ಹೇಮಾವತಿ ಸಕ್ಕರೆ ಕಾರ್ಖಾನೆಗೆ ರೈತ ಮುತ್ತಿಗೆ

ಈ ಸುದ್ದಿಯನ್ನು ಶೇರ್ ಮಾಡಿ

shuraeಚನ್ನರಾಯಪಟ್ಟಣ, ನ.13- ಹೇಮಾವತಿ ಸಹಕಾರಿ ಸಕ್ಕರೆ ಕಾರ್ಖಾನೆ ಶ್ರೀನಿವಾಸಪುರ ಹಾಗೂ ಚಾಮುಂಡೇಶ್ವರಿ ಸಕ್ಕರೆ ಕಾರ್ಖಾನೆ ಮಾಲೀಕರ ಹಾಗೂ ಆಡಳಿತ ಮಂಡಳಿ ರೈತ ವಿರೋಧಿ ನೀತಿಗಳ ವಿರುದ್ದ ಕಾರ್ಖಾನೆಗೆ ರೈತರು ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. ರೈತ ನಾಯಕ ಪ್ರೊ.ಎಂ.ಡಿ.ನಂಜುಂಡಸ್ವಾಮಿ ಸ್ಥಾಪಿತ ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆ ಹಾಗೂ ಭೂಮಿ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ನೂರಾರು ಸದಸ್ಯರು ಹೇಮಾವತಿ ಸಕ್ಕರೆ ಕಾರ್ಖಾನೆಗೆ ಮುತ್ತಿಗೆ ಹಾಕಿದರು.

ಕಳೆದ ಅನೇಕ ವರ್ಷಗಳಿಂದ ಸುಮಾರು 18ಕೋಟಿ ರೈತರಿಗೆ ಹಣ ಬಾಕಿ ಉಳಿಸಿಕೊಂಡಿದ್ದು ಈ ಬಗ್ಗೆ ಕಳೆದೊಂದು ತಿಂಗಳಿಂದ ರೈತ ಸಂಘ ಸೇರಿದಂತೆ ಅನೇಕ ಸಂಘಟನೆಗಳು ಹಣ ಪಾವತಿಸುವುದಕ್ಕೆ ಗಡುವು ನೀಡಿದ್ದರೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ರಾಜ್ಯ ಕಾರ್ಯಾಧ್ಯಕ್ಷ ಅರಳಾಪುರ ಮಂಜೇಗೌಡ ಆರೋಪಿಸಿದರು. ಕಳೆದ ಅನೇಕ ವರ್ಷಗಳಿಂದ ರೈತರ ಕಬ್ಬಿನ ಬಾಕಿ ಪಾವತಿಸುವಂತೆ ಮನವಿ ನೀಡಿದ್ದರೂ, ಕಾರ್ಖಾನೆಯ ಆಡಳಿತ ಮಂಡಳಿ ಅಸಡ್ಡೆ ತೋರುತ್ತಿದ್ದಾರೆ, ಇದು ಒಳ್ಳೆಯ ಬೆಳವಣಿಗೆ ಅಲ್ಲ.

ರೈತರ ಕಷ್ಟಕ್ಕೆ ರಾಜ್ಯ ಸರ್ಕಾರ ಸೇರಿದಂತೆ ಕೇಂದ್ರ ಸರ್ಕಾರ ಸ್ಪಂದಿಸಬೇಕು, ಆದರೆ ಸರ್ಕಾರಗಳು ರೈತರ ಪರವಾಗಿ ನಿಲ್ಲುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಸರ್ಕಾರ 2550 ರೂ. ಹಣವನ್ನು ನಿಗಧಿ ಮಾಡಿದ್ದರೂ ಪ್ರತಿ ಟನ್‍ಗೆ ಕಾರ್ಖಾನೆಯವರು 2100 ರೂ.ಗಳನ್ನು ಹಣವನ್ನು ನೀಡುತ್ತಿದ್ದಾರೆ. ಇದರಿಂದ ರೈತರಿಗೆ ನಷ್ಟವಾಗುತ್ತಿದೆ, ಕಬ್ಬು ಬೆಳೆಯುವ ರೈತರ ಸಮಸ್ಯೆಗಳಿಗೆ ಅತೀ ಶೀಘ್ರವಾಗಿ ಜಿಲ್ಲಾಡಳಿತ ಹಾಗೂ ರಾಜ್ಯ ಸರ್ಕಾರ ಸ್ಪಂದಿಸಬೇಕೆಂದು ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ಜಿಲ್ಲಾ ಗೌರವಾಧ್ಯಕ್ಷ ಸಿದ್ದಪ್ಪ ಹೊನ್ನವರ, ಜಿಲ್ಲಾಧ್ಯಕ್ಷ ಕಣಗಲ್ ಮೂರ್ತಿ, ತಾಲ್ಲೂಕು ಅಧ್ಯೆಕ್ಷೆ ನಾಗರತ್ನ ಚಿನ್ನೇನಹಳ್ಳಿ, ಭೂಮಿ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ರಾಜ್‍ಕುಮಾರ್ ಸೇರಿದಂತೆ ವಿವಿಧ ಸಂಘಟನೆಯ ಅಧ್ಯಕ್ಷರುಗಳು, ಸದಸ್ಯರುಗಳು ಭಾಗವಹಿಸಿದ್ದರು.

Facebook Comments