”ಬಿಜೆಪಿಯಲ್ಲಿ ಹೀರೋಗಳಿಲ್ಲ, ಅದಕ್ಕಾಗಿ ಸರ್ದಾರ್ ಪ್ರತಿಮೆ ನಿರ್ಮಿಸಬೇಕಾಯಿತು ಮೋದಿ”

ಈ ಸುದ್ದಿಯನ್ನು ಶೇರ್ ಮಾಡಿ

Dinesh-Gundurao

ಬೆಂಗಳೂರು, ನ.14- ಬಿಜೆಪಿಯಲ್ಲಿ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಿದ ಯಾವ ಹೀರೋನೂ ಇಲ್ಲದಿರುವುದರಿಂದ ಅನಿವಾರ್ಯ ವಾಗಿ ಕಾಂಗ್ರೆಸ್‍ನ ಸರ್ದಾರ್ ವಲ್ಲಭಬಾಯ್ ಪಟೇಲ್ ಅವರ ಪ್ರತಿಮೆಯನ್ನು ಮೋದಿಯವರು ಗುಜರಾತ್‍ನಲ್ಲಿ ನಿರ್ಮಿಸಬೇಕಾಯಿತು ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್‍ಗುಂಡೂರಾವ್ ಹೇಳಿದರು. ಕೆಪಿಸಿಸಿ ಕಚೇರಿಯಲ್ಲಿಂದು ನೆಹರೂ ಜನ್ಮದಿನಾಚರಣೆ ಅಂಗವಾಗಿ ನೆಹರೂ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಅವರು,ಆಗರ್ಭ ಶ್ರೀಮಂತರಾಗಿದ್ದರೂ ನೆಹರೂ ಅವರು ದೇಶಕ್ಕಾಗಿ ಸ್ವಾತಂತ್ರ್ಯ ಚಳವಳಿಯಲ್ಲಿ ಧುಮುಕಿದ್ದರು. ಅವರ ತಂದೆ ಮೋತಿಲಾಲ್ ನೆಹರೂ ಅವರು ಚಳವಳಿಯಲ್ಲಿ ಭಾಗವಹಿಸುವಂತೆ ಪ್ರೇರೇಪಣೆ ನೀಡಿದ್ದರು.

ಸ್ವಾತಂತ್ರ್ಯಕ್ಕಾಗಿ 3259 ದಿನ ಸರಿಸುಮಾರು 10 ವರ್ಷಗಳ ಕಾಲ ಸೆರೆ ವಾಸ ಅನುಭವಿಸಿದ್ದ ನೆಹರೂ ಅವರನ್ನು ಆರ್‍ಎಸ್‍ಎಸ್ ಮತ್ತು ಬಿಜೆಪಿಯವರು ಪ್ರಶ್ನೆ ಮಾಡುತ್ತಿದ್ದಾರೆ. ಬಿಜೆಪಿ ಮತ್ತು ಆರ್‍ಎಸ್‍ಎಸ್‍ನ ಯಾವ ನಾಯಕರೂ ಸ್ವಾತಂತ್ರ್ಯಕ್ಕಾಗಿ 10 ದಿನ ಜೈಲು ವಾಸ ಅನುಭವಿಸಲಿಲ್ಲ. ಬ್ರಿಟಿಷರೊಂದಿಗೆ ಶಾಮೀಲಾಗಿ ತಮ್ಮ ಅನುಕೂಲಗಳನ್ನು ನೋಡಿಕೊಂಡರು. ಆದರೆ ನೆಹರೂ ಕುಟುಂಬ ದೇಶಕ್ಕಾಗಿ ಸಾಕಷ್ಟು ತ್ಯಾಗ ಮಾಡಿದೆ, ಬಲಿದಾನಗಳಾಗಿವೆ. ಆ ರೀತಿ ತ್ಯಾಗ ಮಾಡಿದ ಕುಟುಂಬ ದೇಶದಲ್ಲಿ ಮತ್ತೊಂದಿಲ್ಲ. ಬಿಜೆಪಿ ಮತ್ತು ಆರ್‍ಎಸ್‍ಎಸ್‍ಗೆ ಇದನ್ನು ಸಹಿಸಲು ಸಾಧ್ಯವಾಗುತ್ತಿಲ್ಲ.

ಜನಸಾಮಾನ್ಯರ ನಡುವೆ ನೆಹರೂ ಮತ್ತು ಅವರ ಕುಟುಂಬವನ್ನು ಖಳನಾಯಕರಂತೆ ಬಿಂಬಿಸುವುದು ಮತ್ತು ಕಳಂಕ ಹಚ್ಚುವ ಪ್ರಯತ್ನವನ್ನು ನಿರಂತರವಾಗಿ ಮಾಡಲಾಗುತ್ತಿದೆ. ಪ್ರಧಾನಿ ಮೋದಿಯವರು ಅಧಿಕಾರಕ್ಕೆ ಬಂದ ಬಳಿಕ ಮುರಳಿ ಮನೋಹರ್ ಜೋಷಿ, ಯಶ್ವಂತ್ ಸಿನ್ಹಾ ಅನೇಕ ಹಿರಿಯ ನಾಯಕರನ್ನು ಪಕ್ಷ ಬಿಟ್ಟು ಓಡಿಸಿದ್ದಾರೆ. ಅಡ್ವಾಣಿಯಂತಹವರು ಮಾತನಾಡಲಾಗದಂತಹ ಭಯದ ವಾತಾವರಣ ನಿರ್ಮಿಸಲಾಗಿದೆ. ನೆಹರೂ ಕಾಲದಲ್ಲಿ ಎಲ್ಲರಿಗೂ ಮಾತನಾಡುವ ಮುಕ್ತ ಸ್ವತಂತ್ರವಿತ್ತು, ಪ್ರಜಾಪ್ರಭುತ್ವವಿತ್ತು. ಮೋದಿಯಂತೆ ಸರ್ವಾಧಿಕಾರಿ ಆಡಳಿತ ಇರಲಿಲ್ಲವೆಂದು ಕಿಡಿಕಾರಿದರು.

ಬಿಜೆಪಿಯ ಯಾವ ನಾಯಕರೂ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿ ಹೀರೋಗಳಾಗಲಿಲ್ಲ.ಅದಕ್ಕಾಗಿ ಕಾಂಗ್ರೆಸ್‍ನ ಸರ್ದಾರ್ ವಲ್ಲಭಬಾಯ್ ಪಟೇಲ್, ಸುಭಾಷ್ ಚಂದ್ರಬೋಸ್ ಅಂತವರನ್ನು ನೆಹರು ಜೊತೆ ಹೋಲಿಕೆ ಮಾಡಿ ಒಡೆದಾಳುವ ಪ್ರಯತ್ನವನ್ನು ಬಿಜೆಪಿ ಮಾಡುತ್ತಿದೆ. ಪಟೇಲರ ಪ್ರತಿಮೆ ನಿರ್ಮಿಸಿದಂತೆ ಬಿಜೆಪಿಯ ಯಾವ ನಾಯಕರೂ ಪ್ರತಿಮೆ ನಿರ್ಮಿಸಿಕೊಳ್ಳುವಷ್ಟು ಅರ್ಹರಿಲ್ಲ. ತನ್ನ ಪಕ್ಷದ ಹಿರಿಯ ನಾಯಕರನ್ನೇ ಮೂಲೆ ಗುಂಪು ಮಾಡಿದ ಮೋದಿ, ಪಟೇಲ್ ಮತ್ತು ನೆಹರೂ ಅವರ ಸಂಬಂಧದ ಬಗ್ಗೆ ಮಾತನಾಡುತ್ತಾರೆ ಎಂದು ಅವರು ಲೇವಡಿ ಮಾಡಿದರು.

ಸುಳ್ಳು ಹೇಳಿ ಭಾವನಾತ್ಮಕ ವಿಷಯಗಳ ಮೇಲೆ ಅಧಿಕಾರ ಹಿಡಿಯುವ ಬಿಜೆಪಿಯನ್ನು ಮುಂದಿನ ಚುನಾವಣೆಯಲ್ಲಿ ಮನೆಗೆ ಕಳುಹಿಸುವ ಜವಾಬ್ದಾರಿ ಕಾಂಗ್ರೆಸ್ ಕಾರ್ಯಕರ್ತರ ಮೇಲಿದೆ ಎಂದು ಅವರು ಕರೆ ನೀಡಿದರು. ಪಕ್ಷದ ಹಿರಿಯ ನಾಯಕ ಎಚ್.ಹನುಮಂತಪ್ಪ ಮಾತನಾಡಿ, ಬಿಜೆಪಿಯವರ ಸುಳ್ಳು ಪ್ರಚಾರಗಳನ್ನು ಸಮರ್ಥವಾಗಿ ಎದುರಿಸಬೇಕಾದರೆ ಕಾಂಗ್ರೆಸ್ಸಿಗರು ಮೊದಲು ಇತಿಹಾಸವನ್ನು ಓದಬೇಕು ತಿಳಿದುಕೊಳ್ಳಬೇಕು. ಬಿಜೆಪಿ ಬರೀ ಸುಳ್ಳು ಹೇಳುತ್ತಲೇ ಜನರನ್ನು ಯಮಾರಿಸುತ್ತಿದೆ. ನೆಹರೂ ಅವರು ದೇಶಕ್ಕೆ ಕೊಟ್ಟ ಕೊಡುಗೆಯನ್ನು ತಿಳಿದುಕೊಂಡರೆ ಬಿಜೆಪಿಯ ಸುಳ್ಳು ಪ್ರಚಾರಕ್ಕೆ ತಕ್ಕ ಉತ್ತರ ನೀಡಲು ಸಾಧ್ಯ ಎಂದರು.

ನೆಹರೂ ಪ್ರಧಾನಿಯಾಗಿದ್ದಾಗ ಪಟೇಲ್ ಅವರು ವಿದೇಶಾಂಗ ಖಾತೆ ಸಚಿವರಾಗಿದ್ದರು. ಅವರು ವಿದೇಶ ಪ್ರವಾಸ ಮಾಡಿ ಬಂದ ಮೇಲೆ ರಾಷ್ಟ್ರಪತಿ ಅವರನ್ನು ಭೇಟಿ ಮಾಡಿ ವಿದೇಶದಲ್ಲಿ ನಡೆದ ಮಾತುಕತೆಗಳು, ಸಹಿ ಹಾಕಲಾದ ಒಪ್ಪಂದಗಳು ಮತ್ತು ಬೆಳವಣಿಗೆಗಳ ಬಗ್ಗೆ ವರದಿ ನೀಡುತ್ತಿದ್ದರು. ಆ ವರದಿ ಸಂಸತ್ತಿನಲ್ಲಿ ಚರ್ಚೆಯಾಗುತ್ತಿತ್ತು. ಈಗಿನ ಪ್ರಧಾನಿ ಮೋದಿಯವರು ವಿದೇಶಾಂಗ ಸಚಿವರನ್ನೂ ಬಿಟ್ಟು ತಾವೊಬ್ಬರೇ ವಿದೇಶಿ ಪ್ರವಾಸ ಮಾಡುತ್ತಾರೆ. ಅಲ್ಲಿ ಏನೆಲ್ಲಾ ಚರ್ಚೆಗಳಾದವು ಎಂಬುದು ರಾಷ್ಟ್ರಪತಿಗೂ ಹೇಳುವುದಿಲ್ಲ, ಸಂಸತ್‍ಗೂ ತಿಳಿಸುವುದಿಲ್ಲ. ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಹಿರಿಯ ನಾಯಕರಾದ ವೀರಣ್ಣ ಮತ್ತಿಕಟ್ಟಿ, ವಿಧಾನಪರಿಷತ್ ಸದಸ್ಯ ಪ್ರಕಾಶ್ ರಾಥೋಡ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ವೈ.ಘೋರ್ಪಡೆ, ಮುಖಂಡರಾದ ಶ್ರೀನಿವಾಸ್ ಮತ್ತಿತರರು ಹಾಜರಿದ್ದರು.

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin