಾಗುವ ಎಳೆ ಮಕ್ಕಳ ಶ್ರವಣ ದೋಷ ನಿವಾರಣೆಗೆ ಇಲ್ಲಿದೆ ಪರಿಹಾರ

ಈ ಸುದ್ದಿಯನ್ನು ಶೇರ್ ಮಾಡಿ

hearingಭಾರತದಲ್ಲಿ ಪ್ರತಿ ಐದು ನಿಮಿಷಕ್ಕೆ ಒಂದು ಮಗು ಶ್ರವಣ ದೋಷದಿಂದ ಜನಿಸುತ್ತಿದ್ದು, ಮಕ್ಕಳಲ್ಲಿ ಕಂಡುಬರುವ ಶ್ರವಣ ಸಮಸ್ಯೆಗಳ ಬಗ್ಗೆ ಹಾಗೂ ಅವುಗಳ ಭಾವನಾತ್ಮಕ ಮತ್ತು ಸಾಮಾಜಿಕ ಪರಿಣಾಮಗಳ ಬಗ್ಗೆ ಅರಿವು ಮೂಡಿಸುವ ಅಗತ್ಯವಿದೆ. ಶ್ರವಣದೋಷ ಹೊಂದಿರುವ ಮಕ್ಕಳನ್ನು ನಿರ್ಣಾಯಕ ಅವಧಿಗಿಂತ ತುಂಬಾ ತಡವಾಗಿ ಗುರುತಿಸಲಾಗುತ್ತಿದ್ದು, ಭಾರತದಲ್ಲಿ ಇದು ಪತ್ತೆಯಾಗುವ ಸರಾಸರಿ ವಯಸ್ಸು ನಾಲ್ಕು ಅಥವಾ ಅದಕ್ಕೂ ಮೇಲ್ಪಟ್ಟದ್ದು.ಮಗು ಶಾಲಾ ವಯಸ್ಸನ್ನು ತಲುಪುವವರೆಗೂ ಪೋಷಕರು ಅದರ ಸಮಸ್ಯೆಯನ್ನು ಗುರುತಿಸುವುದಿಲ್ಲ. ಶಾಲೆಗೆ ಸೇರಿದಾಗ ಮಗುವಿನ ಸಮಸ್ಯೆ ಗೊತ್ತಾಗುತ್ತದೆ. ಇದರಿಂದಾಗಿ ಮಕ್ಕಳು ಭಾಷೆಯ ಕಲಿಕೆಯ ವಿಳಂಬವನ್ನು ಎದುರಿಸುತ್ತಾರೆ. ಇದರ ಪರಿಣಾಮವಾಗಿ ಕಳಪೆ ಸಾಮಾಜಿಕ ಕೌಶಲ್ಯಗಳು, ಶೈಕ್ಷಣಿಕ ಕಾರ್ಯಕ್ಷಮತೆ ಮತ್ತು ತಡವಾದ ಅರಿವಿನ ಕೌಶಲ್ಯಗಳು ಕಂಡುಬರುತ್ತಿದ್ದು, ಪಾಲಕರಿಗೆ ಮಕ್ಕಳ ಶ್ರವಣ ನ್ಯೂನ್ಯತೆ ಕಾರಣಗಳು, ಚಿಹ್ನೆಗಳು ಅಥವಾ ಕಿವುಡುತನದ ಪರಿಣಾಮಗಳ ಬಗ್ಗೆ ತಿಳಿದಿರುವುದಿಲ್ಲ ಮತ್ತು ಮಕ್ಕಳಲ್ಲಿ ಶ್ರವಣ ದೋಷದ ಆರಂಭಿಕ ಚಿಹ್ನೆಗಳು, ಲಕ್ಷಣಗಳನ್ನು ಗುರುತಿಸಲು ಅಥವಾ ಪತ್ತೆ ಮಾಡಲು ವಿಫಲರಾಗುತ್ತಾರೆ.

ಒಂದು ವರದಿ ಪ್ರಕಾರ, ಶೇ.10ರಷ್ಟು ನವಜಾತ ಶಿಶುಗಳು ಶ್ರವಣ ದೋಷದಿಂದ ಬಳಲುತ್ತವೆ. ಮೊದಲ ಮೂರು ವರ್ಷಗಳು ಮಗುವಿನ ಮಾತು ಮತ್ತು ಭಾಷಾ ಕೌಶಲ್ಯತೆಯನ್ನು ನಿರ್ಣಯಿಸುತ್ತವೆ. ಶ್ರವಣ ನ್ಯೂನ್ಯತೆಯನ್ನು ಸಕಾಲದಲ್ಲಿ ಗುರುತಿಸದಿದ್ದಲ್ಲಿ ಇಂಥ ಮಕ್ಕಳು ಮಾತು ಕಲಿಯಲು ತೊಡಕುಂಟಾಗಿ, ಮಾನಸಿಕ ಮತ್ತು ಶೈಕ್ಷಣಿಕ ಬೆಳವಣಿಗೆಯಲ್ಲಿಯೂ ಹಿಂದುಳಿಯುತ್ತಾರೆ. ಭಾರತದಲ್ಲಿ ಪ್ರತಿ ವರ್ಷ ಒಂದು ಲಕ್ಷ ಮಕ್ಕಳು ಶ್ರವಣ ದೋಷದಿಂದ ಹುಟ್ಟುತ್ತಿದ್ದು, ಕರ್ನಾಟಕದಲ್ಲಿ ಸುಮಾರು 33 ಲಕ್ಷ ಮಕ್ಕಳು ಶ್ರವಣ ದುರ್ಬಲತೆಯನ್ನು ಅನುಭವಿಸುತ್ತಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‍ಒ) ಅಧ್ಯಯನದ ಪ್ರಕಾರ, ಐದು ದಶಲಕ್ಷಕ್ಕೂ ಹೆಚ್ಚು ಭಾರತೀಯ ಮಕ್ಕಳು 2016ರಲ್ಲಿ ಶ್ರವಣ ದುರ್ಬಲತೆ ಹೊಂದಿದ್ದಾರೆ. ಪ್ರತಿ ಸಾವಿರ ಮಕ್ಕಳಲ್ಲಿ ಎಲ್ಲರೂ ಗಂಭೀರ ಕಿವುಡುತನದಿಂದ ಬಳಲುತ್ತಿದ್ದಾರೆ.ಮಕ್ಕಳ ಶ್ರವಣ ಕೊರತೆ ಗುರುತಿಸಲು ಪೋಷಕರಿಗೆ ಕಿವಿಮಾತು: ಹುಟ್ಟಿನಿಂದ ಮೂರು ತಿಂಗಳವರೆಗೆ ಬಾಗಿಲು ಬಡಿತ, ಪಟಾಕಿ ಸದ್ದು, ಪಾತ್ರೆಗಳ ಶಬ್ದಗಳಿಂದ ಮಕ್ಕಳು ಬೆಚ್ಚಿ ಬೀಳುವುದು ಮತ್ತು ನಿದ್ದೆಯಿಂದ ಎಚ್ಚರ ಗೊಳ್ಳುವುದನ್ನು ಗಮನಿಸಬೇಕು.

3 ರಿಂದ 6 ತಿಂಗಳೊಳಗೇ ಮಗು ತಾಯಿಯ ಧ್ವನಿಗೆ ಪ್ರತಿಕ್ರಿಯಿಸುತ್ತದೆ. ತನ್ನಷ್ಟಕ್ಕೆ ತಾನೇ ಶಬ್ದಗಳನ್ನು ಮಾಡಿ ಮನೆಯವರ ಗಮನ ಸೆಳೆಯುತ್ತದೆ.ಅಲ್ಲದೆ, 6 ರಿಂದ 9 ತಿಂಗಳವರೆಗೆ ಶಬ್ದ ಮಾಡುವ ಆಟಿಕೆಗಳನ್ನು ಹೆಚ್ಚಾಗಿ ಇಷ್ಟ ಪಡುತ್ತದೆ ಹಾಗೂ ತನ್ನ ಸುತ್ತಮುತ್ತಲಿನ ವಸ್ತುಗಳ ಹೆಸರು ಹಾಗೂ ಕುಟುಂಬದವರನ್ನು ಗುರುತಿಸುತ್ತದೆ.ಒಂದು ವೇಳೆ ಮಗು ಇದಾವುದನ್ನೂ ಮಾಡದಿದ್ದರೆ ಏನೋ ಸಮಸ್ಯೆ ಇದೆ ಎಂಬುದನ್ನು ಪೋಷಕರು ಅರಿಯಬೇಕು.ಶ್ರವಣ ತಪಾಸಣೆಯ ಅರಿವು: ಶ್ರವಣ ಸಾಧನ ಉಪಕರಣ, ಕೊಕ್ಲಿ ಯರ್ ಇಂಫ್ಲಾಂಟ್ ಹಾಗೂ ಸನ್ನೆಗಳ ಮೂಲಕ ತರಬೇತಿಯಿಂದ ಮಾತನ್ನು ಮಗು ಕಲಿಯಬಹುದು. ಶ್ರವಣ ತಪಾಸಣೆ ಹಾಗೂ ಸರಿಯಾದ ಶ್ರವಣೋಪಕರಣಗಳನ್ನು ಶ್ರವಣ ತಜ್ಞರಿಂದ ಪಡೆಯಬಹುದು. ಸೂಕ್ತ ತುರ್ತು ಮಧ್ಯಸ್ಥಿಕೆ ಕೇಂದ್ರಗಳಲ್ಲಿ ಪೋಷಕರಿಗೆ ತಮ್ಮ ಮಕ್ಕಳನ್ನು ಹೇಗೆ ಮಾತನಾಡಿಸಬೇಕು ಎಂಬ ಬಗ್ಗೆ ತರಬೇತಿ ಕೊಡಲಾಗುವುದು. ಇದರ ಉಪಯೋಗ ಪಡೆದುಕೊಳ್ಳಬಹುದು. ಹೆಚ್ಚಿನ ಸಲಹೆಗಾಗಿ 9845058844ಅನ್ನು ಸಂಪರ್ಕಿಸಬಹುದು.

ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ದೇಶದಲ್ಲಿ 10 ಕೋಟಿ ಮಂದಿ ಶ್ರವಣ ದೋಷ ಹೊಂದಿದ್ದು, ಭಾರತ ವಿಶ್ವದಲ್ಲೇ ಮೊದಲ ಸ್ಥಾನದಲ್ಲಿದೆ. ಸಂಬಂಧಗಳಲ್ಲಿ ವಿವಾಹವಾಗುವುದು, ಧೂಮಪಾನ, ಸ್ವಯಂ ಔಷಧೋಪಚಾರ, ಮಗು ಹುಟ್ಟಿದ ಆರು ತಿಂಗಳಲ್ಲಿ ಕಿವಿಸೋಂಕು ಆದಾಗ ಚಿಕಿತ್ಸೆ ಕೊಡಿಸದೆ ಇರುವುದು ಇವು ಶ್ರವಣ ನ್ಯೂನ್ಯತೆಗೆ ಪ್ರಮುಖ ಕಾರಣವಾಗಿವೆ ಎಂದು ಶ್ರವಣ ತಜ್ಞ ಡಾ.ಎಂ.ಎಸ್.ಜೆ.ನಾಯಕ್ ತಿಳಿಸಿದ್ದಾರೆ.ಸರ್ಕಾರಕ್ಕೆ ಬ್ರೆಟ್‍ಲೀ ಮನವಿ: ಶ್ರವಣ ದೋಷ ಭಾರತದಲ್ಲಿ ಎರಡನೆ ಅತಿದೊಡ್ಡ ಅಂಗವೈಕಲ್ಯವಾಗಿದ್ದು, ಇಷ್ಟಾಗಿಯೂ ಜನರಿಗೆ ಇದರ ಅರಿವಿಲ್ಲದಿರುವುದು ವಿಷಾದನೀಯ. ಹೀಗಾಗಿ ನವಜಾತ ಶಿಶುಗಳ ಶ್ರವಣ ಸಾಮಥ್ರ್ಯ ತಪಾಸಣೆ ಕಡ್ಡಾಯಗೊಳಿಸಲು ಕ್ರಿಕೆಟ್ ಪಟು ಬ್ರೆಟ್‍ಲೀ ಇತ್ತೀಚೆಗಷ್ಟೆ ಸರ್ಕಾರಕ್ಕೆ ಮನವಿ ಮಾಡಿದ್ದರು.
ಅಭಿವೃದ್ಧಿ ಹೊಂದಿದ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಶ್ರವಣ ಸಾಮಥ್ರ್ಯದ ಬಗ್ಗೆ ನವಜಾತ ಶಿಶುಗಳನ್ನು ತಪಾಸಣೆಗೆ ಒಳಪಡಿಸುವ ವ್ಯವಸ್ಥೆಯಿಲ್ಲ. ಆದರೆ, ವಿದೇಶಗಳಲ್ಲಿ ಸಾರ್ವತ್ರಿಕವಾಗಿ ನವಜಾತ ಶಿಶುಗಳ ಶ್ರವಣ ಸ್ಕ್ರೀನಿಂಗ್ ಮಾಡುವುದು ಕಡ್ಡಾಯವಾಗಿದೆ. ಶ್ರವಣ ದೋಷಗಳ ಬಗ್ಗೆ ಜನರು ಎಚ್ಚೆತ್ತು ಕೊಳ್ಳದಿದ್ದರೆ 2050ರ ವೇಳೆಗೆ 900 ದಶಲಕ್ಷ ಮಂದಿ ಶ್ರವಣ ದೋಷದಿಂದ ಬಳಲುವ ಸಾಧ್ಯತೆ ಇದ್ದು, ಇದರ ಜಾಗೃತಿ ಅವಶ್ಯಕವಾಗಿದೆ ಎಂದು ತಜ್ಞ ವೈದ್ಯರು ಸಲಹೆ ನೀಡಿದ್ದಾರೆ.

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )