ಅನಂತ ಕುಮಾರ್ ನಿಧನದಿಂದ ತೆರವಾದ ಬೆಂ.ದಕ್ಷಿಣ ಕ್ಷೇತ್ರಕ್ಕೆ ಚುನಾವಣೆ ನಡೆಯೋದು ಡೌಟ್..?

ಈ ಸುದ್ದಿಯನ್ನು ಶೇರ್ ಮಾಡಿ

Ananth-Kumar

ಬೆಂಗಳೂರು, ನ.14- ಕೇಂದ್ರ ಸಚಿವ ಅನಂತ ಕುಮಾರ್ ಅವರ ಅಕಾಲಿಕ ನಿಧನದಿಂದ ಬೆಂಗಳೂರು ದಕ್ಷಿಣ ಲೋಕಸಭಾ ಮತ ಕ್ಷೇತ್ರದ ಸ್ಥಾನ ತೆರವಾಗಿದ್ದು, ಈ ಸ್ಥಾನಕ್ಕೆ ಚುನಾವಣೆ ನಡೆಯುವುದು ಅನುಮಾನ ಎನ್ನುವ ಮಾಹಿತಿ ಲಭ್ಯವಾಗಿದೆ. ಮುಂದಿನ ಸಾರ್ವತ್ರಿಕ ಚುನಾವಣೆಗೆ ಕೇವಲ ಐದು ತಿಂಗಳು ಬಾಕಿ ಇದ್ದು, ಮೇ ಮೊದಲ ವಾರದಲ್ಲಿ ಚುನಾವಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರು ದಕ್ಷಿಣ ಕ್ಷೇತ್ರಕ್ಕೆ ಉಪ ಚುನಾವಣೆ ನಡೆಯುವುದು ಅನುಮಾನ ಎನ್ನಲಾಗಿದೆ.

ಕೇಂದ್ರ ಚುನಾವಣಾ ಆಯೋಗ ಇತ್ತೀಚೆಗೆ ಕರ್ನಾಟಕದ ಐದು ಕ್ಷೇತ್ರಗಳು ಸೇರಿದಂತೆ ದೇಶದ ಹಲವೆಡೆ ಉಪ ಚುನಾವಣೆಗಳನ್ನು ಮಾಡಿ ಮುಗಿಸಿದೆ. ಅಷ್ಟೇ ಅಲ್ಲದೆ ಮಧ್ಯಪ್ರದೇಶ ಸೇರಿದಂತೆ ಈಗಾಗಲೇ ಪಂಚರಾಜ್ಯ ವಿಧಾನಸಭೆ ಚುನಾವಣೆ ನಡೆಯುತ್ತಿದೆ. ಈ ಕಾರಣದಿಂದಾಗಿ ಉಳಿದಿರುವ ಐದು ತಿಂಗಳ ಅವಧಿಗೆ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರಕ್ಕೆ ಚುನಾವಣೆ ನಡೆಸಲು ಆಯೋಗ ಆಸಕ್ತಿ ತೋರುತ್ತಿಲ್ಲ ಎನ್ನಲಾಗುತ್ತಿದೆ.
ಕೇಂದ್ರ ಚುನಾವಣಾ ಆಯೋಗದ ನಿಯಮಾವಳಿ ಪ್ರಕಾರ ಯಾವುದೇ ಜನಪ್ರತಿನಿಧಿ ಅಕಾಲಿಕ ನಿಧನ ಹೊಂದಿದರೆ ಅಥವಾ ರಾಜೀನಾಮೆ ನೀಡಿದರೆ ಆ ಸ್ಥಾನದ ಅವಧಿ ಮುಂದಿನ ಆರು ತಿಂಗಳಿಗೆ ಕಡಿಮೆ ಇಲ್ಲದಂತೆ ಇರಬೇಕಾಗುತ್ತದೆ.

ಇಲ್ಲವೇ ಸರ್ಕಾರ ಮುಂದಿನ ಒಂದು ವರ್ಷದಲ್ಲಿ ಅಸ್ತಿತ್ವದಲ್ಲಿ ಇರುತ್ತದೆ ಎಂಬುದನ್ನು ಖಾತ್ರಿ ಮಾಡಿಕೊಳ್ಳಬೇಕಾಗುತ್ತದೆ. ಆಗ ಮಾತ್ರ ಆ ಸ್ಥಾನಕ್ಕೆ ಚುನಾವಣೆ ನಡೆಸಬೇಕಾಗುತ್ತದೆ. ಆದರೆ 2019ರ ಲೋಕಸಭೆ ಚುನಾವಣೆಗೆ 6 ತಿಂಗಳಿಗಿಂತ ಕಡಿಮೆ ಅವಧಿ ಇರುವುದರಿಂದ ಸಚಿವ ಅನಂತ ಕುಮಾರ್ ನಿಧನದಿಂದ ತೆರವಾದ ಸ್ಥಾನ ಮುಂದಿನ ಐದು ತಿಂಗಳುಗಳ ಕಾಲ ಖಾಲಿಯಾಗಿಯೇ ಇರಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಚುನಾವಣಾ ಆಯೋಗ ಹೇಳುವುದೇನು?
1951ರ ಜನಪ್ರತಿನಿಧಿ ಕಾಯ್ದೆಯ ಸೆಕ್ಷನ್ 151ಎ ಅಡಿಯ ಪ್ರಕಾರ, ಸಂಸತ್ ಅಥವಾ ವಿಧಾನಸಭೆ ಕ್ಷೇತ್ರದ ಜನಪ್ರತಿನಿಧಿ ಮೃತಪಟ್ಟರೆ ಅಥವಾ ರಾಜೀನಾಮೆ ನೀಡಿದರೆ, ಅವರಿಂದ ತೆರವಾದ ಕ್ಷೇತ್ರವನ್ನು ಆ ದಿನಾಂಕದಿಂದ ಆರು ತಿಂಗಳ ಒಳಗೆ ಉಪಚುನಾವಣೆ ಮೂಲಕ ಭರ್ತಿ ಮಾಡುವುದು ಚುನಾವಣಾ ಆಯೋಗದ ಜವಾಬ್ದಾರಿಯಾಗಿರುತ್ತದೆ.

ಕಾನೂನಿನ ಪ್ರಕಾರ, ಮುಂದಿನ ಸಾರ್ವತ್ರಿಕ ಚುನಾವಣೆಗೆ ಒಂದು ವರ್ಷಕ್ಕೂ ಮೀರಿದ ಅವಧಿ ಬಾಕಿಯಿದ್ದರೆ ಯಾವುದೇ ಕ್ಷೇತ್ರವನ್ನು ಜನಪ್ರತಿನಿಧಿಯಿಲ್ಲದೆ ಖಾಲಿ ಬಿಡುವಂತಿಲ್ಲ. ಮುಂದಿನ ಲೋಕಸಭೆ ಚುನಾವಣೆಗೆ ಮುಂದಿನ ವರ್ಷದ ಜೂನ್ 3ರವರೆಗೂ ಸಮಯವಿದೆ.

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin