ಕೆಲಸ ಕೊಡಿಸುವ ನೆಪದಲ್ಲಿ ಯುವತಿಯರ ಕಳ್ಳಸಾಗಣೆ ಮಾಡುತ್ತಿದ್ದವನು ಅಂದರ್

ಈ ಸುದ್ದಿಯನ್ನು ಶೇರ್ ಮಾಡಿ

crimeಬೆಂಗಳೂರು, ನ.14- ಹೊರರಾಜ್ಯದ ಯುವತಿಯರಿಗೆ ಲೇಡಿಸ್ ಸರ್ವೀಸ್ ಬಾರ್‍ಗಳಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ಮಾನವ ಕಳ್ಳಸಾಗಣೆ ಮಾಡಿಕೊಂಡು ಬಂದು ಅಕ್ರಮ ಬಂಧನದಲ್ಲಿರಿಸಿದ್ದ ಉಡುಪಿ ಮೂಲದ ವ್ಯಕ್ತಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಉಡುಪಿಯ ಬ್ರಹ್ಮಾವರ ನಿವಾಸಿ ಪ್ರವೀಣ್ ಶೆಟ್ಟಿ (38) ಬಂಧಿತ ಆರೋಪಿಯಾಗಿದ್ದು, ನಗರದ ನಾಗರಬಾವಿಯ ಪಾಪರೆಡ್ಡಿಪಾಳ್ಯದಲ್ಲಿ ವಾಸವಾಗಿದ್ದನು.

ಜ್ಞಾನಭಾರತಿ ಪೊಲೀಸ್ ಠಾಣೆ ವ್ಯಾಪ್ತಿಯ ನಾಗದೇವನಹಳ್ಳಿ ಯಲ್ಲಿ ಹೊರರಾಜ್ಯದ ಹುಡುಗಿಯರನ್ನು ಲೇಡಿಸ್ ಸರ್ವೀಸ್ ಬಾರ್‍ಗಳಲ್ಲಿ ಕೆಲಸ ಕೊಡಿಸುವುದಾಗಿ ಹೇಳಿ ನಗರಕ್ಕೆ ಕರೆತಂದು, ಅವರನ್ನು ಹೊರಗೆಲ್ಲೂ ಕಳುಹಿಸದೆ ಈತ ಅಕ್ರಮವಾಗಿ ಬಂಧನದಲ್ಲಿಟ್ಟುಕೊಂಡಿದ್ದನು.ಈ ಬಗ್ಗೆ ಸಿಸಿಬಿ ಪೊಲೀಸರಿಗೆ ಮಾಹಿತಿ ಲಭಿಸಿದೆ. ಈ ಆಧಾರದ ಮೇಲೆ ಸಿಸಿಬಿ ಪೊಲೀಸರು ಮನೆ ಮೇಲೆ ದಾಳಿ ಮಾಡಿ ಆರೋಪಿ ಪ್ರವೀಣ್‍ಶೆಟ್ಟಿಯನ್ನು ಬಂಧಿಸಿ ಮೊಬೈಲ್, 700ರೂ. ಹಣ ವಶಪಡಿಸಿ ಕೊಂಡಿದ್ದಾರೆ.

ಅಲ್ಲದೆ, ಆರೋಪಿ ಬಂಧನದಿಂದ ದೆಹಲಿ ಮೂಲದ ಮೂವರು ಹುಡುಗಿಯರು, ಪಂಜಾಬ್ ಮೂಲದ ಮೂವರು, ಮುಂಬೈ ಮೂಲದ ನಾಲ್ವರು, ರಾಜಸ್ಥಾನ ಮೂಲದ ನಾಲ್ವರು ಹಾಗೂ ಉತ್ತರ ಪ್ರದೇಶ ಮೂಲದ ಒಬ್ಬ ಯುವತಿ ಸೇರಿದಂತೆ 14 ಯುವತಿಯರನ್ನು ರಕ್ಷಿಸಿದ್ದಾರೆ. ಅಪರಾಧ ವಿಭಾಗದ ಅಪರ ಪೊಲೀಸ್ ಆಯುಕ್ತ ಅಲೋಕ್‍ಕುಮಾರ್, ಉಪಪೊಲೀಸ್ ಆಯುಕ್ತ ಗಿರೀಶ್, ಸಿಸಿಬಿಯ ಎಸಿಪಿ ಮೋಹನ್‍ಕುಮಾರ್ ಅವರನ್ನೊಳ ಗೊಂಡ ತಂಡ ಈ ಕಾರ್ಯಾಚರಣೆ ನಡೆಸಿತ್ತು.  ಈ ಸಂಬಂಧ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )