ಋಣಮುಕ್ತಗೊಳ್ಳಲಿದೆ ರಾಜಾಜಿನಗರ ಆರ್‌ಟಿಒ ಆಫೀಸ್

ಈ ಸುದ್ದಿಯನ್ನು ಶೇರ್ ಮಾಡಿ

rtoಬೆಂಗಳೂರು, ನ.14-ಬಿಜೆಪಿ ಆಡಳಿತಾವಧಿಯಲ್ಲಿ ಅಡಮಾನ ಇಡಲಾಗಿದ್ದ ಮತ್ತೆರಡು ಪಾರಂಪರಿಕ ಕಟ್ಟಡಗಳನ್ನು ಋಣಮುಕ್ತಗೊಳಿಸುವ ಮಹತ್ವದ ತೀರ್ಮಾನಕ್ಕೆ ಬಿಬಿಎಂಪಿ ಬಂದಿದೆ. ಅಡಮಾನ ಇಡಲಾಗಿದ್ದ ರಾಜಾಜಿ ನಗರ ಆರ್‍ ಟಿ ಒ ಕಚೇರಿ ಸಂಕೀರ್ಣ ಹಾಗೂ ಸ್ಲಾಟರಿ ಹೌಸ್ ಕಟ್ಟಡಗಳನ್ನು ಋಣಮುಕ್ತಗೊಳಿಸಲಾಗುತ್ತಿದೆ.

ಶುಕ್ರವಾರ ಶಕ್ತಿಸೌಧದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಹುಡ್ಕೋ ಅಧಿಕಾರಿಗಳ ಸಮ್ಮುಖದಲ್ಲಿ ಎರಡು ಪಾರಂಪರಿಕ ಕಟ್ಟಡಗಳ ಋಣಮುಕ್ತ ಪತ್ರವನ್ನು ಡಿಸಿಎಂ ಹಾಗೂ ಬೆಂಗಳೂರು ಅಭಿವೃದ್ಧಿ ಸಚಿವರಾದ ಡಾ.ಜಿ.ಪರಮೇಶ್ವರ್ ಅವರು ಸ್ವೀಕರಿಸಲಿದ್ದಾರೆ. ಬಿಜೆಪಿ ಆಡಳಿತಾವಧಿಯಲ್ಲಿ ನಗರದ 11 ಪ್ರಮುಖ ಪಾರಂಪರಿಕ ಕಟ್ಟಡಗಳನ್ನು ಅಡಮಾನ ಇಡಲಾಗಿತ್ತು. ಬಿಜೆಪಿ ಅವಧಿ ಪೂರ್ಣಗೊಂಡು ಪಾಲಿಕೆಯಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ನೇತೃತ್ವದ ಆಡಳಿತ ಬಂದ ನಂತರ ಅಡಮಾನ ಇಡಲಾಗಿದ್ದ ಪಾರಂಪರಿಕ ಕಟ್ಟಡಗಳನ್ನು ಋಣಮುಕ್ತಗೊಳಿಸುವ ತೀರ್ಮಾನ ಕೈಗೊಳ್ಳಲಾಗಿತ್ತು.

ಮಂಜುನಾಥ್‍ರೆಡ್ಡಿ ಅವರು ಮೇಯರ್ ಆಗಿದ್ದ ಅವಧಿಯಲ್ಲಿ ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷರಾಗಿದ್ದ ಎಂ.ಶಿವರಾಜ್ ಅವರು ಅಡಮಾನ ಇಡಲಾಗಿದ್ದ 11 ಕಟ್ಟಡಗಳ ಪೈಕಿ ಕೆಂಪೇಗೌಡ ಮ್ಯೂಜಿಯಂ ಹಾಗೂ ಮೇಯೋಹಾಲ್ ಕಟ್ಟಡವನ್ನು ಋಣಮುಕ್ತಗೊಳಿಸಿದ್ದರು. ನಂತರದ ಅವಧಿಯಲ್ಲಿ ಮಲ್ಲೇಶ್ವರಂ ಹಾಗೂ ಜಾನ್ಸನ್ ಮಾರುಕಟ್ಟೆಗಳನ್ನು ಋಣಮುಕ್ತಗೊಳಿಸಲಾಗಿತ್ತು. ಇದೀಗ ಸ್ಲಾಟರಿ ಹೌಸ್ ಮತ್ತು ರಾಜಾಜಿನಗರ ಆರ್‍ಟಿಒ ಕಚೇರಿಗಳನ್ನು ಋಣಮುಕ್ತಗೊಳಿಸಲಾಗುತ್ತಿದೆ.

ಅಡಮಾನ ಇಡಲಾಗಿದ್ದ 11 ಆಸ್ತಿಗಳ ಪೈಕಿ ಈಗಾಗಲೇ ಆರು ಕಟ್ಟಡಗಳನ್ನು ಋಣಮುಕ್ತಗೊಳಿಸಲಾಗಿದ್ದು, ಶೀಘ್ರದಲ್ಲೇ ಉಳಿದ ಐದು ಪಾರಂಪರಿಕ ಕಟ್ಟಡಗಳನ್ನು ಋಣಮುಕ್ತಗೊಳಿಸಲಾಗುವುದು ಎಂದು ಬಿಬಿಎಂಪಿ ಆಡಳಿತ ಪಕ್ಷದ ನಾಯಕ ಎಂ.ಶಿವರಾಜ್ ತಿಳಿಸಿದ್ದಾರೆ.

Facebook Comments