ಮಾಜಿ ಸಚಿವೆಯನ್ನು ಬಂಧಿಸದ ಪೊಲೀಸರಿಗೆ ಸುಪ್ರೀಂ ಕೋರ್ಟ್ ತರಾಟೆ

ಈ ಸುದ್ದಿಯನ್ನು ಶೇರ್ ಮಾಡಿ

Manju-verma--01
ನವದೆಹಲಿ, ನ.13- ಮುಜಾಫರ್‍ಪುರ್ ಶೆಲ್ಟರ್ ಹೋಮ್ ಹಗರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿರುವ ಬಿಹಾರ ಮಾಜಿ ಸಚಿವೆ ಮಂಜು ವರ್ಮಾ ಅವರನ್ನು ಬಂಧಿಸದ ಬಿಹಾರ ಪೊಲೀಸರಿಗೆ ಸುಪ್ರೀಂ ಕೋರ್ಟ್ ತೀವ್ರ ತರಾಟೆಗೆ ತೆಗೆದುಕೊಂಡಿದೆ.

ಒಬ್ಬ ಕ್ಯಾಬಿನೆಟ್ ಸಚಿವರೊಬ್ಬರು ಇನ್ನೂ ಓಡುತ್ತಲೇ ಇದ್ದಾರೆ. ಸಚಿವರೊಬ್ಬರು ತಲೆಮರೆಸಿಕೊಳ್ಳುತ್ತಾರೆ ಮತ್ತು ಅವರು ಎಲ್ಲಿದ್ದಾರೆ ಎಂಬುದು ಯಾರೊಬ್ಬರಿಗೂ ತಿಳಿದಿಲ್ಲ. ಇದು ಹೇಗೆ ಸಾಧ್ಯ? ಸಚಿವರೊಬ್ಬರನ್ನು ಪತ್ತೆ ಹಚ್ಚಲು ಸಾಧ್ಯವಾಗುತ್ತಿಲ್ಲ ಎಂಬುದರ ಗಂಭೀರತೆ ಎಂಥದ್ದು ಎಂದು ನಿಮಗೆ ಗೊತ್ತಿದೆ. ಇದು ಅತಿಯಾಯಿತು ಎಂದು ನ್ಯಾಯಮೂರ್ತಿ ಮದನ್ ಬಿ.ಲೋಕುರ್ ಅವರು ಪೊಲೀಸರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಮಂಜು ವರ್ಮಾ ಅವರನ್ನು ಒಂದು ತಿಂಗಳಿಂದ ಪತ್ತೆ ಹಚ್ಚಲು ಸಾಧ್ಯವಾಗಿಲ್ಲ ಎಂಬುದನ್ನು ಕೇಳಿ ಶಾಕ್ ಆಗಿದೆ. ಪ್ರಮುಖ ವ್ಯಕ್ತಿಯೊಬ್ಬರನ್ನು ಪತ್ತೆ ಹಚ್ಚಲು ಏಕೆ ಸಾಧ್ಯವಾಗುತ್ತಿಲ್ಲ ಎಂಬುದರ ಬಗ್ಗೆ ಪೊಲೀಸ್ ಇಲಾಖೆ ನ್ಯಾಯಾಲಯದ ಮುಂದೆ ಬಂದು ಸ್ಪಷ್ಟೀಕರಣ ನೀಡಬೇಕು. ಮುಂದಿನ ವಿಚಾರಣೆಗೆ ಪೊಲೀಸ್ ಮಹಾ ನಿರ್ದೇಶಕರು ನ್ಯಾಯಾಲಯದ ಮುಂದೆ ಹಾಜರಾಗಬೇಕು ಎಂದು ತಾಕೀತು ಮಾಡಿದ ಸುಪ್ರೀಂ ಕೋರ್ಟ್, ವಿಚಾರಣೆಯನ್ನು ನ.27ಕ್ಕೆ ಮುಂದೂಡಿದೆ.

ಶೆಲ್ಟರ್ ಹೋಮ್ ಸೆಕ್ಸ್ ಹಗರಣದಲ್ಲಿ ತಮ್ಮ ಪತಿಯ ಪಾತ್ರವಿರುವ ಹಿನ್ನೆಲೆಯಲ್ಲಿ ಮಂಜು ವರ್ಮಾ ಅವರು ಕೆಲ ತಿಂಗಳ ಹಿಂದೆ ಸಚಿವ ಸ್ಥಾನಕ್ಕೆ ರಾಜೀನಾಮೆಯನ್ನೂ ಸಲ್ಲಿಸಿದ್ದರು. ತನಿಖೆಗೆಂದು ಸಿಬಿಐ ಅಧಿಕಾರಿಗಳು ಮಂಜು ವರ್ಮಾ ಅವರ ಪಾಟ್ನಾ ಮತ್ತು ಬೇಗುಸರಾಯಿ ನಿವಾಸದ ಮೇಲೆ ದಾಳಿ ನಡೆಸಿದಾಗ ಅವರ ಮನೆಯಲ್ಲಿ ಅಕ್ರಮ ಶಸ್ತ್ರಾಸ್ತ್ರಗಳು ಪತ್ತೆಯಾಗಿದ್ದವು. ಈ ವಿಚಾರವಾಗಿ ಮಂಜು ವರ್ಮಾ ಅವರನ್ನು ಬಂಧಿಸಿ ಕರೆತರುವಂತೆ ಸುಪ್ರೀಂಕೋರ್ಟ್ ಬಿಹಾರ ಪೊಲೀಸರಿಗೆ ಸೂಚನೆ ನೀಡಿದೆ.

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin