ಇಟಲಿಯ 800 ವರ್ಷ ಪ್ರಾಚೀನ ಭವ್ಯ ಸೌಧದಲ್ಲಿ ಕರ್ನಾಟಕ ಸ್ಟೈಲಲ್ಲಿ ದೀಪ್-ವೀರ್ ವಿವಾಹ

ಈ ಸುದ್ದಿಯನ್ನು ಶೇರ್ ಮಾಡಿ

Deepika--1

ಕೊಮೊದ್ವೀಪ/ಉತ್ತರ ಇಟಲಿ, ನ.14- ಬಾಲಿವುಡ್‍ನ ಖ್ಯಾತ ನಟಿ, ಕನ್ನಡತಿ ದೀಪಿಕಾ ಪಡುಕೋಣೆ ಮತ್ತು ನಟ ರಣವೀರ್ ಸಿಂಗ್ ವಿವಾಹ ಕಾರ್ಯಕ್ರಮ ಇಂದು ಉತ್ತರ ಇಟಲಿಯ ನಯನ ಮನೋಹರ ಕೊಮೊ ಸರೋವರ ತೀರದಲ್ಲಿ ನಡೆಯಲಿದೆ.  ರೋಮ್ ಚಕ್ರಾಧಿಪತ್ಯದ ಭವ್ಯ ಪರಂಪರೆಯ ಹಿನ್ನೆಲೆ ಹೊಂದಿರುವ ಇಟಲಿಯಲ್ಲಿ ಬಿ ಟೌನ್‍ನ ಜನಪ್ರಿಯ ತಾರಾಜೋಡಿಯ ವಿವಾಹ ಕರ್ನಾಟಕ ಶೈಲಿಯಲ್ಲಿ ನಡೆದಿರುವುದು ಗಮನಾರ್ಹ. ಇಂದು ಕೊಂಕಣಿ ಕನ್ನಡ ಶೈಲಿಯಲ್ಲಿ ಹಾಗೂ ನಾಳೆ ಸಿಂಧಿ ಸಂಪ್ರದಾಯದ ಶೈಲಿಯಲ್ಲಿ ಜೋಡಿಗಳ ವಿವಾಹ ನೆರವೇರಲಿದೆ. ವರ್ಷದ ಬಹುನಿರೀಕ್ಷಿತ ಈ ವಿವಾಹ ಸಂಭ್ರಮದಲ್ಲಿ ಉಭಯ ಕುಟುಂಬ ಸದಸ್ಯರು, ನಟ ಶಾರುಖ್ ಖಾನ್, ನಿರ್ದೇಶಕಿ ಫರ್ಹಾಖಾನ್, ನಿರ್ದೇಶಕ ಸಂಜಯ ಲೀಲಾ ಬನ್ಸಾಲಿ ಸೇರಿದಂತೆ ಕೆಲವೇ ಕೆಲವು ಆಪ್ತರಿಗೆ ಆಮಂತ್ರಣ ನೀಡಲಾಗಿದೆ.

ವಿವಾಹ ಕಾರ್ಯಕ್ರಮವು 800 ವರ್ಷ ಇತಿಹಾಸ ಹೊಂದಿರುವ ವಿಲ್ಲಾ ಡೆಲ್ ಬಾಲ್ ಬಿಯಾನೆಲ್ಲೋದಲ್ಲಿ ನಡೆಯಲಿದೆ. ಅಲ್ಲಿಗೆ, ಆಹ್ವಾನಿತರು ತಾವು ಉಳಿದುಕೊಂಡಿರುವ ಸಮೀಪದ ರೆಸಾರ್ಟ್ ನಿಂದ ಯಾಚ್‍ನಲ್ಲಿ ಆಗಮಿಸಲಿದ್ದಾರೆ. ಆದರೆ, ವರ ರಣವೀರ್ ಮತ್ತು ಅವರ ಕುಟುಂಬ ಸದಸ್ಯರು ಮಾತ್ರ ಸಮುದ್ರ ವಿಮಾನದಲ್ಲಿ ಆಗಮಿಸಿ ಗ್ರ್ಯಾಂಡ್ ಎಂಟ್ರಿ ಕೊಡಲಿದ್ದಾರೆಂದು ಹೇಳಲಾಗುತ್ತಿದೆ. ಆಹ್ವಾನಿತರಿಗೆ ಕೊಮೊ ಸರೋವರದ ತೀರದಲ್ಲೇ ಇರುವ ರೆಸಾರ್ಟ್‍ನ 75 ಕೊಠಡಿಗಳನ್ನು ವಾರದ ಅವಧಿಗೆ ಪೂರ್ಣವಾಗಿ ಬುಕ್ ಮಾಡಲಾಗಿದ್ದು, ಎಲ್ಲರೂ ಅಲ್ಲಿಯೇ ತಂಗಿದ್ದಾರೆ.

ವಿವಾಹದ ಹಿನ್ನೆಲೆಯಲ್ಲಿ ಆಹ್ವಾನಿತರ ಮೊಬೈಲ್‍ಗೆ ವಿಶೇಷ ಆಮಂತ್ರಣ ಪತ್ರಿಕೆ ರವಾನಿಸಲಾಗಿದೆ. ಇದರೊಳಗೆ ಕ್ಯುಆರ್ ಕೋಡ್ ಇದ್ದು, ಅದನ್ನು ಸ್ಕ್ಯಾನ್ ಮಾಡಿದ ಬಳಿಕವೇ ಎಲ್ಲರಿಗೂ ವಿವಾಹ ಸ್ಥಳಕ್ಕೆ ತೆರಳುವ ಅವಕಾಶ ನೀಡಲಾಗುತ್ತದೆ. ಉತ್ತರ ಇಟಲಿಯ ಕೊಮೊ ಸರೋವರ ತೀರದಲ್ಲಿರುವ ವಿಲ್ಲಾ ಡೆಲ್ ಬಾಲ್ ಬಿಯಾನೆಲ್ಲೋ ಒಂದು ಖಾಸಗಿ ಕಟ್ಟಡವಾಗಿದೆ. 800 ವರ್ಷ ಇತಿಹಾಸ ಹೊಂದಿರುವ ಈ ಐತಿಹಾಸಿಕ ಹಾಗೂ ಸುಂದರ ಕಟ್ಟಡದೊಳಗೆ ಕುಳಿತರೆ, ಸರೋವರ, ಸುತ್ತಲಿನ ಸುಂದರ ಪರಿಸರವನ್ನು ಆಸ್ವಾದಿಸಬಹುದಾಗಿದೆ. ವಿಲ್ಲಾಡೆಲ್‍ನಲ್ಲಿ ಕಾರ್ಯಕ್ರಮ ಆಯೋಜನೆಗೆ ಮೂಲ ಶುಲ್ಕವಾಗಿ 8 ಲಕ್ಷ ರೂ. ಪಾವತಿ ಮಾಡಬೇಕು. ಆದರೆ, ಕಾರ್ಯಕ್ರಮಕ್ಕೆ ಗರಿಷ್ಠ 80 ಜನರನ್ನು ಆಹ್ವಾನಿಸಬಹುದು.

ಬೆಂಗಳೂರಿನಲ್ಲಿ ಔತಣ: ಕುಟುಂಬ ಸದಸ್ಯರಿಗಾಗಿ ದೀಪಿಕಾ ಕುಟುಂಬ ನ.21ರಂದು ಬೆಂಗಳೂರಿನ ಹೋಟೆಲ್ ಲೀಲಾ ಪ್ಯಾಲೆಸ್ ನಲ್ಲಿ ಆರತಕ್ಷತೆ ಕಾರ್ಯಕ್ರಮ ಆಯೋಜಿಸಿದೆ. ಇನ್ನು ಮದುವೆ ದಿಬ್ಬಣಕ್ಕಾಗಿ ವಿಶೇಷ ಕೇಕ್ ತಯಾರಿಸಲು ಸ್ವಿಡ್ಜರ್‍ಲ್ಯಾಂಡ್‍ನಿಂದ ವಿಶೇಷ ಬಾಣಸಿಗರನ್ನು ಕರೆಸಲಾಗಿದೆ. ಇದೇ ವೇಳೆ ತಮ್ಮ ವಿವಾಹಕ್ಕೆ ಉಡುಗೊರೆ ನೀಡಬಯಸುವವರು ದತ್ತಿ ಸಂಸ್ಥೆಗಳಿಗೆ ದಾನ ಮಾಡಬಹುದು ಎಂದು ದೀಪಿಕಾ-ರಣವೀರ್ ದಂಪತಿ ಕೋರಿದ್ದಾರೆ.

Facebook Comments

Sri Raghav

Admin