ಮನುಷ್ಯ ದೇವರು ನಿರ್ಮಿಸಿದ ರಾಕೆಟ್, ಗಮ್ಯ ಮೊದಲೆ ನಿರ್ಧಾರವಾಗಿರುತ್ತೆ..!

ಈ ಸುದ್ದಿಯನ್ನು ಶೇರ್ ಮಾಡಿ

Anant-Kumar

ಮನುಷ್ಯ ಕೂಡಾ ಒಂದು ರಾಕೆಟ್ ಇದ್ದಂತೆ. ಆದರೆ ಆತ ಮನುಷ್ಯ ನಿರ್ಮಿತ ರಾಕೆಟ್ ಅಲ್ಲ. ದೇವರು ನಿರ್ಮಿಸಿದ ರಾಕೆಟ್. ಹೀಗಾಗಿ ಅದು ಇಂತಲ್ಲೇ ಹೋಗಿ ತಲುಪಬೇಕು ಅಂತಿಲ್ಲ. ಅದು ಎಲ್ಲಿಗೆ ತಲುಪಬೇಕು ಅಂತ ಮೊದಲೇ ನಿರ್ಧಾರವಾಗಿರುತ್ತದೆ. ಹೀಗಾಗಿ ನೀವು ಕೇಳುತ್ತಿರುವ ಪ್ರಶ್ನೆಗೆ ನನ್ನ ಬಳಿ ಉತ್ತರವಿಲ್ಲ ಅಂತ ಅವರು ಹೇಳಿದ್ದರು.

ಅವರ ಹೆಸರು ಅನಂತಕುಮಾರ್. ಅವತ್ತು ನಾವು ದೆಹಲಿಯ ಅವರ ಮನೆಯಲ್ಲಿದ್ದೆವು. ಸುಮಾರು ಹನ್ನೆರಡು ವರ್ಷಗಳ ಹಿಂದಿನ ಮಾತಿದು. ಆ ಸಂದರ್ಭದಲ್ಲಿ ಕೇಂದ್ರದ ಅಧಿಕಾರ ಸೂತ್ರ ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಕೈಲಿತ್ತು. ಅನಂತಕುಮಾರ್ ಸಂಸದರಾಗಿದ್ದರು.ದೆಹಲಿಗೆ ಪ್ರವಾಸಕ್ಕೆಂದು ಹೋದಾಗ ವಿಷಯ ತಿಳಿದ ಅನಂತಕುಮಾರ್, ವಿಠಲ್ ಮೂರ್ತಿ, ಮನೆಗೆ ಬಂದು ಹೋಗಿ ಎಂದಿದ್ದರು. ಆಗವರು ದಿಲ್ಲಿಯ ತುಘಲಕ್ ಪ್ರೆಸೆಂಟ್ ರಸ್ತೆಯ ಮನೆಯಲ್ಲಿದ್ದರು ಅಂತ ನೆನಪು. ಮನೆಗೆ ಹೋದರೆ ಅಡುಗೆ ಮಾಡುವವನನ್ನು ಬಿಟ್ಟರೆ ಯಾರೂ ಇರಲಿಲ್ಲ. ನಮ್ಮನ್ನು ಅನಂತಕುಮಾರ್ ಅವರೇ ವಿಶ್ವಾಸದಿಂದ ಸ್ವಾಗತಿಸಿದರು. ಆ ಹೊತ್ತಿಗಾಗಲೇ ಕರ್ನಾಟಕದಲ್ಲಿ ಬಿಜೆಪಿ ಅತ್ಯಂತ ದೊಡ್ಡ ಶಕ್ತಿಯಾಗಿ ಬೆಳೆದು ನಿಂತಿತ್ತು. 2004 ರ ವಿಧಾನಸಭಾ ಚುನಾವಣೆಯಲ್ಲಿ ಅದು ಗಳಿಸಿದ್ದು 79 ಸೀಟು. ಅವತ್ತು ಜೆಡಿಎಸ್ ಮನಸ್ಸು ಮಾಡಿದ್ದರೆ ಬಿಜೆಪಿ-ಜೆಡಿಎಸ್ ಮೈತ್ರಿಕೂಟ ಸರ್ಕಾರ ರಚನೆಯಾಗುತ್ತಿತ್ತು.. ಅನಂತಕುಮಾರ್ ಈ ನಾಡಿನ ಮುಖ್ಯಮಂತ್ರಿಯೋ, ಉಪಮುಖ್ಯಮಂತ್ರಿಯೋ ಆಗುತ್ತಿದ್ದರು. ಅವರದಕ್ಕೆ ಅರ್ಹರೂ ಆಗಿದ್ದರು. ಯಾಕೆಂದರೆ 2004 ರ ಚುನಾವಣೆಯಲ್ಲಿ ಬಿಜೆಪಿಯನ್ನು ಮುನ್ನಡೆಸಿದವರೇ ಅನಂತಕುಮಾರ್.

ಆ ಸಂದರ್ಭದಲ್ಲಿ ಬಂಗಾರಪ್ಪ, ರಾಜಶೇಖರ ಮೂರ್ತಿ ಸೇರಿದಂತೆ ಅತಿರಥ-ಮಹಾರಥ ನಾಯಕರನ್ನು ಬಿಜೆಪಿಗೆ ಕರೆದುಕೊಂಡು ಬಂದವರೇ ಅನಂತಕುಮಾರ್. ಹಾಗಂತಲೇ ಜೆಡಿಎಸ್ ಜತೆ ಸೇರಿ ಮೈತ್ರಿಕೂಟ ರಚಿಸಲು ಅನಂತಕುಮಾರ್ ಕಸರತ್ತು ನಡೆಸಿದರು. ಅರುಣ್ ಜೇಟ್ಲಿ ಅವರೊಂದಿಗೆ ಸೇರಿ ದೇವೇಗೌಡರ ಮಗ ಕುಮಾರಸ್ವಾಮಿ ಜತೆ ಮಾತುಕತೆ ನಡೆಸಿದರು. ಆದರೆ ಮಾತುಕತೆ ವರ್ಕ್ ಔಟï ಆಗಲಿಲ್ಲ. ಮುಂದೆ ಬಿಜೆಪಿಯ ರಾಜ್ಯ ನಾಯಕತ್ವಕ್ಕಾಗಿ ಸಂಘರ್ಷ ನಡೆದಾಗ, ಯಡಿಯೂರಪ್ಪ ಇಲ್ಲಿಗೆ, ಅನಂತಕುಮಾರ್ ದಿಲ್ಲಿಗೆ ಎಂದು ಕೇಂದ್ರ ನಾಯಕರು ನಿರ್ಧರಿಸಿದರು. ಅದಾದ ನಂತರ ಅನಂತಕುಮಾರ್ ದಿಲ್ಲಿಯ ರಾಜಕಾರಣದಲ್ಲೇ ಸೆಟ್ಲಾದರು. ಆದರೆ ಒಂದು ಬಾರಿ ಕರ್ನಾಟಕದ ಮುಖ್ಯಮಂತ್ರಿಯಾಗುವ ಆಸೆ ಅವರಿಗಿತ್ತು.

ಹಾಗಂತಲೇ ದಿಲ್ಲಿಯ ಅವರ ನಿವಾಸಕ್ಕೆ ಹೋದಾಗ ಈ ಕುರಿತು ನಾನವರನ್ನು ಪ್ರಶ್ನಿಸಿದ್ದೆ. ಅದಕ್ಕವರು ವಿಠ್ಠಲಮೂರ್ತಿ, ಮನುಷ್ಯ ಎಂದರೆ ದೇವರು ನಿರ್ಮಿಸಿದ ರಾಕೆಟ್. ಮನುಷ್ಯನೇ ನಿರ್ಮಿಸಿದ ರಾಕೆಟ್ ಅನ್ನು ಯಾವ ಗಮ್ಯಕ್ಕೆ ಸೇರಿಸಬೇಕು ಎಂದು ನಿರ್ಧರಿಸಲಾಗಿರುತ್ತಿದೆ. ಆದರೆ ದೇವರು ನಿರ್ಮಿಸಿದ ರಾಕೆಟ್‍ನ ಗಮ್ಯವನ್ನು ದೇವರೇ ನಿರ್ಧರಿಸಿರುತ್ತಾನೆ. ಹೀಗಾಗಿ ನಾವು ಇಂತಲ್ಲಿಗೇ ತಲುಪುತ್ತೇವೆ ಎಂದು ಹೇಳಲಾಗದು. ಬದಲಿಗೆ ಆತ ತಲುಪಿಸಿದಲ್ಲಿಗೆ ಹೋಗಬೇಕು ಅಂತ ಹೇಳಿ ಮೌನವಾದರು.

ಅಂತಹ ಅನಂತಕುಮಾರ್ ಮತ್ತೆ ಕೇಂದ್ರ ಸಚಿವರಾದರು. ಈಗ ಇದ್ದಕ್ಕಿದ್ದಂತೆ ತೀರಿಕೊಂಡಿದ್ದಾರೆ. ದೇವರು ತಲುಪಿಸಿದ ಗಮ್ಯಕ್ಕೆ ತಲುಪಿದ್ದಾರೆ. ಅವರ ಸಾವು ರಾಜ್ಯ ಮಾತ್ರವಲ್ಲ, ಇಡೀ ದೇಶಕ್ಕಾದ ನಷ್ಟ. ರಾಜ್ಯದ ಸಮಸ್ಯೆಗಳನ್ನು ಪರಿಹರಿಸಲು ಓಡೋಡಿ ಬರುತ್ತಿದ್ದ ಅನಂತ ಕುಮಾರ್ ಇನ್ನಿಲ್ಲವೆಂದರೆ ನಂಬುವುದು ಕಷ್ಟ. ದೇವರು ಅವರ ಆತ್ಮಕ್ಕೆ ಶಾಂತಿ ನೀಡಲಿ.

# ಆರ್.ಟಿ.ವಿಠ್ಠಲಮೂರ್ತಿ

Facebook Comments